
ಸಾಗರ: ಮೆದುಳು, ನರ ಮತ್ತು ಮೂರ್ಛೆ ಸಂಬಂಧಿತ ರೋಗಗಳ ತಜ್ಞರಾದ ಡಾ. ಸುಮಂತ್ ಜಯದೇವ ಬಳಗಂಡಿ ಅವರ ವಿಜ್ಞಾನಪರ ಸಾಧನೆಗೆ ವಿಶ್ವ ಮಟ್ಟದಲ್ಲಿ ಮನ್ನಣೆ ದೊರಕಿದ್ದು, ಇದು ರಾಷ್ಟ್ರದ ವೈದ್ಯಕೀಯ ಸಂಶೋಧನಾ ಕ್ಷೇತ್ರಕ್ಕೆ ಹೆಮ್ಮೆ ತಂದಿದೆ.
“ಅಪಸ್ಮಾರ ಹೊಂದಿರುವ ಪುರುಷರಲ್ಲಿ ಲೈಂಗಿಕ ಆರೋಗ್ಯ-ಒಂದು ವೈದ್ಯಕೀಯ ಪರಿಶೀಲನೆ-ನಿರೀಕ್ಷಣಾ ಅಧ್ಯಯನ” ಎಂಬ ಶೀರ್ಷಿಕೆಯಡಿ ಅವರ ತಂಡವು ನಡೆಸಿದ ಸಂಶೋಧನಾ ಪ್ರಬಂಧವು,ಈ ವಿಷಯದ ಮೇಲಿನ ‘ವಿಶ್ವದ ಅತಿದೊಡ್ಡ ಅಧ್ಯಯನ’ ವೆಂದು ಗುರುತಿಸಲ್ಪಟ್ಟಿದೆ. ಈ ಪ್ರಬಂಧವು ಪ್ರಸಿದ್ಧ Epilepsy & Behavior ಎಂಬ ಅಂತಾರಾಷ್ಟ್ರೀಯ ವಿಜ್ಞಾನ ಜರ್ನಲ್‌ನಲ್ಲಿ ಪ್ರಕಟಗೊಂಡಿದ್ದು, DOI: 10.1016/j.yebeh.2025.110388 ಮೂಲಕ ಓದಲು ಲಭ್ಯವಿದೆ.
ಅಂತಾರಾಷ್ಟ್ರೀಯ ಖ್ಯಾತಿಯ ‘ನಿಮ್ಹ್ಯಾನ್ಸ್’ (NIMHANS) ನಲ್ಲಿ ಡಾ.ಸುಮಂತ್ ಬಳಗಂಡಿ ಅವರು ನಡೆಸಿದ ಈ ಸುದೀರ್ಘ ಅಧ್ಯಯನವು ಅಪಸ್ಮಾರದಿಂದ ಬಳಲುವ ಪುರುಷರಲ್ಲಿ ಎದುರಾಗುವ ಲೈಂಗಿಕ ಸಮಸ್ಯೆಗಳ ತೀವ್ರತೆ ಮತ್ತು ಅವರ ದೈನಂದಿನ ಜೀವನದ ಮೇಲೆ ಬೀರಬಹುದಾದ ಪರಿಣಾಮಗಳನ್ನು ವೈಜ್ಞಾನಿಕವಾಗಿ ದಾಖಲಿಸಿಕೊಂಡಿದೆ. ಇದರ ಮೂಲಕ ರೋಗಿಗಳ ಗುಣಮುಖತೆಗೆ ನೆರವಾಗುವ ತಜ್ಞ ಪರಿಹಾರ ಮಾರ್ಗಗಳನ್ನು ರೂಪಿಸಲು ನವೀನ ಆಧಾರ ಸಿಗಲಿದೆ ಎಂಬ ನಿರೀಕ್ಷೆಯಿದೆ.
ಈ ಮಹತ್ವದ ಸಾಧನೆಯ ಕುರಿತು ಮಾತನಾಡಿದ ಡಾ. ಸುಮಂತ್ ಬಳಗಂಡಿ, ತಮ್ಮ ಎಲ್ಲಾ ಹಿರಿಯ ಮಾರ್ಗದರ್ಶಕರಿಗೆ, ಸ್ನೇಹಿತರಿಗೆ, ತಾಂತ್ರಿಕ ತಜ್ಙರ ತಂಡಕ್ಕೆ ಹಾಗೂ ಪ್ರಾಮಾಣಿಕವಾಗಿ ಸಹಕರಿಸಿದ ರೋಗಿಗಳಿಗೆ ಧನ್ಯವಾದ ಅರ್ಪಿಸಿದ್ದಾರೆ.
“ನಮ್ಮ ಸಂಶೋಧನೆಯು ಅಪಸ್ಮಾರ ರೋಗಿಗಳ ಗುಣಮಟ್ಟದ ಜೀವನದಲ್ಲಿ ನೈಜ ಬದಲಾವಣೆಗೆ ದಾರಿ ಮಾಡಿಕೊಡುವುದು ನನ್ನ ಆತ್ಮೀಯ ಆಶಯ” ಎಂದು ಅವರು ಹೇಳಿದ್ದಾರೆ.
ಡಾ. ಸುಮಂತ್ ಜಯದೇವ ಬಳಗಂಡಿ ಅವರು ಪ್ರಸ್ತುತ ಸಾಗರದ ‘ಭಾಗವತ್ ಆಸ್ಪತ್ರೆ’ ಯಲ್ಲಿ ಮೆದುಳು, ನರರೋಗ ಮತ್ತು ಮೂರ್ಛೆ ರೋಗ ತಜ್ಞರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಈ ಜಾಗತಿಕ ಮಟ್ಟದ ಸಾಧನೆಗೆ ಕುಟುಂಬದವರು, ಹಿತೈಷಿಗಳು ಮತ್ತು ಸ್ನೇಹಿತರು ಅಭಿನಂದಿಸಿ ಸಂತಸ ವ್ಯಕ್ತಪಡಿಸಿ ಶುಭ ಹಾರೈಸಿದ್ದಾರೆ.
ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಮಾನ್ಯತೆಯ ತಜ್ಞ ವೈದ್ಯರ ಪದವಿಯನ್ನು ಪಡೆದ ಡಾ. ಸುಮಂತ್ ಜಯದೇವ ಬಳಗಂಡಿ ಅವರ ಈ ಸಾಧನೆ, ವೈದ್ಯಕೀಯ ಸಂಶೋಧನಾ ಕ್ಷೇತ್ರದಲ್ಲಿ ಮತ್ತೊಂದು ಮಹತ್ವದ ಹೆಜ್ಜೆಯಾಗಿದೆ. ಇದು ಕೇವಲ ವೈಯಕ್ತಿಕ ಯಶಸ್ಸು ಮಾತ್ರವಲ್ಲ, ಕನ್ನಡಿಗ ವೈದ್ಯರ ಪ್ರತಿಭೆ, ಶ್ರದ್ಧೆ ಮತ್ತು ವಿಜ್ಞಾನಪರ ಸೇವಾಭಾವನೆಯ ಪ್ರತಿಬಿಂಬವೂ ಆಗಿದೆ.
ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್