
ಕುಮಟಾ: ರೋಟರಿ ಕ್ಲಬ್ ಕುಮಟಾ ಇವರ ವತಿಯಿಂದ ಇಂದು ಕುಮಟಾದ ಸರ್ಕಾರಿ ಆಸ್ಪತ್ರೆಯ ಮಕ್ಕಳ ವಿಭಾಗದ ಉನ್ನತೀಕರಣಕ್ಕಾಗಿ ಸುಮಾರು 40 ಲಕ್ಷ ಮೌಲ್ಯದ ಅತ್ಯಾಧುನಿಕ ಉಪಕರಣಗಳ ವಿತರಣಾ ಕಾರ್ಯಕ್ರಮನಡೆಯಿತು. ವಿಶ್ವ ಪ್ರಸಿದ್ಧ ಟಾಟಾ ಪ್ರೊಜೆಕ್ಟ್ಸ ಕಂಪೆನಿಯ ಸಿಇಓ ವಿನಾಯಕ ಪೈ ಹಾಗೂ ಇತರ ದಾನಿಗಳ ಸಹಕಾರದಿಂದ ಕುಮಟಾ ರೋಟರಿ ಕ್ಲಬ್ ವತಿಯಿಂದ ಕುಮಟಾ ಸರ್ಕಾರಿ ಆಸ್ಪತ್ರೆಗೆ ಈ ಅತ್ಯಾಧುನಿಕ ಉಪಕರಣಗಳ ವಿತರಣಾ ಕಾರ್ಯಕ್ರಮ ನಡೆಯಿತು.
ಅತ್ಯಾಧುನಿಕ ಉಪಕರಣಗಳ ಆದೇಶ ಪ್ರತಿ ಹಸ್ತಾಂತರ
ಸಭಾ ಕಾರ್ಯಕ್ರಮವನ್ನು ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕರಾದ ದಿನಕರ ಶೆಟ್ಟಿ ಹಾಗೂ ಇತರ ಗಣ್ಯರು ದೀಪ ಬೆಳಗಿಸುವುದರ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಕುಮಟಾ ಸರ್ಕಾರಿ ಆಸ್ಪತ್ರೆಯ ಮಕ್ಕಳ ತಜ್ಞರಾದ ಪ್ರಸನ್ನ ನಾಯಕ್ ಅವರಿಗೆ ಟಾಟಾ ಕಂಪೆನಿಯ ಸಿಇಓ ವಿನಾಯಕ ಪೈ ಹಾಗೂ ಇತರ ಗಣ್ಯರು ಮಕ್ಕಳ ವಿಭಾಗದ ಅತ್ಯಾಧುನಿಕ ಉಪಕರಣಗಳ ಆದೇಶ ಪ್ರತಿಯನ್ನು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಟಾಟಾ ಕಂಪೆನಿಯ ಸಿಇಓ ವಿನಾಯಕ ಪೈ ಕುಮಟಾ ನನಗೆ ತುಂಬಾ ವಿಷೇಶವಾದ ಸ್ಥಳವಾಗಿದೆ. ನಾನು ಆಗಾಗ ಕುಮಟಾಕ್ಕೆ ಭೇಟಿ ನೀಡುತ್ತೇನೆ. ಕುಮಟಾದ ವಿಷೇಶತೆ ಎಂದರೆ ಕುಮಟಾದ ಸರ್ಕಾರಿ ಆಸ್ಪತ್ರೆ ಯಾವುದೇ ಖಾಸಗೀ ಆಸ್ಪತ್ರೆಗೆ ಕಡಿಮೆ ಇಲ್ಲದಂತೆ ಸಾರ್ವಜನಿಕರಿಗೆ ಸೇವೆಯನ್ನು ಒದಗಿಸುತ್ತಿದೆ. ನಮ್ಮ ಕುಮಟಾ ರೋಟರಿ ಕ್ಲಬ್ ಸಹ ಈ ಸರ್ಕಾರಿ ಆಸ್ಪತ್ರೆಗೆ ಅನೇಕ ಸೌಲಭ್ಯಗಳನ್ನು ನೀಡುತ್ತಾ ಬಂದಿದೆ. 2021-22ರಲ್ಲಿ ಅಂದಾಜು ಒಂದು ಕೋಟಿ ಮೊತ್ತದ ವಿವಿಧ ಉಪಕರಣಗಳನ್ನು ಈ ಆಸ್ಪತ್ರೆಗೆ ನೀಡಿದೆ. ಇಲ್ಲಿನ ವೈದ್ಯರು ಹಾಗೂ ಸಿಬ್ಬಂದಿಗಳು ಉತ್ತಮ ಸೇವೆ ನೀಡುತ್ತಾ ಬಂದಿದ್ದಾರೆ ಎಂದರು.
ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕರಾದ ದಿನಕರ ಶೆಟ್ಟಿ ಮಾತನಾಡಿ ಇಂದು ಕುಮಟಾದ ಸರ್ಕಾರಿ ಆಸ್ಪತ್ರೆಯ ಮಕ್ಕಳ ವಿಭಾಗದ ಉನ್ನತೀಕರಣಕ್ಕಾಗಿ ಸುಮಾರು 40 ಲಕ್ಷ ಮೌಲ್ಯದ ಅತ್ಯಾಧುನಿಕ ಉಪಕರಣಗಳ ವಿತರಣೆಯನ್ನು ರೋಟರಿ ಕ್ಲಬ್ ಕುಮಟಾ ಅವರು ಮಾಡಿದ್ದಾರೆ. ಈ ಹಿಂದಿನಿoದಲೂ ಸಹ ಕುಮಟಾ ರೋಟರಿ ಕ್ಲಬ್ ನಮ್ಮ ಸರ್ಕಾರಿ ಆಸ್ಪತ್ರೆಗೆ ವಿವಿಧ ಮೊತ್ತದ ಅನೇಕ ವೈದ್ಯಕೀಯ ಉಪಕರಣಗಳನ್ನು ನೀಡುತ್ತಾ ಬಂದಿದೆ. ಅಂಬುಲೆನ್ಸ್ ಸಹ ಕೊಡುಗೆಯಾಗಿ ನೀಡಿದೆ. ಅಲ್ಲದೇ ನಮ್ಮ ಕುಮಟಾ ರೋಟರಿ ಕ್ಲಬ್ ಅನೇಕ ಜನಪರ ಕಾರ್ಯಗಳನ್ನು ನಡೆಸಿಕೊಂಡು ಬಂದಿದೆ ಎಂದು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ಸಹಾಯ-ಸಹಕಾರ ಹೀಗೆ ಮುಂದುವರೆಯಲಿ
ಕಮುಟಾ ಸರ್ಕಾರಿ ಆಸ್ಪತ್ರೆಯ ಮಕ್ಕಳ ತಜ್ಞರಾದ ಪ್ರಸನ್ನ ನಾಯಕ್ ಮಾತನಾಡಿ ನಮ್ಮ ಆಸ್ಪತ್ರೆಯ ಮಕ್ಕಳ ವಿಭಾಗದಲ್ಲಿ ಈ ಹಿಂದೆ ನವಜಾತ ಶಿಶುಗಳನ್ನು ಚಿಕಿತ್ಸೆಗೆ ಬೇರೆ ಆಸ್ಪತ್ರೆಗೆ ಕಳುಹಿಸುವ ಸಂದರ್ಭ ಇತ್ತು. ಈ ಹಿನ್ನೆಲೆಯಲ್ಲಿ ನಾವು ರೋಟರಿ ಕ್ಲಬ್ ಕುಮಟಾ ಅವರೊಂದಿಗೆ ಚರ್ಚೆ ನಡೆಸಿ ನಮ್ಮ ಮಕ್ಕಳ ವಿಭಾಗಕ್ಕೆ ಅತ್ಯಾಧುನಿಕ ಉಪಕರಣಗಳನ್ನು ನೀಡುವಂತೆ ಮನವಿಯನ್ನು ಮಾಡಿದ್ದೆವು. ಈ ಹಿನ್ನೆಲೆಯಲ್ಲಿ ನಮ್ಮ ಕುಮಟಾದ ರೋಟರಿ ಕ್ಲಬ್ ಅತೀ ಕಡಿಮೆ ಸಮಯದಲ್ಲಿ ಸುಮಾರು 40 ಲಕ್ಷ ಮೌಲ್ಯದ ಅತ್ಯಾಧುನಿಕ ಉಪಕರಣಗಳನ್ನು ನಮ್ಮ ಆಸ್ಪತ್ರೆಯ ಮಕ್ಕಳ ವಿಭಾಗದ ಉನ್ನತೀಕರಣಕ್ಕಾಗಿ ನೀಡಿದ್ದಾರೆ. ಅವರ ಸಹಾಯ ಸಹಕಾರ ಹೀಗೆ ಮುಂದುವರೆಯಲಿ ಎಂದರು.
ವೇದಿಕೆಯಲ್ಲಿ ನಿಕಟಪೂರ್ವ ರೋಟರಿ ಗವರ್ನರ ಶರದ ಪೈ, ಜಿಲ್ಲಾ ರೋಟರಿ ಗವರ್ನರ ಅರುಣ ಭಂಡಾರೆ, ರಮೇಶ ತಿವಾರಿ, ಅತುಲ್ ಕಾಮತ್, ವಿನಾಯಕ್ ಹೆಗಡೆ, ನಿಖಿಲ್ ಕ್ಷೇತ್ರಪಾಲ ಸೇರಿದಂತೆ ರೋಟರಿ ಕ್ಲಬ್ ಸೇರಿದಂತೆ ಕುಮಟಾ ಆಸ್ಪತ್ರೆಯ ವೈದ್ಯರು, ವೈದ್ಯಕೀಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
ವಿಸ್ಮಯ ನ್ಯೂಸ್ ದೀಪೇಶ ನಾಯ್ಕ ಕುಮಟಾ