ಬಂದರಿನಲ್ಲಿ ಅಲೆ ತಡೆಗೋಡೆ ನಿರ್ಮಾಣ ಅನುಮೋದನೆಗೆ ಸಚಿವರಿಗೆ ಮನವಿ ನೀಡಿದ ಬೆಲೆಕೇರಿ ಮೀನುಗಾರ ಪ್ರಮುಖರು: ಬೋಟ್ ಮತ್ತು ಮೀನುಗಾರರ ರಕ್ಷಣೆಗೆ ಅನುಕೂಲ ಕಲ್ಪಿಸಲು ಆಗ್ರಹ

ಅಂಕೋಲಾ: ತಾಲೂಕಿನ ಬೆಲೆಕೇರಿ ಮೀನುಗಾರಿಕೆ ಬಂದರಿನಲ್ಲಿ ಅಲೆ ತಡೆಗೋಡೆ ನಿರ್ಮಾಣ ಕಾಮಗಾರಿಗೆ ಕರ್ನಾಟಕ ಜಲಸಾರಿಗೆ ಮಂಡಳಿ ವತಿಯಿಂದ ಮೀನುಗಾರಿಕೆ ಇಲಾಖೆಗೆ ನೀಡಲಾಗಿರುವ 40 ಕೋ ರೂ ಮೊತ್ತದ ಅಂದಾಜು ಪತ್ರಿಕೆಗೆ ಅನುಮೋದನೆ ನೀಡುವಂತೆ ಬೆಲೆಕೇರಿ ಫಿಶರಿಸ್
ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಪ್ರಮೋದ ಬಾನಾವಳಿ ಕರ ನೇತೃತ್ವದ ಸದಸ್ಯರನ್ನೊಳಗೊಂಡ ಮೀನುಗಾರ ಪ್ರಮುಖರು, ಮೀನುಗಾರಿಕೆ ಮತ್ತು ಬಂದರು ಒಳನಾಡು ಜಲಸಾರಿಗೆ ಸಚಿವ ಮಂಕಾಳ ವೈದ್ಯ ಅವರಿಗೆ ಮನವಿ ನೀಡಲಾಯಿತು.
ಬೆಲೆಕೇರಿ ಮೀನುಗಾರಿಕೆ ಬಂದರಿನಲ್ಲಿ ಅಲೆ ತಡೆಗೋಡೆ ನಿರ್ಮಾಣಕ್ಕೆ ನೀಡಲಾಗಿರುವ ತಾಂತ್ರಿಕ ವರದಿಯ ಅನ್ವಯ 200 ಮೀಟರ್ ಉದ್ದದ ತಡೆಗೋಡೆ ಅಗತ್ಯವಿರುವ ಕುರಿತಂತೆ ಕರ್ನಾಟಕ ಜಲಸಾರಿಗೆ ಮಂಡಳಿ ವತಿಯಿಂದ 40 ಕೋಟಿಯ ಅಂದಾಜು ಪಟ್ಟಿ ತಯಾರಿಸಿ ಮೀನುಗಾರಿಕೆ ಇಲಾಖೆಯ ನಿರ್ದೇಶಕರಿಗೆ 2023 ರ ಜೂನ್ ತಿಂಗಳಲ್ಲಿ ಅನುಮೋದನೆಗೆ ಕಳಿಸಲಾಗಿತ್ತಾದರೂ ಇದುವರೆಗೆ ಅನುಮೋದನೆ ಸಿಕ್ಕಿರುವುದಿಲ್ಲ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಅಲೆ ತಡೆಗೋಡೆ ಇಲ್ಲದ ಕಾರಣ ಗಾಳಿಯಿಂದಾಗಿ ಮೀನುಗಾರಿಕೆ ಬಂದರಿನಲ್ಲಿ ನಿಲ್ಲಿಸುವ ಬೋಟುಗಳು ಪರಸ್ಪರ ಬಡಿದು ಹಾನಿ ಸಂಭವಿಸುತ್ತಿದ್ದು ತೂಪಾನಿನ ಸಂದರ್ಭದಲ್ಲಿ ಸಾಕಷ್ಟು ಸಮಸ್ಯೆ ಎದುರಾಗುತ್ತಿದೆ ಆದ್ದರಿಂದ ಬೆಲೆಕೇರಿ ಮೀನುಗಾರಿಕೆ ಬಂದರಿನಲ್ಲಿ ತಡೆಗೋಡೆ ಕಾಮಗಾರಿ ಅಂದಾಜು ಪತ್ರಿಕೆಗೆ ಅನುಮೋದನೆ ದೊರಕಿಸಿಕೊಟ್ಟು ಶೀಘ್ರದಲ್ಲಿ ಕಾಮಗಾರಿ ಆರಂಭಿಸುವಂತೆ ಮನವಿಯಲ್ಲಿ ಆಗ್ರಹಿಸಲಾಗಿದೆ.
ಬೇಲೇಕೇರಿ ಮೀನುಗಾರರ ಸಹಕಾರಿ ಸಂಘದ
ಅಧ್ಯಕ್ಷರ ಪ್ರಮೋದ ಬಾನಾವಳಿಕರ ,
ಸದಸ್ಯರುಗಳಾದ ಬಾಬು ಹರಿಕಂತ್ರ, ನಾಗೇಂದ್ರ ತಾಂಡೇಲ,ರಾಮಾ ಬಾನಾವಳಿಕರ, ದಿಂಗಾ ಬಾನಾವಳಿಕರ, ಪುನೀತ ಬಾನಾವಳಿಕರ ಕಾತ್ಯಾಯನಿ ಪ್ರಗತಿಪರ ಪರ್ಷಿನ್ ಬೋಟ್ ಯೂನಿಯನ್ ಅಧ್ಯಕ್ಷ ಗುರುನಾಥ ಕೆ ಬಾನಾವಳಿಕರ, ಉಪಾಧ್ಯಕ್ಷ ನಾಗರಾಜ ಬಾನಾವಳಿಕರ, ಮೀನುಗಾರರ ಹಿರಿಯ ಮುಖಂಡ ಬೋಳಾ ಕುಡ್ತಳಕರ,ಶ್ರೀಕಾಂತ ತಾಂಡೇಲ ಮಂಜುನಾಥ ಬಾನಾವಳಿಕರ.ಜಗದೀಶ ಬಾನಾವಳಿಕರ. ಸುರೇಶ ಬಾನಾವಳಿಕರ, ಸುರೇಶ ತಾಂಡೇಲ,ದಿವಾಕರ ಬಾನಾವಳಿಕರ ಉಪಸ್ಥಿತರಿದ್ದರು.
ಈ ಭಾಗದ ಮೀನುಗಾರರ ಕಳೆದ ಕೆಲ ದಶಕಗಳ ಬೇಡಿಕೆಗೆ ಸರ್ಕಾರ ತ್ಪರಿತ ಸ್ಪಂದನೆ ನೀಡಬೇಕಿದ್ದು,ಈ ಹಿಂದೆ ಕ್ಷೇತ್ರದ ಶಾಸಕ ಸತೀಶ್ ಸೈಲ್ ಅವರಿಗೂ ಮೀನುಗಾರ ಮುಖಂಡರು ಮನವಿ ಮಾಡಿದ್ದ ಹಿನ್ನೆಲೆಯಲ್ಲಿ,ಶಾಸಕರು ಸ್ಥಳ ಪರಿಶೀಲಿಸಿ, ಸಂಭದಿತ ಇಲಾಖೆಗಳ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ,ಮೀನುಗಾರರ ನ್ಯಾಯಯುತ ಬೇಡಿಕೆಗೆ ಸ್ಪಂದಿಸುವ ಭರವಸೆ ನೀಡಿದ್ದು,ಶಾಸಕರು ಉಸ್ತುವಾರಿ ಮಂತ್ರಿಗಳು ಮತ್ತು ಇತರೆ ಜನಪ್ರತಿನಿಧಿಗಳೆಲ್ಲರೂ ಕೂಡಿ ಸರ್ಕಾರದಿಂದ ಶೀಘ್ರ ಯೋಜನೆ ಕಾರ್ಯರೂಪಗೊಳ್ಳಲು ಸಹಕರಿಸಬೇಕೆಂದು ಸ್ಥಳೀಯ ಮೀನುಗಾರರು ಆಗ್ರಹಿಸುತ್ತಿದ್ದಾರೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ