Join Our

WhatsApp Group
Big News
Trending

ರಾಮತೀರ್ಥದ ರಾಮೇಶ್ವರ ದೇವಾಲಯದಲ್ಲಿ ಮಹಾ ಪಂಚದುರ್ಗಾನುಷ್ಠಾನ

ಹೊನ್ನಾವರ: ವೇದೋಪಾಸನಾ ಪ್ರತಿಷ್ಠಾನವು ಕಳೆದ ಏಳು ವರ್ಷಗಳಿಂದ ಲೋಕಕಲ್ಯಾಣಾರ್ಥವಾಗಿ ತಾಲೂಕಿನ ವಿವಿಧ ಪ್ರದೇಶದ ದೇವಾಲಯಗಳಲ್ಲಿ ವಿಶ್ವಭೇಷಜ ಹವನ, ಸಮಗ್ರ ನಕ್ಷತ್ರ ಹವನ, ಮಹಾರುದ್ರಾನುಷ್ಠಾನ ಸೇರಿದಂತೆ ಮುಂತಾದ ಅನೇಕ ಧಾರ್ಮಿಕ ಕಾರ್ಯಕ್ರಮವನ್ನು ನಡೆಸುತ್ತಾ ಬಂದಿದ್ದು , ಈ ವರ್ಷ ತಾಲೂಕಿನ ರಾಮತೀರ್ಥದ ರಾಮೇಶ್ವರ ದೇವಾಲಯದಲ್ಲಿ ನೂರಾರು ವೈದಿಕರ ಸಂಘಟನೆಯಲ್ಲಿ ಮಹಾಪಂಚದುರ್ಗಾನುಷ್ಠಾನವನ್ನು ನಡೆಸಿತು.

ಎರಡುದಿನಗಳ ಪರ್ಯಂತ ನಡೆದ ಕಾರ್ಯಕ್ರಮದಲ್ಲಿ ಗಣಪತಿಪೂಜೆ, ನಾಂದೀಪುಣ್ಯಾಹ, ಅಥರ್ವಶೀರ್ಷ ಹವನ , ರುದ್ರಹವನ, ಉದಕಶಾಂತಿ ಪಾರಾಯಣ, ಕಲಶಸ್ಥಾಪನಾಪೂಜೆ ಹಾಗೂ ವಿಶೇಷವಾಗಿ ದುರ್ಗಾದುರ್ಗತಿನಾಶಿನಿ ಎಂಬ ವೇದವಾಣಿಯಂತೆ ರಾಷ್ಟ್ರದ ಸರ್ವಜನಾಂಗದ ಯೋಗಕ್ಷೇಮವನ್ನು ಸಂಪ್ರಾರ್ಥಿಸಿ ಪಂಚದುರ್ಗಾಹವನವನ್ನು ನಡೆಸಲಾಯಿತು. ಪ್ರತಿಷ್ಠಾನದ ವತಿಯಿಂದ ಜ್ಯೋತಿಷರತ್ನ ವೇದಮೂರ್ತಿ ಶ್ರೀ ನಾರಾಯಣ ಭಟ್ ಶ್ರೀಮತಿ ಲಕ್ಷ್ಮಿದಂಪತಿಗಳು ಹಾಗೂ ಅಖಿಲಕರ್ನಾಟಕ ಬ್ರಾಹ್ಮಣಮಹಾಸಭಾ ರಾಜ್ಯಸಂಘಟನಾ ಕಾರ್ಯದರ್ಶಿಗಳಾದ ಎಮ್ ಜಿ ಭಟ್ ಕೂಜಳ್ಳಿಯವರನ್ನು ಸನ್ಮಾನಿಸಲಾಯಿತು.

ಟ್ರಸ್ಟಿನ ಗೌರವಾಧ್ಯಕ್ಷರಾದ ವೇ.ಮೂ.ಶ್ರೀ ಸುಬ್ರಹ್ಮಣ್ಯ ಭಟ್ ಸಮಸ್ತ ವೈದಿಕರ ಪರವಾಗಿ ಸಾಧಕರನ್ನು ಸನ್ಮಾನಿಸಿದರು. ಕೃಷ್ಣಜೋಶಿ ಸಂಕೊಳ್ಳಿ ಸಾಧಕರನ್ನು ಪರಿಚಯಿಸಿದರು. ಶಂಕರ ಭಟ್ ಗಾಣಗೇರಿ ಸನ್ಮಾನಪತ್ರ ವಾಚಿಸಿದರು. ಸನ್ಮಾನಸ್ವೀಕರಿಸಿದ ನಾರಾಯಣ ಭಟ್ ಸ್ವ ರಚಿತ ಕವನವಾಚನದ ಮೂಲಕ ವೇದ ಹಾಗೂ ಸಮಾಜದ ಸಾಂಗತ್ಯದ ಕುರಿತು ಸ್ವಾರಸ್ಯವಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಟ್ರಸ್ಟಿನ ಅಧ್ಯಕ್ಷರಾದ ಸಂತೋಷ ಯಾಜಿ, ಪದಾಧಿಕಾರಿಗಳು, ಸದಸ್ಯರು, ವಿವಿಧ ಭಾಗಗಳಿಂದ ಆಗಮಿಸಿದ ಗೌರವಾನ್ವಿತ ವೈದಿಕರುಗಳು ಉಪಸ್ಥಿತರಿದ್ದರು.

ವಿಸ್ಮಯ ನ್ಯೂಸ್, ಹೊನ್ನಾವರ

Back to top button