Important
Trending

ಉದ್ದೇಶಿತ ಕೇಣಿ ವಾಣಿಜ್ಯ ಬಂದರು: ಜನಾಂದೋಲನಕ್ಕೆ ಸಿದ್ಧತೆ

ಉದ್ದೇಶಿತ ಕೇಣಿ ವಾಣಿಜ್ಯ ಬಂದರು ನಿರ್ಮಾಣ ಯೋಜನೆಗೆ ಸಂಬಂಧಿಸಿದಂತೆ ಪರಿಸರ ಆಲಿಕೆ ಸಭೆಯ ಬಳಿಕವೂ ಭಾರೀ ವಿರೋಧ ಮುಂದು ವರಿದಿದ್ದು ಅಲಗೇರಿ ಗ್ರಾ ಪಂ ನ ವಿವಿಧ ಮಜಿರೆಗಳ ಜನರು ಸ್ವಯಂ ಪ್ರೇರಿತರಾಗಿ ಜಾಗ್ರತಿಗೊಂಡು ಉದ್ದೇಶಿತ ಯೋಜನೆಗೆ ಒಂದಿಂಚು ಭೂಮಿಯನ್ನೂ ಬಿಟ್ಟುಕೊಡಲು ಸಾಧ್ಯವೇ ಇಲ್ಲ ಎಂದು ಪಟ್ಟು ಹಿಡಿಯುತ್ತಿದ್ದಾರೆ. ಈ ನಡುವೆ ವಾಣಿಜ್ಯ ಬಂದರು ವ್ಯಾಪ್ತಿ ಹಂತ ಹಂತವಾಗಿ ಅಂಕೊಲಾ ಸೇರಿದಂತೆ ಸುಮಾರು 103 ಹಳ್ಳಿಗಳಲ್ಲಿ ಬರುವುದು ಇನ್ನೂ ಹಲವರಿಗೆ ಗೊತ್ತೇ ಇರದ ಕಾರಣ ಪಟ್ಟಣ ಹಾಗೂ ಗ್ರಾಮಾಂತರ ಭಾಗಗಳಲ್ಲಿ ಜನಾಂದೋಲನಕ್ಕೆ ಸಿದ್ಧತೆ ನಡೆಯುತ್ತಿದೆ.

ಅಂಕೋಲಾ: ಕಳೆದ ಆಗಸ್ಟ್ 22 ರಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವತಿಯಿಂದ ಕರೆದಿದ್ದ ಸಾರ್ವಜನಿಕ ಪರಿಸರ ಆಲಿಕೆ ಸಭೆಯಲ್ಲಿ,ಉದ್ದೇಶಿತ ಕೇಣಿ ವಾಣಿಜ್ಯ ಬಂದರೂ ಯೋಜನೆಗೆ ಭಾರೀ ವಿರೋಧ ವ್ಯಕ್ತವಾಗಿತ್ತು. ಸುಮಾರು 8 ರಿಂದ 10 ಸಾವಿರ ಜನರು ಸೇರಿಕೊಂಡು ರಾಜ್ಯದ ಇತಿಹಾಸದಲ್ಲಿಯೇ ಇಷ್ಟೊಂದು ದೊಡ್ಡ ಪ್ರಮಾಣದ ಆಲಿಕೆ ಸಭೆ ಹಿಂದೆ ಎಲ್ಲಿಯೂ ನಡೆದಿರಲಿಲ್ಲ ಎನ್ನುವ ಮಾತುಗಳು ಕೇಳಿಬಂದಿತ್ತು.

ಆಲಿಕೆ ಸಭೆಯ ನಂತರವೂ ವಿರೋಧ ಮತ್ತಷ್ಟು ಹೆಚ್ಚಾಗುತ್ತಲೇ ಸಾಗಿದ್ದು ಅಲಗೇರಿ ಗ್ರಾಮ ಪಂಚಾಯತ ವ್ಯಾಪ್ತಿಯ ಕೃಷ್ಣಾಪುರ ಮತ್ತು ಸುತ್ತಮುತ್ತಲಿನ ಕೆಲ ಮಜಿರೆಗಳ ಪ್ರಮುಖರು ಶ್ರೀ ಅಯಪ್ಪ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಸಭೆ ಸೇರಿ ಉದ್ದೇಶಿತ ಕೇಣಿ ವಾಣಿಜ್ಯ ಬಂದರು ಯೋಜನೆಯ ಬಾಧಕಗಳ ಕುರಿತು ವಿಸ್ತೃತವಾಗಿ ಚರ್ಚಿಸಿ, ಬಂದರು ನಿರ್ಮಾಣ ಯೋಜನೆಗೆ ತಮ್ಮ ಭಾರೀ ವಿರೋಧ ವ್ಯಕ್ತಪಡಿಸಿ, ಸೆ 14 ರ ರವಿವಾರ ಬೆಳಿಗ್ಗೆ ಸಾಂಕೇತಿಕ ಪ್ರತಿಭಟನೆ ನಡೆಸಿದರು.

ಒಂದು ಇಂಚು ಭೂಮಿಯನ್ನು ಬಿಟ್ಟು ಕೊಡುವುದಿಲ್ಲ

ಸಾಯಂಕಾಲ ಶಿರಕುಳಿ ಮತ್ತು ಅಕ್ಕ ಪಕ್ಕದ ನಿವಾಸಿಗಳು ಪುರಾತನ ಪ್ರಸಿದ್ಧ ಶ್ರೀ ಕಾನದೇವಿಯ ದೇವಸ್ಥಾನದ ಸುಂದರ ಆವರಣದಲ್ಲಿ ನೂರಾರು ಸಂಖ್ಯೆಯಲ್ಲಿ ಸೇರಿಕೊಂಡು, ಪ್ರತ್ಯೇಕ ಇನ್ನೊಂದು ಸಭೆ ಸೇರಿ , ಉದ್ದೇಶಿತ ಖಾಸಗಿ ಸಹಭಾಗಿತ್ವದ ಕೇಣಿ ವಾಣಿಜ್ಯ ಬಂದರು ಯೋಜನೆಗಾಗಿ, ಯಾವುದೇ ಕಾರಣಕ್ಕೂ ತಾವು ಬಾಳಿ ಬದುಕುತ್ತಿರುವು ಒಂದು ಇಂಚು ಭೂಮಿಯನ್ನು ಬಿಟ್ಟು ಕೊಡುವುದಿಲ್ಲ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಮೀನುಗಾರರ ನೇತೃತ್ವದಲ್ಲಿ ಕಳೆದ 10 ತಿಂಗಳಿಂದ ನಡೆಸುತ್ತಾ ಬಂದಿದ್ದ ವಾಣಿಜ್ಯ ಬಂದರು ವಿರೋಧಿ ಹೋರಾಟ, ತಡವಾಗಿಯಾದರೂ ಇತರೆ ಸಮಾಜ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜಾಗೃತಿಗೆ ಕಾರಣವಾಗಿದೆ. ಆಗಸ್ಟ್ 22 ರಂದು ಸಂಬಂಧಿತ ಇಲಾಖೆ ವತಿಯಿಂದ ಕರೆಯಲಾಗಿದ್ದ ಸಾರ್ವಜನಿಕ ಆಲಿಕೆ ಸಭೆಯ ಬಳಿಕ, ವಾಣಿಜ್ಯ ಬಂದರು ಯೋಜನೆಯ ಕರಾಳತೆ ನಮಗೆ ಅರ್ಥವಾಗಲಾರಂಭಿಸಿದೆ.ಪರಿಸರ ಮತ್ತು ಸುತ್ತಮುತ್ತಲಿನ ಜನಜೀವನದ ಮೇಲೆ ಪರಿಣಾಮ ಬೀರಬಲ್ಲ ಇಂತಹ ವಿನಾಶಕಾರೀ ಯೋಜನೆ ನಮಗೆ ಬೇಡವೇ ಬೇಡ.

ಈ ಬಂದರು ಯೋಜನೆ ವಿರುದ್ಧ ಜಾತ್ಯತೀತವಾಗಿ,ಸುತ್ತಮುತ್ತಲ ಎಲ್ಲಾ ಹಳ್ಳಿಗರು ಮತ್ತು ಪಟ್ಟಣವಾಸಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಂಘಟಿತ ಹೋರಾಟ ಮುಂದುವರಿಸುವುದಾಗಿ,ಸ್ಥಳೀಯ ಪ್ರಮುಖರು ಹಾಗೂ,ಕೇಣಿ ವಾಣಿಜ್ಯ ಬಂದರು ವಿರೋಧಿ ಹೋರಾಟ ಸಮಿತಿಯವರು ತಿಳಿಸಿದರು. ಮುಂದಿನ ಹಂತಗಳಲ್ಲಿ ಯೋಜನೆಯಿಂದ ಭಾದಿತರಾಗಲಿರುವ ಅಂಕೋಲಾ ಪಟ್ಟಣ ಮತ್ತು 103 ಹಳ್ಳಿಗಳ ಮನೆಗಳಿಗೆ ತೆರಳಿ ವಾಣಿಜ್ಯ ಬಂದರು ವಿರೋಧಿಸಿ ಬೆಂಬಲ ಕೋರುವ ಮತ್ತು ಆ ಮೂಲಕ ಬೃಹತ್ ಜನಾಂದೋಲನ ನಡೆಸಲು ಕೃಷ್ಣಾಪುರ ಮತ್ತು ಶಿರಕುಳಿ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಯಿತು.

ಮುಂದಿನ ಹಂತದ ಹೋರಾಟಕ್ಕೆ ಯಶ ಸಿಗುವುದು ಗ್ಯಾರೆಂಟಿ

ಕಳೆದ ಕೆಲ ದಿನಗಳ ಹಿಂದೆ ಬೋಗ್ರಿಬೈಲಿನ ಆದಿಶಕ್ತಿ ಪರಶಕ್ತಿ ಮಂದಿರದ ಬಳಿ ಅಲ್ಲಿನ ಸ್ಥಳಿಯರು ಮತ್ತು ಸುತ್ತಮುತ್ತಲಿನವರು,ಪೋಸ್ಟ್ ಬಾಳೇಗುಳಿಯ ಆಗೇರ ಕಾಲೋನಿಯ ಸರ್ಕಾರಿ ಹಿಪ್ರಾ ಶಾಲೆ ಎದುರಿನ ಸಾರ್ವಜನಿಕ ಸ್ಥಳದಲ್ಲಿ ಆಯಾ ಭಾಗದ ನಿವಾಸಿಗಳು ,ಸ್ಥಳೀಯ ಮುಖಂಡರು, ಕೆಲ ಹಾಲಿ ಹಾಗೂ ಮಾಜಿ ಜನಪ್ರತಿನಿಧಿಗಳು, ಯುವಕರು, ಮಹಿಳೆಯರು, ಹಿರಿಯರು, ಕೇಣಿ ಬಂದರು ವಿರೋಧಿ ಹೋರಾಟ ಸಮಿತಿ ಪ್ರಮುಖರು, ವಾಣಿಜ್ಯ ಬಂದರು ಯೋಜನಾ ಪ್ರದೇಶ ವ್ಯಾಪ್ತಿಯ ಭಾದಿತರು ಸೇರಿ ನೂರಾರು ಜನರು ಪಾಲ್ಗೊಂಡು ಸಾಂಕೇತಿಕವಾಗಿ ಪ್ರತಿಭಟಿಸಿದ್ದು, ಒಟ್ಟಾರೆಯಾಗಿ ಕೇಣಿಗೆ ಕೇಂದ್ರೀಕೃತವಾದಂತೆ ಮೇಲ್ನೋಟಕ್ಕೆ ಕಂಡು ಬರುತ್ತಿದ್ದ ಹೋರಾಟದ ಕಿಚ್ಚು, ಅಲಗೇರಿ ಗ್ರಾಪಂ ವ್ಯಾಪ್ತಿಯ ಎಲ್ಲಾ ಮಜಿರೆಗಳಲ್ಲೂ ವ್ಯಾಪಿಸಿ, ಸ್ವಾಭಿಮಾನಿ ಜನರೇ , ಸ್ವಯಂ ಪ್ರೇರಿತರಾಗಿ ಒಗ್ಗೂಡಿ ಮುಂದಿನ ಹಂತದ ಹೋರಾಟಕ್ಕೆ ಯಶ ಸಿಗುವುದು ಗ್ಯಾರೆಂಟಿ ಎನ್ನುತ್ತಾರೆ ಪ್ರಜ್ಞಾವಂತರು.

ಕೇಣಿಭಾಗದಲ್ಲಿ ಸಮುದ್ರದ ಕೆಲ ಭಾಗ ಮುಚ್ಚಿ ಬಂದರು ನಿರ್ಮಿಸಿದರೆ, 5 ಕಿ.ಮೀ ಮತ್ತು ಅದಕ್ಕಿಂತ ಹೆಚ್ಚು ದೂರದಲ್ಲಿರುವ ನಮಗೇನು ತೊಂದರೆ ಎಂದು ಹಲವರು ಅಂದುಕೊಂಡಿರಬಹುದಾದರೂ, ಉದ್ದೇಶಿತ ಯೋಜನಾ ವ್ಯಾಪ್ತಿಯಲ್ಲಿ ಅಂಕೋಲಾ ಸೇರಿದಂತೆ ಕಾರವಾರ ವ್ಯಾಪ್ತಿಯ ಹಾಗೂ ಗೋಕರ್ಣ ಸೀಮೆ ವರೆಗಿನ ಸುಮಾರು 103 ಹಳ್ಳಿಗಳು ಹಂತ ಹಂತವಾಗಿ ಒಳಪಡಲಿವೆ ಎಂಬ ಸ್ಪೋಟಕ ಮಾಹಿತಿಯ ತುಣುಕು ಸಾಮಾಜಿಕ ಜಾಲತಾಣಗಳು ಸೇರಿದಂತೆ ಇತರೆಡೆ ಜೋರಾಗಿ ಸದ್ದು ಮಾಡುತ್ತಿದ್ದು, ಎಲ್ಲರೂ ಸೇರಿ ಈಗಲಾದರೂ ಎಚ್ಚೆತ್ತುಕೊಳ್ಳದಿದ್ದರೆ, ಮುಂದೊಂದು ದಿನ ಪಶ್ಚಾತ್ತಾಪ ಪಡಬೇಕಾದೀತು ಎಂದು ಎಚ್ಚರಿಸುತ್ತಾರೆ ಕಾನೂನು ಪಂಡಿತರು, ಪರಿಸರ ತಜ್ಞರು ಮತ್ತು ರೈತ ಮುಖಂಡರು. ಆದರೆ ಸದ್ಯಕ್ಕೆ ಗ್ರಾಮಸ್ಥರ ಒಗ್ಗಟ್ಟು ನೋಡಿದರೆ ಖಾಸಗಿ ವಾಣಿಜ್ಯ ಬಂದರು ಯೋಜನೆಯನ್ನು ಕೈ ಬಿಡುವುದೇ ಲೇಸು ಎನ್ನುವ ತೀರ್ಮಾನ ಕೈಗೊಂಡರು ಅಚ್ಚರಿ ಪಡಬೇಕಿಲ್ಲ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button