
ಕುಮಟಾ: ಇಲ್ಲಿನ ವಿವೇಕನಗರ ವಿಕಾಸ ಸಂಘವು, ‘ಶಾರದಾ ನಿಲಯ’ ಸರಕಾರೀ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಅ.23 ರಂದು ಆಯೋಜಿಸಿದ್ದ “ಮಾಸದ ಮಾತು” ಕಾರ್ಯಕ್ರಮವು ಯಶಸ್ವಿಯಾಗಿ ಜರುಗಿತು. ಈ ಬಾರಿ “ನಮ್ಮ ಪರಿಸರ – ನಮ್ಮ ಆರೋಗ್ಯ” ಎಂಬ ಮಹತ್ವದ ವಿಷಯದ ಕುರಿತು ಕುಮಟಾದ ಡಾ. ಎ.ವಿ. ಬಾಳಿಗಾ ಕಾಲೇಜಿನ ವಿಶ್ರಾಂತ ಸಸ್ಯಶಾಸ್ತ್ರ ಪ್ರಾಧ್ಯಾಪಕಿ ಪ್ರೊ. ಗೀತಾ ನಾಯಕ ವಿಶೇಷ ಉಪನ್ಯಾಸ ನೀಡಿದರು.
ಇದನ್ನೂ ಓದಿ: ಗೌರಿ ಗಣೇಶ ಹಬ್ಬಕ್ಕೆ ಇನ್ನು ಕೆಲವೇ ದಿನಗಳು ಬಾಕಿ: ಭರದಿಂದ ಸಾಗಿದ ಗಣೇಶ ಮೂರ್ತಿ ತಯಾರಿಕೆ
ಉಪನ್ಯಾಸದಲ್ಲಿ ಅವರು ಪರಿಸರ ಮತ್ತು ಮಾನವ ಆರೋಗ್ಯ ಪರಸ್ಪರ ಅವಿನಾಭಾವ ಸಂಬಂಧ ಹೊಂದಿರುವುದನ್ನು ವಿವರಿಸಿದರು. ಸೂರ್ಯನ ಕಿರಣಗಳ ಸಹಾಯದಿಂದ ಭೂಮಿಯ ಹಸಿರು ಸಂಕುಲ ಆಹಾರ ತಯಾರಿಸಿ ಆಮ್ಲಜನಕ ಬಿಡುಗಡೆ ಮಾಡುವ ದ್ಯುತಿ ಸಂಶ್ಲೇಷಣೆಯ ಮಹತ್ವವನ್ನು ವಿವರಿಸಿದರು. ಶುದ್ಧ ವಾಯು, ನೀರು ಮತ್ತು ಆಹಾರ ಮಾನವನ ಆರೋಗ್ಯಕ್ಕೆ ಅಗತ್ಯವೆಂದು ತಿಳಿಸುತ್ತ,ಔದ್ಯೋಗೀಕರಣ, ವಾಹನಗಳ ಅತಿಯಾದ ಬಳಕೆ, ಡಿಡಿಟಿ ಹಾಗೂ ಎಂಡೋಸಲ್ಫಾನ್‌ನಂತಹ ರಾಸಾಯನಿಕಗಳ ಅತಿಯಾದ ಬಳಕೆಯಿಂದ ಜಗತ್ತಿನಾದ್ಯಂತ ಪ್ರಾಣಿ, ಪಕ್ಷಿ, ಕೀಟ ಹಾಗೂ ಮನುಷ್ಯರ ಮೇಲಾದ ದುಷ್ಪರಿಣಾಮಗಳನ್ನು ಉಲ್ಲೇಖಿಸಿದರು.
ಪರಿಸರ ಸಂರಕ್ಷಣೆಯ ಅಗತ್ಯತೆ
ಪರಿಸರ ಸಂರಕ್ಷಣೆಯ ಅಗತ್ಯತೆಯನ್ನು ಒತ್ತಿ ಹೇಳಿದ ಅವರು, “ಘನತ್ಯಾಜ್ಯ ಮತ್ತು ಪ್ಲಾಸ್ಟಿಕ್ ನಿರ್ವಹಣಾ ಕಾಯಿದೆ – 2016” ಮೂಲಕ ಸರ್ಕಾರ ಪ್ಲಾಸ್ಟಿಕ್ ಬಳಕೆ ತಡೆಯಲು ಕಾನೂನು ಮಾಡಿದರೂ ಪಾಲನೆಯ ಕಾರ್ಯ ಸರಿಯಾಗಿ ಆಗುತ್ತಿಲ್ಲವೆಂದು ವಿಷಾದಿಸಿದರು. ಸಂಘವು ಸಾರ್ವಜನಿಕರಿಗೆ 500ಕ್ಕೂ ಹೆಚ್ಚು ಬಟ್ಟೆಯ ಕೈಚೀಲಗಳನ್ನು ವಿತರಿಸಿರುವುದನ್ನು ಮೆಚ್ಚುಗೆ ವ್ಯಕ್ತಪಡಿಸಿ ಉಲ್ಲೇಖಿಸುತ್ತ “ಬಟ್ಟೆಯ ಕೈಚೀಲ ಬಳಸುವ ಮೂಲಕ ಪ್ಲಾಸ್ಟಿಕ್ ಬಳಕೆಯನ್ನು ನಿಲ್ಲಿಸೋಣ” ಎಂದು ಕರೆ ನೀಡಿದರು.
ಉಪನ್ಯಾಸದ ನಂತರ ಪ್ರೇಕ್ಷಕರ ಪ್ರಶ್ನೆಗಳಿಗೆ ಉತ್ತರ ನೀಡಿ ಸಂವಾದಾತ್ಮಕ ವಾತಾವರಣವನ್ನು ಸೃಷ್ಟಿಸಿದ ಪ್ರೊ. ಗೀತಾ ನಾಯಕ ಅವರನ್ನು ಸಂಘದ ವತಿಯಿಂದ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಸಭಾಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಡಾ. ಎಮ್.ಆರ್. ನಾಯಕ ಸಾಂದರ್ಭಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಡಾ. ದಯಾನಂದ ಡಿ. ಭಟ್ಟ ಸ್ವಾಗತಿಸಿದರು.
ನಿರ್ದೇಶಕ ನಿವೃತ್ತ ಪ್ರಾಂಶುಪಾಲ ಅರುಣ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿರ್ದೇಶಕ ಜಯದೇವ ಬಳಗಂಡಿ ಆರಂಭದಲ್ಲಿ ಪ್ರಾರ್ಥನೆ ಸಲ್ಲಿಸಿ ಕಾರ್ಯಕ್ರಮ ನಿರೂಪಿಸಿದರು. ಖಜಾಂಚಿ ಪ್ರಶಾಂತ ರೇವಣಕರ ವಂದಿಸಿದರು. ವಿವೇಕನಗರ ವಿಕಾಸ ಸಂಘದ ಸದಸ್ಯರು ಹಾಗೂ ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ವಿಸ್ಮಯ ನ್ಯೂಸ್, ಕುಮಟಾ