Follow Us On

WhatsApp Group
Big News
Trending

ನಾದ-ವೇದ-ಯೋಗಗಳ ತ್ರಿವೇಣಿಸಂಗಮ

ಡಾ ಕೆ ಗಣಪತಿ ಭಟ್ಟರ ಶತಮಾನದ ಅಧ್ಯಾತ್ಮ ಸಾಧನೆ
ಪ್ರಾಚೀನ-ನವೀನ ಪದ್ಧತಿಯ ಅನುಕರಣೆ
ಡಿ 9 ರಂದು ದೀವಗಿ ರಾಮಾನಂದ ಸ್ವಾಮೀಜಿಯವರಿಂದ ಉದ್ಘಾಟನೆ

ಸಂಗೀತ ರಸ ಮಾಧುರ್ಯ’ ಎಂಬ ಉದ್ಗ್ರಂಥವು ವಿದ್ವಾನ್ ಡಾ. ಗಣಪತಿಯವರ ಶತಮಾನದ ಭೌದ್ಧಿಕ ಸಾಧನೆಯಾದರೆ, ಸ್ವಗ್ರಾಮದ ನಾಗರಿಕರಿಗಾಗಿ ನಿರ್ಮಿಸಿಕೊಟ್ಟ ‘ಸಂಸ್ಕೃತ ಸೇತುವೆ’ ಶತಮಾನದ ಭೌತಿಕ ಸಾಧನೆಯಾಗಿದೆ. ಇದೀಗ ಕರೋನಾ ಸಂದರ್ಭದಲ್ಲಿ ನಿರ್ಮಿಸಿದ ಧ್ಯಾನಮಂದಿರವು ಶತಮಾನದ ಆಧ್ಯಾತ್ಮಿಕ ಸಾಧನೆಯಾಗಿ ಹೊರಹೊಮ್ಮಿದೆ. ಗ್ರಾಮೀಣ ಜನರಿಗಾಗಿ ಕಳೆದ ಏಳು ವರ್ಷಗಳಲ್ಲಿ ತಮ್ಮ ನಿವೃತ್ತಿವೇತನದಿಂದ ಐದು ಲಕ್ಷ ರೂ ವ್ಯಯಿಸಿ ಉತ್ತಮ ಮಾರ್ಗ ನಿರ್ಮಿಸಿಕೊಟ್ಟಿದ್ದಾರೆ. ಈ ವರ್ಷ ಧ್ಯಾನ ಮಂದಿರಕ್ಕಾಗಿ ಒಂದು ಲಕ್ಷ ರೂ ವಿನಿಯೋಗಿಸಿದ್ದಾರೆ.


ಆಕಾರ: ಕತಗಾಲ ಬಸ್ ನಿಲ್ದಾಣದ ಹಿಂಭಾಗದಲ್ಲಿರುವ ಸತ್ಸಂಗ ಭವನಕ್ಕೆ ಹೊಂದಿಕೊoಡು 20 ಅಡಿ ಉದ್ದ, 4 ಅಡಿ ಅಗಲ ಹಾಗು 6 ಅಡಿ ಎತ್ತರವಿರುವ ಈ ಕಟ್ಟಡ 3 ಅಡಿ ಭೂಮಿಯೊಳಗಿರುವುದರಿಂದ ಧ್ಯಾನಗುಹೆಯಾಗಿದೆ. ಸಂಗೀತೋಪಾಸಕರಿಗಾಗಿ, ಯೋಗ ದರ್ಶಕರಿಗಾಗಿ, ಅಧ್ಯಾತ್ಮ ಸಾಧಕರ ಉಪಯೋಗಕ್ಕಾಗಿ ಇದನ್ನು ನಿರ್ಮಿಸಿರುವುದರಿಂದ ಒಂದರ್ಥದಲ್ಲಿ ಇದು ವೇದ-ನಾದ-ಯೋಗಗಳ ಸಮನ್ವಯ ಕೇಂದ್ರವಾಗಿದೆ. ಅನೇಕ ವರ್ಷಗಳಿಂದ ಕತಗಾಲ ಪರಿಸರವನ್ನು ಸಾಂಸ್ಕೃತಿಕವಾಗಿ ದೇಶಮಟ್ಟದಲ್ಲಿ ಪರಿಚಯಿಸುತ್ತಿರುವ ಗಣಪತಿ ಭಟ್ಟರು ಇದೀಗ ಆಧ್ಯಾತ್ಮಿಕವಾಗಿಯೂ ಪ್ರಚುರಪಡಿಸಲಿದ್ದಾರೆ.


ಸ್ವದೇಶಿ ವಸ್ತು: ಇಟ್ಟಿಗೆ, ಸುಣ್ಣ, ಮಣ್ಣಿನ ವರ್ಣಲೇಪನ, ಸಣ್ಣ ಹಂಚಿನ ಹೊದಿಕೆ, ಕಡಪಾ ಕಲ್ಲಿನ ಹಾಸುವಿಕೆ, ಕಬ್ಬಿಣದ ಮೆಟ್ಟಿಲು, ಕಟ್ಟಿಗೆಯ ದ್ವಾರ ಮುಂತಾದ ರಾಸಾಯನಿಕ ರಹಿತ ಸ್ವದೇಶಿ ವಸ್ತುಗಳನ್ನೇ ಹೆಚ್ಚಾಗಿ ಬಳಸಲಾಗಿದೆ. ವಾಯು ಸಂಚಾರಕ್ಕಾಗಿ ಹತ್ತಾರು ಕೊಳವೆ ಜೋಡಿಸಲಾಗಿದೆ. ಶ್ರೇಷ್ಠ ನಾದ ರಕ್ಷಣೆಗಾಗಿ ಧ್ವನಿ ನಿಯಂತ್ರಣ ವ್ಯವಸ್ಥೆ ಕಲ್ಪಿಸಲಾಗಿದೆ. ವಿಶೇಷವೆಂದರೆ ಕಾರ್ಮಿಕರೊಂದಿಗೆ ಗಣಪತಿ ಭಟ್ಟರೂ ಇದಕ್ಕಾಗಿ ಪ್ರತಿದಿನ ಎಂಟು ಗಂಟೆಗಳ ಎಲ್ಲ ರೀತಿಯ ಕೆಲಸ ಮಾಡಿದ್ದಾರೆ.


ಸಾರ್ಥಕತೆ: ಬೇರೆ ರಾಜ್ಯಗಳಿಂದ ಬರುವ ಸಾಧು-ಸಂತರ, ಯೋಗ ಸಾಧಕರ ನಾದೋಪಾಸಕರ ವಾಸಕ್ಕಾಗಿ ಸುಸಜ್ಜಿತ ಸ್ನಾನಗೃಹ, ಶೌಚಾಲಯಗಳನ್ನು ಕಲ್ಪಿಸಲಾಗಿದೆ. ಚಿತ್ತಶುದ್ಧಿಗೆ ಪ್ರೇರಕವಾದ ನಾದ, ವೇದ, ಯೋಗ ವಿಷಯಗಳನ್ನು ಸಮನ್ವಯಗೊಳಿಸಿ ಪಾಠ್ಯವಸ್ತುವನ್ನು ಡಾ ಗಣಪತಿ ಭಟ್ಟರು ಸಿದ್ಧಪಡಿಸಿದ್ದಾರೆ. ನಾದ, ಯೋಗ, ಉಪನಿಷತ್ತುಗಳ ಧ್ಯೇಯ ವಾಕ್ಯಗಳನ್ನು ಕನ್ನಡ, ಸಂಸ್ಕೃತಗಳಲ್ಲಿ ಅಳವಡಿಸಲಾಗಿದೆ. 40 ಪುಸ್ತಿಕೆ-ಧ್ವನಿಮುದ್ರಿಕೆಗಳ ರಚನೆ, ಸಹಸ್ರಾರು ಕಾರ್ಯಕ್ರಮಗಳ ಸಂಯೋಜನೆ, ಸಂಸ್ಕಾರಶಿಬಿರಗಳ ಆಯೋಜನೆ, ಅಹೋರಾತ್ರಿ ಶಾಸ್ತ್ರೀಯ ಸಂಗೀತ ಸಮ್ಮೇಳನ ಹಾಗು ರಾಷ್ಟçಮಟ್ಟದ ಪರೀಕ್ಷಾ ಕೇಂದ್ರದ ಚಾಲನೆ ಮುಂತಾದ ಅನುಭವ ಸಂಪನ್ನತೆಯನ್ನು ಧ್ಯಾನಮಂದಿರಕ್ಕೆ ಧಾರೆಯೆರೆದಿದ್ದಾರೆ.


ದಿವ್ಯಸಂದರ್ಭ: 2005 ರಲ್ಲಿ ಕಲಾಶ್ರೀ ಸಾಂಸ್ಕೃತಿಕ ವೇದಿಕೆಯನ್ನು ಗೋರೆ ಮಠದ ನಿರ್ಮಲಾನಂದ ಸ್ವಾಮೀಜಿಯವರು ಉದ್ಘಾಟಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಇದೀಗ ಧ್ಯಾನ ಮಂದಿರವನ್ನು ದೀವಗಿ ಮಠದ ರಾಮಾನಂದ ಸ್ವಾಮೀಜಿಯವರು 9-12-2020 ರಂದು ಮಧ್ಯಾಹ್ನ 3 ಗಂಟೆಗೆ ಉದ್ಘಾಟಿಸಲಿದ್ದಾರೆ. ಕೊಡಗಿನ ಡಾ ಕುಮಾರಸ್ವಾಮಿಜಿ, ಯೋಗ ಸಾಧಕಿ ಧಾರವಾಡದ ಶೋಭಾ ಹೂಲಿಕಟ್ಟಿ ಹಾಗು . ಹಾಗು ಕಲಾಶ್ರೀ ವೇದಿಕೆಯ ಅಧ್ಯಕ್ಷ ಎಚ್ ಎನ್ ಅಂಬಿಗ ಅತಿಥಿಗಳಾಗಲಿದ್ದಾರೆ. ಬೆಳಿಗ್ಗೆ 10 ರಿಂದ ನಿರಂತರ 12 ಗಂಟೆಗಳ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮಹಿಳೆಯರಿಂದ ದೇವಿಗೆ ಕುಂಕುಮಾರ್ಚನೆ ಮತ್ತು ಸ್ತೋತ್ರ ಗಾನ ಸಮರ್ಪಣೆಯಾಗಲಿದೆ. ವಿದ್ವಾಂಸರಿoದ ವೇದಘೋಷ ಮೊಳಗಲಿದೆ.


ಸನ್ಮಾನ: ನಿರ್ಮಾಣಕಾರ್ಯದಲ್ಲಿ ಸಹಕರಿಸಿದ ಹರಿಶ್ಚಂದ್ರ ಗೌಡ, ನಾಗರಾಜ ದೇಶಭಂಡಾರಿ, ಜಾನಪ್ಪ ಅಂಬಿಗ, ಈಶ್ವರ ಗೌಡ, ಗಣಪು ಗೌಡ ಮುಂತಾದ ಕಾರ್ಮಿಕರನ್ನು ಸನ್ಮಾನಿಸಲಾಗುತ್ತದೆ. ಧಾರವಾಡದ ಆನಂದ ಭಟ್ಟರಿಗೆ ಕಲಾಶ್ರೀ ಛಾಯಾಸಾಧಕ ಪ್ರಶಸ್ತಿ ನೀಡಲಾಗುತ್ತದೆ. ಬಹುಭಾಷಾ ವಿದುಷಿ ರೋಹಿಣಿ ಭಟ್ಟ ಸಂಪಾದಿಸಿದ ರಾಗಕೋಶ ಪುಸ್ತಕದ ತೃತೀಯ ಆವೃತ್ತಿಯ ಲೋಕಾರ್ಪಣೆಯಾಗಲಿದೆ. ಸಂಜೆ ಕಲಾವಿದರಿಂದ ಸಂಗೀತ ಸೇವೆ ಜರುಗಲಿದೆ ಎಂದು ಸಂಯೋಜಕರಾದ ಘನಪಾಠಿ ಯಾದವೇಶ ಶರ್ಮಾ ತಿಳಿಸಿದ್ದಾರೆ. ಸಂಪರ್ಕ: 9448232435, 08386 295061

Back to top button