Follow Us On

WhatsApp Group
Important
Trending

ಕದಂಬೇಶ್ವರ ದೇವಸ್ಥಾನದ ಜೀರ್ಣೋದ್ಧಾರದ ವೇಳೆ ಎರಡು ತಾಮ್ರ ಶಾಸನ ಪತ್ತೆ

  • ಸಾವಿರಾರು ವರ್ಷಗಳ ಹಿಂದೆ ಸೂರ್ಯ ಗ್ರಹಣದಂದು ನಿರ್ಮಾಣವಾದ ದೇಗುಲ
  • ದೇವಸ್ಥಾನ ನವೀಕರಣ ಸಮಿತಿಯ ಕೋರಿಕೆ ಮೇರೆಗೆ ಅಧ್ಯಯನ ಮಾಡಿದ ಶ್ಯಾಮಸುಂದರ ಗೌಡ

ಅಂಕೋಲಾ : ಇತಿಹಾಸ ಪ್ರಸಿದ್ಧವಾಗಿರುವ ಕುಂಬಾರಕೇರಿಯ ಕದಂಬೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ಆರಂಭಿಸಿರುವ ದೇವಸ್ಥಾನ ನವೀಕರಣ ಸಮಿತಿಯವರಿಗೆ, ಪುರಾತನ ಕಟ್ಟಡ ನೆಲಸಮ ಗೊಳಿಸಿ ಹೊಸ ಕಟ್ಟಡ ನಿರ್ಮಿಸುತ್ತಿರುವು ವೇಳೆ ಭೂಮಿಯಲ್ಲಿ 5ಸೆಂ.ಮೀ ಹಾಗೂ 20 ಸೆಂ.ಮೀ ಉದ್ದಳತೆಯ ಮತ್ತು 15 ಸೆಂ.ಮೀ ಹಾಗೂ 10 ಸೆಂ.ಮೀ ಉದ್ದಳತೆಯ ಎರಡು ತಾಮ್ರ ಶಾಸನಗಳು ದೊರೆತಿವೆ.
ದೇವಸ್ಥಾನದ ಕಟ್ಟಡ ನಿರ್ಮಾಣ ಸಮಿತಿಯ ಅಧ್ಯಕ್ಷ ವಿಠ್ಠಲರಾವ್ ವೆರ್ಣೇಕರ್ ಈ ವಿಷಯವನ್ನು ಇತಿಹಾಸ ಸಂಶೋಧಕ ಶ್ಯಾಮಸುಂದರ ಗೌಡರ ಗಮನಕ್ಕೆ ತಂದಿದ್ದು, ಅದನ್ನು ಅಧ್ಯಯನ ಮಾಡಿ ಇವು ಕಲ್ಯಾಣ ಚಾಳುಕ್ಯರ ತ್ರೈಳೋಕ್ಯಮಲ್ಲನ ಆಡಳಿತ ಕಾಲದ್ದಾಗಿದ್ದು, ಎರಡೂ ಶಾಸನಗಳು ಒಂದೇ ತೇದಿಯಂದು ಹೊರಡಿಸಲ್ಪಟ್ಟಿದ್ದು ಅಲ್ಪ ಸ್ವಲ್ಪ ಅಕ್ಷರ ವ್ಯತ್ಯಾಸದೊಂದಿಗೆ ಒಂದೇ ವಿಷಯವನ್ನು ತಿಳಿಸುತ್ತವೆ ಎಂದರು.

ಸೂರ್ಯ ಗ್ರಹಣದಂದು ನಿರ್ಮಾಣವಾದ ಇತಿಹಾಸ :

ಸ್ವಸ್ತಿ ಸಮಸ್ತ ಭುವನಾಶ್ರಯ ಪ್ರತೂವೀವಲ್ಲಭ ಮಹಾರಾಜಾ ಧಿರಾಜ ಸತ್ಯಾಶ್ರಯ ಕುಳತಿಳಕ ಪರಮಭಟ್ಟಾರಕ ಚಾಳುಕ್ಯಾಭರಣ ಶ್ರೀಮತ್ರೈಲೋಕ್ಯಮಲ್ಲ ದೇವರ ರಾಜ್ಯದಲ್ಲಿ ಶಕ ವರ್ಷ 897ನೆಯ ಯುವ ಸಂವತ್ಸರದ ಭಾದ್ರಪದ ಮಾಸದ ಅಮವಾಸ್ಯೆ ಆದಿತ್ಯವಾರದಂದು ಸಂಭವಿಸಿದ ಸೂರ್ಯಗ್ರಹಣದ ಸಂದರ್ಭದಲ್ಲಿ ಶ್ರೀಮದ್ ಕಲಿಯರಸ ಪ್ಪಿರಿಯ ಭೂತಯ್ಯಗಡಂಬನು ಕದಂಬೇಶ್ವರ ದೇವಾಲಯ ನಿರ್ಮಾಣ ಮಾಡಿ, ಸಿವರಾಸಿ ಜೀಯರ ಪಾದಗಳಿಗೆ ನಮಿಸಿ, ಕಣ್ನಸೆ, ಬಡ್ಡಗಿವಾಳ್ಯ, ಸತ್ಯಾವಾಳು, ನಂದಾದೀವಿಗೆ, ಸೋಡಗ್ರ್ಗೆ ಇತ್ಯಾದಿ ನಿತ್ಯ ದೇವಸ್ವಂ ಕಾರ್ಯಗಳಿಗಾಗಿ ಹರದರಕೇರಿಯಿಂದ ಹತ್ತು ಗದ್ಯಾಣ ಮತ್ತು ತೆಂಕಣಕೇರಿ ಯಿಂದ ಐದು ಗದ್ಯಾಣ(ಹಣ)ವನ್ನು ದಾನವಾಗಿ ನೀಡಲಾಯಿತು. ಈ ಧರ್ಮವನ್ನು ಹಾಳು ಮಾಡಿದವರು ಕುರುಕ್ಷೇತ್ರದಲ್ಲಿ, ವಾರಣಾಸಿಯಲ್ಲಿ ಸಾವಿರ ಗೋವುಗಳನ್ನು ಕೊಂದಂತಹ ಪಾಪಕ್ಕೆ ಗುರಿಯಾಗುತ್ತಾರೆ ಎಂಬ ಶಾಪಾಶಯವಿದೆ” ಎಂದು ತಿಳಿಸಿದರು.

ಸಾವಿರ ವರ್ಷದ ಇತಿಹಾಸ ಹೇಳುತ್ತಿರುವ ಶಾಸನ! :

ಶಾಸನ ದೊರೆತ ಸ್ಥಳ

ಪ್ರಸ್ತುತ ಶಾಸನಗಳು 10ನೇ ಶತಮಾನದ ಕೊನೆಯಲ್ಲಿ ಅಂಕೋಲೆಯು ನೇರವಾಗಿ ಕಲ್ಯಾಣ ಚಾಳುಕ್ಯರ ಆಡಳಿತಕ್ಕೆ ಒಳಪಟ್ಟಿತ್ತು ಎನ್ನುವ ವಿಷಯವನ್ನು ತಿಳಿಸುತ್ತವೆ. ಶಾಸನದಲ್ಲಿ ಯಾವುದೇ ಮಾಂಡಳೀಕ ಅರಸನ ಉಲ್ಲೇಖವಿಲ್ಲ. ದೇವಾಲಯವನ್ನು ಕಟ್ಟಿಸಿದ ಭೂತಯ್ಯಗಡಂಬ ತ್ರೈಳೋಕ್ಯಮಲ್ಲನ ಯಾವುದೋ ಒಬ್ಬ ಅಧಿಕಾರಿಯಾಗಿರಬೇಕು. ಈ ಶಾಸನವು ಶಕವರ್ಷ 897 ಅಂದರೆ ಕ್ರಿ.ಶ. 975 ನೇ ಇಸ್ವಿಯಲ್ಲಿ ನಿರ್ಮಾಣವಾಗಿರುವುದು ತಿಳಿಸುವುದರಿಂದ ಇಂದಿಗೆ ಸರಿಯಾಗಿ 1046 ವರ್ಷಗಳ ಹಿಂದೆ ಕದಂಬೇಶ್ವರ ದೇವಾಲಯ ಶ್ರೀಮದ್ ಕಲಿಯರಸ ಪ್ಪಿರಿಯ ಭೂತಯ್ಯಗಡಂಬನಿಂದ ನಿರ್ಮಾಣವಾಯಿತೆಂದು ಸ್ಪಷ್ಟ ವಾಗಿ ಹೇಳುತ್ತದೆ.

ಅಂತೆಯೇ ತೆಂಕಣಕೇರಿಯನ್ನು ಉಲ್ಲೇಖಿಸಿರುವುದರಿಂದ ಅದರ ಪ್ರಾಚೀನತೆಯೂ 1046 ವರ್ಷ ಗಳಷ್ಟು ಹಿಂದಕ್ಕೆ ಒಯ್ಯುತ್ತದೆ ಎಂದು ಶ್ಯಾಮಸುಂದರ ಗೌಡ ತಿಳಿಸಿದ್ದು, ಇವರು ಈ ಹಿಂದೆಯು ತಾಲೂಕಿನ ಹತ್ತಾ ರು ಕಡೆ ಶಿಲಾ ಶಾಸನ ಮತ್ತಿತರ ಪ್ರಾಚೀನ ಇತಿಹಾಸ ಸಂಶೋಧನೆಯಲ್ಲಿ ತೊಡಗಿಸಿಕೊಂಡು ಹಲವು ಮಹತ್ವದ ವಿಷಯಗಳ ಕುರಿತು ಬೆಳಕು ಚೆಲ್ಲುವ ಪ್ರಯತ್ನ ಮಾಡಿದ್ದಾರೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button