Focus News
Trending

ಅಂಕೋಲಾ ಯಲ್ಲಾಪುರ ಹೆದ್ದಾರಿ: ಅಪಘಾತಗಳ ಜೊತೆಗಿನ ಸಾವು ನೋವಿನ ದಾರಿ

ಜನರ ಬೇಸರ, ಆಕ್ರೋಶ ತುರ್ತು ಕ್ರಮದ ಅಗತ್ಯತೆ

  • ಐದು ವರ್ಷಗಳಲ್ಲಿ 400ಕ್ಕೂ ಹೆಚ್ಚು ಅಪಘಾತ
  • 78ಕ್ಕೂ ಹೆಚ್ಚು ಸಾವು
  • ಎನ್ಎಚ್ಎಐ ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ಆಕ್ರೋಶ

ಅಂಕೋಲಾ: ಹೊಂಡ ಗುಂಡಿಯ ಈ ಹೆದ್ದಾರಿ ಸಾವು ನೋವಿನ ರಹ ದಾರಿ ಎನ್ನುವಂತಾಗಿದ್ದು ದೇಶದ  ನಾಲ್ಕನೇ ಅತಿ ಉದ್ದದ ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಯ ಯಲ್ಲಾಪುರ ಅಂಕೋಲಾ ಮಾರ್ಗಮಧ್ಯೆ ದಿನನಿತ್ಯ ಟ್ರಾಫಿಕ್ ಜಾಮ್,ಅಪಘಾತಗಳು ಸಾಮಾನ್ಯ ಎನಿಸುವಂತೆ ಆಗಿ, ತಮ್ಮ ಸಂಚಾರದ ವೇಳೆ ಎಲ್ಲರೂ ಹೈರಾಣ ಆಗಿ ಆಡಳಿತ ವ್ಯವಸ್ಥೆಗೆ ಹಿಡಿ ಶಾಪ ಹಾಕುವಂತಾಗಿದೆ.

ಈ ಹಿಂದೆ ರಾಷ್ಟ್ರೀಯ ಹೆದ್ದಾರಿ 63 ರಹೆಬ್ಬಾಗಿ ಲಿನಂತಿದ್ದ  ಮತ್ತು ಬದಲಾದ ಹೆದ್ದಾರಿ ಗುರುತಿಸುವಿಕೆ ವೇಳೆ ಈಗ ಎನ್ ಎಚ್  52 ರ ಮೂಲಕ ದೇಶದ 4 ನೇ ಅತಿ ಉದ್ದದ ರಾಷ್ಟ್ರೀಯ ಹೆದ್ದಾರಿಯ ಒಂದು ಭಾಗವಾದ  ಅಂಕೋಲಾ ಯಲ್ಲಾಪುರ ಮಾರ್ಗ ಮಧ್ಯೆ  ಹೆದ್ದಾರಿಯ ಅಸಮರ್ಪಕ  ಇಲ್ಲವೇ ಬೇಜವಾಬ್ದಾರಿ ಮತ್ತು  ನಿರ್ವಹಣೆ ಕೊರತೆಯಿಂದ ಹೊಂಡ ಗುಂಡಿಗಳಿಂದ ಕೂಡಿ,ದಿನನಿತ್ಯ ನಾನಾ ಕಾರಣಗಳಿಂದ ಈ ಹೆದ್ದಾರಿಯು ಸಾವು ನೋವಿನ ರಹದಾರಿ ಎನ್ನುವಂತಾಗಿದೆ.  ರಸ್ತೆಯಲ್ಲಿ ಪದೇ ಪದೇ ಸಂಭವಿಸುತ್ತಿರುವ  ಅಪಘಾತಗಳಿಂದಾಗಿಯೂ ಈ ರಸ್ತೆ ಯಮಪುರಿಗೆ ರಹ ದಾರಿಯೆಂಬ ಕುಖ್ಯಾತಿ ಪಡೆಯಲಾರಂಭಿಸಿದ್ದು ನಿಜಕ್ಕೂ ಇದು ಎಲ್ಲರಿಗೂ ಬೇಸರವೆನಿಸತೊಡಗಿದೆ.

ಸಾರ್ವಜನಿಕರ ತೀವ್ರ ಆಕ್ರೋಶ

ಹೆದ್ದಾರಿಯಲ್ಲಿನ ಹೊಂಡಗಳು ಬಾಯಿ ತೆರೆದು ಕುಳಿತು ಅಪಾಯಕ್ಕೆ ಅಹ್ವಾನ ನೀಡುತ್ತಾ ಗಟ್ಟಿ ಗುಂಡಿಗೆಯವರಷ್ಟೇ ವಾಹನ ಚಲಾಯಿಸಿ ಹೆದ್ದಾರಿ ಸಂಚಾರವನ್ನು ಮುಂದುವರಿಸುವಂತಾಗಿದೆ . ಅಂಕೋಲಾ ತಾಲೂಕಿನ ಹೊನ್ನಳ್ಳಿ,ಸುಂಕತಾಳ,ಮತ್ತಿತರಡೆ ಹಾಗೂ ಯಲ್ಲಾಪುರ ವ್ಯಾಪ್ತಿಯ ಕೆಲವೇ ಹೆದ್ದಾರಿಯಲ್ಲಿ ಉಂಟಾಗಿರುವ ಸಾವಿರಾರು ಗುಂಡಿಗಳು ಅಪಘಾತಗಳಿಗೆ ಕಾರಣವಾಗುತ್ತಿರುವುದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. 

ಅಂಕೋಲಾ ತಾಲೂಕಿನ ಬಾಳೆಗುಳಿಯಿಂದ ಪಂಜಾಬ್ ರಾಜ್ಯದವರೆಗೆ  ವ್ಯಾಪ್ತಿಹೊಂದಿರುವ  ಈ ರಾಷ್ಟ್ರೀಯ ಹೆದ್ದಾರಿಗೆ ಅಂಕೋಲಾ ಯಲ್ಲಾಪುರ ನಡುವಿನ ಸುಮಾರು 70 ಕಿಲೋಮೀಟರ್ ವ್ಯಾಪ್ತಿಯ ರಸ್ತೆ  ಅಲ್ಲಲ್ಲಿ ಯು ಟರ್ನ್ ಆಗಿ ಪರಿಣಮಿಸಿದ್ದು ಇಲ್ಲಿ ಪ್ರತಿ ವರ್ಷ ಹಲವಾರು ಅಪಘಾತಗಳು ಸಾವು ನೋವುಗಳು ಸಂಭವಿಸುತ್ತಲೇ ಇರುತ್ತವೆ.

NHAI ಏನು ಮಾಡುತ್ತಿದೆ?  ಅವರ ಜವಾಬ್ದಾರಿಗಳೇನು ? 

ದಟ್ಟವಾದ ಅರಣ್ಯ ಪ್ರದೇಶ ಘಟ್ಟಗಳಿಂದ ಹಾದು ಹೋಗಿರುವ  ರಸ್ತೆಯಲ್ಲಿ ಇರುವ ಅವೈಜ್ಞಾನಿಕ ತಿರುವುಗಳು ಮಾರು ಮಾರಿಗೆ ಅಪಘಾತ ವಲಯಗಳನ್ನು ಸೃಷ್ಟಿಸಿವೆ. ಕೆಲವೊಮ್ಮೆ ಚಾಲಕರು  ಅತಿ ವೇಗದಿಂದ ವಾಹನ ಚಲಾಯಿಸುವುದು,ಮಧ್ಯಪಾನ ಸೇವಿಸಿ ವಾಹನ ಚಲಾಯಿಸುವುದು,ಮತ್ತಿತರ ರೀತಿಯಲ್ಲಿ ಸಂಚಾರ ನಿಯಮಗಳನ್ನು ಉಲ್ಲಂಘಿಸಿ ವಾಹನ ಚಲಾಯಿಸುವುದು ಅಪಘಾತಕ್ಕೆ ಕಾರಣವಾಗಿರಬಹುದಾದರೂ,ಅವರ ನಿರ್ಲಕ್ಷ ಚಾಲನೆಯೊಂದೇ ಈ ಎಲ್ಲಾ ಅಪಘಾತಗಳಿಗೆ ಕಾರಣವಾಗಿರದೇ, ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ಮಾಣವಾಗಿರುವ ದೊಡ್ಡ ದೊಡ್ಡ ಹೊಂಡ ಗುಂಡಿಗಳಿಂದಲೂ ಅಪಘಾತ ಮತ್ತಿತರ ಅವಘಡ ಹಾಗೂ ನಾನಾ ರೀತಿಯ ಕಷ್ಟನಷ್ಟಗಳಾಗುತ್ತಿವೆ ಎನ್ನುವುದನ್ನು ಜನಸಾಮಾನ್ಯರು ಗುರುತಿಸಬಹುದಾಗಿದೆ.ಹೀಗಿದ್ದು ಕಣ್ಣಿದ್ದು ಕುರುಡಾಗಿರುವ ಇಲ್ಲವೇ ಜಾಣ ಕುರುಡುತನ ಪ್ರದರ್ಶಿಸುತ್ತಿರುವ ಎನ್ ಎಚ್ ಎ ಐ ಏನು ಮಾಡುತ್ತಿದೆ?  ಅವರ ಜವಾಬ್ದಾರಿಗಳೇನು ?  ಎನ್ನುವುದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವ  ಮಟ್ಟಿಗೆ ಇವೆಲ್ಲ ಮುಂದುವರಿಯಬಹುದೇ ಕಾದುನೋಡಬೇಕಿದೆ. 

ಹೆದ್ದಾರಿ ಸಂಚಾರಿಗಳ ಪಾಲಿಗೆ ಯಮಸ್ವರೂಪಿ

ಅಂಕೋಲಾ ತಾಲೂಕು ವ್ಯಾಪ್ತಿಯಲ್ಲಿ ಅಡ್ಲೂರಿನಿಂದ ರಾಮನಗುಳಿ ವರೆಗೆ ರಸ್ತೆ ಹೊಂಡಗಳಿಂದ ತುಂಬಿ ಹೋಗಿದ್ದು ಪ್ರಮುಖ ರಾಷ್ಟ್ರೀಯ ಹೆದ್ದಾರಿಯೊಂದು ಪದೇ ಪದೇ ಕೆಟ್ಟು ಹೋಗುವ ಮೂಲಕ ವ್ಯವಸ್ಥೆಯನ್ನು ಅಣುಕಿಸುವಂತಿದೆ. ಒಂದಡೆ ಕೋಟ್ಯಾಂತರ ರೂಪಾಯಿ ಹಣ ಸುರಿದು ರಸ್ತೆ ಕಾಮಗಾರಿಗಳು ಅಲ್ಲಲ್ಲಿ ನಡೆಯತ್ತಲೇ ಇದ್ದರೆ ಇನ್ನೊದಡೆ  ನಿರ್ಮಾಣವಾದ ಒಂದೇ ವರ್ಷದಲ್ಲಿ ರಸ್ತೆ ಕೆಟ್ಟು ಭಾರೀ ಗಾತ್ರದ ಹೊಂಡಗಳ ಸೃಷ್ಟಿಯಾಗುವ ಜೊತೆಗೆ,ಹೆದ್ದಾರಿ ಅಂಚಿಗೆ ಮಣ್ಣನ್ನು ಸರಿಯಾಗಿ ಸಮತಟ್ಟುಗೊಳಿಸದಿರುವುದು,ಇಲ್ಲವೇ ಶೇಡಿ ಮಣ್ಣು ತಂದು ಕಾಟಾಚಾರದ ಕಾಮಗಾರಿ ಕೈಗೊಂಡಿರುವುದನ್ನು ಅಲ್ಲಲ್ಲಿ ಕಾಣಬಹುದಾಗಿದ್ದು,ಇದರಿಂದ ಸಂಚಾರ ಸುರಕ್ಷತೆಗೆ ಸವಾಲಾಗಿ  ಜನ ಸಾಮಾನ್ಯರು ಹಾಗೂ ಹೆದ್ದಾರಿ ಸಂಚಾರಿಗಳ ಪಾಲಿಗೆ ಯಮಸ್ವರೂಪಿಯಾಗಿ ಕಾಡುತ್ತಿವೆ.

ತಾಲೂಕಿನ ಅಗಸೂರು ಬಳಿ ಇತ್ತೀಚೆಗೆ ಖಾಸಗಿ ಬಸ್ಸೊಂದು ರಸ್ತೆ ಹೊಂಡ ತಪ್ಪಿಸುವ ಭರದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಸಣ್ಣ ಸೇತುವೆಯೊಂದಕ್ಕೆ ಡಿಕ್ಕಿ ಹೊಡೆದು ಹಳ್ಳದ ನೀರಿಗೆ  ಉರುಳಿ ಬಿತ್ತು ಎನ್ನಲಾದ ದುರಂತ ಘಟನೆಯಲ್ಲಿ ಓರ್ವ ಮೃತಪಟ್ಟು ಸುಮಾರು 20 ಜನರು ಗಾಯಗೊಂಡ ಘಟನೆ ಸ್ಮರಿಸಬಹುದಾಗಿದೆ.  ಜಿಲ್ಲಾ ಪೊಲೀಸ್ ಇಲಾಖೆ ಸಹ ಹೆದ್ದಾರಿಯ ದುಸ್ಥಿತಿ ಅಪಘಾತಗಳಿಗೆ ದಾರಿ ಮಾಡಿಕೊಡುವ ಸಾಧ್ಯತೆ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದಂತಿದೆ.

 ಹೊನ್ನಳ್ಳಿ ಸೇತುವೆ ಬಳಿಯಂತೂ ರಸ್ತೆ ಸಂಪೂರ್ಣವಾಗಿ ಕೆಟ್ಟು ಹೋಗಿದ್ದು , ಹೊಂಡಗಳನ್ನು ತಪ್ಪಿಸಲು ಹೋಗಿ  ವಾಹನಗಳು ನಿಯಂತ್ರಣ ತಪ್ಪಿ ಅಪಘಾತಗಳು ಸಂಭವಿಸುವ ಸಾಧ್ಯತೆ ಕಂಡು ಬರುತ್ತಿದೆ. ತಾಲೂಕು ವ್ಯಾಪ್ತಿಯ ರಾಮನಗುಳಿ ವರೆಗೆ ರಸ್ತೆ ಸಂಪೂರ್ಣ ಕೆಟ್ಟು ಹೋಗಿದ್ದು ಯಲ್ಲಾಪುರ ತಾಲೂಕಿನ ಅರಬೈಲ್ ಘಟ್ಟ ಮತ್ತಿತರ ಕಡೆಗಳಲ್ಲಿ ರಸ್ತೆ ಕೆಟ್ಟು ದಾರುಣ ಸ್ಥಿತಿಯಲ್ಲಿ ಇದೆ.

ಮಳೆಗಾಲದ ಪೂರ್ವದಲ್ಲಿ ಮತ್ತು ನಂತರದ ದಿನಗಳಲ್ಲಿ ನಡೆಸಲಾಗುತ್ತಿರುವ ನಿರ್ವಹಣಾ ಕಾಮಗಾರಿಗಳು ಇತ್ತೀಚಿಗೆ ಒಂದೆರಡು ವರ್ಷಗಳಿಂದ ಸರಿಯಾಗಿ ನಡೆಯುತ್ತಿಲ್ಲ ಮತ್ತು ರಸ್ತೆ ಕಾಮಗಾರಿ ಕಳಪೆ ಗುಣಮಟ್ಟದಲ್ಲಿ ನಡೆಯುತ್ತಿರುವುದು ಸಮಸ್ಯೆಗೆ ಕಾರಣ ಎನ್ನುವ ಮಾತುಗಳು ಸಾರ್ವಜನಿಕರಿಂದ ಕೇಳಿ ಬರುತ್ತಿದ್ದು, ಹೊಂಡಗಳನ್ನು ಮುಚ್ಚಿ ರಸ್ತೆ ಸರಿಪಡಿಸುವ ದಿಶೆಯಲ್ಲಿ  ರಾಷ್ಟ್ರೀಯ ಹೆದ್ದಾರಿ ಇಲಾಖೆ  ತುರ್ತು ಕ್ರಮಗಳನ್ನು ಕೈಗೊಳ್ಳುವ  ಅಗತ್ಯತೆ ಇದೆ.

ಅಂಕೋಲಾದ ಬಾಳೆಗುಳಿ  ರೈಲ್ವೆ ಬ್ರಿಜ್ ಹತ್ತಿರ ಮತ್ತು ಮುಂದುವರಿದ ಇದೆ ಹೆದ್ದಾರಿಯಲ್ಲಿ ಕೆಲವೆಡೆ  ಬರಸಾ ರಿಪೇರಿ ಮಾದರಿಯಲ್ಲಿ ,ಅಲ್ಲಲ್ಲಿ ಕೆಲಗುಂಡಿ ಗಳನ್ನು ತುಂಬಿದ್ದರು,ಇತರೆಡೆ ದಿನದಿಂದ ದಿನಕ್ಕೆ ಅಂಡ ಗುಂಡಿಗಳ ಗಾತ್ರ ಹೆಚ್ಚುತ್ತಲೇ ಇದ್ದು,ಹೆದ್ದಾರಿಯಲ್ಲಿ ಹೊಂಡವೋ , ಹೊಂಡದಲ್ಲಿ ಹೆದ್ದಾರಿ ಯೋ ಎಂದು ಅಣಕಿಸುವ ಷ್ಟರ ಮಟ್ಟಿಗೆ ಇಲ್ಲಿನ ದುಸ್ಥಿತಿಯನ್ನು ಕಾಣಬಹುದಾಗಿದೆ.ಇಲ್ಲವೇ ಬಾರಿ ಪ್ರಮಾಣದ ಹೊಂಡ ತಪ್ಪಿಸಿ ಎಲ್ಲರೂ ಓಡಾಡ ಬಯಸುವುದರಿಂದ ಒಮ್ಮೊಮ್ಮೆ ಒನ್ ವೇ ಮಾದರಿಯಲ್ಲಿ ಸ್ವಯಂ ಪ್ರೇರಿತರಾಗಿ ಕೆಲವರು ವಾಹನ ಚಲಾಯಿಸುವುದರಿಂದ ಮತ್ತು ಅದನ್ನು ಇತರರು ಹಿಂಬಾಲಿಸುವುದರಿಂದ ಟ್ರಾಫಿಕ್ ಜಾಮ್ ಸಮಸ್ಯೆ ಕಂಡು ಬರುತ್ತಿದೆ.

ಹೀಗಾಗಿ ಅಂಕೋಲಾ ದಿಂದ ಯಲ್ಲಾಪುರಕ್ಕೆ  ಇಲ್ಲವೇ ಯಲ್ಲಾಪುರದಿಂದ ಅಂಕೋಲಾಕ್ಕೆ ಪ್ರಯಾಣಿಸುವಾಗ ಸಾಮಾನ್ಯ ಒಂದುವರೆ ತಾಸು ಅವಧಿಗೂ ಮಿಗಿಲಾಗಿ,ಎರಡು ತಾಸು ಎರಡುವರೆ ತಾಸು ಹೀಗೆ ವಿಳಂಬವಾಗುತ್ತಿದೆ.ಸಂಬಂಧಿತ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಕೇಂದ್ರ ಸರ್ಕಾರ ಈ ಕೂಡಲೇ ಇಲ್ಲಿನ ಅವ್ಯವಸ್ಥೆಗೆ ಪರಿಹಾರ ರೂಪಿಸಬೇಕಿದೆ.

ದಿನನಿತ್ಯ ಸರಾಸರಿ 15 ರಿಂದ 20,000ಕ್ಕೂ ಹೆಚ್ಚು ವಾಹನಗಳ ಓಡಾಟವಿರುವ ಜನ ಮತ್ತು ವಾಹನ ಸಂಚಾರ ದಟ್ಟಣೆಯ ಈ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳಿಗೆ ರೋಡ್ ಟ್ಯಾಕ್ಸ್ ಪಡೆಯುತ್ತಿಲ್ಲವೇ?  ಒಂದೊಮ್ಮೆ ಕಾನೂನಿನಂತೆ ಸಂಚಾರ ನಿಯಮ ಉಲ್ಲಂಘನೆಯಾಗಿದ್ದರೆ ಅಂತವರ ವಿರುದ್ಧ ಹೇಗೆ  ಕಾನೂನು ಕ್ರಮ ಕೈಗೊಂಡು,ಕೆಲ ಸಂದರ್ಭದಲ್ಲಿ ದಂಡ ವಿಧಿಸಲಾಗುತ್ತದೆಯೋ, ಇಲ್ಲವೇ ಪರಿಹಾರ  ನೀಡುವಂತೆ ತಪ್ಪಿದಲ್ಲಿ ಕೆಲ ಪ್ರಮಾಣದ ಶಿಕ್ಷೆಯನ್ನೂ ವಿಧಿಸುವ ಅವಕಾಶಗಳಿವೆಯೋ,ಅಂತೆಯೇ ಬಡವರ ಮತ್ತು ರಸ್ತೆ ಸಂಚಾರಿಗಳ ಪ್ರಾಣದ ಜೊತೆ ಚೆಲ್ಲಾಟವಾಡುವ ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ಅವರ ತಪ್ಪಿನಿಂದ ಆಗಬಹುದಾದ ಅಪಘಾತಗಳಿಗೆ ಹೊಣೆಯನ್ನಾಗಿಸಲಾಗುತ್ತದೆಯೇ ಎನ್ನುವ  ಪ್ರಶ್ನೆಗೆ  ಸಂಬಂಧಿತ ಜನಪ್ರತಿನಿಧಿಗಳು ಮತ್ತು ಸರ್ಕಾರ ಯೋಚಿಸಬೇಕಾಗುತ್ತದೆ.

ರಾಷ್ಟ್ರೀಯ ಹೆದ್ದಾರಿಯ ಅಂಕೋಲಾ ಯಲ್ಲಾಪುರ ವ್ಯಾಪ್ತಿಯಲ್ಲಿ ಐದೂವರೆ ವರ್ಷಗಳಲ್ಲಿ  ಸುಮಾರು 413 ಅಪಘಾತಗಳು ಸಂಭವಿಸಿ, ಸುಮಾರು 78 ಜನರು ಮೃತ ಪಟ್ಟಿದ್ದಾರೆ ಎನ್ನುವ ಹಂಕಿ ಅಂಶಗಳು ಲಭ್ಯವಿದ್ದರೂ, ನಾನಾ ಕಾರಣಗಳಿಂದ ಕೆಲ ಪ್ರಕರಣಗಳು ದಾಖಲಾಗದೇ ಇರುವುದರಿಂದ,ಒಟ್ಟಾರೆ ಪ್ರಕರಣಗಳು ಮತ್ತು ಸಾವು ನೋವಿನ ಸಂಖ್ಯೆ 500ರ ಗಡಿಯನ್ನು ದಾಟಿದೆ ಎಂದೇ ಹೇಳಬಹುದಾಗಿದೆ. ದಿನದಿಂದ ದಿನಕ್ಕೆ ಸಾವು ನೋವುಗಳ ಮತ್ತು ಅಪಘಾತ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದು ತೀವ್ರ ಕಳವಳಕಾರಿ ಹಾಗೂ ಗಂಭೀರ ವಿಷಯವಾಗಿದೆ .

ತುರ್ತು ಕ್ರಮದ ಅಗತ್ಯತೆ

ರಸ್ತೆ ಕಾಮಗಾರಿ ನಿರ್ವಹಣೆಯಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ, ಕಳಪೆ ಕಾಮಗಾರಿ ಜನಪ್ರತಿನಿಧಿಗಳು  ತಲೆಕೆಡಿಸಿಕೊಳ್ಳದಿರುವುದು ರಾಷ್ಟ್ರೀಯ ಹೆದ್ದಾರಿ ಕೆಟ್ಟು ಹೊಂಡಗಳು ಬೀಳಲು ಕಾರಣವಾಗಿದ್ದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸಬೇಕಿದೆ.ಇಲ್ಲದಿದ್ದರೆ ವಿವಿಧ ವಾಹನ ಮಾಲಕರ ಹಾಗೂ ಚಾಲಕರ ಸಂಘದವರು,ಸ್ಥಳೀಯ ನಿವಾಸಿಗಳು,ಸಂಘ ಸಂಸ್ಥೆಗಳ ಪ್ರಮುಖರು ಮತ್ತು ಸಾರ್ವಜನಿಕರು,ಹೆದ್ದಾರಿ ಸಂಚಾರಿಗಳು ಮತ್ತು ಪ್ರಯಾಣಿಕರು ಹೆದ್ದಾರಿ ಬಂದ್ ಮಾಡಿ ಬೇರೆ ಬೇರೆ ರೀತಿಯಲ್ಲಿ ಪ್ರತಿಭಟಿಸುವ ಅನಿವಾರ್ಯತೆ ಬಂದೀತು ಎಂದು ಗಣಪತಿ  ನಾಯಕ ಮೂಲೆಮನೆ , ವಿಜಯಕುಮಾರ ವಾಯ ನಾಯ್ಕ, ಆನಂದು ಗೌಡ ಹೊನ್ನಳ್ಳಿ, ಬೀರಣ್ಣ  ನಾಯಕ ಅಗಸೂರು,ಸಂತೋಷ ಖಾರ್ವಿ, ಹಾಗೂ ಹೆದ್ದಾರಿಗೆ ಹತ್ತಿರದಲ್ಲಿರುವ ಕೆಲ ಗ್ರಾಮ ಪಂಚಾಯಿತಿಗಳ ಜನಪ್ರತಿನಿಧಿಗಳು ಸೇರಿದಂತೆ ಹಲವರು ಸಂಬಂಧಿಸಿದವರಿಗೆ ಈ ಮೂಲಕ ಎಚ್ಚರಿಸಿದ್ದಾರೆ

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button