ಬೆಳಗಿನ ಜಾವ ಹೆದ್ದಾರಿಯಲ್ಲಿ ಭೀಕರ ಅಪಘಾತ:ಕಿರು ಸೇತುವೆಗೆ ಡಿಕ್ಕಿ ಪಡಿಸಿಕೊಂಡು ಹಳ್ಳಕ್ಕೆ ಬಿದ್ದ ಬಸ್: 18 ಜನರಿಗೆ ಗಾಯ

ಅಂಕೋಲಾ : ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಖಾಸಗಿ ಬಸ್ಸೊಂದು ,ಚಾಲಕನ ನಿಯಂತ್ರಣ ತಪ್ಪಿ,ಕಿರು ಸೇತುವೆ ಡಿಕ್ಕಿ ಪಡಿಸಿಕೊಂಡು ಹಳ್ಳಕ್ಕೆ ಬಿದ್ದ ಘಟನೆ ತಾಲೂಕಿನ ಅಗಸೂರ್ ಬಳಿ ಸಂಭವಿಸಿದೆ. ಪ್ರಯಾಣಿಕರನ್ನು ಕರೆದು ಕೊಂಡು ಬೆಳಗಾವಿಯಿಂದ ಯಲ್ಲಾಪುರ ಅಂಕೋಲಾ ಮಾರ್ಗವಾಗಿ ಮಂಗಳೂರು ಕಡೆ ಚಲಿಸುತ್ತಿದ್ದ ವೇಳೆ ದಾರಿ ಮಧ್ಯೆ ಅಂಕೋಲಾ ತಾಲೂಕಿನ ಜಗದೀಶ ಹೊಟೇಲ್ ಬಳಿ ಈ ಅಪಘಾತ ಸಂಭವಿಸಿ ಬಸ್ಸು ಹಳ್ಳದ ನೀರಿನಲ್ಲಿ ಪಲ್ಟಿಯಾಗಿದೆ.

ಬೆಳಗಿನ ಜಾವ ಸುಮಾರು 3 ಗಂಟೆಗೆ ಸುಮಾರಿಗೆ ಸಂಭವಿಸಿದ ಈ ಅಪಘಾತದಲ್ಲಿ 18ಜನರಿಗೆ ಗಾಯ ನೋವುಗಳಾಗಿದ್ದು ತಾಲೂಕ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಗಾಯಾಳುಗಳನ್ನು ಸಾಗಿಸಲು ದಿನಪತ್ರಿಕೆ ಸಾಗಾಟ ಮಾಡುವ ಕಾರು ಚಾಲಕ ಸೈಯದ್ ಜಾಕಿರ್ ಇನಾಮ್ದಾರ್, ಅಂಬುಲೆನ್ಸ್ ವಾಹನಗಳು, ಹಾಗೂ ಸ್ಥಳೀಯರು ಮತ್ತು ದಾರಿಹೋಕರು ಸಹಕರಿದರು. ಗಂಭೀರ ಗಾಯಗೊಂಡ 5 ಜನರಿಗೆ ಹೆಚ್ಚಿನ ಚಿಕಿತ್ಸೆಗಾಗಿ ಕಾರವಾರ ,ಮಂಗಳೂರು ಗೆ ಆಸ್ಪತ್ರೆಗಳಿಗೆ ರವಾನಿಸಲಾಗಿದೆ ಎನ್ನಲಾಗುತ್ತಿದ್ದು, ಈ ಅಪಘಾತಕ್ಕೆ ಚಾಲಕನ ನಿಲಕ್ಷ್ಯ ಮತ್ತು ಅತಿ ವೇಗವೇ ಕಾರಣ ಎನ್ನಲಾಗುತ್ತಿದ್ದು, ಆದರೂ ಅದೃಷ್ಟ ವಶಾತ್ ಮೊಹಮ್ಮದ್ ಇಸಾ ಎನ್ನುವ 1 ವರ್ಷದ ಮತ್ತು,ಮೊಹಮ್ಮದ್ ಇಸಾಕ್ ಎಂಬ 3 ವರ್ಷದ ಪುಟಾಣಿಗಳು, ಭಟ್ಕಳದಲ್ಲಿ ಕ್ಯಾಶಿಯರ್ ಆಗಿರುವ ಕೆನರಾ ಬ್ಯಾಂಕ್ ಉದ್ಯೋಗಿ ಒರ್ವರು, ಮೆಡಿಕಲ್ ಸ್ಟುಡೆಂಟ್ ಒರ್ವರು, ಇನ್ವೆಸ್ಟಮೆಂಟ್ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಒರ್ವರು ಸೇರಿದಂತೆ ಮಹಿಳೆಯರು , ವೃದ್ಧರು, ಪುರುಷರು ಮತ್ತು ಯುವಕರು ಬಸ್ ಹಳ್ಳಕ್ಕೆ ಬಿದ್ದರೂ ಚಿಕ್ಕ ಪುಟ್ಟ ಗಾಯಗಳೊಂದಿಗೆ ಬಹುತೇಕ ಪ್ರಯಾಣಿಕರು ಸಂಭವನೀಯ ಬಾರೀ ಅಪಾಯ ಮತ್ತು ಅನಾಹುತದಿಂದ ಪಾರಾಗಿದ್ದಾರೆ.
ತಾವು ಬದುಕುಳಿದು ಬಂದ ಬಗ್ಗೆ ದೇವರನ್ನು ಮತ್ತು ತಮ್ಮ ತಂದೆ ತಾಯಿಗಳನ್ನು ಕುಟುಂಬಸ್ಥರನ್ನು ನೆನೆಯುವಂತಾಗಿದೆ ಎಂದು ಕೆಲ ಪ್ರಯಾಣಿಕರು ಭಾವುಕರಾಗಿ ಮಾತನಾಡಿಕೊಂಡಂತಿತ್ತು. ರಸ್ತೆ ಅಪಘಾತದ ಘಟನೆ ಮತ್ತು ಗಾಯಾಳುಗಳ ವಿವರದ ಕುರಿತಂತೆ ಮತ್ತಷ್ಟು ಹೆಚ್ಚಿನ ಮತ್ತು ಅಧಿಕೃತ ಮಾಹಿತಿಗಳು ತಿಳಿದು ಬರಬೇಕಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ