Big News
Trending

ಕೇಣಿ ಬದಲು ಬೆಲೇಕೇರಿಯಲ್ಲಿ ಬಂದರು ನಿರ್ಮಿಸಿ ಎಂದ ರೂಪಾಲಿ ನಾಯ್ಕ ಹೇಳಿಕೆಗೆ ಸ್ಥಳೀಯ ಮೀನುಗಾರ ಪ್ರಮುಖರಿಂದ ಖಂಡನೆ

ಕೇಣಿ ಕಡೆಯಿಂದ ಬಂದರಿಗೆ ಬಾಗಿಲು ಮುಚ್ಚಿದರೆ, ಬೆಲೆಕೇರಿ ಕಡೆಯಿಂದ ನುಸುಳುವ ಹುನ್ನಾರವೇ ಎಂಬ ಪ್ರಶ್ನೆ ?

  • ರೂಪಾಲಿ ನಾಯ್ಕ ಹೇಳಿಕೆ ವಿವಾದ
  • ಮೀನುಗಾರರ ತೀವ್ರ ಖಂಡನೆ
  • ಕೇಣಿ-ಬೆಲೇಕೇರಿ ಬಂದರು ವಿರೋಧ
  • ಸಾರ್ವಜನಿಕ ಆಲಿಕೆ ಸಭೆಯಲ್ಲಿ ಭಾರೀ ವಿರೋಧ
  • “ವಾಣಿಜ್ಯ ಬಂದರು ಬೇಡ” – ಮೀನುಗಾರರು
  • ನ್ಯಾಯಾಲಯಕ್ಕೂ ಹೋಗುವ ಎಚ್ಚರಿಕೆ

ಅಂಕೋಲಾ : ಪತ್ರಿಕೆಯೊಂದರಲ್ಲಿ ಪ್ರಕಟವಾದ ವರದಿಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಆ ಪತ್ರಿಕಾ ತುಣುಕಿನಲ್ಲಿ ಪ್ರಕಟವಾಗಿರುವಂತೆ ಕೇಣಿ ಬದಲು ಬೆಲೇಕೇರಿಯಲ್ಲಿ ಬಂದರು ನಿರ್ಮಾಣ ಮಾಡಲಿ ಎನ್ನುವ ಮಾಜಿ ಶಾಸಕಿ ರೂಪಾಲಿ ನಾಯ್ಕ ಇವರ ಹೇಳಿಕೆಯ ವಿರುದ್ಧ ಸ್ಥಳೀಯ ಮೀನುಗಾರರು ತಮ್ಮ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೇಣಿ ಬದಲು ಬೆಲೇಕೇರಿ ಬಂದರು: ರೂಪಾಲಿ ನಾಯ್ಕ ವಿವಾದಾತ್ಮಕ ಹೇಳಿಕೆ

ಈ ಕುರಿತು ಪ್ರತಿಕ್ರಿಯಿಸಿದ ಬೆ ಲೇಕೇರಿ ಭಾಗದ ಮೀನುಗಾರ ಮುಖಂಡರು, ಮಾಜಿ ಶಾಸಕಿ ಹಾಗೂ ಬಿಜೆಪಿ ಪಕ್ಷದ ರಾಜ್ಯ ಉಪಾಧ್ಯಕ್ಷೆ ರೂಪಾಲಿ ನಾಯ್ಕ ಅವರು, ತಾನು ಅಭಿವೃದ್ಧಿ ವಿರೋಧಿಯಲ್ಲ, ಕೇಣಿಯಿಂದ 2 ಕಿ.ಮೀ ಅಷ್ಟೇ ದೂರ ಇರುವ ಬೆಲೇಕೇರಿಯಲ್ಲಿ ಬಂದರು ನಿರ್ಮಿಸಲು ನಮ್ಮ ಒಪ್ಪಿಗೆ ಇದೆ, ಸುಮಾರು 25 ಕೋಟಿ ರೂಪಾಯಿ ವೆಚ್ಚದಲ್ಲಿ ತಡೆಗೋಡೆ ನಿರ್ಮಿಸಿದರೆ,ಮೀನುಗಾರರು ವಿರೋಧ ಮಾಡುವುದಿಲ್ಲ ಎಂಬಿತ್ಯಾದಿ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದ್ದು, ಒಂದೊಮ್ಮೆ ಅವರು ಹಾಗೆ ಹೇಳಿದ್ದರೆ ಅದು ರೂಪಾಲಿ ನಾಯ್ಕ ಅವರ ವೈಯಕ್ತಿಕ ಹೇಳಿಕೆಯೇ ಹೊರತು ಯಾವುದೇ ಸ್ಥಳೀಯ ಮೀನುಗಾರರ ಮತ್ತು ಸಂಘಟನೆಗಳ ಪರವಾದ ಹೇಳಿಕೆಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಆರಂಭದಿಂದಲೂ ಕೇಣಿ, ಬೆಲೇಕೇರಿ, ಬೆಳಂಬಾರ, ಹಾರವಾಡ ಸೇರಿದಂತೆ ಸುತ್ತಮುತ್ತಲ ಎಲ್ಲ ಗ್ರಾಮಗಳ ಕಡಲ ತೀರದ ನಿವಾಸಿಗಳಾದ ಮೀನುಗಾರರು ಮತ್ತಿತರ ಸಮಾಜದವರು ಉದ್ದೇಶಿತ ವಾಣಿಜ್ಯ ಬಂದರು ಯೋಜನೆ ಕೈ ಬಿಡುವಂತೆ ನಾನಾ ರೀತಿಯ ಹೋರಾಟ, ಪ್ರತಿಭಟನೆ, ಮನವಿ ಮೂಲಕ ಸಂಬಂಧಿತ ಇಲಾಖೆ ಹಾಗು ಜನಪ್ರತಿನಿಧಿಗಳ ಗಮನ ಸೆಳೆಯುವಲ್ಲಿ ಪ್ರಾಮಾಣಿಕ ಯತ್ನ ಮುಂದುವರಿಸಿದ್ದಾರೆ. ಈ ನಡುವೆ ಆಗಸ್ಟ್ 22ರಂದು ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ವತಿಯಿಂದ ಪರಿಸರ ಸಾರ್ವಜನಿಕ ಆಲಿಕೆ ಸಭೆ ನಡೆದು ,ಅಲ್ಲಿಯೂ ಕಾನೂನು ಬದ್ಧವಾಗಿ ಭಾರೀ ವಿರೋಧ ವ್ಯಕ್ತಪಡಿಸಲಾಗಿದೆ.

ಸುಮಾರು ಹತ್ತು ತಿಂಗಳ ದೀರ್ಘ ಪಯಣದ ನಮ್ಮ ಹೋರಾಟರ ಹಾದಿಯಲ್ಲಿ ಒಮ್ಮೆಯೂ ಕಾಣಿಸಿಕೊಳ್ಳದ ರೂಪಾಲಿ ನಾಯ್ಕ್, ಕೊನೆಯ ಒಂದೆರಡು ದಿನಗಳು ಬಾಕಿ ಇರುವಾಗ ಕೇಣಿ ಗ್ರಾಮಕ್ಕೆ ಬಂದು,ಸ್ಥಳೀಯ ಮೀನುಗಾರರ ಪರವಾಗಿ ಮಾತನಾಡಿ ಹೋದದ್ದಲ್ಲದೇ, ಅಲಿಕೆ ಸಭೆಯಲ್ಲಿಯೂ ಪಾಲ್ಗೊಂಡು ತಮ್ಮ ಅಭಿಪ್ರಾಯ ಮಂಡಿಸಿದ್ದಿದೆ.ಅವರ ಈ ನಡೆ ನುಡಿಗಳು ನಮ್ಮ ಮೀನುಗಾರ ಸಮುದಾಯದ ಹಾಗೂ ಇತರೆ ಕೃಷಿ ಕೂಲಿ ಕಾರ್ಮಿಕರು ಮತ್ತಿತರರ ಪರವಾದ ಧ್ವನಿ ಎಂದೇ ನಾವು ವಿಶ್ವಾಸ ಇಟ್ಟಿದ್ದೆವು.

ಅದಾಗಿ ವಾರ ಕಳೆಯುವ ಮುನ್ನವೇ ರೂಪಾಲಿ ನಾಯ್ಕ ಅವರು ಕೇಣಿ ಬದಲು ಬೆಲೇಕೇರಿಯಲ್ಲಿ ಬಂದರು ನಿರ್ಮಾಣ ಮಾಡಲಿ ಅದಕ್ಕೆ ನಮ್ಮ ಒಪ್ಪಿಗೆ ಇದೆ ಎಂದು ನೀಡಿರುವ ಹೇಳಿಕೆ ನಿಜಕ್ಕೂ ನಮ್ಮೆಲ್ಲರಿಗೂ ಆಘಾತ ತಂದಂತಿದೆ.ಅವರು ಯಾವ ಉದ್ದೇಶದಿಂದ ಆ ಹೇಳಿಕೆ ನೀಡಿದರು? ಅಥವಾ ಯಾರನ್ನು ಮೆಚ್ಚಿಸಲೋ ಇಲ್ಲವೇ ಕೇಣಿಯಲ್ಲಿ ವಾಣಿಜ್ಯ ಬಂದರು ಸ್ಥಾಪಿಸಬೇಕೆಂದು ಕೊಂಡಿದ್ದವರಿಗೆ ಅಲ್ಲಿ ಸುಲಭ ಸಾಧ್ಯದಲ್ಲಿ ಬಾಗಿಲು ತೆರೆಯಲಾರದು ಎಂದು ಕೊಂಡೋ ಏನೋ, ಅವರ ಕನಸು ಕಮರದಂತೆ ಬೆಲೆಕೇರಿ ಮೂಲಕ ಹೊಸ ಬಾಗಿಲು ತೆರೆದು ಆಹ್ವಾನ ನೀಡುವ ತಂತ್ರಗಾರಿಕೆಯ ಇರಾದೆಯೋ ತಿಳಿಯದಾಗಿದೆ.

ಇಂತಹ ಹೇಳಿಕೆಗಳನ್ನು ನಾವು ಖಂಡಿಸುತ್ತೇವೆ

ಇಲ್ಲವೇ ವಾಣಿಜ್ಯ ಬಂದರಿನ ಆಳ ಅಧ್ಯಯನ ಮತ್ತು ಅದರ ದುಷ್ಪರಿಣಾಮದ ಕುರಿತು ಮಾಜಿ ಶಾಸಕರಿಗೆ ಈವರೆಗೂ ಸಂಪೂರ್ಣ ಮಾಹಿತಿ ಹಾಗೂ ಜ್ಞಾನ ಇರಲಾರದು ಎನಿಸುತ್ತದೆ. ಹೀಗಾಗಿ ಮಾಜಿ ಶಾಸಕಿ ರೂಪಾಲಿ ನಾಯ್ಕ ಅವರು , ತಮ್ಮ ಮೇಲೆ ಕೆಲ ಜನತೆ ಆದರೂ ಇಟ್ಟಿರುವ ವಿಶ್ವಾಸಕ್ಕೆ ಚ್ಯುತಿ ಬಾರದಂತೆ ತಮ್ಮ ಬದ್ಧತೆ ಪ್ರದರ್ಶಿಸಲಿ. ಕೇಣಿ , ಬೆಲೇಕೇರಿ ಎಂದು ನಮ್ಮ ನಮ್ಮಲ್ಲಿಯೇ ಒಡಕು ಹಾಗು ಗೊಂದಲ ಮೂಡಿಸುವ ಇಂತಹ ಹೇಳಿಕೆಗಳನ್ನು ನಾವು ಖಂಡಿಸುತ್ತೇವೆ.

ಮೀನುಗಾರರಾದ ನಮ್ಮೆಲ್ಲರ ಆಗ್ರಹ ಏನೆಂದರೆ,ನಮಗೆ ಯಾವುದೇ ಪಕ್ಷ ,ರಾಜಕೀಯ ,ವ್ಯಕ್ತಿಗಳು ಇಲ್ಲಿ ಮುಖ್ಯವಲ್ಲ,ಒಂದರ್ಥದಲ್ಲಿ ಎಲ್ಲರೂ ಸರಿಸಮಾನರು,ಇನ್ನೊಂದರ್ಥದಲ್ಲಿ ಯಾರೂ ಹತ್ತಿರದವರು ಅಲ್ಲ,ದೂರವಿದ್ದರೂ ಚಿಂತೆ ಇಲ್ಲ, ಹೀಗಿರುವಾಗ ಯಾರೇ ಆದರೂ ಸರಿ ಸಾಧ್ಯವಾದರೆ ನಮ್ಮ ನ್ಯಾಯಯುತ ಹೋರಾಟಕ್ಕೆ ಬೆಂಬಲವಾಗಿ ನಿಲ್ಲಲಿ .ನಿಮ್ಮ ನಿಮ್ಮ ವೈಯಕ್ತಿಕ ಸ್ವಾರ್ಥ, ದ್ವೇಷ ರಾಜಕಾರಣಕ್ಕೆ ಯಾವುದೇ ಕಾರಣಕ್ಕೂ ಮೀನುಗಾರರ ಹೆಸರನ್ನು ಬಳಸಿಕೊಳ್ಳದಿರಿ. ನಿಜಕ್ಕೂ ನಿಮಗೆಲ್ಲ ಕಾಳಜಿ ಇದ್ದರೆ ಮೀನುಗಾರಿಕಾ ಬಂದರು ಅಭಿವೃದ್ಧಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮೇಲೆ ಒತ್ತಡ ತಂದು ತಮ್ಮ ಜನಪರ ಕಾಳಜಿ ಪ್ರದರ್ಶಿಸಿ,ಅಧಿಕಾರದಲ್ಲಿದ್ದಾಗ ಏನು ಮಾಡದೇ,ಇಲ್ಲವೇ ಅಧಿಕಾರದಲ್ಲಿದ್ದೂ ಒಂದು ಪಕ್ಷದವರು ಇನ್ನೊಂದು ಪಕ್ಷದವರನ್ನು ದೂರುತ್ತ,ನಿಮ್ಮ ರಾಜಕೀಯ ತೆವಲಿಗೆ ನಮ್ಮ ಸಮುದಾಯವನ್ನು ದಾರಿ ತಪ್ಪಿಸುವ ಕೆಲಸ ಮಾಡದಿರಿ.

ನ್ಯಾಯಾಲಯದ ಮೊರೆ ಹೋಗುತ್ತೇವೆ: ಮೀನುಗಾರರ ಎಚ್ಚರಿಕೆ

ವಾಣಿಜ್ಯ ಬಂದರು ಕೇವಲ ಕೇಣೆಯಿಂದಷ್ಟೇ ಅಲ್ಲ,ನಮ್ಮ ಅಂಕೋಲಾ ತಾಲೂಕು ಹಾಗೂ ಇಡೀ ಉತ್ತರ ಕನ್ನಡ ಜಿಲ್ಲೆಯಲ್ಲಿ ಎಲ್ಲಿಯೂ ಬೇಡ ಎನ್ನುವುದು ಮೀನುಗಾರರ ಪ್ರಮುಖರ ಹಾಗೂ ಸಮಾಜದ ಕೂಗಾಗಿದ್ದು,ನಮ್ಮ ನ್ಯಾಯಯುತ ಹೋರಾಟಕ್ಕೆ ನ್ಯಾಯಾಲಯದ ಮೊರೆ ಹೋಗಿಯಾದರೂ ನಾವು ನಿರಂತರ ಪ್ರತಿಭಟನೆ ಹಾಗೂ ವಿರೋಧ ಮುಂದುವರೆಸುತ್ತೇವೆ. ಇನ್ನು ಮೇಲೆ ಯಾರೇ ಆದರೂ ನೊಂದಿರುವ ನಮ್ಮ ಕಣ್ಣೊರೆಸುವ ನೆಪ ಮಾಡಿ ,ಬಾಯಿಗೆ ಬಂದಂತೆ ಏನೇನೋ ಹೇಳಿಕೆ ನೀಡಬಾರದು.

ನೈಜ ಕಾಳಜಿಯಿಂದ ನಮ್ಮ ಬಗ್ಗೆ ಹೇಳಿಕೆ ನೀಡುವುದಿದ್ದರು,ಸಾಧ್ಯವಾದಷ್ಟು ಸ್ಥಳೀಯ ಸಂಘಟನೆಯವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೇಳಿಕೆ ನೀಡಬೇಕೆ ವಿನಹ,ನಿಮ್ಮಷ್ಟಕ್ಕೆ ನೀವು ಹೇಳಿಕೆ ನೀಡಿದರೆ ,ಅಂತಹ ಹೇಳಿಕೆಗಳಿಗೆ ನಾವು ನಮ್ಮದೇ ಆದ ರೀತಿಯಲ್ಲಿ ಬರಲಿರುವ ದಿನಗಳಲ್ಲಿ ಸರಿಯಾದ ಉತ್ತರ ನೀಡಬೇಕಾದೀತು ಎಂದು ಸ್ಥಳೀಯ ಮೀನುಗಾರ ಮುಖಂಡರು ಪತ್ರಿಕಾ ಪ್ರಕಟಣೆ ಮೂಲಕ ಎಚ್ಚರಿಸಿದ್ದಾರೆ.

ಅಂಕೋಲಾ ಮೀನುಗಾರರು ಕೇಣಿ-ಬೆಲೇಕೇರಿ ಬಂದರು ಯೋಜನೆಗೆ ವಿರೋಧ

ಬೆಲೆಕೇರಿ ಪರ್ಶಿನ್ ಬೋಟ್ ಯೂನಿಯನ್ ಅಧ್ಯಕ್ಷರಾದ ಗುರುನಾಥ ಕೆ ಬಾನಾವಳಿಕರ, ಉಪಾಧ್ಯಕ್ಷ ನಾಗರಾಜ ಎಸ್ ಬಾನಾವಳಿಕರ,ಮೀನುಗಾರರ ಹಿರಿಯ ಮುಖಂಡ ಬೋಳಾ ನಾಗಪ್ಪ ಕುಡ್ತಳಕರ, ಬೆಲೇಕೇರಿ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷ ಪ್ರಮೋದ್ ಆರ್ ಬಾನಾವಳಿಕರ್, ಸದಸ್ಯ ಜೈರಾಮ ಎಸ್ ಬಾನಾವಳಿಕರ, ಸ್ಥಳೀಯ ಮೀನುಗಾರ ಸಮಾಜದ ಪ್ರಮುಖರಾದ ಸುರೇಶ್ ಬಾನಾವಳಿಕರ, ರ್ಶ್ರೀಕಾಂತ್ ತಾಂಡೆಲ,ಪಾಂಡುರಂಗ ಬಾನವಳಿಕರ, ಚಂದ್ರಕಾಂತ್ ತಾಂಡೇಲ, ಪ್ರಜ್ವಲ ಬಾನಾವಳಿಕರಅಭಿಷೇಕ್ ಬಾನಾವಳಿಕರ್,ವಿದ್ಯಾಧರ್ ಕುಡ್ತಳಕರ, ಉಲ್ಲಾಸ ಬಾನಾವಳಿಕರ ಇವರು ಪತ್ರಿಕಾ ಹೇಳಿಕೆಯ ಮೂಲಕ ಮಾಜಿ ಶಾಸಕಿ ರೂಪಾಲಿ ನಾಯ್ಕ ಹೇಳಿಕೆಗೆ ಪ್ರತಿಕ್ರಿಯಿಸಿ,ತಮ್ಮ ಖಂಡನೆ ವ್ಯಕ್ತಪಡಿಸಿರುವುದಲ್ಲದೆ,ಇವರ ಹೊರತಾಗಿಯೂ ಯಾವುದೇ ರಾಜಕೀಯ ಪಕ್ಷಗಳ ಮುಖಂಡರು ನಾಯಕರು,ಅಥವಾ ಯಾರೇ ಆದರೂ ವಾಣಿಜ್ಯ ಬಂದರು ವಿರೋಧಿ ವಿಚಾರದಲ್ಲಿ ಮೀನುಗಾರರ ಒಗ್ಗಟ್ಟು ಮುರಿಯುವ,ಸಹನೆ ಪರೀಕ್ಷಿಸುವ ಹೇಳಿಕೆ ನೀಡುವ ಮೊದಲು ಈ ಕುರಿತು ಯೋಚಿಸಿ ನಿರ್ಧಾರ ತೆಗೆದುಕೊಳ್ಳುವಂತೆ ಆಗ್ರಹಿಸಿದ್ದಾರೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button