ಎಣ್ಣೆ ದೀಪದ ಬತ್ತಿಯನ್ನು ಇಲಿ ಕಚ್ಚಿ ಎಳೆದೊಯ್ಯುವಾಗ ಮನೆಗೆ ತಗುಲಿತೇ ಬೆಂಕಿ ? ಮನೆಗೆ ಬೀಗ ಹಾಕಿ ಹೊರ ಹೋಗಿದ್ದ ಮನೆ ಮಾಲಕ ಮನೆಗೆ ಮರಳುವಷ್ಟರಲ್ಲಿ ಹರಡಿತ್ತು ಬೆಂಕಿಯ ಕೆನ್ನಾಲಿಗೆ

ಕಾರವಾರ: ಮನೆಗೆ ಬೀಗ ಹಾಕಿ ಹೊರಹೋಗಿದ್ದ ಮಾಲಿಕ, ಮನೆಗೆ ಮರಳುವಷ್ಟರಲ್ಲಿ,ಮನೆಯಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು, ಲಕ್ಷಾಂತರ ರೂಪಾಯಿ ಹಾನಿಯಾದ ಘಟನೆ ತಾಲೂಕಿನ ನಂದನಗದ್ದ ವ್ಯಾಪ್ತಿಯಲ್ಲಿ ಸಂಭವಿಸಿದೆ. ನಂದನಗದ್ದಾದ ಪಾರ್ವತಿ ಶಂಕರ್ ಕಲ್ಯಾಣ ಮಂಟಪದ ಬಳಿ ಇರುವ ಶಾಂತಾರಾಮ ದತ್ತ ದೇಸಾಯಿ ( ಬಾಳಾ) ಎನ್ನುವವರ ಮನೆಯಲ್ಲಿ ಅ2 ರ ಶನಿವಾರ ರಾತ್ರಿ ಆಕಸ್ಮಿಕವಾಗಿ ಬೆಂಕಿ ಅವಘಡ ಸಂಭವಿಸಿದೆ.
ಸಂಜೆಯಾಗುತ್ತಿದ್ದಂತೆ ತಮ್ಮ ಮನೆಯಲ್ಲಿ ದೇವರಿಗೆ ದೀಪ ಹಚ್ಚಿ, ನಂತರ ಮನೆಗೆ ಬೀಗ ಹಾಕಿ ಹೋಗಿದ್ದ ಮನೆ ಮಾಲಕರು,ಮರಳಿ ಮನೆಗೆ ಬರುವಷ್ಟರಲ್ಲಿ ಮನೆಯ ಮೇಲ್ಚಾವಣಿಗೆ ಬೆಂಕಿ ಹೊತ್ತಿ ಉರಿಯುತ್ತಿರುವುದನ್ನು ಕಂಡು ಗಾಬರಿಯಿಂದ ಕೂಗಿಕೊಂಡಿದ್ದು ಕೇಳಿ ಸ್ಥಳೀಯರೂ ನೆರವಿಗೆ ಓಡೋಡಿ ಬಂದರಲ್ಲದೇ ಅಗ್ನಿಶಾಮಕ ದಳಕ್ಕೆ ಕರೆಮಾಡಿ ವಿಷಯ ತಿಳಿಸಿದ್ದಾರೆ.ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಸುನೀಲ್ ಕುಮಾರ ಅವರು ಕೂಡಲೇ ಕಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಆಗಮಿಸಿ,ಅಗ್ನಿಶಮನ ಕಾರ್ಯಾಚರಣೆ ಶುರು ಮಾಡಿದ್ದಾರೆ.
ಆ ವೇಳೆಗಾಗಲೇ ಮನೆಯಲ್ಲಿದ್ದ ವಸ್ತುಗಳು ಮತ್ತು,ಮೇಲ್ಚಾವಣಿ ಕಟ್ಟಿಗೆ ಮತ್ತು ಇತರ ವಸ್ತುಗಳಿಗೆ ಬೆಂಕಿ ತಗುಲಿ ಹೊತ್ತಿ ಉರಿಯಲಾರಂಭಿಸಿದ್ದು ಬೆಂಕಿ ನಂದಿಸಲು ನೀರಿನ ಅವಶ್ಯಕತೆ ಹೆಚ್ಚಿದ್ದರಿಂದ ಸಮೀಪದ ನೌಕಾನೆಲೆ ಅಗ್ನಿಶಾಮಕ ವಾಹನದ ಅಧಿಕಾರಿ ಸುಭಾಸ್ ನೇತೃತ್ವದಲ್ಲಿ 6 ಸಿಬ್ಬಂದಿಗಳನ್ನೊಳಗೊಂಡ ತಂಡದವರ ಸಹಕಾರವನ್ನು ಪಡೆಯಲಾಯಿತು. ಸತತ ಕಾರ್ಯಚರಣೆ ನಡೆಸಿ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಯಿತಾದರೂ ,ಆ ವೇಳೆಗಾಗಲೇ ಮನೆ ಹಾಗೂ ಮನೆಯಲ್ಲಿದ್ದ ವಸ್ತುಗಳು ಸುಟ್ಟು ಕರಕಲಾಗಿದ್ದು ಲಕ್ಷಾಂತರ ರೂಪಾಯಿ ಹಾನಿ ಅಂದಾಗಿಸಲಾಗಿದೆ.
ಮನೆಯ ಮಾಲಿಕ ದೇವರಿಗೆ ಹಚ್ಚಿ ಹೋಗಿದ್ದ ದೀಪದ ಬತ್ತಿಯನ್ನು ಇಲಿಯು ಕಚ್ಚಿ ಎಳೆದೊಯ್ಯುವಾಗ ಮನೆಗೆ ಬೆಂಕಿ ತಗಲಿರುವ ಸಾಧ್ಯತೆ ಇದೆ ಎನ್ನ ಲಾಗುತ್ತಿದ್ದು, ಈ ಆಕಸ್ಮಿಕ ಅಗ್ನಿ ಅವಘಡದ ಕುರಿತಂತೆ ಹೆಚ್ಚಿನ ಮತ್ತು ನಿಖರ ಮಾಹಿತಿಗಳು ತಿಳಿದು ಬರಬೇಕಿದೆ. ಜಿಲ್ಲಾ ಅಗ್ನಿಶಾಮಕ ಆಧಿಕಾರಿ ಸುನಿಲ್ ಕುಮಾರ್ ನೇತೃತ್ವ ಹಾಗೂ ಮಾರ್ಗದರ್ಶನದಲ್ಲಿ, ಅಗ್ನಿಶಾಮಕ ಠಾಣಾಧಿಕಾರಿ ಮಹಾಬಲೇಶ್ವರ ಗೌಡ,
ಪ್ರಮುಖ ಅಗ್ನಿಶಾಮಕ ರಾಜೇಶ್ ರಾಣೆ, ಚಾಲಕರಾದ ಟೋನಿ, ಸುನಿಲ್ ನಾಯ್ಕ, ಅರುಣ್ ಗೌಡ, ಅಗ್ನಿಶಾಮಕರಾದ ವಸಂತ, ಪ್ರವೀಣ್ ಅಗ್ನಿ ಶಮನ ಕಾರ್ಯಾಚರಣೆಗೆ ಕರ್ತವ್ಯ ನಿರ್ವಹಿಸಿದರು.ಸ್ಥಳೀಯರು ಮತ್ತು ನೌಕಾನೆಲೆ ಅಗ್ನಿಶಾಮಕ ಸಿಬ್ಬಂದಿಗಳು ಸಹಕರಿಸಿದರು. ಕಾರವಾರ ಪೊಲೀಸರು ಸಹ ಭೇಟಿ ನೀಡಿ ಪರಿಶೀಲಿಸಿದರು.
ಮನೆಯಲ್ಲಿ ಯಾರೂ ಇಲ್ಲದಿರುವಾಗ , ದೇವರಿಗೆ ಎಣ್ಣೆ ಮತ್ತಿತರ ದೀಪ ಹಚ್ಚಿ ಹೋಗುವುದು ಅಗ್ನಿ ಅವಘಡಗಳಿಗೆ ಕಾರಣವಾಗುವ ಸಾಧ್ಯತೆ ಇರುವುದರಿಂದ, ಅನಿವಾರ್ಯ ಮತ್ತು ತುರ್ತ ಸಂದರ್ಭ ಎನಿಸಿದರೂ ಸಹ ಈ ವೇಳೆ ಸೂಕ್ತ ಮುನ್ನೆಚ್ಚರಿಕೆಯೂ ಅವಶ್ಯ ಎನ್ನುತ್ತಾರೆ ಅಗ್ನಿಶಾಮಕ ಅಧಿಕಾರಿಗಳು, ಪ್ರತ್ಯೇಕ ಇನ್ನೊಂದು ಬೆಂಕಿ ಅವಘಡದ ಪ್ರಕರಣ ಅ 1 ರ ಶುಕ್ರವಾರ ರಾತ್ರಿ ಅಂಕೋಲಾ ಪಟ್ಟಣದ ಸೋಲಾರ ಮಾರಾಟ ಮಳಿಗೆ ಒಂದರಲ್ಲಿ ಬ್ಯಾಟರಿ ದೋಷ ಇಲ್ಲವೇ ಶಾರ್ಟ್ ಸರ್ಕಿಟ್ ಅಥವಾ ಬೇರೆ ಯಾವುದೋ ಕಾರಣದಿಂದ ಬೆಂಕಿ ಕಾಣಿಸಿಕೊಂಡು ಕೆಲಕಾಲ ಆತಂಕದ ವಾತಾವರಣ ಕಂಡು ಬಂದಿತ್ತು. ಅಗ್ನಿಶಾಮಕ ಸಿಬ್ಬಂದಿಗಳು ತಕ್ಷಣವೇ ಆಗಮಿಸಿ ಬೆಂಕಿ ಹರಡದಂತೆ ಕಾರ್ಯಚರಣೆ ನಡೆಸಿದರು.ಸ್ಥಳೀಯರು ಸಹಕರಿಸಿದರು. ಈ ಮೂಲಕ ಸಂಭವನೀಯ ಹೆಚ್ಚಿನ ಹಾನಿ ತಪ್ಪಿದಂತಾಗಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ