
ಹೊನ್ನಾವರ: ಪಟ್ಟಣ ಪಂಚಾಯತ ಕಚೇರಿಗೆ ಶಾಸಕ ದಿನಕರ ಶೆಟ್ಟಿ ದಿಡೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಅವರು, ರಾಜ್ಯ ಸರಕಾರ ಉತ್ತರ ಕನ್ನಡ ಜಿಲ್ಲೆಗೆ ಯಾವುದೇ ಪ್ರಮಾಣದ ಅನುದಾನ ಕೊಡುತ್ತಿಲ್ಲ ಎನ್ನುವ ಬೇಸರ ಇದೆ. ಪ್ರವಾಸೋದ್ಯಮಕ್ಕೆ ನನ್ನ ಕ್ಷೇತ್ರಕ್ಕೆ ಜೀರೋ ಕೊಡುಗೆ ಕೊಟ್ಟಿದ್ದಾರೆ. ಈ ಬಾರಿ ಅಧಿವೇಶನದಲ್ಲಿ ಇದನ್ನು ಪ್ರಶ್ನೆ ಮಾಡುತ್ತೇನೆ ಎಂದರು.
ಬಿಜೆಪಿ ಸರಕಾರ ಇದ್ದಾಗ ಐದು ಕೋಟಿ ಹಣ ಮಂಜೂರಿ ಮಾಡಿತ್ತು. ಅದರಿಂದ ಎಲ್ಲೆಲ್ಲಿ ಕಾಮಗಾರಿ ಆಗಿದೆ ಎಂದು ಪರಿಶೀಲನೆ ಮಾಡಲು ಹೇಳಿದ್ದೇನೆ. ಇಂದಿನ ಸರಕಾರ ಕಳೆದ ಎರಡು ವರ್ಷದಿಂದ ಪ. ಪಂ. ಕ್ಕೆ ಹಣ ಬಿಡುಗಡೆ ಮಾಡಿಲ್ಲ. ಸಂಬoಧ ಪಟ್ಟ ಸಚಿವರ ಹತ್ತಿರ ಮನವಿ ಮಾಡಿದರು ಪ್ರಯೋಜನಕ್ಕೆ ಬಂದಿಲ್ಲ. ನನ್ನ ಶಾಸಕತ್ವದ ನಿಧಿಯಲ್ಲಿಯೆ ಕುಮಟ ಹೊನ್ನಾವರದ ಕೆಲಸ ನಡೆದಿದೆ ಎಂದರು.
ಬೇಸಿಗೆಯಲ್ಲಿ ಕುಡಿಯುವ ನೀರಿನ ಪೂರೈಕೆ ಮಾಡಿದ ವಾಹನದವರಿಗೆ ಇನ್ನೂ ಹಣ ಕೊಟ್ಟಿಲ್ಲ. ಇಷ್ಟು ಸಣ್ಣ ಹಣ ಕೊಡುತ್ತಿಲ್ಲ. ದಿವಾಳಿ ಆಗಿದ್ದೀರಿ ಅಂದರೆ, ದಿವಾಳಿ ಆಗಿಲ್ಲ ಅನ್ನುತ್ತಾರೆ. ನಮ್ಮ ಜಿಲ್ಲೆಗೆ ಯಾವುದೇ ಪ್ರಮಾಣದ ಅನುದಾನ ಬಂದಿಲ್ಲ ಎನ್ನುವ ಬೇಸರದ ವಿಷಯ, ಕುಡಿಯುವ ನೀರು ಇರಬಹುದು, ಪ್ರವಾಸೋದ್ಯಮದಲ್ಲಿ ನನ್ನ ಕ್ಷೇತ್ರಕ್ಕೆ ಜೀರೋ ಕೊಡುಗೆ, ಸಚಿವ ಎಚ್. ಕೆ. ಪಾಟೀಲ್ ನಮ್ಮ ಜಿಲ್ಲೆಯಿಂದಲೇ ಆಯ್ಕೆಯಾಗಿ ಏನು ಕೊಟ್ಟಿಲ್ಲ ಎಂದರು. ಒಬ್ಬ ಎಂಜಿನಿಯರ್ ಹೊನ್ನಾವರ, ಕುಮಟ, ಮಂಕಿ ಮೂರು ಕಡೆ ಕೆಲಸ ಮಾಡಬೇಕು. ಈ ಸರಕಾರ ಬಂದಮೇಲೆ ಯಾವುದೇ ಹಣ ಮಂಜೂರಿ ಮಾಡಿಲ್ಲ ಎಂದರು.
ವಿಸ್ಮಯ ನ್ಯೂಸ್, ವಿವೇಕ್ ಶೇಟ್, ಹೊನ್ನಾವರ