ಕಾರವಾರ: ನಗರದ ವಿವಿಧೆಡೆ ಒಟ್ಟು 20 ಓಸಿ ಅಡ್ಡೆಗಳ ಮೇಲೆ ದಾಳಿ ನಡೆಸಿದ ಪೊಲೀಸರು 21 ಆರೋಪಿಗಳನ್ನು ಬಂಧಿಸಿರುವ ಘಟನೆ ಇಂದು ನಡೆದಿದೆ.
ಪ್ರೊಬೇಸನರಿ ಐಪಿಎಸ್ ಅಧಿಕಾರಿ ಕುಸಾಲ್ ನೇತೃದಲ್ಲಿ ಸುಮಾರು 60 ಕ್ಕೂ ಹೆಚ್ಚು ಪೊಲೀಸರು ಏಕಕಾಲದಲ್ಲಿ ನಗರದ ವಿವಿಧೆಡೆ 20 ಒಸಿ ಅಡ್ಡೆಗಳ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಓಸಿ ಚೀಟಿ, ಮೊಬೈಲ್ ಹಾಗೂ ಅಂದಾಜು 1 ಲಕ್ಷ ರೂ ನಗದು ಹಣ ಸಹಿತ 21 ಆರೋಪಿಗಳನ್ನು ವಶಕ್ಕೆ ಪಡೆದಿದ್ದು ನಗರದ ಡಿ.ಆರ್ ಗ್ರೌಂಡ್ ಗೆ ಕರೆದುಕೊಂಡು ಬಂದು ವಿಚಾರಣೆ ನಡೆಸಲಾಯಿತು.
ನಗರದಲ್ಲಿ ಓಸಿ ಹಾವಳಿ ಹೆಚ್ಚಾದ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿದ್ದ ಹಿನ್ನಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಶಿವಪ್ರಕಾಶ್ ದೇವರಾಜ್ ಮಾರ್ಗದರ್ಶನದಲ್ಲಿ ಪ್ರೊಬೇಸನರಿ ಐಪಿಎಸ್ ಅಧಿಕಾರಿ ಕುಶಾಲ್ ಹಾಗೂ ಪಿಎಸ್ಐ ಹಾಗೂ ಪೊಲೀಸ್ ಸಿಬ್ಬಂದಿ ಈ ಕಾರ್ಯಾಚರಣೆ ನಡೆಸಿದ್ದಾರೆ. ಇನ್ನು ಬಂದನಕ್ಕೋಳಗಾದ ಆರೋಪಿಗಳಿಗೆ ಎಸ್ ಪಿ ಶಿವಪ್ರಕಾಶ್ ದೇವರಾಜ್ ಖಡಕ್ ವಾರ್ನಿಂಗ್ ನೀಡಿದ್ದಾರೆ.
ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು ಜಿಲ್ಲೆಯಲ್ಲಿ ಅಕ್ರಮ ಚಟುವಟಿಕೆಗಳಿಗೆ ಆದ್ಯತೆ ಇಲ್ಲ. ಒಸಿ ಚಟುವಟಿಕೆ ಹೆಚ್ಚಾದ ಬಗ್ಗೆ ದೂರು ಕೇಳಿ ಬಂದ ಹಿನ್ನಲೆಯಲ್ಲಿ ದಾಳಿ ನಡೆಸಲಾಗಿದೆ. ಸದ್ಯ ಕಾರವಾರದಲ್ಲಿ ದಾಳಿ ನಡೆಸಿದ್ದು ಮುಂದಿನ ದಿನದಲ್ಲಿ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ದಾಳಿ ನಡೆಸಲಾಗುವುದು. ಈ ಬಗ್ಗೆ ಎಲ್ಲಾ ಪೊಲೀಸ್ ಠಾಣೆಗಳಿಗೂ ಸೂಚನೆ ಕೊಡಲಾಗುವುದು ಎಂದು ತಿಳಿದಿದ್ದಾರೆ.
ವಿಸ್ಮಯ ನ್ಯೂಸ್ ಕಾರವಾರ