
ಕುಮಟಾ: ಕುಮಟಾದ ಲಯನ್ಸ್ ರೇವಣಕರ ಚೆರಿಟೇಬಲ್ ಕಣ್ಣಿನ ಆಸ್ಪತ್ರೆಯ ಸೇವಾ ಕಾರ್ಯವನ್ನು ಮೆಚ್ಚಿ, ಮಂಜುನಾಥ ಎಸ್. ಭಟ್ಟ ಚಿತ್ರಿಗಿ ಅವರು ಈ ವರ್ಷವೂ ಕುಮಟಾದ ಲಯನ್ಸ್ ಹ್ಯುಮನಿಟೇರಿಯನ್ ಸರ್ವೀಸ್ ಟ್ರಸ್ಟ್ (ರಿ.) ಗೆ ರೂ. 1,00,000 ದೇಣಿಗೆ ನೀಡಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ಅವರು ಪ್ರತಿ ವರ್ಷವೂ ಈ ಸಂಸ್ಥೆಗೆ ಸ್ವಯಂ ಪ್ರೇರಿತವಾಗಿ ನಿಸ್ವಾರ್ಥ ದೇಣಿಗೆ ನೀಡುತ್ತಾ ಬಂದಿದ್ದು, ಅವರ ಸೇವಾ ಮನೋಭಾವವನ್ನು ಟ್ರಸ್ಟ್ ಪ್ರಶಂಸಿಸಿದೆ.
ಈ ಬಾರಿ ತಾಯ್ನಾಡಿಗೆ ಅವರು ನೀಡಿದ ಭೇಟಿಯ ಸಂದರ್ಭವನ್ನು ಮನಗಂಡು, ಟ್ರಸ್ಟ್‌ನ ಚೇರಮನ್ ಮದನ ನಾಯಕ ಮತ್ತು ಆಡಳಿತಾಧಿಕಾರಿ ಜಯದೇವ ಬಳಗಂಡಿ, ಚಿತ್ರಿಗಿಯಲ್ಲಿರುವ ಭಟ್ಟರ ಮನೆಗೆ ಭೇಟಿ ನೀಡಿ, ಅಧಿಕೃತ ರಸೀದಿಯೊಂದಿಗೆ ಸಂಸ್ಥೆಯಿಂದ ಕೃತಜ್ಞತಾಪತ್ರ ನೀಡಿದರು.
ಭಟ್ಟರ ಸರಳತೆ, ಸೇವಾ ಗುಣ ಮತ್ತು ತಾಯ್ನಾಡಿನ ಸೇವೆಯತ್ತ ಇರುವ ಬದ್ಧತೆ ಮೆಚ್ಚಿದ ಮದನ ನಾಯಕ ಅವರು, “ಇದು ಇಂದಿನ ಯುವಕರಿಗೆ ಆದರ್ಶವಾಗುವಂತಹ ಸೇವಾ ಮನೋಭಾವ ” ಎಂದು ಶ್ಲಾಘಿಸಿ, ಕುಟುಂಬಕ್ಕೆ ಶುಭ ಕೋರಿದರು.

ಸರಳತೆ ಹಾಗೂ ಸೇವಾ ಗುಣಗಳ ಆದರ್ಶ ಅನುಕರಣೀಯ ವ್ಯಕ್ತಿತ್ವದ ಪುತ್ರನನ್ನು ಪಡೆದ ಮಾತಾ–ಪಿತೃಗಳಾದ, ಕುಮಟಾ ಗಿಬ್ ಪ್ರೌಢಶಾಲೆಯ ನಿವೃತ್ತ ಶಿಕ್ಷಕ ಎಸ್.ಎಮ್. ಭಟ್ಟ ಮತ್ತು ನಿವೃತ್ತ ಅಂಚೆ ಇಲಾಖಾಧಿಕಾರಿ ಸುಶೀಲಾ ಭಟ್ಟರನ್ನು ಈ ಸಂದರ್ಭದಲ್ಲಿ ಸಂಸ್ಥೆಯ ವತಿಯಿಂದ ಗೌರವಿಸಲಾಯಿತು.
ಮೂಲತಃ ಕುಮಟಾ ತಾಲೂಕಿನ ಚಿತ್ರಿಗಿಯವರಾಗಿದ್ದು, ಬಾಲ್ಯದಿಂದಲೇ ಶೈಕ್ಷಣಿಕವಾಗಿ ಪ್ರತಿಭಾವಂತರಾಗಿರುವ ಮಂಜುನಾಥ ಎಸ್. ಭಟ್ಟ ಅವರು ಐಐಟಿಯಲ್ಲಿ ವಿದ್ಯಾಭ್ಯಾಸ ಮುಗಿಸಿ, ಕಳೆದ ಹಲವು ವರ್ಷಗಳಿಂದ ಅಮೆರಿಕಾದ ಲಾಸ್ ಏಂಜಲೀಸ್‌ನಲ್ಲಿ ವೃತ್ತಿ ನಿರತರಾಗಿದ್ದಾರೆ.
ವಿಸ್ಮಯ ನ್ಯೂಸ್, ಕುಮಟಾ