ನ್ಯೂ ಇಂಗ್ಲೀಷ್ ಸ್ಕೂಲ್ ನ ಪೊಪ್ಯುಲರ್ ಟೀಚರ್ ಗೆ ಜಿಲ್ಲಾ ಪ್ರಶಸ್ತಿ ಗೌರವ : ಯುನಿವರ್ಸಿಟಿ ಬ್ಲೂ ಆಗಿದ್ದ ತಿಮ್ಮಪ್ಪ ನಾಯಕ

ಅಂಕೋಲಾ: ತಾಲೂಕಿನ ಅಗ್ರಗೋಣ ಮೂಲದ, ಸದ್ಯ ಕಾರವಾರ ತಾಲೂಕಿನ ಚೆಂಡಿಯಾದ ಪೊಪ್ಯುಲರ್ ನ್ಯೂ ಇಂಗ್ಲಿಷ್ ಸ್ಕೂಲ್ ನಲ್ಲಿ ದೈಹಿಕ ಶಿಕ್ಷಕರಾಗಿರುವ ತಿಮ್ಮಪ್ಪ ಪಿ ನಾಯಕ ಅವರು 2025-26 ನೇ ಸಾಲಿನ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.
18 ವರ್ಷಗಳಿಂದ ಚೆಂಡಿಯಾದ ಪೊಪ್ಯುಲರ್ ನ್ಯೂ ಇಂಗ್ಲಿಷ್ ಹೈಸ್ಕೂಲ್ ವಿಭಾಗದಲ್ಲಿ ದೈಹಿಕ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಇವರು ತಮ್ಮ ಉತ್ತಮ ಕ್ರೀಡಾ ತರಬೇತಿ ಮೂಲಕ ಶಾಲೆಯ ವಿದ್ಯಾರ್ಥಿಗಳು, ವಿವಿಧ ಕ್ರೀಡಾಕೂಟಗಳಲ್ಲಿ ರಾಜ್ಯ ಮಟ್ಟದಲ್ಲಿ ಸಾಧನೆ ಮಾಡಲು ಕಾರಣೀಕರ್ತರಾಗಿದ್ದಾರೆ.
ಬಡ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಹಾಯ ಮತ್ತು ದತ್ತು
ಶಾಲೆಯ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡುತ್ತಾ ಬಂದಿರುವ ಇವರು ಬಡ ವಿದ್ಯಾರ್ಥಿಗಳನ್ನು ಶೈಕ್ಷಣಿಕ ಉದ್ದೇಶಗಳಿಗಾಗಿ ದತ್ತು ಪಡೆದು ಅವರಿಗೆ ತಮ್ಮ ಖರ್ಚಿನಲ್ಲಿ ಶಿಕ್ಷಣ ನೀಡುತ್ತಿದ್ದು ಶಾಲೆಯ ದಾಖಲಾತಿ ಹೆಚ್ಚಾಗಲು ಶ್ರಮಿಸುತ್ತಿದ್ದಾರೆ. ಅಂಕೋಲಾದ ಅಗ್ರಗೋಣದ ನಿವಾಸಿ ಆಗಿರುವ ಇವರು ತಮ್ಮ ಊರಿನಲ್ಲಿ ಸಹ ಹಲವಾರು ಉತ್ತಮ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳನ್ನು ಆಯೋಜಿಸುವ ಜೊತೆಗೆ ಸುತ್ತ ಮುತ್ತಲಿನ ಶಾಲಾ ಮಕ್ಕಳಿಗೆ ಶೈಕ್ಷಣಿಕ ಪರಿಕರಗಳನ್ನು ವಿತರಿಸುವ ಮೂಲಕ ತಮ್ಮ ಶಿಕ್ಷಣ ಪ್ರೇಮವನ್ನು ತೋರುತ್ತ ಬಂದಿದ್ದಾರೆ.

ಕ್ರೀಡಾ ಕ್ಷೇತ್ರದಲ್ಲಿ ಅಪಾರ ಅಭಿಮಾನ ಹೊಂದಿರುವ ಇವರು ಅತ್ಯುತ್ತಮ ವಾಲಿಬಾಲ್ ಪಟುವಾಗಿದ್ದು , ಸತತ ಮೂರು ವರ್ಷಗಳ ಕಾಲ
ಅಥ್ಲೆಟಿಕ್ಸ್ ನಲ್ಲಿ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಯುನಿವರ್ಸಿಟಿ ಬ್ಲೂ ಆಗಿ ಚಿನ್ನದ ಪದಕ ಪಡೆದಿರುತ್ತಾರೆ. ಚಂಡೀಗಡ ಮತ್ತು ಜೈಪುರ ಗಳಲ್ಲಿ ರಾಷ್ಟ್ರ ಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸಿರುವ ಹಿರಿಮೆ ಹೊಂದಿರುವ ಇವರ ಸಾಧನೆಗಳನ್ನು ಪರಿಗಣಿಸಿ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ನೀಡಿ ಗೌರವಿಸಲಾಗಿದೆ.
ಜಿಲ್ಲಾ ಮಟ್ಟದ ಗೌರವ – ಶಾಲೆ ಮತ್ತು ಊರಿನ ಹೆಮ್ಮೆ
ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಗಳು, ಜಿಲ್ಲಾ ಉಸ್ತುವಾರಿ ಮಂತ್ರಿಗಳು ಸೇರಿದಂತೆ ಇತರೆ ಗಣ್ಯರು, ಅಧಿಕಾರಿ ವರ್ಗ, ಶಿಕ್ಷಕರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಇವರ ಸೇವಾ ಸಾಧನೆಗೆ ಪ್ರಶಸ್ತಿ ಒಲಿದು ಬಂದಿರುವುದಕ್ಕೆ ಹುಟ್ಟೂರು ಅಗ್ರಗೋಣ, ಜಿಲ್ಲಾ ಕೇಂದ್ರ ಹಾಗೂ ತಾಲೂಕು ಕೇಂದ್ರದಿಂದ ದೂರವೇ ಇದ್ದರೂ ಶೈಕ್ಷಣಿಕ ಕ್ರಾಂತಿ ಮೂಲಕ ಗಮನ ಸೆಳೆಯುತ್ತಿರುವ ಪೊಪ್ಯುಲರ್ ಇಂಗ್ಲಿಷ್ ಸ್ಕೂಲ್ ಚೆಂಡಿಯಾ ಮತ್ತಿತರರು ಸಂತಸ ವ್ಯಕ್ತಪಡಿಸಿದ್ದಾರೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ