ಕಲಾಪ್ರದರ್ಶನ ನೀಡಿ ವಿಶ್ರಾಂತಿಗೆ ತೆರಳಿದ್ದ ಜನಪದ ಕಲಾವಿದ ಮತ್ತೆ ಮೇಲೇಳಲೇ ಇಲ್ಲ: ಗೋಕರ್ಣದ ರೆಸಾರ್ಟ್ ಒಂದರಲ್ಲಿ ಆಕಸ್ಮಿಕವಾಗಿ ಸಂಭವಿಸಿದ ಸಾವು

ಅಂಕೋಲಾ: ಗೋಕರ್ಣದ ರೆಸಾರ್ಟ್ ನಲ್ಲಿದ್ದವರಿಗೆ ಇಲ್ಲಿನ ಕಲೆ ಮತ್ತು ಸಂಸ್ಕೃತಿ ಬಿಂಬಿಸುವ ಕೋಲಾಟ ಪ್ರದರ್ಶಿಸಿಲು ತೆರಳಿದ್ದ ಅಂಕೋಲಾ ತಾಲೂಕು ಬಡಗೇರಿ ಮೂಲದ ಜಾನಪದ ತಂಡದಲ್ಲಿದ್ದ ಕಲಾವಿದನೊಬ್ಬ ಕೋಲಾಟ ಪ್ರದರ್ಶನ ನೀಡಿದ ಕೆಲ ಹೊತ್ತಿನಲ್ಲೇ ಹೃದಯಾಘಾತದಿಂದ ಮೃತ ಪಟ್ಟ ಘಟನೆ ನಡೆದಿದೆ. ಬಡಗೇರಿ ನಿವಾಸಿ ಲಕ್ಷ್ಮಣ ಚೋಕು ಗೌಡ(60) ಮೃತ ದುರ್ದೈವಿಯಾಗಿದ್ದಾನೆ.
ಬಡಗೇರಿಯ ಸುಮಾರು 12 ಜನರಿದ್ದ ಕೋಲಾಟ ತಂಡದೊಂದಿಗೆ ಗೋಕರ್ಣದ ಓಂ ಬೀಚ್ ಬಳಿ ಇರುವ ಸಸ್ವರ ರೆಸಾರ್ಟ್ ನಲ್ಲಿ ಕೋಲಾಟ ಕಾರ್ಯಕ್ರಮ ನೀಡಿ , ವಿಶ್ರಾಂತಿ ಪಡೆಯುತ್ತಿದ್ದಾಗ ಕುಳಿತಲ್ಲಿಯೇ ಹೃದಯಾಘಾತ ಸಂಭವಿಸಿದ್ದು , ತನ್ನ ತಂದೆಯ ಸಾವಿನ ಕುರಿತು, ಮಗ ಮಾರುತಿ ಲಕ್ಷ್ಮಣ ಗೌಡ ನೀಡಿದ ದೂರಿನನ್ವಯ ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಕೈಗೊಂಡು ಕಾನೂನು ಕ್ರಮ ಮುಂದುವರೆಸಿದ್ದಾರೆ.
ಮೃತ ಲಕ್ಷ್ಮಣ ಚೋಕು ಗೌಡ ಪ್ರಸಿದ್ಧ ಜನಪದ ಕಲಾವಿದನಷ್ಟೇ ಅಲ್ಲದೇ, ಕೃಷಿ ಮತ್ತಿತರ ಕಾರ್ಯಗಳಲ್ಲಿ ತನ್ನನ್ನು ಗುರುತಿಸಿಕೊಂಡು ಹಲವರ ಪ್ರೀತಿ ವಿಶ್ವಾಸ ಗಳಿಸಿ ಬಾಳಿ ಬದುಕಿದ್ದ. ಈತನ ಅಕಾಲಿಕ ನಿಧನಕ್ಕೆ ಶಾಸಕ ಸತೀಶ ಸೈಲ್ , ಹಾಲಕ್ಕಿ ಒಕ್ಕಲಿಗರ ಸಂಘದ ಜಿಲ್ಲಾಧ್ಯಕ್ಷ ಹನುಮಂತ ಬಿ ಗೌಡ ಬೆಳಂಬಾರ , ಬಡಗೇರಿ ಊರಿನ ಸಮಾಜದ ಹಿರಿ-ಕಿರಿಯ ಮುಖಂಡರು ತೀವೃ ಸಂತಾಪ ಸೂಚಿಸಿದ್ದಾರೆ. ಮನೆಯ ಯಜಮಾನನನ್ನು ಕಳೆದು ಕೊಂಡು ನೊಂದಿರುವ ಬಡ ಕುಟುಂಬಕ್ಕೆ ಜನಪದ ಕಲಾವಿದ ಎನ್ನುವ ಕಾರಣಕ್ಕಾದರೂ ಸರ್ಕಾರ, ಸಂಬಂಧಿತ ಇಲಾಖೆ, ಸಂಘ-ಸಂಸ್ಥೆಗಳು, ಸಮಾಜದ ಗಣ್ಯರು , ದಾನಿಗಳು ಮಾನವೀಯ ನೆರವಿನ ಹಸ್ತ ಚಾಚಿ ಸಂತೈಸಬೇಕಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ