ಆಸ್ಪತ್ರೆಯಲ್ಲಿದ್ದುಕೊಂಡೆ ಮಂಚದ ವಿಷಯದಲ್ಲಿ ಲಂಚ ಕೇಳಲು ಹೋಗಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಸರ್ಜನ್ : ಲೋಕಾಯುಕ್ತ ಡಿವೈಎಸ್ ಪಿ ನೇತೃತ್ವದಲ್ಲಿ ದಾಳಿ

ಕಾರವಾರ : ಜಿಲ್ಲಾ ಆಸ್ಪತ್ರೆಯ ಸರ್ಜನ್ ಒರ್ವರು , ಮಂಚ (ಹಾಸಿಗೆ- ಬೆಡ್ ) ವಿಷಯದಲ್ಲಿ ಲಂಚ ಕೇಳಲು ಹೋದ ಆರೋಪದಡಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಲಕ್ಷಾಂತರ ರೂಪಾಯಿಗಳ, ಹಾಸಿಗೆ -ಬೆಡ್ ಗಳ ಟೆಂಡರ್ ಕರೆದಿದ್ದು, ಸದರಿ ಟೆಂಡರ್ ನ್ನು ಗುತ್ತಿಗೆ ಪಡೆದುಕೊಂಡಿರುವ ಅಂಕೋಲಾ ಮೂಲದ ಗುತ್ತಿಗೆದಾರನಾದ ಮೊಹಶೀನ್ ಶೈಖ್ ಬಳಿ ಜಿಲ್ಲಾ ಆಸ್ಪತ್ರೆಯ ಸರ್ಜನ್ ರಾದ ಶಿವಾನಂದ ಕುಡ್ತಲಕರ ಅವರ ಸುಮಾರು 75 ಸಾವಿರ ರೂಪಾಯಿ ಲಂಚದ ಬೇಡಿಕೆ ಇಟ್ಟಿದ್ದು , ಈ ಪೈಕಿ ಒಂದೆರಡು ದಿನಗಳ ಹಿಂದೆ 20 ಸಾವಿರ ರೂ ಪಡೆದುಕೊಂಡಿದ್ದರು ಎನ್ನಲಾಗಿದೆ.
ಸರ್ಜನ್ ನ ಲಂಚದ ಬೇಡಿಕೆಯಿಂದ ಬೇಸತ್ತಿದ್ದ ಗುತ್ತಿಗೆದಾರ ಕಾರವಾರ ಲೋಕಾಯುಕ್ತದವರಿಗೆ ಮಾಹಿತಿ ನೀಡಿದ್ದು, ಮತ್ತೆ 30 ಸಾವಿರ ರೂಪಾಯಿ ನಗದು ಹಣ ಸ್ವೀಕರಿಸುವಾಗ , ಸರ್ಜನ್ ಶಿವಾನಂದ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ. ಅಂಕೋಲಾ ಮೂಲದ ಯುವ ಅಧಿಕಾರಿ ಧನ್ಯಾ ನಾಯಕ (ಡಿ ವೈ ಎಸ್ಪಿ ) ನೇತೃತ್ವದ ಲೋಕಾಯುಕ್ತ ಪೊಲೀಸರ ತಂಡ ದಾಳಿ ನಡೆಸಿದ್ದು,ಈ ಕುರಿತು ಹೆಚ್ಚಿನ ಮತ್ತು ಅಧಿಕೃತ ಮಾಹಿತಿಗಳು ತಿಳಿದು ಬರಬೇಕಿದೆ.
ಕಳೆದ ಕೆಲವು ವರ್ಷಗಳಿಂದ ಕುತ್ತಲಕರವರು ಜಿಲ್ಲಾಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದು,ಈ ಹಿಂದೆ ಅವರ ಮೇಲೆ ಬೇರೊಂದು ಗಂಭೀರ ಆರೋಪ ಕೇಳಿ ಬಂದಿತ್ತು. ಈ ಸರ್ಜನ್ ಒಳ್ಳೆಯವರು ಎಂದು ಕೆಲವರು ಆಡಿಕೊಂಡಿದ್ದರೆ,ಇನ್ನು ಕೆಲವರು ಇವರ ವರ್ಗಾವಣೆಗೆ ಪಟ್ಟು ಹಿಡಿದಿದ್ದರು. ಈ ಬೆಳವಣಿಗೆಗಳ ನಡುವೆಯೇ ಈಗ ಅದೇ ಸರ್ಜನ್ ಲಂಚ ಪ್ರಕರಣದಲ್ಲಿ ಲೋಕಾಯುಕ್ತ ಬಲೆಗೆ ಬಿದ್ದಿರುವುದು ,ಸಾರ್ವಜನಿಕ ವಲಯದಲ್ಲಿ ಮತ್ತಷ್ಟು ಕುತೂಹಲ ಹಾಗೂ ಚರ್ಚೆಗೆ ಕಾರಣವಾದಂತಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ