ಕೆರೆಯಲ್ಲಿ ಶಿಶುಗಳನ್ನು ಸ್ನಾನಮಾಡಿಸಿ ಬಳಿಕ ಬಾಳೆಕುಡಿಯ ಮೇಲೆ ತೇಲಿಸುವ ವಿಶಿಷ್ಟ ಸಂಪ್ರದಾಯ ಇಲ್ಲಿದೆ

ಮುಂಡಗೋಡ: ಕೆರೆಯಲ್ಲಿ ಶಿಶುಗಳನ್ನು ಸ್ನಾನಮಾಡಿಸಿ ಬಳಿಕ ಬಾಳೆಕುಡಿಯ ಮೇಲೆ ತೇಲಿಸಿ ಹರಕೆ ತೀರಿಸುವ ವಿಶಿಷ್ಟ ಸಂಪ್ರದಾಯದ ಬಾಣಂತಿ ದೇವಿ ಜಾತ್ರಾ ಮಹೋತ್ಸವ ಮೂರು ದಿನಗಳ ಕಾಲ ಮುಂಡಗೋಡಿನಲ್ಲಿ ನಡೆದು ಇಂದು ಸಂಪನ್ನಗೊಂಡಿತು.

ಮುಂಡಗೋಡ ತಾಲ್ಲೂಕಿನ ಸಾಲಗಾಂವ ಗ್ರಾಮದಲ್ಲಿ ನಡೆದ ವರ್ಷದ ಮೊದಲ ಜಾತ್ರೆ ಖ್ಯಾತಿಯ ‌ಜಾತ್ರೆಯಲ್ಲಿ ಮೊದಲ ದಿನವಾದ ಗುರುವಾರ ಪ್ರಥಮ ಪೂಜೆ ನಡೆಯಿತು. ಶುಕ್ರವಾರ ಸಾವಿರಾರು ಭಕ್ತರ ನಡುವೆ ನಡೆದ ಬಾಣಂತಿ ದೇವಿ ತೆಪ್ಪೋತ್ಸವ ಗಮನ ಸೆಳೆಯಿತು.
ಕೋವಿಡ್‌ ನಡುವೆಯೂ ಸಹಸ್ರಾರು ಸಂಖ್ಯೆಯಲ್ಲಿ ನೆರೆದಿದ್ದ ಭಕ್ತರು ಸೂರ್ಯನ‌ ಆಗಮನ ಆಗುತ್ತಿದ್ದಂತೆ ದೇವಸ್ಥಾನ ಎಡಭಾಗದ ಕೆರೆಯಲ್ಲಿ ಭಕ್ತರ ಹರ್ಷೋದ್ಘಾರಗಳು ಮುಗಿಲು ಮುಟ್ಟಿತ್ತು.

ಇನ್ನು ಇದೇ ವೇಳೆ ಮಕ್ಕಳಾಗದೆ ಹರಕೆ ಹೊತ್ತವರು ಮಕ್ಕಳಾದ ಬಳಿಕ ಶಿಶುಗಳನ್ನು ಜಾತ್ರೆಗೆ ತಂದು ಮಕ್ಕಳನ್ನು ಕೆರೆಗಳಲ್ಲಿ ಸ್ನಾನ ಮಾಡಿಸಿ ಬಳಿಕ ಬಾಳೆಕುಡಿಯಲ್ಲಿ ಮಲಗಿಸಿ ಹರಕೆ ತಿರಿಸುವ ಸಂಪ್ರದಾಯ ಇದೆ. ಇದೇ ಕಾರಣಕ್ಕೆ ಬಾಣಂತಿ ಜಾತ್ರೆ ಎಂದೇ ಖ್ಯಾತಿ ಪಡೆದಿದ್ದು, ಈ ವರ್ಷವೂ ಹಲವರು ಬಂದು ಹರಕೆ ತೀರಿಸಿದ್ದಾರೆ.

ಬಳಿಕ ಅರ್ಚಕರು ಬಾಳೆದಿಂಡಿನ ತೆಪ್ಪವನ್ನು ಪೂಜಿಸಿ, ಅದನ್ನು ಪೂರ್ವಾಭಿಮುಖವಾಗಿ ತೇಲಿಸಿ ಬಿಡುತ್ತಿದ್ದಂತೆ ಕೆರೆಯ ದಡದಲ್ಲಿದ್ದ ನೂರಾರು ಭಕ್ತರು ಉತ್ತತ್ತಿ, ಬಾಳೆ ಹಣ್ಣು ಎಸೆದು ಜೈಯಘೋಷ ಕೂಗಿದರು. ಕೊನೆಯ ದಿನವಾದ ಇಂದು ವಿಶೇಷ ಪೂಜೆಗಳು ನಡೆದು ಜಾತ್ರೆ ಸಂಪನ್ನಗೊಂಡಿತು.

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

Exit mobile version