
ಭಟ್ಕಳ: ಸಾವಿರಾರು ಜನರಿಗೆ ವಿದ್ಯಾದಾನ ಮಾಡಿ ಬದುಕು ಕಟ್ಟಿಕೊಟ್ಟಿರುವ ಜನತಾ ವಿದ್ಯಾಲಯ ಇಂದಿನ ಸಂದರ್ಭದಲ್ಲಿ ಕಷ್ಟಕರ ಪರಿಸ್ಥಿತಿಯನ್ನು ಅನುಭವಿಸುತ್ತಿದೆ. ಈ ಸಂದರ್ಭದಲ್ಲಿ ಉಳ್ಳವರು ಬಡ ವಿದ್ಯಾರ್ಥಿಗಳೇ ಹೆಚ್ಚಾಗಿ ಓದುತ್ತಿರುವ ಇಂತಹ ಶಾಲೆಗೆ ಬೆನ್ನುಲುಬಾಗಿ ನಿಲ್ಲಬೇಕಾಗಿದೆ ಎಂದು ಜನತಾ ವಿದ್ಯಾಲಯ ಪೂರ್ವ ವಿದ್ಯಾರ್ಥಿಗಳ ಪರಿವಾರದ ಉಪಾಧ್ಯಕ್ಷ ಪ್ರಭಾಕರ ನಾಯ್ಕ ಹೇಳಿದರು.
ಭಟ್ಕಳ ತಾಲೂಕಿನ ಶಿರಾಲಿಯಲ್ಲಿ ಸೋಮವಾರದಂದು ನಡೆದ ವಿದ್ಯಾರ್ಥಿ ಸಂಸತ್ ಉದ್ಘಾಟನೆ ಹಾಗೂ ಬರಹ ಪಠ್ಯ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಧನಲಕ್ಷ್ಮೀ ಕೇಟರಿಂಗ್ ಮಾಲಕರಾದ ದಯಾನಂದ ನಾಯ್ಕ ವಿದ್ಯಾರ್ಥಿಗಳಿಗೆ ಬರಹ ಪಠ್ಯವನ್ನು ನೀಡಿ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗಿದ್ದಾರೆ. ಶಿಕ್ಷಣದ ಕುರಿತಾಗಿ ಅವರಿಗಿರುವ ಕಾಳಜಿ ಶ್ಲಾಘನೀಯವಾಗಿದೆ. ಇವರಂತೆ ಅನೇಕ ದಾನಿಗಳು ಹಾಗೂ ಸಂಘ ಸಂಸ್ಥೆಗಳು ಮುಂದೆ ಬಂದು ತಮ್ಮ ಕೊಡುಗೆಗಳನ್ನು ನೀಡುವ ಮೂಲಕ ವಿದ್ಯಾಲಯದ ಸರ್ವಾಂಗಿಣ ಅಭಿವೃದ್ಧಿಗೆ ಕಾರಣವಾಗಬೇಕಿದೆ ಎಂದರು.
ಶಾಲಾ ಸಂಸತ್ತಿನ ಕುರಿತಾಗಿ ಮಾತನಾಡಿದ ಅವರು ಈಗೀನ ಭ್ರಷ್ಟಾಚಾರ ವ್ಯವಸ್ಥೆಯಲ್ಲಿ ಹಣ ಪಡೆಯದೆ ಮತ ನೀಡುವಂತೆ ವಿದ್ಯಾರ್ಥಿಗಳು ತಮ್ಮ ಪಾಲಕರ ಮನವೋಲಿಸಬೇಕಿದೆ ಎಂದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಬರಹ ಪಠ್ಯ ವಿತರಿಸಿದ ಧನಲಕ್ಷ್ಮೀ ಕೇಟರಿಂಗ್ ಮಾಲಕರಾದ ದಯಾನಂದ ನಾಯ್ಕರವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಕಾಲೇಜಿನ ಪಾಂಶುಪಾಲರಾದ ಜಿ.ಎಸ್ ಹೆಗಡೆ, ಎಂ ಡಿ ಪಕ್ಕಿ ಮತ್ತಿತರರು ಇದ್ದರು.
ವಿಸ್ಮಯ ನ್ಯೂಸ್, ಈಶ್ವರ್ ನಾಯ್ಕ, ಭಟ್ಕಳ