
ಅಂಕೋಲಾ: ಸಾಮಾಜಿಕ ಪರಿವರ್ತನೆಯಲ್ಲಿ ಸಂಘ ಸಂಸ್ಥೆಗಳ ಪಾತ್ರ ಮಹತ್ವದಾಗಿದ್ದು ಸಮಾಜದ ದುರ್ಬಲರಿಗೆ ಆರೋಗ್ಯ,ಶಿಕ್ಷಣ, ಸ್ವಾವಲಂಬಿ ಜೀವನಕ್ಕೆ ಕೊಡುಗೆ ನೀಡುತ್ತಾ ಬಂದಿರುವ ಲಯನ್ಸ್ ಅಂತರಾಷ್ಟ್ರೀಯ ಸಂಸ್ಥೆ ವಿಶ್ವಾದ್ಯಂತ ತನ್ನ ನಿಸ್ವಾರ್ಥ ಸೇವೆಗೆ ಹೆಸರು ಪಡೆದಿದೆ ಎಂದು ಅಂಕೋಲಾ ತಹಶೀಲ್ದಾರ ಡಾ.ಚಿಕ್ಕಪ್ಪ ನಾಯಕ ಹೇಳಿದರು.
ಪಟ್ಟಣದ ನಾಡವರ ಸಮುದಾಯ ಭವನದಲ್ಲಿ ಆಯೋಜಿಸಲಾಗಿದ್ದ ಲಯನ್ಸ್ ಕ್ಲಬ್ ಅಂಕೋಲಾ ಕರಾವಳಿ ಸಂಸ್ಥೆಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸೇವಾ ಸಂಸ್ಥೆಗಳು ಹಲವಾರು ಕಾರ್ಯಕ್ರಮಗಳನ್ನು ನಡೆಸುತ್ತಿದ್ದು ಜನರು ಮತ್ತು ವ್ಯವಸ್ಥೆಯ ನಡುವೆ ಸಂಬಂಧಗಳನ್ನು ಬೆಸೆಯುವ
ಕೆಲಸಗಳು ಇನ್ನಷ್ಟು ಹೆಚ್ಚಲಿ ಎಂದರು.
ಲಯನ್ಸ್ ಕ್ಲಬ್ ಅಂಕೋಲಾ ಕರಾವಳಿಯ ನೂತನ ಅಧ್ಯಕ್ಷ ರಮೇಶ ಪರಮಾರ್, ಕಾರ್ಯದರ್ಶಿ ಕರಿಯಪ್ಪ ಗೌಡ,
ಖಜಾಂಚಿ ಚೈನ್ ಸಿಂಗ್ ತಂಡಕ್ಕೆ ಅಧಿಕಾರ ವಹಿಸಿದ ಲಯನ್ಸ್ ಐ.ಟಿ ಸುದೇಶ ಬೋರಕರ್ ಮಾತನಾಡಿ ಸಮಾಜದ ಅಗತ್ಯತೆಗಳನ್ನು ಅರಿತು ಜನರಿಗೆ ಉಪಯೋಗ ಆಗುವಂತ ಕೆಲಸಗಳನ್ನು ಲಯನ್ಸ್ ಅಂತರಾಷ್ಟ್ರೀಯ ಸಂಸ್ಥೆ ನಡೆಸುತ್ತಿದ್ದು ಲಯನ್ಸ್ ಸದಸ್ಯರ ನಿಸ್ವಾರ್ಥ ಮನೋಭಾವದ ಸೇವೆಯಿಂದಾಗಿ ಇಂದು ಲಯನ್ಸ್ ಕ್ಲಬ್ ದು ರ್ಬಲರಿಗೆ ಧ್ವನಿಯಾಗುತ್ತಿದೆ ಎಂದರು.ಹೆಚ್ಚುತ್ತಿರುವ ಆತ್ಮಹತ್ಯೆ ಪಿಡುಗಿನ ವಿರುದ್ಧ
ಯುವ ಜನತೆಯನ್ನು ಮಾನಸಿಕವಾಗಿ ಸದೃಡಗೊಳಿಸುವ ಕಾರ್ಯಕ್ರಮಗಳನ್ನು ಲಯನ್ಸ್ ಸಂಸ್ಥೆ ವತಿಯಿಂದ ಮುಂದಿನ ದಿನಗಳಲ್ಲಿ ಹಮ್ಮಿಕೊಳ್ಳಲಾಗುವುದು ಎಂದರು.
ಹಿರಿಯ ವಕೀಲ ಸುಭಾಷ ನಾರ್ವೇಕರ್ ಮಾತನಾಡಿ ಪರಿಸರವನ್ನು ಸಂರಕ್ಷಣೆ ಮಾಡಿ ಭೂಮಿಯ ಹಸಿರು ಉಳಿಸುವ ಮತ್ತು ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದ್ದು ಸಂಘ ಸಂಸ್ಥೆಗಳು ಈ ದಿಶೆಯಲ್ಲಿ ಹೆಚ್ಚಿನ ಆದ್ಯತೆ ನೀಡಬೇಕು ಎಂದರು. ಲಯನ್ಸ್ ಬೆಳ್ಳಿಹಬ್ಬ ವರ್ಷದ ಅಧ್ಯಕ್ಷ ದೇವಾನಂದ ಗಾಂವಕರ್ ಮಾತನಾಡಿ ಕಳೆದ 25 ವರ್ಷಗಳಿಂದ ಅಂಕೋಲಾ ಸುತ್ತ ಮುತ್ತ ಲಯನ್ಸ್ ಸಂಸ್ಥೆ ಹಲವಾರು ವಿದಾಯಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನರಿಗೆ ಸೇವೆ ನೀಡುತ್ತಾ ಬಂದಿದೆ ಎಂದರು.
ಲಯನ್ಸ್ ಐ.ಟಿ ಮಂಗಲಾ ನಾಯಕ ಮಾತನಾಡಿದರು. ಸಂಸ್ಥಾಪಕ ಅಧ್ಯಕ್ಷ ಕೆ.ವಿ.ಶೆಟ್ಟಿ, ನಿಕಟಪೂರ್ವ ಖಜಾಂಚಿ ಗಿರಿಧರ ಆಚಾರ್ಯ ಉಪಸ್ಥಿತರಿದ್ದರು. ಜಿ.ಆರ್. ತಾಂಡೇಲ ಸ್ವಾಗತಿಸಿದರು, ಮಂಜುನಾಥ ನಾಯಕ ವರದಿ ವಾಚಿಸಿದರು, ಕರುಣಾಕರ ನಾಯ್ಕ, ಚಂದ್ರಶೇಖರ ಕಡೆಮನಿ ಅತಿಥಿಗಳನ್ನು ಪರಿಚಯಿಸಿದರು. ಮಹಾಂತೇಶ ರೇವಡಿ ಕಾರ್ಯಕ್ರಮ ನಿರ್ವಹಿಸಿದರು.
ಅಂಕೋಲಾ ತಾಲೂಕಿನ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಕಳೆದ ಹಲವಾರು ವರ್ಷಗಳಿಂದ ಎಲೆ ಮರೆಕಾಯಿಯಂತೆ
ಸಾಮಾಜಿಕ, ಧಾರ್ಮಿಕ ಸೇವೆಗಳನ್ನು ನಡೆಸುತ್ತ ಬಂದಿರುವ ರಾಮನಾಥ ಬಾಳಿಗಾ ಅವರಿಗೆ ಕಾರ್ಯಕ್ರಮದಲ್ಲಿ ಲಯನ್ಸ್ ಕರಾವಳಿ ಸೇವಾ ರತ್ನ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.
ನೀಟ್ ಪರೀಕ್ಷಾ ಸಾಧಕಿ ಮಾನ್ಯಾ ಮಂಜುನಾಥ ನಾಯ್ಕ ಬೆಳಂಬಾರ, ದ್ವಿತೀಯ ಪಿಯುಸಿ ಕಲಾವಿಭಾಗದಲ್ಲಿ ತಾಲೂಕಿಗೆ ಅತಿ ಹೆಚ್ಚು ಅಂಕ ಪಡೆದ ಶ್ರೀನಿಧಿ ಉಮೇಶ ಆಗೇರ,ವಾಣಿಜ್ಯ ವಿಭಾಗದಲ್ಲಿ ಹಿಮಾಲಯ ಕಾಲೇಜ್ ನಿಂದ ಸಾಧನೆ ಮಾಡಿದ ರೋಶನಿ ಪರಮಾರ ಲಾಯನ್ಸ್ ಕರಾವಳಿಯ ನೂತನ ಅಧ್ಯಕ್ಷರಾಗಿರುವ ರಮೇಶ್ ಪರಮಾರ ಅವರ ಸುಪುತ್ರಿ ಎನ್ನುವುದೂ ವಿಶೇಷವಾಗಿತ್ತು.
ರಾಜಸ್ಥಾನ ಮೂಲದ ರಮೇಶ್ ಪರಮಾರ ,ಅಂಕೋಲಾದಲ್ಲಿ ಬಂದು ನೆಲೆಸಿ,ಸ್ವೀಟ್ ಸಾಗರ್ ಎಂಬ ಹೆಸರಿಗೆ ತಕ್ಕಂತೆ ಇರುವ ಸಿಹಿ ತಿನಿಸುಗಳ ಮಾರಾಟ ಅಂಗಡಿ ಮುಂದುವರಿಸಿಕೊಂಡು ಬಂದು ತಾಲೂಕಿನ ಹಾಗು ಸುತ್ತಮುತ್ತಲ ಹಲವರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿದ್ದಾರೆ. ರಾಷ್ಟ್ರೀಯ ಹಬ್ಬ ಸೇರಿದಂತೆ ಹತ್ತಾರು ಕಾರ್ಯಕ್ರಮಗಳಿಗೆ ತಮ್ಮ ವೈಯಕ್ತಿಕ ಉಚಿತ ಸೇವೆಯನ್ನು ನೀಡಿರುವ ಇವರು ,ಅಂತರಾಷ್ಟ್ರೀಯ ಸಂಸ್ಥೆಯಾದ ಲಾಯನ್ಸ್ ಕ್ಲಬ್ಬಿನ ಅಧ್ಯಕ್ಷರಾಗುವಷ್ಟರ ಮಟ್ಟಿಗೆ ಬೆಳೆದು ನಿಂತಿರುವುದು ಹೆಮ್ಮೆಯ ವಿಷಯ ಎಂದು ಅವರ ಆಪ್ತರು ಸಂತಸ ವ್ಯಕ್ತಪಡಿಸಿದ್ದಾರೆ. ಪದಗ್ರಹಣ ಸಮಾರಂಭದಲ್ಲಿ ನೂರಾರು ಜನರು ಉಪಸ್ಥಿತರಿದ್ದು ಪರಮಾರ್ ಹಾಗೂ ಲಾಯನ್ಸ್ ಕ್ಲಬ್ಬಿನ ಪ್ರೀತಿಯ ಆದರಾತಿಥ್ಯ ಸ್ವೀಕರಿಸಿ ,ನೂತನ ಪದಾಧಿಕಾರಿಗಳಿಗೆ ಶುಭ ಕೋರಿದರು.
ವಿಸ್ಮಯ ನ್ಯೂಸ್ ವಿಲಾಸ್ ನಾಯಕ ಅಂಕೋಲಾ