Important
Trending

ಅಂಕೋಲಾ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ನ ವಾರ್ಷಿಕ ಸಭೆ: ಹಲವರ ಅಸಮಾಧಾನ: ಕಾರಣ ಏನು?

ಶತಮಾನಗಳ ಇತಿಹಾಸ ಎಂದು ಹೇಳಿಕೊಳ್ಳುವ ಅಂಕೋಲಾ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ನ ವಾರ್ಷಿಕ ಸಭೆ ಮಹಾಲಯ ಅಮಾವಾಸ್ಯೆ ಯಂದೇ ನಡೆದು,ಆರಂಭವಾದಷ್ಟೇ ವೇಗದಲ್ಲಿ ಮುಗಿದು ದಾಖಲೆ ಮಾಡಿದಂತಿದೆ.ಅಡವೆ ಪತ್ರಿಕೆಯಲ್ಲಿ ತೋರಿಸಿದ ಬ್ಯಾಂಕಿನ ಕಳೆದ 5 ವರ್ಷಗಳ ಪ್ರಗತಿಯ ಪಕ್ಷಿ ನೋಟ ಎನ್ನುವುದು ಅವರ ಅರ್ಥದಲ್ಲಿ ಪ್ರಗತಿ ಯಾವುದು ಎಂದು ಕೇಳುವಂತಿದೆ.

ಅಂಕೋಲಾ: ನೂರಾರು ವರ್ಷಗಳ ಇತಿಹಾಸದೊಂದಿಗೆ ಜಿಲ್ಲೆಯ ಪ್ರತಿಷ್ಠಿತ ಸಹಕಾರಿ ಬ್ಯಾಂಕುಗಳಲ್ಲಿ ಒಂದಾಗಬೇಕಿದ್ದ ಅಂಕೋಲಾ ಅರ್ಬನ್ ಕೋ ಆಪರೆಟಿವ್ ಬ್ಯಾಂಕಿನ 112 ನೇ ವಾರ್ಷಿಕ ಸಾಮಾನ್ಯ ಸಭೆಯು ಶೇರುದಾರ ಸದಸ್ಯರು ಮುಕ್ತ ಅಭಿಪ್ರಾಯ ವ್ಯಕ್ತಪಡಿಸಲು ಹೆಚ್ಚಿನ ಅವಕಾಶವಿಲ್ಲದೇ ಆರಂಭವಾದಷ್ಟೇ ವೇಗದಲ್ಲಿ ಮುಗಿದು ಹೋಗಿರುವುದು ಹಲವರ ಅಸಮಾಧಾನಕ್ಕೆ ಕಾರಣವಾಗಿದೆ.

ಅಂಕೋಲಾ ಪಟ್ಟಣದಲ್ಲಿ ಮುಖ್ಯ ಶಾಖೆ ಮತ್ತು ಸ್ವಂತ ಕಟ್ಟಡ ಹೊಂದಿರುವ ಈ ಬ್ಯಾಂಕ್,ಅಂಕೋಲಾ ತಾಲೂಕಿನ ಅವರ್ಸಾ, ಬೇಲೇಕೇರಿ ಹಾಗೂ ಕಾರವಾರ, ಯಲ್ಲಾಪುರ, ಶಿರಸಿ, ಕುಮಟಾ ತಾಲೂಕುಗಳಲ್ಲಿಯೂ ಶಾಖೆಗಳನ್ನು ಹೊಂದಿದೆ. ಹೀಗಾಗಿ ಈ ಈ ಬ್ಯಾಂಕ್ ಜಿಲ್ಲೆಯ ಇತರೆ ಕೆಲ ತಾಲೂಕುಗಳ ಶೇರುದಾರ ಸದಸ್ಯರನ್ನು ಹೊಂದಿದ್ದು, ಸೆ 21 ರ ರವಿವಾರ ಬ್ಯಾಂಕಿನ 112ನೇ ವಾರ್ಷಿಕ ಸಭೆ ನಿಗದಿತ ವೇಳೆಯಂತೆ ಬೆಳಿಗ್ಗೆ 10 ಗಂಟೆಗೆ ಆರಂಭವಾಯಿತಾದರೂ, ಸರಿಯಾಗಿ ಮುಕ್ಕಾಲು ತಾಸು ಸಭಾ ಕಾರ್ಯ ನಡೆದಂತೆ ಕಂಡು ಬಂದು, 11 ಗಂಟೆಯ ಒಳಗಾಗಿ ಮುಗಿದು ಹೋಗಿದ್ದು, ಕೆಲ ಸದಸ್ಯರು ಸಭೆಗೆ ಆಗಮಿಸುತ್ತಿದ್ದರೆ ಇನ್ನೊಂದು ಕಡೆ ತರಾತುರಿಯಲ್ಲಿ ವಂದನಾರ್ಪಣೆ ಮುಗಿಸಿ ಸಭೆಯಲ್ಲಿದ್ದವರಿಗೆ ತಿಂಡಿಯ ಪೊಟ್ಟಣ ನೀಡಿ ಜಾಗ ಖಾಲಿ ಮಾಡಿ ಎಂದು ಹೇಳುವ ರೀತಿಯಲ್ಲಿ ತರಾತುರಿ ನಡೆಸಿದಂತೆ ಕಂಡು ಬಂತು.

ಹುಚ್ಚ ಮುಂಡೆ ಮದುವೇಲಿ ಉಂಡವನೇ ಜಾಣ ಎಂಬಂತೆ , ಇದೇ ಸರಿಯಾದ ಸಮಯವಕಾಶ ಎಂದು ,ಗುಂಪಿನಲ್ಲಿ ಗೋವಿಂದ ಎಂದಂತೆ ತಮ್ಮ ಕೈಗೆ ಸಿಕ್ಕಷ್ಟು ತಿಂಡಿ ಪೊಟ್ಟಣ ತೆಗೆದುಕೊಂಡು,ಸಭೆ ಎಂದರೆ ಹೀಗಿರಬೇಕು ಎನ್ನುತ್ತಾ ತಮ್ಮ ಜಾಣತನಕ್ಕೆ ಬೆನ್ನು ತಟ್ಟಿಕೊಂಡಂತೆ ವಾಪಸಾಗಹತ್ತಿದರು. ಆರಂಭದಲ್ಲಿ ಸಭೆಯಲ್ಲಿ ಬ್ಯಾಂಕಿನ ಅಧ್ಯಕ್ಷರಾದ ರಾಜೇಂದ್ರ ಶಾಂಬಾ ಶೆಟ್ಟಿ ಸ್ವಾಗತಿಸಿ ಬ್ಯಾಂಕಿನ ಪ್ರಗತಿಯ ಕುರಿತು ಮಾತನಾಡಿದರು.

ಪ್ರಧಾನ ವ್ಯವಸ್ಥಾಪಕರು ವಾರ್ಷಿಕ ವರದಿಯನ್ನು ಪ್ರಸ್ತುತ ಪಡಿಸುತ್ತಿದ್ದಂತೆ ಕೆಲವು ವಿಷಯಗಳ ಕುರಿತು ಶೇರುದಾರರು ಆರಂಭದಲ್ಲಿಯೇ ಪ್ರಶ್ನೆ ರೂಪದ ಧ್ವನಿ ಎತ್ತಿದರು. ಈ ಕುರಿತು ಒಂದಿಬ್ಬರು ಪ್ರಮುಖರು ,ವಾರ್ಷಿಕ ವರದಿ ಪೂರ್ತಿ ಓದಿ ಮುಗಿದ ಮೇಲೆ ನಾವೆಲ್ಲ ಪ್ರಶ್ನೆ ಕೇಳಬಹುದೇ ಎಂದು ಬ್ಯಾಂಕಿನ ಅಧ್ಯಕ್ಷರನ್ನು ಕೇಳಿದಾಗ ,ಅಧ್ಯಕ್ಷರು ಹಾಗೇನಿಲ್ಲ ಅವರು ಓದುತ್ತಾ ಹೋದಂತೆ ಮಧ್ಯೆ ಮಧ್ಯೆ ನಿಮ್ಮ ಅಭಿಪ್ರಾಯ ಸಲಹೆ ಸೂಚನೆ ತಿಳಿಸಬಹುದು ಎಂದಿರುವುದು,ಒಂದರ್ಥದಲ್ಲಿ ಗೊಂದಲಕ್ಕೆ ಎಡೆ ಮಾಡಿಕೊಟ್ಟಿತು ಎಂದು ಸಭೆಯಲ್ಲಿ ಹಾಜರಿದ್ದ ಹಿರಿಯರು ಒಬ್ಬರು ಹೇಳಿದಂತಿತ್ತು.

ಕಳೆದ ಕೆಲ ತಿಂಗಳ ಹಿಂದೆ ನಡೆದ ಸುಮಾರು 33 ಲಕ್ಷ ರೂ ಗೂ ಹೆಚ್ಚಿನ ಮೊತ್ತದ ಸೈಬರ್ ವಂಚನೆ ಪ್ರಕರಣ ಬ್ಯಾಂಕಿಂಗ್ ವ್ಯವಹಾರದ ಜಾಗರೂಕತೆ ಕುರಿತಂತೆ ನೂತನ ಆಡಳಿತ ಮಂಡಳಿಗೂ ಸವಾಲಿನ ಕೆಲಸದಂತಿತ್ತು.ಈ ಕುರಿತು ಸಭೆಯಲ್ಲಿ ಮುಖ್ಯವಾಗಿ ಚರ್ಚೆಯಾಯಿತು.ಸೈಬರ್ ವಂಚನೆ ಪ್ರಕರಣ, ಸಂಬಂಧಿಸಿದ ಸುಮಾರು 18 ಲಕ್ಷದಷ್ಟು ಮೊತ್ತವನ್ನು ಲಾಭದಲ್ಲಿ ಕಳೆದಿರುವ
ಕುರಿತಂತೆ ಕೆಲವರು ಪ್ರಶ್ನೆ ಎತ್ತಿದರು.

ಸೈಬರ್ ವಂಚನೆ ಕುರಿತಂತೆ ದೂರು ದಾಖಲಾಗಿದ್ದು ಒಟ್ಟು ವಂಚನೆಯಾಗಿರುವ ಹಣದಲ್ಲಿ ಈಗಾಗಲೇ 16 ಲಕ್ಷ ಹಣವನ್ನು ಮರಳಿ ಪಡೆಯಲಾಗಿದೆ . ಒಟ್ಟು ನಾಲ್ಕು ಖಾತೆಗಳಿಂದ ವಂಚನೆ ಮಾಡಲಾಗಿದ್ದು ಒಂದು ಖಾತೆಯಿಂದ ಹಣ ಮರಳಿ ಪಡೆಯಲಾಗಿದ್ದು ಉಳಿದ ಮೂರು ಖಾತೆಗಳಿಂದ ವಂಚನೆಯಾಗಿರುವ 18 ಲಕ್ಷ ಹಣ ಬರಬೇಕಾಗಿದ್ದು ಅದು ಬಂದರೆ ಲಾಭದಲ್ಲಿ ಸೇರಿಸಲಾಗುವುದು ಎಂದು ಬ್ಯಾಂಕಿನ ಅಧ್ಯಕ್ಷ ರಾಜೇಂದ್ರ ಶೆಟ್ಟಿ ತಿಳಿಸಿದರು.

ಹೆಚ್ಚಿನ ಸಾಲ ಇರುವ ವಸೂಲಾತಿಗೆ ಏನು ಕ್ರಮ ಕೈಗೊಳ್ಳಲಾಗುತ್ತಿದೆ

ಬ್ಯಾಂಕಿನಲ್ಲಿ 50 ಲಕ್ಷಕ್ಕಿಂತ ಹೆಚ್ಚಿನ ಸಾಲ ಇರುವ ವಸೂಲಾತಿಗೆ ಏನು ಕ್ರಮ ಕೈಗೊಳ್ಳಲಾಗುತ್ತಿದೆ ಎಂಬ ಪ್ರಶ್ನೆಯೂ ಕೇಳಿ ಬಂತು. ಎನ್ ಪಿ ಎ ಎಂದರೇನು ? ಒಟ್ಟು ಸಾಲದ ಕಟಬಾಕಿ ಎಷ್ಟು ಎಂಬತ್ಯಾದಿ ಮಾರ್ಮಿಕ ಪ್ರಶ್ನೆಗಳು ಬ್ಯಾಂಕಿಂಗ್ ಆಡಳಿತದಲ್ಲಿ ಅನುಭವ ಇರುವ ಹಿರಿಯರಿಂದ ಕೇಳಿ ಬಂದವು. ಅಷ್ಟರಲ್ಲೇ ಬ್ಯಾಂಕಿನ ಪ್ರಗತಿಗೆ ಸದಸ್ಯರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಹೆಚ್ಚಿನವರಿಗೆ ಅವಕಾಶ ಇಲ್ಲದಂತೆ ಸಭೆಗೆ ಮಂಗಳ ಹಾಡಿ ಬಂದವರ ಕೈ ಯಲ್ಲಿ ತಿಂಡಿ ಪೊಟ್ಟಣ ಇಟ್ಟು ಕಳುಹಿಸುವ ಕೆಲಸ ಆರಂಭಿಸಲಾಯಿತು. ಹಿಂದೂ ಧರ್ಮದ ಪಿತೃಕಾರ್ಯ
ಆಚರಣೆಯ ಮಹತ್ವದ ಮಹಾಲಯ ಅಮವಾಸೆಯ ದಿನದಂದು ಬ್ಯಾಂಕಿನ ಸಾಮಾನ್ಯ ಸಭೆ ಇಟ್ಟುಕೊಂಡರೂ ಸಭೆಯಲ್ಲಿ ಪಾಲ್ಗೊಳ್ಳದಿದ್ದರೆ ಮತದಾನ ಮತ್ತಿತರ ಅಧಿಕಾರದಿಂದ ವಂಚಿತರಾಗಬಾರದು. ಬ್ಯಾಂಕಿನ ಅಭಿವೃದ್ಧಿಗೆ ಕೆಲವೊಂದು ಸಲಹೆ ಸೂಚನೆ ನೀಡಬೇಕು ಎಂಬ ಉದ್ದೇಶದಿಂದ ಸಭೆಗೆ ಬಂದು ಕುಳಿತ ಶೇರುದಾರ ಸದಸ್ಯರು ತಾವು ಬಂದು ಕುಳಿತುಕೊಳ್ಳುವಷ್ಟರಲ್ಲೇ ಸಭೆ ಮುಗಿದು ಹೋಗಿರುವ
ಕುರಿತು ಅಸಮಾಧಾನ ವ್ಯಕ್ತಪಡಿಸುತ್ತಲೇ ಹೊರ ನಡೆದರು.

ಬ್ಯಾಂಕಿನ ಸಿಬ್ಬಂದಿಗಳ ಕಾರ್ಯವೈಖರಿ ಕುರಿತಂತೆ ಸಭೆಯಲ್ಲಿ ಮೆಚ್ಚುಗೆ

ತಮಗೆ ಬೇಕಾದವರು ಮಾತ್ರ ಮತದಾನಲ್ಲಿ ಪಾಲ್ಗೊಂಡು ಉಳಿದವರು ಅವಕಾಶ ವಂಚಿತರಾಗುವಂತೆ ವ್ಯವಸ್ಥಿತ ಕೆಲಸ
ನಡೆಸಲಾಗುತ್ತಿದೆಯೇ ಎಂದು ಅನುಮಾನ ವ್ಯಕ್ತಪಡಿಸಿ ಪ್ರಮುಖರೊಬ್ಬರು ಪ್ರಶ್ನೆ ಮಾಡಿ, ತಮ್ಮ ಅಸಮಾಧಾನ ವ್ಯಕ್ತಪಡಿಸಿದಂತಿತ್ತು.
ಸಭೆ ಸರಿಯಾಗಿ ನಡೆಸುತ್ತಿಲ್ಲ ಎಂಬ ಕೆಲವರ ಅಭಿಪ್ರಾಯದ ನಡುವೆಯೂ, ಬ್ಯಾಂಕಿನ ಸಿಬ್ಬಂದಿಗಳ ಕಾರ್ಯವೈಖರಿ ಕುರಿತಂತೆ ಸಭೆಯಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

ಬ್ಯಾಂಕಿನಲ್ಲಿ ಹಲವಾರು ವರ್ಷಗಳಿಂದ ಸೇವೆ ಸಲ್ಲಿಸಿ ಪ್ರಧಾನ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸುತ್ತಿರುವ ರವೀಂದ್ರ ವೈದ್ಯ ಅವರು ಇದೇ ತಿಂಗಳ ಕೊನೆಯಲ್ಲಿ ನಿವೃತ್ತಿ ಹೊಂದುತ್ತಿದ್ದು ಅವರನ್ನು ಗೌರವಯುತವಾಗಿ ಬೀಳ್ಕೊಡಬೇಕು ಎಂಬ ಅರುಣ ನಾಡಕರ್ಣಿ ಅವರ ಸಲಹೆ ಮತ್ತು ಅಭಿಪ್ರಾಯಕ್ಕೆ ಸಭೆಯಲ್ಲಿ ಸಹಮತ ಕೇಳಿ ಬಂತು. ಬ್ಯಾಂಕಿನ ಸಿಬ್ಬಂದಿಗಳು ಉತ್ತಮ ಸೇವೆ ನೀಡುವ ಜೊತೆಗೆ ಗ್ರಾಹಕರ
ಸಮಸ್ಯೆಗಳಿಗೆ ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಿದ್ದಾರೆ ಸಿಬ್ಬಂದಿಗಳಿಗೆ ಕುಳಿತು ಕೊಳ್ಳಲು ಸರಿಯಾದ ಆಸನ, ಫ್ಯಾನ್ ಮತ್ತಿತರ
ಮೂಲಭೂತ ಸೌಕರ್ಯಗಳ ಕೊರತೆ ಆಗದಂತೆ ನೋಡಿಕೊಳ್ಳಿ ಎಂದು ವಕೀಲ ಉಮೇಶ ನಾಯ್ಕ ಹೇಳಿದರು.

ಬ್ಯಾಂಕಿನ ಉಪಾಧ್ಯಕ್ಷ ಉಮೇಶ ನಾಯ್ಕ, ಆಡಳಿತ ಮಂಡಳಿಯ ಸದಸ್ಯರುಗಳಾದ ಭಾಸ್ಕರ ನಾರ್ವೇಕರ್, ಗೋಪಾಲಕೃಷ್ಣ ನಾಯ್ಕ, ಬಿ.ಡಿ.ನಾಯ್ಕ, ಚಂದ್ರಕಾಂತ ನಾಯ್ಕ, ಉದಯ ನಾಯಕ, ಸಂತೋಷ ಬಂಡಿಕಟ್ಟೆ, ಅನುರಾಧ ನಾಯ್ಕ, ಸುಧಾ ಶೆಟ್ಟಿ,
ನಾಗಾನಂದ ಬಂಟ, ಸಂಜಯ ಮೋದಿ,ಗೌರಿ ಸಿದ್ಧಿ,ವೃತ್ತಿಪರ ನಿರ್ದೇಶಕರಾದ ಯೋಗಿತಾ ಕಾಮತ್,ಗುರುನಾಥ್ ರಾಯ್ಕರ್ ವೇದಿಕೆಯಲ್ಲಿದ್ದರು. ಬ್ಯಾಂಕಿನ ಸಿಬ್ಬಂದಿ ವರ್ಗ, ಲೆಕ್ಕ ಪರಿಶೋಧಕರು ಉಪಸ್ಥಿತರಿದ್ದರು. ಈ ಹಿಂದೆ ಬ್ಯಾಂಕಿನ ನಿರ್ದೇಶಕರಾಗಿದ್ದ ಪ್ರಕಾಶ ಕುಂಜಿ ಅವರ ಅಕಾಲಿಕ ನಿಧನಕ್ಕೆ ಬ್ಯಾಂಕಿನ ಪರವಾಗಿ ಮೌನಾಚರಣೆ ಮಾಡಿ, ಮೃತರ ಸೇವೆಯ ಸ್ಮರಣೆ ಮಾಡಲಾಯಿತು.

ಒಟ್ಟಿನಲ್ಲಿ ಮಹಾಲಯ ಅಮವಾಸ್ಯೆಯಂದು ಅಂಕೋಲಾ ಅರ್ಬನ್ ಬ್ಯಾಂಕ್ ನವರು ವಾರ್ಷಿಕ ಸಾಮಾನ್ಯ ಸಭೆ ಕರೆದು ,ಇತ್ತ ತಮ್ಮ ಕೆಲಸವನ್ನು ಮುಗಿಸಿಕೊಂಡು, ಅತ್ತ ಅವರವರ ಕೆಲಸಕ್ಕೆ ಹೋಗಲು ಅನುವು ಮಾಡಿಕೊಟ್ಟರು ಎನ್ನುವ ಮಾತು ಕೇಳಿಬಂತು. ಅಡಾವೆ ಪತ್ರಿಕೆಯಲ್ಲಿ ತಿಳಿಸಿದಂತೆ ಬ್ಯಾಂಕಿನ 5 ವರ್ಷಗಳ ಪ್ರಗತಿಯ ಪಕ್ಷಿ ನೋಟವನ್ನು ವಿಶ್ಲೇಷಿಸಿದರೆ ,ಆ ಶ್ರೇಣಿಯಿಂದ ಆ ಶ್ರೇಣಿಗೆ ಬ ಶ್ರೇಣಿಗೆ ಇಳಿಕೆ, ಲಾಭಾಂಶ ಮತ್ತು ಡಿವಿಡೆಂಡ್ ನ ಇಳಿಕೆ ಪ್ರಗತಿಯೇ ಎಂದು ಶೇರುದಾರ ಸದಸ್ಯರು ಹುಬ್ಬೇರಿಸುವಂಥಾಗಿದ್ದು,ಇದಕ್ಕೆ ಜವಾಬ್ದಾರಿ ಸ್ಥಾನದಲ್ಲಿರುವವರು ಉತ್ತರಿಸಬೇಕಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button