
ಕುಮಟಾ: ಜಿಲ್ಲಾ ಆಡಳಿತ ಮತ್ತು ಜಿಲ್ಲಾ ಪಂಚಾಯತ ಉತ್ತರ ಕನ್ನಡ, ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರು ಉತ್ತರಕನ್ನಡ, ಕಾರವಾರ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಕುಮಟಾ ಇವರ ಸಹಯೋಗದಲ್ಲಿ ಕುಮಟಾ ಬಗ್ಗೋಣದ ನಾಮಧಾರಿ ಸಭಾಭವನದಲ್ಲಿ ಉತ್ತರ ಕನ್ನಡ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ನಡೆಯಿತು.
ಸಭಾ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಮಂಕಾಳ ಎಸ್. ವೈದ್ಯ ಹಾಗೂ ವಿವಿಧ ಗಣ್ಯರೊಂದಿಗೆ ಜ್ಯೋತಿ ಬೆಳಗುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಗಣ್ಯರು ಪುಷ್ಪ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಮಂಕಾಳ್ ವೈದ್ಯ ಇಂದು ನಾವು ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮ ದಿನದ ಅಂಗವಾಗಿ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಆಚರಿಸುತ್ತಿದ್ದೇವೆ ಎಂದರು.
ದೇಶದ ವಿವಿಧ ದೊಡ್ಡ ಹುದ್ದೆಗಳಿಗೆ ಆಯ್ಕೆಯಾಗಬಹುದು. ಇದಕ್ಕೆಲ್ಲಾ ಶಿಕ್ಷಕರ ಪರಿಶ್ರಮ ಕಾರಣವಾಗುತ್ತದೆ. ಇಂತಹ ಒಂದು ದೊಡ್ಡ ಜವಾಬ್ದಾರಿ ನಮ್ಮ ಶಿಕ್ಷಕರ ಮೇಲಿದೆ. ಮಕ್ಕಳನ್ನು ಒಳ್ಳೆಯ ದಾರಿಗೆ ತರುವ ಕೆಲಸವನ್ನು ಶಿಕ್ಷಕರು ಮಾಡುತ್ತಿದ್ದಾರೆ. ನಾವು ಯಾರಿಗೆ ಗೌರವ ನೀಡದಿದ್ದರೂ ಸಹ ಗುರುಗಳಿಗೆ ಗೌರವ ನೀಡಬೇಕು ಎಂದರು.
ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯ: ಶಿಕ್ಷಕರ ಮಾರ್ಗದರ್ಶನವೇ ಸಮಾಜದ ಬಲ
ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯ ಮಾತನಾಡಿ ಇಂದಿನ ದಿನಗಳಲ್ಲಿ ಮಕ್ಕಳು ತಂದೆ ತಾಯಿಯರ ಎಲ್ಲಾ ಮಾತುಗಳನ್ನು ಕೇಳುವುದಿಲ್ಲ. ಬದಲಾಗಿ ಶಿಕ್ಷಕರು ಹೇಳಿದ ಮಾತನ್ನು ಕೇಳುತ್ತಾರೆ. ಇಂತಹ ಒಳ್ಳೆಯ ಕೆಲಸವನ್ನು ಮಾಡುತ್ತಿರುವ ಶಿಕ್ಷಕರಿಗೆ ನಮನಗಳನ್ನು ಸಲ್ಲಿಸಬೇಕು. ಮಕ್ಕಳನ್ನು ತಿದ್ದಿ ಸಮಾಜಕ್ಕೆ ಒಳ್ಳೆಯ ವ್ಯಕ್ತಿಯನ್ನು ನೀಡುವ ಕೆಲಸವನ್ನು ಶಿಕ್ಷಕರು ಮಾಡುತ್ತಿದ್ದಾರೆ ಎಂದು ತಮ್ಮ ಅನಿಸಿಕೆ ವ್ಯಕ್ತ ಪಡಿಸಿದರು.
ಜಿಲ್ಲಾ ಉತ್ತಮ ಶಿಕ್ಷಕರಿಗೆ ಪ್ರಶಸ್ತಿ ಮತ್ತು ಗೌರವ
ಈ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಸೇವೆ ಸಲ್ಲಿಸಿ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿಗೆ ಪಾತ್ರರಾದ ಜಿಲ್ಲೆಯ ವಿವಿಧ ತಾಲೂಕಿನ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಲಾಯಿತು. ನಂತರ ಅನೇಕ ವರ್ಷಗಳಿಂದ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಹಾಗೂ ವಿವಿಧ ವಲಯಗಳಲ್ಲಿ ಸೇವೇ ಸಲ್ಲಿಸಿ ಸಾಧನೆ ಮಾಡಿದ ಶಿಕ್ಷಕರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕ ದಿನಕರ ಶೆಟ್ಟಿ., ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ|| ದಿಲೀಷ ಶಶಿ, ಕುಮಟಾ ಸಹಾಯಕ ಆಯುಕ್ತರಾದ ಪಿ. ಶ್ರವಣಕುಮಾರ್, ಕುಮಟಾ ತಹಶೀಲ್ದಾರ ಶ್ರೀಕೃಷ್ಣ ಕಾಮ್ಕರ್, ಕ್ಷೇತ್ರ ಶಿಕ್ಷಣಾಧಿಕಾರಿ ಉದಯ ಆರ್.ನಾಯ್ಕ, ಡಯಟ್ ಪ್ರಾಂಶುಪಾಲರಾದ ಆರ್.ಎಲ್. ಭಟ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ತಾಲೂಕಿನ ವಿವಿಧ ಶಾಲಾ ಶಿಕ್ಷಕರು ಹಾಜರಿದ್ದರು.
ವಿಸ್ಮಯ ನ್ಯೂಸ್ ದೀಪೇಶ ನಾಯ್ಕ, ಕುಮಟಾ