
ಅಂಕೋಲಾ: ತಾಲೂಕಿನ ಅಗಸೂರು ಗ್ರಾ.ಪಂ ವ್ಯಾಪ್ತಿಯ ಸರಳೇಬೈಲಿನಲ್ಲಿ 30 ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಅತ್ಯಂತ ವಿಜೃಂಭಣೆಯಿoದ ಮತ್ತು ಸಂಭ್ರಮದಿoದ ನಡೆಯಿತು. ವರ್ಷಂ ಪ್ರತಿಯಂತೆ ಗಣೇಶ ಮೂರ್ತಿಯನ್ನು ಶೃದ್ಧಾ ಭಕ್ತಿಯೊಂದಿಗೆ ಪ್ರತಿಷ್ಠಾಪಿಸಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ಗಣೇಶ ಮೂರ್ತಿ ವಿಸರ್ಜನೆ ಸಂದರ್ಭದಲ್ಲಿ ಸಗಡೆಗದ್ದೆ ನಿವಾಸಿ ಹಾಗೂ ಕಲಾವಿದ ಚಂದ್ರಹಾಸ ನಿಂಗು ಗೌಡ ಅವರು ಶಾಲಾ ಮಕ್ಕಳು ಮೊಬೈಲ್ ಬಳಕೆಯಿಂದ ದೂರ ಇರುವಂತೆ ಹಗರಣ ವೇಷದ ಮೂಲಕ ಪರಿಣಾಮಕಾರಿ ಸಂದೇಶ ನೀಡಿದರು.
ಅವಶ್ಯವಿದ್ದಾಗ ಮಾತ್ರ ಮೊಬೈಲ್ ಬೇಕು. ಆದರೆ ಮಕ್ಕಳಿಗೆ ಮೊಬೈಲ್ ಅವಶ್ಯವಾಗಬಾರದು ಎಂದು ಸರಕಾರಿ ಶಾಲೆ ನಮ್ಮ ಹೆಮ್ಮೆ ಎಂಬ ರೀತಿ ಮಾದರಿ ತಯಾರಿಸಿ ಅದರ ಎದುರು ತಾವೇ ಸ್ವತಃ ಸಮವಸ್ತ್ರ ಧರಿಸಿ , ಮೊಬೈಲ್ ಗೇಮ್ ಮತ್ತಿತರ ಗೀಳಿನಿಂದ ಮಕ್ಕಳ ಭವಿಷ್ಯ ಬಲಿಯಾಗುತ್ತಿರುವುದನ್ನು ಮನಮುಟ್ಟುವಂತೆ ಹಾವಭಾವ ಅಭಿನಯಗಳೊಂದಿಗೆ ತಿಳಿಸಿದ್ದು, ಚಂದ್ರಹಾಸ ಗೌಡ ಮತ್ತು ಅವರ ತಂಡದ ಪ್ರಯತ್ನ ಅಪಾರ ಮೆಚ್ಚುಗೆಗೆ ಪಾತ್ರವಾಯಿತು.
25 ವರ್ಷಗಳಿಂದ ಗಣಪತಿ ವಿಸರ್ಜನೆ ಮೂಲಕ ಜಾಗೃತಿ ಸಂದೇಶ
ಕಳೆದ ಸುಮಾರು 25 ವರ್ಷಗಳಿಂದ ಗಣೇಶ ವಿಸರ್ಜನೆ ಸಂದರ್ಭದಲ್ಲಿ ಜನಜಾಗೃತಿ ಸಂದೇಶ ಸಾರುವ ವಿವಿಧ ಹಗರಣಗಳ ಪ್ರದರ್ಶನವನ್ನು ಅವರು ಮಾಡುತ್ತ ಬಂದಿದ್ದು ಪರಿಸರ ಸಂರಕ್ಷಣೆ, ಕೃಷಿ ಪದ್ಧತಿ ಉಳಿಸುವುದು, ಆಧುನಿಕ ತಂತ್ರಜ್ಞಾನ ಬಳಕೆ ಹೀಗೆ ಹತ್ತು ಹಲವು ವಿಷಯಗಳ ಕುರಿತು ಜನ ಜಾಗೃತಿ ಸಂದೇಶವನ್ನು ಗಣಪತಿ ವಿಸರ್ಜನೆ ಸಂದರ್ಭದಲ್ಲಿ ನೀಡುವ ಮೂಲಕ ಸುತ್ತಮುತ್ತಲಿನ ಹಲವು ಜನರಿಗೆ ಜಾಗೃತಿ ಸಂದೇಶ ತಲುಪಿಸುವ ಪ್ರಯತ್ನ ಮಾಡುತ್ತಲೇ ಬಂದಿದ್ದಾರೆ.
ಜನ ಮೆಚ್ಚುಗೆಗೆ ಪಾತ್ರವಾದ ಹಾವಭಾವ – ಸಮಾಜಮುಖಿ ಪ್ರಯತ್ನ
ಗಣೇಶನ ವಿಸರ್ಜನೆ ಮೆರವಣಿಗೆ ನೋಡಲು ಹರಿದು ಬರುವ ಜನ ಸಾಗರದಲ್ಲಿ ಕೆಲವರಾದರೂ ಇಂತಹ ಸಂದರ್ಭದಲ್ಲಿ ಜಾಗೃತಿ ಸಂದೇಶವನ್ನು ಅರ್ಥೈಸಿಕೊಂಡು , ಮನ ಪರಿವರ್ತಿತರಾದರೆ ಅದೇ ನನಗೆ ಸಾರ್ಥಕತೆ ಎನ್ನುವ ಚಂದ್ರಹಾಸ ಗೌಡ, ತನ್ನ ಪ್ರಯತ್ನ ಹಾಗೂ ಸಂದೇಶದಲ್ಲಿ ಏನಾದರೂ ತಪ್ಪಿದ್ದರೆ ಕ್ಷಮಿಸಿ ಎನ್ನುವ ಅರ್ಥದಲ್ಲಿ ಪ್ರದರ್ಶನ ಫಲಕದಲ್ಲಿ ಬರೆದಿರುವುದು ಅವರ ಮುಗ್ದತೆಗೂ ಸಾಕ್ಷಿಯಾದಂತಿದೆ. ಒಟ್ಟಿನಲ್ಲಿ ಗ್ರಾಮೀಣ ಪ್ರದೇಶದ ಗಣೇಶೋತ್ಸವ ವಿಜೃಂಭಣೆಯ ಜೊತೆಗೆ ಸಾಮಾಜಿಕ ಜಾಗೃತಿ ಸಂದೇಶ ಸಾರುತಿದ್ದು,ಇಂತಹ ಪ್ರಯತ್ನವನ್ನು ಶ್ಲಾಘಿಸಲೇಬೇಕಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ