Big News
Trending

ಕಾವ್ಯ ಮನುಷ್ಯನ ಅಂತರಂಗದ ಭಾವನೆಗೆ ಹಿಡಿದ ಕನ್ನಡಿ: ವನ್ನಳ್ಳಿ ಗಿರಿ

ಕುಮಟಾ: ಕವಿತೆಗೆ ನಮ್ಮ ಲೌಕಿಕ ಜಗತ್ತಿನ ಎಲ್ಲ ಜಂಜಡದ ಜಾಡ್ಯವನ್ನು ಮರೆಯಿಸಿ , ಅಲೌಕಿಕವಾದ ಆನಂದದ ಅನುಭೂತಿಯಲ್ಲಿ ವಿರಮಿಸುವಂತೆ ಮಾಡುವ ಶಕ್ತಿ ಇದೆ. ಅಂತಹ ಕಾವ್ಯ ನಿರ್ಮಾಣದ ಹಿಂದೆ ಕವಿಯ ನಿರಂತರ ಅಭ್ಯಾಸ ,ಪ್ರತಿಭೆ, ಕೆಲಸ ಮಾಡುತ್ತದೆ. ಪ್ರತಿಭಾ ಸಂಪನ್ನನಾದ ಒಬ್ಬ ಕವಿಗೆ ಕಣ್ಣು ತೆರೆದಲ್ಲೆಲ್ಲಾ ಲೋಕ ಅನುಭವವಾಗುತ್ತದೆ.

ತನ್ನ ಅನುಭವಗಳನ್ನೂ ಅಕ್ಕರೆಯ ಅಕ್ಷರ ರೂಪದಲ್ಲಿ ಕವಿ ಕಟ್ಟಿಕೊಡುತ್ತಾರೆ ಎಂದು ಕವಿ , ಸಾಹಿತಿ,ಉಪನ್ಯಾಸಕ ವನ್ನಳ್ಳಿ ಗಿರಿ ನುಡಿದರು. ಅವರು ಕೆನರಾ ಕಾಲೇಜು ಸೊಸೈಟಿಯ ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯ ಕುಮಟಾದಲ್ಲಿ ನಡೆದ ಕವಿ ಗೋಷ್ಠಿ ಹಾಗೂ ಕವಿ ,ಕಾವ್ಯ ಮತ್ತು ಸೃಜನಶೀಲತೆ ಎನ್ನುವ ವಿಷಯದ ಕುರಿತು ಉಪನ್ಯಾಸ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಪ್ರೀತಿ ಬಂಡಾರ್ಕರ್ ಮಾತನಾಡಿ, ನಮ್ಮ ಎಲ್ಲಾ ನೋವುಗಳನ್ನು ಮರೆಯಿಸಿ ವಿಶಿಷ್ಟ ಅನುಭವವನ್ನು ಪಡೆಯಲು ಕಾವ್ಯದ ಅಧ್ಯಯನ ಅಗತ್ಯ ಎಂದು ನುಡಿದರು. 11ಕ್ಕೂ ಹೆಚ್ಚು ಪ್ರಶಿಕ್ಷಣ ವಿದ್ಯಾರ್ಥಿಗಳು ಸ್ವರಚಿತ ಕವನವನ್ನು ವಾಚಿಸಿದರು. ವೇದಿಕೆ ಮೇಲೆ ಸಹ ಪ್ರಾಧ್ಯಾಪಕರಾದ ಉಮೇಶ್ ನಾಯಕ್ ಉಪಸ್ಥಿತರಿದ್ದರು.

ವಿಸ್ಮಯ ನ್ಯೂಸ್, ಕುಮಟಾ

Back to top button