ಕಾರಿನ ಮೇಲೆ ಬಿದ್ದ ಬೃಹತ್ ಮರ : ಕಾರಿನಲ್ಲಿ ಸಿಲುಕಿ ಮಹಿಳೆ ಸಾವು : ಆಸ್ಪತ್ರೆಗೆ ಹೋಗಿದ್ದ ಸೊಸೆ ಮರಳುವ ಮುನ್ನವೇ ಅತ್ತೆಯ ದುರಂತ ಸಾವು

ಕಾರವಾರ: ಗಾಳಿ ಮಳೆಯ ರಭಸಕ್ಕೆ ಬೃಹತ್ತ್ ಮರ ಒಂದು ಉರುಳಿ , ಕಾರಿನ ಮೇಲೆ ಬಿದ್ದ ಪರಿಣಾಮ ಕಾರು ಜಖಂಗೊಂಡು, ಕಾಲಿನಲ್ಲಿದ್ದ ಮಹಿಳೆ ಮೃತಪಟ್ಟ ಧಾರುಣ ಘಟನೆ ಜಿಲ್ಲಾ ಕೇಂದ್ರ ಕಾರವಾರದ ಪಿಕಳೆ ರಸ್ತೆಯಲ್ಲಿ ಸಂಭವಿಸಿದೆ.
ಹತ್ತಿರದ ಆಸ್ಪತ್ರೆಗೆ ಹೋಗಿದ್ದ ತಮ್ಮ ಸೊಸೆಯ ಬರುವಿಕೆಗೆ ಕಾದು,ಈ ಮಹಿಳೆ ರಸ್ತೆ ಅಂಚಿಗೆ ನಿಲ್ಲಿಸಿದ್ದ ತಮ್ಮ ಕುಟುಂಬದ ಕಾರಿನ ಒಳಗಡೆ ಕುಳಿತಿದ್ದರು ಎನ್ನಲಾಗಿದ್ದು,ದುರದೃಷ್ಟವಶಾತ್ ಇದೇ ವೇಳೆ,ಇವರು ಕುಳಿತಿದ್ದ ಕಾರಿನ ಮೇಲೆ ಭಾರೀ ಗಾತ್ರದ ಮರವೊಂದು ಬಿದ್ದು ಈ ದುರಂತ ಸಂಭವಿಸಿದೆ. ಮರ ಬಿದ್ದ ಪರಿಣಾಮ ಕಾರು ಮರದ ರಂಬೆ ಕೊಂಬೆಗಳ ನಡುವೆ ಸಿಲುಕಿ ಜಖಂ ಗೊಂಡಿದ್ದು,ರಸ್ತೆ ಸಂಚಾರಕ್ಕೂ ತೊಡಕಾಗಿತ್ತು, ಇದರಿಂದ ಜಖಂ ಗೊಂಡ ಕಾರಿನಲ್ಲಿ ಸಿಲುಕಿದ್ದ ಮಹಿಳೆಯ ರಕ್ಷಣೆ ಕೆಲಸ ಸವಾಲಿನದಾಗಿತ್ತು.
ನಗರಸಭೆಯ ಜೆಸಿಬಿ ಬಳಸಿ ಮತ್ತು ಮರ ಕಟಾವು ಯಂತ್ರ ಬಳಸಿ ತ್ವರಿತ ಕಾರ್ಯಾಚರಣೆ ಕೈಗೊಳ್ಳಲಾಯಿತಾದರೂ,ಜೀವ ರಕ್ಷಣೆ ಸಾಧ್ಯವಾಗಿರಲಿಲ್ಲ. ರವಿವಾರ ನಗರದಲ್ಲಿ ಸಂತೆಯೂ ಇದ್ದು ಜನ ನಿಬಿಡ ಪ್ರದೇಶದಲ್ಲಿ ಮರ ಬಿದ್ದರಿಂದ ಕೆಲಕಾಲ ಆತಂಕದ ವಾತಾವರಣ ಕಂಡು ಬಂತು. ಆದರೂ ಅದೃಷ್ಟವಶಾತ್ ಕೆಲ ವ್ಯಾಪಾರಸ್ಥರು ಸೇರಿ ಇತರರು ಸಂಭವನೀಯ ಭಾರೀ ಅಪಾಯದಿಂದ ಪಾರಾಗಿದ್ದಾರೆ.ಮೃತ ದುರ್ದೈವಿ ಮಹಿಳೆ ಮಲ್ಲಾಪುರದವರು ಎನ್ನಲಾಗುತ್ತಿದ್ದು ,ಒಟ್ಟಾರೆ ಈ ದುರ್ಘಟನೆ ಕುರಿತಂತೆ ಹೆಚ್ಚಿನ ಮತ್ತು ಅಧಿಕೃತ ಮಾಹಿತಿಗಳು ತಿಳಿದು ಬರಬೇಕಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ