Join Our

WhatsApp Group
Big News
Trending

ಕೇಣಿ ವಾಣಿಜ್ಯ ಬಂದರು ಯೋಜನೆ ಕೈ ಬಿಟ್ಟು ಸ್ಥಳೀಯರ ಹಿತ ಕಾಪಾಡುವಂತೆ ಶೇಡಿಕುಳಿ ಗ್ರಾಮಸ್ಥರ ಪರವಾಗಿ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ

ಅಂಕೋಲಾ : ಉದ್ದೇಶಿತ ಕೇಣಿ ಸರ್ವ ಋತು ಖಾಸಗಿ ವಾಣಿಜ್ಯ ಬಂದರು ಯೋಜನೆಯನ್ನು ಕೈ ಬಿಟ್ಟು, ತಮಗೆ ಜೀವನಾಧಾರವಾಗಿರುವ ಸಮುದ್ರ ಮೀನುಗಾರಿಕೆ ಮತ್ತು ಸಮುದ್ರ ತೀರವನ್ನು ಉಳಿಸಿಕೊಡುವಂತೆ ಅಂಕೋಲಾ ತಾಲೂಕಿನ ಬಬ್ರುವಾಡ ಗ್ರಾಮ ಪಂಚಾಯತ್ ವ್ಯಾಪ್ತಿಯ ಶೇಡಿಕುಳಿ ಗ್ರಾಮಸ್ಥರು,ಸ್ಥಳೀಯ ಪ್ರಮುಖ ಚಂದ್ರಕಾಂತ್ ಬಿ ಪೀರನ್ಕರ ನೇತೃತ್ವದಲ್ಲಿ ತಹಶೀಲ್ದಾರ್ ಅಂಕೋಲಾ ರವರ ಮೂಲಕ ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಿದರು. ಮನವಿಯಲ್ಲಿ ತಿಳಿಸಿದಂತೆ, ಶೇಡಿಕುಳಿ ಮೀನುಗಾರ ಸಮಾಜ ಮತ್ತು ಇತರ ನಾಗರಿಕರಾದ ತಾವು , ಅಂಕೋಲಾ ತಾಲೂಕಿನ ಭಾವಿಕೇರಿ ಗ್ರಾಮದ ಕೇಣಿಯಲ್ಲಿ ನಿರ್ಮಾಣ ಉದ್ದೇಶಿತ ಸರ್ವ ಋತು ವಾಣಿಜ್ಯ ಬಂದರು ಯೋಜನೆಗೆ ಕೇಣಿ ಭಾಗದ ಸ್ಥಳೀಯರು ಭಾರೀ ವಿರೋಧ ವ್ಯಕ್ತಪಡಿಸುತ್ತಿರುವುದು ಆಡಳಿತ ವರ್ಗದ ಗಮನಕ್ಕೆ ಇರಬಹುದು.

ಕೇಣಿಯ ಸಮುದ್ರವು ಮೀನುಗಾರಿಕೆಗೆ ಅತ್ಯಂತ ಪ್ರಶಸ್ತವಾದ ಸ್ಥಳವಾಗಿದೆ. ಅಲ್ಲಿ ದೊರೆಯುವ ನಾನಾ ಜಾತಿಯ ಮೀನುಗಳನ್ನು ಹಿಡಿದು ತಂದು, ನಾವು ಸೇರಿದಂತೆ ಸುತ್ತಮುತ್ತಲ ಹತ್ತಾರು ಹಳ್ಳಿಯ ಮೀನುಗಾರರು ಜೀವನ ಸಾಗಿಸುತ್ತಿದ್ದೇವೆ. ಅಲ್ಲಿ ಸ್ಥಳೀಯರು ಮತ್ತು ನಾವಷ್ಟೇ ಅಲ್ಲದೇ ಅಕ್ಕ ಪಕ್ಕದ ಗಾಬೀತಕೆಣಿ. ಬೆಳಂಬಾರ, ಗಂಗಾವಳಿ, ಗೋಕರ್ಣ ಸಮೀಪದ ದುಬ್ಬನಶಶಿ ಹಾಗೂ ಗಂಗೆಕೊಳ್ಳದ ನೂರಾರು ಮೀನುಗಾರಿಕಾ ದೋಣಿಗಳು ಇದೇ ಕೇಣಿಯ ಮೂಲೆಭಾಗದ ಸಮುದ್ರ ದಡದಲ್ಲಿ ಲಂಗರು ಹಾಕಿ, ಹಲವು ದಿನಗಳ ಕಾಲ ಅಲ್ಲಿಂದಲೇ ಮೀನುಗಾರಿಕೆ ಚಟುವಟಿಕೆಯನ್ನು, ಅನಾದಿ ಕಾಲದಿಂದ ನಡೆಸಿಕೊಂಡು ಬಂದಿರುವುದನ್ನು ಕಾಣ ಬಹುದಾಗಿದ್ದು,ಅಕ್ಕ ಪಕ್ಕದಲ್ಲಿರುವ ಗುಡ್ಡ ಮತ್ತು ಇತರ ಕಾರಣಗಳಿಂದ ಕೇಣಿಯ ಸಮುದ್ರ ಪ್ರದೇಶದಲ್ಲಿ ಮೀನುಗಾರಿಕೆಗೆ ಹೇಳಿ ಮಾಡಿಸಿದ ಸ್ಥಳದಂತಿದ್ದು,ಅಲೆಗಳ ಅಬ್ಬರ ಕಡಿಮೆಯಿದ್ದು ಸುರಕ್ಷಿತ ಸ್ಥಳ ಎಂದೇ ಹೇಳಬಹುದಾಗಿದೆ. ಅಷ್ಟೇ ಅಲ್ಲದೇ ಬೇರೆ ಬೇರೆ ಜಾತಿಯ ಮೀನುಗಳು ಹೆಚ್ಚಾಗಿ ಇಲ್ಲಿಯೇ ದೊರೆಯುತ್ತಿರುವುದೂ ಪ್ರಕೃತಿಯ ವಿಸ್ಮಯ ಹಾಗೂ ನಮ್ಮೆಲ್ಲರಿಗೆ ವರದಾನದಂತಿದೆ. ಬೇರೆ ಬೇರೆ ಊರಿನವರಾದರು ಸಹ ನಾವು ಸಮುದ್ರವನ್ನೇ ನಮ್ಮ ತಾಯಿ ಎಂದು ನಂಬಿ,ಒಂದೇ ತಾಯಿಯ ಮಕ್ಕಳಂತೆ ಪ್ರೀತಿ ಹಾಗೂ ಅನೋನ್ಯತೆಯಿಂದ ಬಾಳಿ ಬದುಕುತ್ತಿರುವ ನಾವೆಲ್ಲರೂ , ನಮ್ಮ ಕಷ್ಟ ಸುಖಗಳನ್ನು ಪರಸ್ಪರ ಹಂಚಿಕೊಂಡು ಈಗಲೂ ಒಗ್ಗಟ್ಟಾಗಿದ್ದೇವೆ.

ಒಂದು ವೇಳೆ ಈ ಭಾಗದಲ್ಲಿ ವಾಣಿಜ್ಯ ಬಂದರು ನಿರ್ಮಿಸಿದರೆ ನಮ್ಮ ಜೀವ ಹಾಗೂ ಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದ್ದು, ಬದುಕೇ ಸರ್ವನಾಶವಾಗುವ ಆತಂಕ ಕಾಡಲಾರಂಭಿಸಿದೆ. ಉದ್ದೇಶಿತ ಕೇಣಿ ವಾಣಿಜ್ಯ ಬಂದರು ನಿರ್ಮಾಣದ ವೇಳೆ ಆರಂಭದಲ್ಲಿಯೇ ಮೂರು – ನಾಲ್ಕು ಕಿಲೋಮೀಟರ್ ತನಕ ಸಮುದ್ರದ ನೈಸರ್ಗಿಕ ಉಬ್ಬರ ಇಳಿತಕ್ಕೆ ಅಡ್ಡವಾಗಿ ತಡೆಗೋಡೆ ನಿರ್ಮಿಸಿದರೆ ಅದರ ಅಡ್ಡ ಪರಿಣಾಮದಿಂದ ನಮ್ಮ ಶೇಡಿಕುಳಿ ಭಾಗ ಸೇರಿದಂತೆ ಅಕ್ಕ ಪಕ್ಕದ ಊರಿನ ಸಮುದ್ರ ತೀರ ಕೊಚ್ಚಿ ಹೋಗುವ ಮತ್ತು ಕಡಲ ತೀರಕ್ಕೆ ಹೊಂದಿಕೊಂಡಿರುವ ಮನೆಗಳು ನಿರ್ನಾಮವಾಗುವ ಸಾಧ್ಯತೆಗಳು ಹೆಚ್ಚಿದೆ.

ಮೀನುಗಾರಿಕೆಯೇ ನಮ್ಮ ಜೀವನ ಮತ್ತು ಜೀವಾಳ. ನಮಗೆ ಮೀನುಗಾರಿಕೆ ಬಿಟ್ಟರೆ ಬೇರಾವುದೇ ಮೂಲ ಕಸುಬು ಗೊತ್ತಿಲ್ಲ. ಹೀಗಾಗಿ ಮೀನುಗಾರಿಕಾ ಪ್ರದೇಶವನ್ನೇ ನಿರ್ಮೂಲನ ಮಾಡಿ ವಾಣಿಜ್ಯ ಬಂದರನ್ನು ನಿರ್ಮಿಸಿದರೆ ಮೀನುಗಾರರ ಬದುಕಿಗೆ ಕೊಳ್ಳಿ ಇಟ್ಟಂತೆ ಆಗಲಿದೆ. ಅದಕ್ಕೆ ಅವಕಾಶವಿಲ್ಲದಂತೆ , ದಯಾಳುಗಳಾದ ತಾವು ನಮ್ಮ ಮೂಲಭೂತ ಅಗತ್ಯತೆ ಮತ್ತು ಬೇಡಿಕೆಗೆ ಕೂಡಲೇ ಸ್ಪಂದಿಸಿ,ಮೀನುಗಾರರ ಮತ್ತು ಸಮುದ್ರ ತೀರದ ಅಕ್ಕ ಪಕ್ಕದಲ್ಲಿ ವಾಸವಾಗಿರುವ ಕೃಷಿಕರು ಕೂಲಿ ಕಾರ್ಮಿಕರು ಮತ್ತಿತರರ ಹಿತರಕ್ಷಣೆಗಾಗಿ,ಖಾಸಗಿ ವಾಣಿಜ್ಯ ಬಂದರು ನಿರ್ಮಾಣ ಯೋಜನೆಯನ್ನು ಕೈ ಬಿಟ್ಟು,ನಮ್ಮ ಬದುಕಿಗೆ ಆಸರೆಯಾಗಿರುವ ಮೀನುಗಾರಿಕೆ ಮತ್ತು ಇತರ ಕೆಲಸ ಕಾರ್ಯಗಳನ್ನು ಈ ಹಿಂದಿನಂತೆಯೇ ಮಾಡಿಕೊಂಡು ಹೋಗಲು ಅನುವು ಮಾಡಿಕೊಡಬೇಕಾಗಿ,ಮತ್ತು ಅಗತ್ಯವಿದ್ದಲ್ಲಿ ಮೀನುಗಾರಿಕೆ ಕೃಷಿ ತೆರೆ ಚಟುವಟಿಕೆಗಳಿಗೆ ಸರ್ಕಾರದ ವತಿಯಿಂದ ಹೆಚ್ಚಿನ ನೆರವು ಹಾಗೂ ಪ್ರೋತ್ಸಾಹ ನೀಡಿ ಜವಾಬ್ದಾರಿ ಮೆರೆಯಬೇಕಾಗಿ ವಿನಂತಿಸಿಕೊಂಡಿದ್ದು,
ಜನಜೀವನದ ಮೇಲೆ ದುಷ್ಪರಿಣಾಮ ಬೀರುವ ಖಾಸಗಿ ಕಂಪನಿಗೆ ಕರ್ನಾಟಕದ ಕರಾವಳಿ ತೀರದಲ್ಲಿ ಅವಕಾಶ ನಿರಾಕರಿಸಿ,ಪರಿಸರ ಮತ್ತು ಪ್ರವಾಸೋದ್ಯಮ ಅಭಿವೃದ್ಧಿಯ ದಿಶೆಯಲ್ಲಿ ಹೆಚ್ಚಿನ ಆದ್ಯತೆ ಕೊಟ್ಟರೆ,ವಿಸ್ತೀರ್ಣ ಮತ್ತು ಜನಸಂಖ್ಯೆಯಲ್ಲಿ ಕಡಿಮೆ ಇರುವ ಆದರೆ ಪ್ರವಾಸೋದ್ಯಮ ಮತ್ತಿತರ ಚಟುವಟಿಕೆಗಳಲ್ಲಿ ಭಲಾ ಢ್ಯವಾಗಿ ಬೆಳೆದಿರುವ ಪಕ್ಕದ ರಾಜ್ಯವಾದ ಗೋವಾ ಇಲ್ಲವೇ ದೇವರ ನಾಡು ಕೇರಳದಂತ ರಾಜ್ಯದ ಪ್ರವಾಸೋದ್ಯಮ ಮತ್ತಿತರ ಕ್ಷೇತ್ರದ ಅಭಿವೃದ್ಧಿಯನ್ನು ಉದಾಹರಿಸಿ ಹೇಳಬಹುದಾಗಿದ್ದು,ಅವುಗಳಿಗಿಂತ ಸುಂದರ ಹಾಗೂ ವಿಶಾಲ ವ್ಯಾಪ್ತಿ ಹೊಂದಿರುವ ಇಲ್ಲಿನ ನೈಸರ್ಗಿಕ ಕರಾವಳಿ ತೀರಪ್ರದೇಶವನ್ನು ಸರಿಯಾಗಿ ಬಳಸಿಕೊಂಡರೆ, ಜನರ ಬದುಕು ಗಟ್ಟಿಗೊಳ್ಳಲು ಸಾಧ್ಯವಾಗುತ್ತದೆ. ಮತ್ತು ಪ್ರವಾಸೋದ್ಯಮ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಿದಂತೆಯೂ ಆಗುತ್ತದೆ.

ಈಗಾಗಲೇ ನೌಕಾನೆಲೆ ಮತ್ತಿತರ ಕಾರಣದಿಂದ ಕಾರವಾರ-ಅಂಕೋಲಾ ಭಾಗದ ಬಹುತೇಕ ಸಮುದ್ರದ ತೀರಗಳು ಇದ್ದೂ ಇಲ್ಲದಂತಾಗಿ ಹಲವರ ಬದುಕು ಕಸಿದುಕೊಂಡಿದೆ. ಈಗ ಖಾಸಗೀ ಬಂಡವಾಳಶಾಹಿ ಉದ್ಯಮಕ್ಕೆ ಇಡೀ ಅಂಕೋಲಾ ಕರಾವಳಿಯ ತೀರ ಪ್ರದೇಶಗಳು ಮತ್ತು ಸಂಪ್ರದಾಯಿಕ ವೃತ್ತಿಯಾದ ಕೃಷಿ ಮತ್ತು ಮೀನುಗಾರಿಕೆಯನ್ನು ಬಲಿಕೊಡುವುದು ನ್ಯಾಯ ಸಮ್ಮತವಲ್ಲ.
ಆದುದರಿಂದ ಉದ್ದೇಶಿತ ಕೇಣಿ ವಾಣಿಜ್ಯ ಬಂದರು ನಿರ್ಮಿಸಿದರೆ ಸುತ್ತಲೂ ನೂರಾರು ಹಳ್ಳಿಗಳ ಮೂಲ ನಿವಾಸಿಗಳ ಜನಜೀವನದ ಮೇಲೆ ನಾನಾ ರೀತಿಯ ದುಷ್ಪರಿಣಾಮಗಳು ಆಗಲಿವೆ.

ಅದಕ್ಕಾಗಿ ಯಾವುದೇ ಕಾರಣಕ್ಕೂ ಕೇಣಿಯಲ್ಲಿ ಖಾಸಗಿ ಕಂಪನಿಯುವರು ನಿರ್ಮಿಸಲು ಉದ್ದೇಶಿಸಿರುವ ಕೇಣಿ ಸರ್ವಋತು ವಾಣಿಜ್ಯ ಬಂದರು ಯೋಜನೆಯನ್ನು ಸರ್ಕಾರ ಕೈಬಿಡಲೇಬೇಕು. ಒಂದಾನುವೇಳೆ ಒತ್ತಾಯಪೂರ್ವಕವಾಗಿ ವಾಣಿಜ್ಯ ಬಂದರು ನಿರ್ಮಿಸಲು ಕಂಪನಿಯವರಿಗೆ ಅವಕಾಶ ಮತ್ತು ಅನುಮತಿ ನೀಡಿದರೆ ಮುಂದಿನ ದಿನಗಳಲ್ಲಿ ನಾವು ನಮ್ಮ ಬದುಕು ಮತ್ತು ಮೂಲಭೂತ ಹಕ್ಕಿಗಾಗಿ ಯಾವುದೇ ಹಂತದ ಹೋರಾಟಕ್ಕೂ ಸಜ್ಜಾಗಬೇಕಾದ ಅನಿವಾರ್ಯತೆ ಎದುರಾಗಬಹುದು.

ಆದ್ದರಿಂದ ನಮ್ಮ ಈ ಮನವಿಯನ್ನು ಪರಿಗಣಿಸಿ, ಕೇಣಿ ವಾಣಿಜ್ಯ ಬಂದರು ನಿರ್ಮಿಸುವುದನ್ನ ಕೈ ಬಿಡಬೇಕು ಮತ್ತು ಈ ಮೂಲಕ ಪಾರಂಪರಿಕ ಮೂಲವಾದ ಮೀನುಗಾರಿಕೆ ಮತ್ತು ಕೃಷಿ ಅವಲಂಬಿತ ಕುಟುಂಬಗಳಿಗೆ ಜೀವನ ಭಧ್ರತೆ ಒದಗಿಸಿಕೊಡಬೇಕೆಂದು ಆಗ್ರಹಿಸಿದ್ದಾರೆ.ತಹಶೀಲ್ದಾರ್ ಡಾ ಚಿಕ್ಕಪ್ಪ ನಾಯಕ ಮನವಿ ಸ್ವೀಕರಿಸಿದರು. ಚಂದ್ರಕಾಂತ್ ಬಿಕಾಪೀರ ನಕರ, ಉಮೇಶ ಠಾಕೇಕರ, ಗಜಾನನ ಕರಾಡೆ, ಹರೀಶ ಗಿರಿಫ್,ಸಂತೋಷ್ ಕುರ್ಲೆ, ಸತೀಶ ಗಿರಫ್, ಮಾರುತಿ ತೊನ್ಕೆ, ಆಕಾಶ ಗಿರಫ,ಮಂಜುನಾಥ್ ಸಾಧಿಯೇ,ದಂಡು ಪಿರನ ಕರ,ಪ್ರಮೋದ್ ಕುರ್ಲೆ, ಸೂರಜ ಕರವಡಕರ, ವಿಠ್ಠಲ ತಾರಿ ಮತ್ತಿತರರು ಇದ್ದರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button