ರೋಟರಿ ಕ್ಲಬ್ ಆಫ್ ಅಂಕೋಲಾ ರೂರಲ್ ವತಿಯಿಂದ ಒಳಿತಿಗಾಗಿ ಒಗ್ಗೂಡಿ ಎಂಬ ಸಾಮಾಜಿಕ ಸಂದೇಶ : ಪುಷ್ಪಲತಾ ನಾಯಕ ನೇತೃತ್ವದಲ್ಲಿ ನೂತನ ಪದಾಧಿಕಾರಿಗಳ ಪದಗ್ರಹಣ

- ಒಳಿತಿಗಾಗಿ ಒಗ್ಗೂಡಿ ಎಂಬ ಸಾಮಾಜಿಕ ಸಂದೇಶ
- ರೋಟರಿ ಕ್ಲಬ್ ಆಫ್ ಅಂಕೋಲಾ ರೂರಲ್ ನ ಅರ್ಥಪೂರ್ಣ ಕಾರ್ಯಕ್ರಮ
- ನೂತನ ಪದಾಧಿಕಾರಿಗಳ ಪದಗ್ರಹಣ
- ನಾರಾಯಣ ಎಮ್ ಅವರಿಗೆ ಸಮಾಜ ಪರಿವರ್ತಕ ಪುರಸ್ಕಾರ
ಅಂಕೋಲಾ : ಅಂತರಾಷ್ಟ್ರೀಯ ರೋಟರಿ ಸಂಸ್ಥೆಯ ಸ್ಥಳೀಯ ಘಟಕವಾಗಿರುವ, ರೋಟರಿ ಕ್ಲಬ್ ಆಫ್ ಅಂಕೋಲಾ ರೂರಲ್ ಇದು ಕಳೆದ ಕೆಲವು ವರ್ಷಗಳಿಂದ ತನ್ನ ಸಾಮಾಜಿಕ ಮತ್ತು ನೂರಾರು ವಿಧಾಯಕ ಕಾರ್ಯಗಳ ಮೂಲಕ,ಎಲ್ಲೆಡೆಯೂ ಗುರುತಿಸಿಕೊಂಡು ಮಾದರಿಯಾಗಿದೆ. ಕ್ಲಬ್ಬಿನ ಪ್ರಸಕ್ತ ಸಾಲಿನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಪುಷ್ಪಲತಾ ಆರ್ ನಾಯಕ ಅವರ ನೇತೃತ್ವದ ನೂತನ ಆಡಳಿತ ಮಂಡಳಿಯ ಪದಗ್ರಹಣ ಸಮಾರಂಭ ಶೆಟಗೇರಿಯ ವಾಸುದೇವ ಸಭಾಭವನದಲ್ಲಿ ಜುಲೈ 16ರ ಬುಧವಾರ ಅದ್ದೂರಿಯಾಗಿ ನಡೆಯಿತು.

ಮಂಗಳೂರು ವಿಭಾಗದ ರೋಟರಿ ಜಿಲ್ಲಾ ಘಟಕದ ಮಾಜಿ ಕಾರ್ಯದರ್ಶಿ ಬಿ ಶೇಖರ ಶೆಟ್ಟಿ ಅವರು,ರೋಟರಿ ಕ್ಲಬ್ ಆಫ್ ಅಂಕೋಲಾ ರೂರಲ್ ಇದರ ನೂತನ ಅಧ್ಯಕ್ಷರಾದ ಪುಷ್ಪಲತಾ ನಾಯಕ ಮತ್ತು ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ನೆರವೇರಿಸಿ ಕೊಟ್ಟರು. ಈ ವೇಳೆ ಮಾತನಾಡಿದ ಅವರು ,ರೋಟರಿ ಸಂಸ್ಥೆಗೆ ಸದಸ್ಯರಾಗಿ ಸೇರಿದ ಮೇಲೆ ನಿಮ್ಮ ಜೀವನದಲ್ಲಿ ಮರೆಯಲಾಗದ ಸೇವೆಯನ್ನು ನೀಡುವ ಗುರಿಯನ್ನು ಹೊಂದಿರಬೇಕು ಎಂದು ಹೇಳಿ,ನೂತನ ಪದಾಧಿಕಾರಿಗಳಿಗೆ ಶುಭಾಶಯ ಸಲ್ಲಿಸಿದರು.
ಒಳಿತಿಗಾಗಿ ಒಗ್ಗೂಡಿ ಸಾಮಾಜಿಕ ಸಂದೇಶ
ರೋಟರಿ ಸಂಸ್ಥೆಯ ಅಸಿಸ್ಟೆಂಟ್ ಗವರ್ನರ್ ಆಗಿರುವ ಕುಮಟಾದ ಚೇತನ್ ಡಿ ಶೇಟ್ ಅವರು,ರೋಟರಿ ಕ್ಲಬ್ ನ ಈ ಸಾಲಿನ ಧ್ಯೇಯ ವಾಕ್ಯವಾದ ಯುನೈಟ್ ಫಾರ ಗುಡ್ (ಒಳಿತಿಗಾಗಿ ಒಗ್ಗೂಡಿ) ಎಂಬ ಸಾಮಾಜಿಕ ಸಂದೇಶ ಸಾರುವ ಫಲಕವನ್ನು ಅನಾವರಣಗೊಳಿಸಿದರು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹೆಸರಾಂತ ನಾಟಿ ವೈದ್ಯ ಬೆಳಂಬಾರು ಹನುಮಂತ ಬಿ ಗೌಡ ಅವರು ಮಾತನಾಡಿ, ಅಂಕೋಲಾ ರೋಟರಿ ಕ್ಲಬ್ ಆಫ್ ರೂರಲ್ ಈ ಸಂಸ್ಥೆ ಹೆಸರಿಗೆ ತಕ್ಕಂತೆ ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿಯೂ ಉತ್ತಮ ಸೇವೆ ನೀಡುತ್ತಿದೆ ಎಂದರು.

ಅಧ್ಯಕ್ಷ ಸ್ಥಾನವನ್ನು ಅಲಂಕರಿಸಲು ಹೆಮ್ಮೆ ಎನ್ನಿಸುತ್ತಿದೆ
ಕ್ಲಬ್ಬಿನ ನೂತನ ಅಧ್ಯಕ್ಷರಾಗಿ ಪದಗ್ರಹಣ ಸ್ವೀಕರಿಸಿರುವ,ರಾಜಕೀಯ,ಸಾಮಾಜಿಕ ಕಾರ್ಯಗಳಲ್ಲಿ ತನ್ನನ್ನು ತೊಡಗಿಸಿಕೊಂಡು ,ಮಹಿಳೆಯರು ಸೇರಿದಂತೆ ಇತರರಿಗೆ ಮಾದರಿಯಾಗಿರುವ ಪುಷ್ಪಲತಾ ಆರ್ ನಾಯಕ ಅವರು ಮಾತನಾಡಿ ನಮ್ಮ ಕುಟುಂಬದ ಪೂರ್ಣ ಸಹಕಾರದಿಂದ ರೋಟರಿಯಂತ ಉನ್ನತ ಸಂಸ್ಥೆಯ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಲು ಹೆಮ್ಮೆ ಎನ್ನಿಸುತ್ತಿದೆ. ಇದು ನನ್ನ ಜೀವನದ ಸೌಭಾಗ್ಯ ಸಹ ಹೌದು.ನಮ್ಮ ಸಂಸ್ಥೆಯ ಬೆಳವಣಿಗೆಗೆ ಸರ್ವರ ಸಹಕಾರ ಅತ್ಯಗತ್ಯವಾಗಿದೆ.ಗ್ರಾಮೀಣ ಪ್ರದೇಶವಾದ ಬೋಳೆ ಹೊಸಗದ್ದೆ ಹಿರಿಯ ಪ್ರಾಥಮಿಕ ಶಾಲೆಯನ್ನು ದತ್ತು ತೆಗೆದುಕೊಂಡು ಶೈಕ್ಷಣಿಕ ಅಭಿವೃದ್ಧಿಗೆ ಕೈಲಾದ ಸೇವೆ ಸಲ್ಲಿಸುವ ಇಚ್ಛೆ ನಮ್ಮದಾಗಿದ್ದು, ಈ ದಿನ ಸಾಂಕೇತಿಕವಾಗಿ ಶಾಲಾ ಮಕ್ಕಳಿಗೆ ಶೈಕ್ಷಣಿಕ ಪರಿಕರ ನೀಡುತ್ತಿದ್ದೇನೆ ಎಂದರು.
ರೋಟರಿ ಸಂಸ್ಥೆಯ ನಿಕಟಪೂರ್ವ ಅಧ್ಯಕ್ಷ ಬೆಲೇಕೇರಿಯ ರವಿ ಸುಬ್ರಾಯ ನಾಯಕ ಸ್ವಾಗತಿಸಿದರು. ಸಂಸ್ಥೆಯ ಪದಾಧಿಕಾರಿಗಳ ವಿನಾಯಕ ಕಾಮತ ಪ್ರತಿಜ್ಞಾವಿಧಿ ಬೋಧಿಸಿದರು. ಸಂಸ್ಥಾಪಕ ಅಧ್ಯಕ್ಷ ತುಳಸೀದಾಸ ಕಾಮತ ವಾರ್ಷಿಕ ವರದಿಯನ್ನು ಓದಿದರು. ಯೋಗಿತಾ ಕಾಮತ, ಸಾಯೀಶ ಕೇಣಿಕರ, ಹರ್ಷ ನಾಯಕ, ಶ್ರೀಧರ ನಾಯ್ಕ, ಪ್ರವೀಣ ಶೆಟ್ಟಿ ಇವರು ಸಮಾರಂಭದ ಅತಿಥಿಗಳನ್ನು ಮತ್ತು ಕ್ಲಬ್ಬಿನ ನೂತನ ಸದಸ್ಯರನ್ನು ಪರಿಚಯಿಸಿದರು.
ಕ್ಲಬ್ಬಿನ ನೂತನ ಖಜಾಂಚಿಯಾಗಿರುವ ನಾಗರಾಜ ನಾಯಕ, ಕ್ಲಬ್ಬಿನ ನಿಕಟಪೂರ್ವ ಖಜಾಂಚಿ ಶಿವಾನಂದ ನಾಯಕ ವೇದಿಕೆಯಲ್ಲಿ ಉಪಸ್ಥಿತರಿದ್ದರು. ರೂರಲ್ ರೋಟರಿ ಕ್ಲಬ್ಬಿನ ಪ್ರಮುಖ ಡಾ. ಸಂಜು ನಾಯಕ ಕಾರ್ಯಕ್ರಮ ನಿರೂಪಿಸಿದರು. ಕ್ಲಬ್ಬಿನ ನೂತನ
ಕಾರ್ಯದರ್ಶಿ ಸದಾನಂದ ನಾಯಕ ವಂದಿಸಿದರು.ನೂತನ ಅಧ್ಯಕ್ಷರಾದ ಪುಷ್ಪಲತಾ ನಾಯಕ ಅವರಿಗೆ ಅವರ ಪತಿ ಜಿಲ್ಲಾ ಮಟ್ಟದ ನಿವೃತ್ತ ಹಿರಿಯ ಅಧಿಕಾರಿಯಾಗಿದ್ದ ಆರ್ ಜಿ ನಾಯಕ ಮತ್ತು ಕುಟುಂಬದ ಇತರೆ ಸದಸ್ಯರು ಸನ್ಮಾನಿಸಿ ಗೌರವಿಸಿದ್ದು ಸುಂದರ ಹಾಗೂ ಸಂತಸದ ಕ್ಷಣಕ್ಕೆ ಸಾಕ್ಷಿಯಾದಂತಿತ್ತು.
ತಾಲೂಕಿನ ಹಾಗೂ ಇತರೆಡೆಯ ವಿವಿಧ ಕ್ಷೇತ್ರದ ಗಣ್ಯರು, ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು, ರೋಟರಿ ಸದಸ್ಯರು ಮತ್ತು ಅವರ ಕುಟುಂಬಸ್ಥರು ಇತರೆ ಸಾರ್ವಜನಿಕರು ಪಾಲ್ಗೊಂಡು,ನೂತನ ಪದಾಧಿಕಾರಿಗಳಿಗೆ ಮತ್ತು ಜಿಲ್ಲೆಯಿಂದ ನಿರ್ಗಮಿಸುತ್ತಿರುವ ಪೊಲೀಸ್ ಅಧಿಕಾರಿ ಎಂ ನಾರಾಯಣ ಅವರಿಗೆ ಶುಭ ಕೋರಿದರು.
ಸಮಾಜ ಪರಿವರ್ತಕ ಪುರಸ್ಕಾರ ಗೌರವದೊಂದಿಗೆ ಎಸ್ಪಿಯಾಗಿದ್ದ ನಾರಾಯಣ ಎಮ್ ಅವರಿಗೆ ಬೀಳ್ಕೊಡುಗೆ
ಕಳೆದ ವರ್ಷ ಜುಲೈ ಮೊದಲ ವಾರದಲ್ಲಿ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡು, ಇಲ್ಲಿನ ಕಾನೂನು ಸುವ್ಯವಸ್ಥೆ ಕಾಪಾಡಲು ಅವಿರತ ಶ್ರಮಿಸಿ,ಕರ್ತವ್ಯ ಜವಾಬ್ದಾರಿ ನಿಭಾಯಿಸುವುದರೊಂದಿಗೆ,ಬಲು ಅಪರೂಪದ ಜನಸ್ನೇಹಿ ಅಧಿಕಾರಿಯಾಗಿ ಗುರುತಿಸಿಕೊಂಡಿದ್ದ ನಾರಾಯಣ ಎಂ ಅವರಿಗೆ,ರೋಟರಿ ಸಂಸ್ಥೆಯ ಸಮಾಜ ಪರಿವರ್ತಕ ಪುರಸ್ಕಾರ ನೀಡಿ ಗೌರವಿಸಲಾಗಿದ್ದು, ಇದು ಜಿಲ್ಲೆಯಿಂದ ನಿರ್ಗಮಿಸುತ್ತಿರುವ ಹಿರಿಯ ಅಧಿಕಾರಿಗೆ ಬೀಳ್ಕೊಡುಗೆ ಸನ್ಮಾನದಂತಿದ್ದು, ಕಾರ್ಯಕ್ರಮದ ಮೆರಗು ಮತ್ತು ಮಹತ್ವವನ್ನು ಹೆಚ್ಚಿಸಿದೆ ಮತ್ತು ಎಸ್ ಪಿ ಯಾಗಿದ್ದ ನಾರಾಯಣ್ ನಿಜಕ್ಕೂ ಸಮಾಜ ಪರಿವರ್ತಕ ಎಂಬ ಪ್ರೀತಿ ಹಾಗೂ ಅಭಿಮಾನದ ನುಡಿಗಳು, ಹಲವರಿಂದ ಕೇಳಿ ಬಂತು.

ಪುರಸ್ಕಾರ ನೀಡಿ ಗೌರವಿಸಿರುವುದಕ್ಕೆ ಸಂತಸವಿದೆ: ನಾರಾಯಣ್ ಎಮ್
ಉತ್ತರ ಕನ್ನಡ ಜಿಲ್ಲೆಯ ಜನ ಪ್ರಜ್ಞಾವಂತರು. ಅದರಲ್ಲೂ ಕರ್ನಾಟಕದ ಬಾರ್ಡೋಲಿ ಎನಿಸಿದ ಅಂಕೋಲಾ ಸ್ವಾತಂತ್ರ್ಯ ಹೋರಾಟದ ಗಟ್ಟಿ ನೆಲ. ಪದ್ಮಶ್ರೀ ಪುರಸ್ಕೃತರಾಗಿದ್ದ ತುಳಸೀ ಗೌಡ, ಸುಕ್ರಿ ಗೌಡ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನಾಟೀ ವೈದ್ಯ ಹನುಮಂತ ಗೌಡರಂತಹ ಅನೇಕ ಸಾಧಕರನ್ನು ನೀಡಿದ ಈ ನೆಲದಲ್ಲಿ ಸಮಾಜ ಸೇವೆಯನ್ನೇ ಗುರಿಯಾಗಿಸಿಕೊಂಡ ರೋಟರಿಯಂಥ ಸಂಸ್ಥೆ ನನಗೆ ಸಮಾಜ ಪರಿವರ್ತಕ ಪುರಸ್ಕಾರ ನೀಡಿ ಗೌರವಿಸಿರುವುದಕ್ಕೆ ಸಂತಸವಿದೆ. ನಿಮ್ಮ ಗೌರವ ನಮ್ಮ ಜವಾಬ್ದಾರಿ ಹೆಚ್ಚಿಸಿದ್ದು, ನಾವು ಸಾಧಿಸಬೇಕಾದ್ದು ಬಹಳ ಇದೆ. ಈ ಜಿಲ್ಲೆಯ ಜನರ ಪ್ರೀತಿ ವಿಶ್ವಾಸ ನಮ್ಮ ಕರ್ತವ್ಯಕ್ಕೆ ಸಹಕಾರಿಯಾಯಿತು ಎಂದು ಕೃತಜ್ಞತಾ ಪೂರ್ವಕವಾಗಿ ಸ್ಮರಿಸಿದರು.

ಒಟ್ಟಿನಲ್ಲಿ ರೂರಲ್ ರೋಟರಿ ಕ್ಲಬ್ ಆಫ್ ಅಂಕೋಲಾದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ,ಅತ್ಯಂತ ಅಚ್ಚುಕಟ್ಟಾಗಿ ಮತ್ತು ಅದ್ದೂರಿಯಾಗಿ ಸಂಪನ್ನಗೊಂಡಿತು.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ