Follow Us On

WhatsApp Group
Big News
Trending

ಸಾಹಿತ್ಯ ಸಂಸ್ಕೃತಿಗಳ ಮಹಾಮನೆ ಕುಪ್ಪಳ್ಳಿಯ ಈ ಕವಿಮನೆ

ಚಿತ್ರ ಲೇಖನ- ಉಮೇಶ ಮುಂಡಳ್ಳಿ ಭಟ್ಕಳ

ಷ್ಟುಎಷ್ಟು ಮಾನಸಿಕ ಒತ್ತಡವಿರಲಿ  ದೈಹಿಕ ಆಯಾಸವಿರಲಿ ಕೆಲಸದ ಜಂಜಾಟವಿರಲಿ ಮನೆಯೊಳಗಿನ ತಾಪತ್ರಯವಿರಲಿ ನಿಸರ್ಗದ ಮಡಿಲಲ್ಲಿ ಒಂದಿಷ್ಟು ಸಮಯ ಕಳೆದರೂ ಎಂತಹ ಒತ್ತಡಗಳನ್ನೂ ಮರೆತು ನಗುಬಹುದು ನಾವು ಪ್ರಕೃತಿಯ ಜೊತೆ ಬೆರೆತು. ಈ ಮಾತು ಅಕ್ಷರಶಃ ಸತ್ಯ ಎನ್ನುವುದು ನನ್ನ ಅನುಭವ. ಹೌದು ಸದಾ ಬೇರೆ ಬೇರೆ ಯೋಜನೆಗಳ ಸಾಮಾಜಿಕ ಪರಿಶೋಧನೆ ಕಾಮಗಾರಿ ಬೇಟಿ ವರದಿ ತಯಾರಿಕೆ ಸಭೆ ಹೀಗೆ ಒಂದಿಲ್ಲ ಒಂದು ಒತ್ತಡದ ನಡುವಲ್ಲಿಯೂ ಆಗಾಗ ದೊರಕುವ ರಜಾದಿನಗಳನ್ನು ವ್ಯರ್ಥ ವಾಗಿ ಕಳೆಯದ ನಾನು ಪೆಬ್ರವರಿ ಎರಡನೇ ಶನಿವಾರ ಹಾಗೂ ರವಿವಾರವನ್ನು ಒಂದು ಸುಗಮ ಸಂಗೀತ ಗಾಯನ ಕಮ್ಮಟಕ್ಕಾಗಿ ನಿಗದಿಯಾಗಿಸಿದೆ.

ಈ ಕಮ್ಮಟ ಕುಪ್ಪಳ್ಳಿಯಲ್ಲಿ ನಡೆಯುವುದು ಎಂದು ತಿಳಿದದ್ದೆ  ಹಿರಿಯಗಾಯಕರಾದ  ನಗರ ಶ್ರೀನಿವಾಸ ಉಡುಪ ಅವರಿಗೆ ನಾನು ಕಮ್ಮಟಕ್ಕೆ ಶಿಬಿರಾರ್ಥಿಯಾಗಿ ಬರುವುದಾಗಿ ಖಾತ್ರಿ ಮಾಡಿಕೊಂಡೆ ಜೊತೆಗೆ ಹಲವು ಯೋಜನೆ ಹಾಕಿಕೊಂಡು. ಈ ಮೊದಲು ಏಳು ವರ್ಷಗಳ ಹಿಂದೊಮ್ಮೆ ಗಾಂಧಿ ಅಧ್ಯಯನ ಶಿಬಿರಕ್ಕೆ ಕುಪ್ಪಳ್ಳಿಗೆ ಹೋಗಿದ್ದ ನೆನಪು ಹಸಿರಾಗಿಸುತ್ತಲೇ ಕುಪ್ಪಳ್ಳಿಗೆ ಹೊರಟೆ. ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ ಕುಪ್ಪಳ್ಳಿ ,ಜಿಎಸ್ಎಸ್ ಪ್ರತಿಷ್ಠಾನ ಬೆಂಗಳೂರು ಹಾಗೂ ಸುಗಮಸಂಗೀತ ಪರಿಷತ್ ಆಯೋಜಿಸಿದ ಸುಗಮಸಂಗೀತ ಕಮ್ಮಟದಲ್ಲಿ ಶಿಬಿರಾರ್ಥಿಯಾದೆ.

ನಾಡಿನ ಹಿರಿಯ ಸುಗಮ ಸಂಗೀತ ಗಾಯಕರು ಸಂಗೀತ ನಿರ್ದೇಶಕರುಗಳಾದ ಬಿ.ವಿ.ಶ್ರೀನಿವಾಸ, ವೈ ಕೆ ಮುದ್ದುಕೃಷ್ಣ, ನಗರ ಶ್ರೀನಿವಾಸ ಉಡುಪ,ಕಿಕ್ಕೇರಿ ಕೃಷ್ಣಮೂರ್ತಿ,ಸೀಮಾ ರೈಕರ್ ಇವರುಗಳ ಪ್ರೀತಿಯಲ್ಲಿ ಸಾಮೂಹಿಕ ವಾಗಿ ಅನೇಕ ಗೀತೆಗಳ ಕಲಿಕೆಯಾಯಿತು.ಆದರೆ  ಕುವೆಂಪು ಭಾವಗೀತೆ ಅರಿಯಲು ಬಂದ ನನಗೆ ಇಲ್ಲೊಂದು ಪ್ರಾಕೃತಿಕ ಸ್ವರ್ಗದ ಅನಾವರಣವಾಯಿತು. ಇಲ್ಲಿ ನಾ ಕಂಡ ಕುಪ್ಪಳ್ಳಿ ,ಕವಿಮನೆ ಕುವೆಂಪರವರು ಓಡಾಡಿದ ಕವಿಶೈಲ ಸಮೀಪದ ಕೆಲವು ಸುಂದರ ತಾಣಗಳ ಬಗ್ಗೆ ನಿಮ್ಮೊಂದಿಗೆ ಹಂಚಿಕೊಳ್ಳುವ ಪುಟ್ಟ ಪ್ರಯತ್ನವಿದು.

ನಮ್ಮ ಸುತ್ತಮುತ್ತಲಿನಲ್ಲೇ ಅದೆಷ್ಟೋ  ಅದ್ಭುತ ಕಲಾಕೃತಿಯನ್ನು ಪ್ರಕೃತಿಯೇ ನಿರ್ಮಿಸಿರುತ್ತದೆ. ಮಲೆನಾಡು ಎಂದರೆ ಕೇಳುವುದೇ ಬೇಡ, ಇದೊಂದು ಪ್ರಕೃತಿ ಸೌಂದರ್ಯದ ಕಣಜದಂತೆ. ಎತ್ತ ನೋಡಿದರೂ ದಟ್ಟಕಾಡು, ಸುತ್ತಲೂ ಹಸಿರು ತೋಟ, ಹೊಲ, ಗದ್ದೆಗಳು, ನದಿ ಹಳ್ಳ ಸಣ್ಣ-ಪುಟ್ಟ ತೊರೆ, ಜಲಪಾತಗಳು.ಈ ಎಲ್ಲ ಸಾಧ್ಯತೆಗಳನ್ನೂ ಒಳಗೊಂಡು ಮೈಮನಗಳಿಗೆ ಮುದ ನೀಡುವ ಕರ್ನಾಟಕದ ಒಂದು ಸುಂದರ ತಾಣ ಕುಪ್ಪಳ್ಳಿ. ಇದು ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನಲ್ಲಿರುವ ಒಂದು ಹಳ್ಳಿ. ಎಲ್ಲರ ಮೆಚ್ಚಿನ ವಿಶ್ವಮಾನವ ಕವಿ ಕುವೆಂಪು ಅವರು ಜನಿಸಿದ ಊರು.   ಮಲೆನಾಡಿನ ವಾಸ್ತುಶಿಲ್ಪಕ್ಕೆ ಉದಾಹರಣೆಯಾಗಿರುವ ಕವಿಮನೆ ಇಂದಿಗೂ ಎಳ್ಳಷ್ಟು ಕುಂದು ಬರದೆ ಕಣ್ಮನ ಸೆಳೆಯುತ್ತಿದೆ. ಮನೆಯ ಮುಂದೆ ಅಚ್ಚ ಹಸಿರಿನ  ಹೂದೋಟ ಹುಲ್ಲುಹಾಸು ಇನ್ನಷ್ಟು ಈ ಮನೆಗೆ ಮೆರಗು ನೀಡುತ್ತಿದೆ. 

ಮನೆಯ ಒಳಗಡೆ ಕಾಲಿಡುತ್ತಿದ್ದಂತೆ  ಸುತ್ತಲೂ  ಚೌಕಿಗಳುಳ್ಳ ಮೂರು ಅಂತಸ್ತಿನ ಹಿರಿದಾದ  ಮನೆಯ ಒಳಾಂಗಣದ ದರ್ಶನವಾಗುತ್ತದೆ.  ಅಂಗಳದ ನಡುವಿನಲ್ಲಿರುವ  ತುಳಸಿ ಕಟ್ಟೆ ಆಧ್ಯಾತ್ಮದ ಒಳ ಸುಳಿವನ್ನಿತ್ತು ಮನಸ್ಸಿಗೆ ಆನಂದ ನೀಡುತ್ತದೆ.  ಈ ಮನೆಯ ಒಳನಿಂತು ಸುಗಮ ಸಂಗೀತದ ಹಿರಿಯ ಗಾಯಕರುಗಳ ಮಾರ್ಗದರ್ಶನಲ್ಲಿ ಕುವೆಂಪು ಗೀತೆಗಳನ್ನು ಹಾಡುವ ಭಾಗ್ಯ ನಮಗೆ ಒದಗಿ ಬಂದಿದ್ದು ಒಂದು ಸುಯೋಗ.ಮನೆ ಒಳಗಡೆ ಸುತ್ತುತ್ತಾ ಹೋದಂತೆ   ಕವಿಮನೆಯವರು ಬಳಸುತ್ತಿದ್ದ ದೊಡ್ಡ ಕಲಬಿಗಳು (ಅಕ್ಕಿ ಸಂಗ್ರಹಿಸುವ ಸಾಧನ), ಕವಿ ಮದುವೆಯಾದ ಮಂಟಪ, ದಂಡಿಗೆ, ಕವಿಮನೆಯ ಹಳೆಯಬಾಗಿಲು ಮುಂತಾದ ದೊಡ್ಡ ವಸ್ತುಗಳನ್ನು ಇಡಲಾಗಿದೆ.  ಹೊರಗಡೆ ಕವಿಯ ಅಜ್ಜನವರು ಅಭ್ಯಂಜನ ಮಾಡಿದಂಥ ಮಲೆನಾಡ ಬಚ್ಚಲು ಮನೆಯ ಮಾದರಿ ನೋಡಬಹುದು.ಮನೆಯ  ಮೇಲ್ಛಾವಣಿಗೆ ಮರದ ಕೆತ್ತನೆಯಿಂದ ಕೂಡಿದ ವಿಶಿಷ್ಟವಾದ ಪಕಾಸಿಗಳನ್ನು ,ಮನೆಯ ಹೊರಗೆ ಮತ್ತು ಒಳಗೆ  ದೊಡ್ಡ ದೊಡ್ಡ ಮರದದಿಂದ ಕೆತ್ತಲಾದ ನೂರಾರು ಕಲಾತ್ಮಕ ಕಂಬಗಳನ್ನು  ಮನೆಯ ತುಂಬಾ ನೋಡಬಹುದು.  ತುಳಸಿಕಟ್ಟೆಯ ಎದುರಿನ ವಿಶಾಲ ಜಗುಲಿಯ ಮೇಲೆ ಕುವೆಂಪುರವರ ಅರ್ಧಾಕೃತಿಯ ಪ್ರತಿಮೆ ಇದೆ. 

ಹೆಬ್ಬಾಗಿಲು ದಾಟಿ ಒಳನಡೆದಂತೆ ನಡುಮನೆ, ಅದರಾಚೆ ಒಂದು ಕೋಣೆ. ಅಲ್ಲಿ ದಿನ ನಿತ್ಯ ಬಳಸಲಾಗುತ್ತಿದ್ದ ಅನೇಕ ವಸ್ತುಗಳನ್ನು ಜೋಡಿಸಿಡಲಾಗಿದೆ. ಇನ್ನೊಂದು ಕೋಣೆಯಲ್ಲಿ ತಾಯಿಯ ಹಾಸಿಗೆ ಮಗುವಿನ ತೊಟ್ಟಿಲುಗಳನ್ನು ಜೋಡಿಸಿಟ್ಟಿದ್ದಾರೆ.   ಕವಿ ಕುವೆಂಪುರವರ ಕುಟುಂಬದ ಸದಸ್ಯರ ಮತ್ತು ಅವರ ಹತ್ತಿರದ ಬಂಧುಗಳ ಅನೇಕ ಛಾಯಾಚಿತ್ರಗಳನ್ನು ಗೋಡೆಗಳ ಮೇಲೆ ಪ್ರದರ್ಶಿಸಲಾಗಿದೆ. ಒಳನಡೆದರೆ ಅಡುಗೆಮನೆ, ಒಲೆ, ಹೊಗೆ ನಳಿಕೆ,  ಕವಿಮನೆಯಲ್ಲಿ ಬಳಸುತ್ತಿದ್ದ ತರತರದ ಪಾತ್ರೆಗಳು, ಮಡಿಕೆ, ಮಜ್ಜಿಗೆ ಕಡಗೋಲು , ಅನ್ನ ಬಸಿಯುವ ಮರಗಿ,ತಂಬಿಗೆ ಪಾತ್ರೆಗಳನ್ನು ಇಡುವ ಸಿಬ್ಬಲು  ಹಲವಾರು ಸಲಕರಣೆಗಳನ್ನು ನೋಡಬಹುದು.

ಇಲ್ಲಿಂದಲೇ  ಮರದ ಏಣಿ ಏರಿ ಮೇಲಕ್ಕೆ ಹೋದರೆ ಅಲ್ಲಿಯೂ  ಹಲವು ಅಪರೂಪದ ವಸ್ತುಗಳ ಜೋಡಣೆ. ಗೋಡೆಗಳ ಮೇಲೆ ಕವಿಶೈಲದ, ಕುಪ್ಪಳ್ಳಿ ಸುತ್ತಲ ಪ್ರಕೃತಿ ಚಿತ್ರಗಳ ಪ್ರದರ್ಶನ.  ಮತ್ತೊಂದು ಕೋಣೆಯಲ್ಲಿ ಗಾಜಿನ ಪೆಟ್ಟಿಗೆಗಳಲ್ಲಿ ಕವಿ ಬಳಸುತ್ತಿದ್ದ ಅನೇಕ ವಸ್ತುಗಳು   ಕನ್ನಡಕ, ಊರುಗೋಲು, ಚಪ್ಪಲಿ ಪೆನ್ನು, ಬಟ್ಟೆ, ಅವರ ತಲೆಗೂದಲನ್ನೂ ಸಹ  ಸಂಗ್ರಹಿಸಿ ಇಟ್ಟಿರುವುದನ್ನು ಕಾಣಬಹುದು. ಕವಿ ಪಡೆದ ಪ್ರತಿಷ್ಠಿತ ಪ್ರಶಸ್ತಿ ಫಲಕಗಳ ಜೊತೆಗೆ  ಅನೇಕ ಪ್ರಶಸ್ತಿ ಪತ್ರಗಳು, ಪಲಕಗಳು, ಸ್ಮರಣಿಕೆಗಳು ಪೂಜಾ ಸಾಮಾಗ್ರಿಗಳು ಇವನ್ನೆಲ್ಲ ಸುರಕ್ಷಿತವಾಗಿ ಇಟ್ಟಿರುವುದನ್ನು ಕಾಣಬಹುದು. ಮತ್ತೊಂದು ಮಾಳಿಗೆಗೆ  ಮೆಟ್ಟಿಲೇರಿ ಬಂದರೆ ಅಲ್ಲಿಯೂ ಗಾಜಿನ ಪೆಟ್ಟಿಗೆಗಳೊಳಗೆ ಕುವೆಂಪು ಅವರ ಮೊದಲ ಸಂಕಲನ” ಕೊಳಲು ” ದಿಂದ ಹಿಡಿದು ಕೊನೆಯ ಗಳಿಗೆಯವರೆಗೂ ಬರೆದ ಎಲ್ಲಾ ಕೃತಿಗಳನ್ನು ಜೊತೆಗೆ ಕವಿಯ ಬಗ್ಗೆ ಇತರ ಲೇಖಕರು ಬರೆದ ಸಾಹಿತ್ಯ ಕೃತಿಗಳನ್ನು ಪ್ರದರ್ಶಿಸಲಾಗಿದೆ.

ಸುತ್ತ ಗೋಡೆಗಳಲ್ಲಿ ಕವಿ ಅನೇಕ ಪ್ರಶಸ್ತಿಗಳನ್ನು ಪಡೆದ, ವಿವಿಧ ಗಣ್ಯರು ಅವುಗಳನ್ನು ನೀಡುತ್ತಿರುವ ಸಂದರ್ಭದ ಛಾಯಾಚಿತ್ರಗಳನ್ನು ಇಡಲಾಗಿದೆ. ಜೊತೆಗೆ ಕವಿಯ ಮತ್ತು ಅವರ ಒಡನಾಡಿಗಳ ಸ್ಮರಣೀಯ ಛಾಯಾಚಿತ್ರಗಳನ್ನು ಪ್ರದರ್ಶಿಸಲಾಗಿದೆ. ಇಡೀ ಮನೆಯನ್ನು ನಾವು ಸುತ್ತುವಾಗ  ಗೋಡೆಗಳಿಗೆ ಲಗತ್ತಿಸಿರುವ ಕವಿಯ ಅಪರೂಪದ ಮಹತ್ವದ ಸಂದೇಶಗಳನ್ನು ಸಾರುವ ಸೂಕ್ತಿಗಳನ್ನು ನೋಡುತ್ತೇವೆ. ಮೆಲುವಾದ ಧ್ವನಿಯಲ್ಲಿ ಕುವೆಂಪು ಕವಿತೆಗಳ ಸುಮಧುರ ಸಂಗೀತ ನಮ್ಮ ಮನಸ್ಸನ್ನು ಆಹ್ಲಾಧಕರಗೊಳಿಸುತ್ತದೆ.
ಕವಿಮನೆಯ ಹೊರಗೆ ಒಂದು ಬದಿಯಲ್ಲಿ ಕವಿಮನೆಯಲ್ಲಿ ಬಳಸುತ್ತಿದ್ದ ಕೃಷಿಗೆ ಸಂಬಂಧಿಸಿದ ನೇಗಿಲು, ನೊಗ. ಗಾಡಿ, ಹಾರೆ  ಕೊರಡು, ಕುಂಟೆ,  ಮೊದಲಾದ  ವಸ್ತುಗಳ ಪುಟ್ಟದೊಂದು ಸಂಗ್ರಹಾಲಯವಿದೆ.  ಅನೇಕ ಜಾನಪದೀಯ ಸಾಂಸ್ಕೃತಿಕ ವೈಶಿಷ್ಠತೆಯಿಂದ ಕೂಡಿದ ಕವಿಮನೆ ಇಂದು ಹಲವು ಸಾಹಿತ್ಯಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ತಾಣವಾಗಿದ್ದು ಒಂದು ಪ್ರವಾಸಿ ಸ್ಥಳವಾಗಿಯೂ ರೂಪುಗೊಂಡಿರುವುದು ಹೆಮ್ಮೆಯ ಸಂಗತಿ.

ಕವಿಶೈಲ :ಕವಿಶೈಲಕ್ಕೆ ಎರಡು ದಾರಿ ಇದೆ. ಕವಿ ಮನೆಯ ಎಡಭಾಗದಿಂದ ಒಂದು ಕಾಲುಗಂಟೆನಡೆದರೂ ಸಾಕು ನಾವು ಕವಿಶೈಲ ತಲುಪಬಹುದು. ತೇಜಸ್ವಿಯವರ ಸ್ಮಾರಕದ ಎದುರಿನಿಂದಲೂ ವಾಹನದ ಮೂಲಕವೂ ಕವಿಶೈಲ ತಲುಪಬಹುದು.ಬೆಟ್ಟಕ್ಕೆ ಹೋಗುವ ದಾರಿಯುದ್ದಕ್ಕೂ ಅಲ್ಲಲ್ಲಿ ಕಲ್ಲು ಮಂಟಪಗಳಿವೆ. ಮೌನವಾಗಿ ನಡೆದರಂತೂ ಹಕ್ಕಿಗಳ ಇಂಪಾದ ಸ್ವರಗಳು ಮುದನೀಡುತ್ತವೆ. ಗುಡ್ಡವನ್ನು ತಲುಪುತ್ತಿದ್ದಂತೆ ರಾಷ್ಟ್ರಕವಿ ಸಮಾಧಿ ಕಾಣಸಿಗುತ್ತದೆ. ಈ ತಾಣದ ಸುತ್ತಲೂ ಹಸಿರು ಹಾಸನ್ನು ಬೆಳೆಸಲಾಗಿದೆ. ಇಲ್ಲಿ ದೊಡ್ಡ ದೊಡ್ಡ ಬ್ರಹತ್ ಬಂಡೆಗಳನ್ನು  ವಿಶಿಷ್ಟ ವಿನ್ಯಾಸದಲ್ಲಿ ಜೋಡಿಸಿ ನಿಲ್ಲಿಸಿರುವ ಶಿಲಾಸ್ಮಾರಕಗಳಿವೆ.  ಈ ಪರಿಸರವನ್ನು ಇವು ಇನ್ನಷ್ಟು  ಕಲಾತ್ಮಕಗೊಳಿಸಿವೆ. ಕಲಾವಿದ ಕೆ.ಟಿ.ಶಿವಪ್ರಸಾದ್ ಅವರ ಕಲ್ಪನೆ ಇಲ್ಲಿ ಜೀವ ತಳೆದಿದೆ.

ಸ್ಮಾರಕ ನೊಡಿ ಮುಂದೆ ನಡೆದರೆ ಗುಡ್ಡದ ಮೇಲೆ  ಚಿಕ್ಕದೊಂದು ಹಾಸುಬಂಡೆ. ಅದರ ಮೇಲೆ ಟಿ.ಎಸ್.ವಿ, ಬಿ.ಎಮ್.ಶ್ರಿ , ಕುವೆಂಪು, ಪೂ.ಚಂ.ತೆ ಎಂಬ ಅಕ್ಷರಗಳು ಕೆತ್ತಲ್ಪಟ್ಟಿವೆ. ಆ ಮಹನೀಯರೆಲ್ಲ ಇಲ್ಲಿ ಬಂದಿದ್ದಕ್ಕೆ ಸಾಕ್ಷಿಯಾಗಿದೆ ಈ ಬರಹ. ಸೂರ್ಯೋದಯಕ್ಕೂ ಮುನ್ನ ಇಲ್ಲಿಗೆ ಬಂದರೆ ಈ ಜಗದ ಅದ್ಬುತ ಸೌಂದರ್ಯವನ್ನು ಕಾಣಬಹುದು. ಈ ತಾಣದಲ್ಲಿಯೇ ಕುವೆಂಪುರವರು ” ಆನಂದಮಯ ಈ ಜಗಹೃದಯ” ಅದ್ಬುತ ಗೀತೆಯನ್ನು ಬರೆದಿದ್ದರು ಎಂದು ಹೇಳುತ್ತಾರೆ. ಇಲ್ಲಿ ನಿಂತು ಪೂರ್ವ ದಿಕ್ಕಿನಲ್ಲಿ  ವೀಕ್ಷಿಸಿದರೆ ಗುಡ್ಡಗಳ ಸಾಲು ಸಾಲು, ಹಸಿರುವನರಾಸಿ, ವಿಸ್ತಾರ ನೀಲಾಕಾಶ,  ಮೈ ಮನ ತಣಿಸುವಂತ ರಮಣೀಯ ದೃಶ್ಯ ಕಾಣುತ್ತದೆ. ಕವಿ ಇಲ್ಲಿ ಕುಳಿತು ಅನೇಕ ಕವಿತೆಗಳನ್ನು ಬರೆದಿದ್ದರು.ಈ ನೆಲ ಅವರ ಸ್ಫೂರ್ತಿ ತಾಣವಾಗಿತ್ತು. ಇದಕ್ಕೆ ಅವರೇ ಕೊಟ್ಟ ಹೆಸರು ಕವಿಶೈಲ. ಇಲ್ಲಿಂದ ಸೂರ್ಯಾಸ್ತದ ಸೊಬಗನ್ನು ಮನಸ್ಸೋ ಇಚ್ಛೆ‌ ಸವಿಯಬಹುದು. ದೂರದ ಕುಂದಾದ್ರಿ, ಕೊಡಚಾದ್ರಿ ಬೆಟ್ಡಗಳನ್ನೂ ಸಹ ಇಲ್ಲಿಂದ ಕಾಣಬಹುದಾಗಿದೆ.

ತೇಜಸ್ವಿ ಸ್ಮಾರಕ : ಬಸ್ಸಿನಿಂದ ಇಳಿದು ಕವಿಮನೆಯ ಕಡೆಗೆ ನಡೆದು ಬರುವಾಗ ಒಂದು ಕಿ.ಮಿ.ನಡೆದದ್ದೆ ನಮಗೆ ಮೊದಲು ಕಾಣುವುದೇ ತೇಜಸ್ವಿಯವರ ಸ್ಮಾರಕ.ಇದು  ಕವಿಶೈಲದ ಬುಡದಲ್ಲಿಯೇ ಇದೆ. ಕವಿಪುತ್ರ ಪೂರ್ಣಚಂದ್ರ ತೇಜಸ್ವಿಯವರ  ಅಂತ್ಯ ಸಂಸ್ಕಾರ ಮಾಡಿದ ಈ ಸ್ಥಳದಲ್ಲಿ ಕಲಾವಿದ ಕೆ.ಟಿ.ಶಿವಪ್ರಸಾದರ ಕಲ್ಪನೆ ಕಲಾಕೃತಿಯಾಗಿ ಅರಳಿನಿಂತಿದೆ.

ಶತಮಾನೋತ್ಸವ ಭವನ (ಕುವೆಂಪು ಸ್ಮಾರಕ ಭವನ):
ಕವಿಮನೆಗೆ ಒಂದು ಕಿ.ಮೀ. ಅಂತರದಲ್ಲಿ ಕುವೆಂಪು ಸ್ಮಾರಕಭವನವಿದೆ. ಮಲೆನಾಡ ಸಾಂಪ್ರದಾಯಿಕ ಶೈಲಿಯಲ್ಲಿ ನಿರ್ಮಿತವಾಗಿರುವ ಕಟ್ಟಡವೇ ಈ  ಶತಮಾನೋತ್ಸವ ಭವನ. ಕವಿಯ ಜನ್ಮಶತಾಬ್ದಿಯ ಸ್ಮಾರಕವಾಗಿ ಈ ಕಟ್ಟಡವನ್ನು ಕಟ್ಟಲಾಗಿದೆ. ಬಾಗಿಲಲ್ಲಿ ಓ ನನ್ನ ಚೇತನಾ…ಆಗು ನೀ ಅನಿಕೇತನ’ ಸಾಲನ್ನು ಬರೆಯಲಾಗಿದೆ.   ಭವನದಲ್ಲಿ ಕುವೆಂಪುರವರ ಪತ್ನಿ ಹೆಸರಿನಲ್ಲಿ  ಹೇಮಾಂಗಣವಿದೆ. ಹಂಪಿ ಕನ್ನಡ ವಿ.ವಿ.ಯ ಅಧ್ಯಯನ ಕೇಂದ್ರ ಇಲ್ಲಿ ಕೆಲಸ ಮಾಡುತ್ತಿದೆ.  ಸುಮಾರು ಐವತ್ತು ಜನರಿಗೆ ಉಳಿಯಬಲ್ಲ ವಸತಿ ಸೌಕರ್ಯ ಇಲ್ಲಿದೆ. ನಮಗೆ ಮೂರು ದಿನಗಳ ಕಾಲ ಆಧರ ಆತಿಥ್ಯ ನೀಡಿದ್ದು ಇದೇ ಭವನ. ಮಹಿಳೆಯರಿಗೆ ಪ್ರತ್ಯೇಕ ವಸತಿ ಸೌಕರ್ಯ ವಿದೆ. ದೂರದಿಂದ ಬರುವವರು ಮುಂಚಿತವಾಗಿ ತಿಳಿಸಿದ್ದಲ್ಲಿ  ವಸತಿಗಾಗಿ  ಕಾದಿರಿಸುವ ಸೌಲಭ್ಯವು ಇದೆ.  ಕವಿಮನೆಯ ಎದುರು ಮಾತ್ರ ಚಹಾ ಕಾಪಿ ತಿಂಡಿಗಾಗಿ ಅಂಗಡಿ ಇದ್ದು ಉಳಿದಂತೆ ಇತರೆ ವ್ಯವಸ್ಥೆಗೆ ಕುಪ್ಪಳ್ಳಿಯಿಂದ ಹೊರಗೆ ಬರಬೇಕಾಗುತ್ತದೆ.

ಕಲಾನಿಕೇತನ :ಶತಮಾನೋತ್ಸವ ಭವನದ ಆವರಣದೊಳಗೆ ಸ್ವಲ್ಪ ಮುಂದೆ ಹೋದರೆ ಕಲಾನಿಕೇತನವಿದೆ. ಈ ಹೆಂಚಿನ ಮನೆಯಂಗಳದಲ್ಲಿ ನಿಂತು ಶಿಲ್ಪಕಲಾ ಸಾಕ್ಷಾತ್ಕಾರಗಳಾಗಿ ಕಾನೂರು ಸುಬ್ಬಮ್ಮಮತ್ತು ನಾಯಿ ಗುತ್ತಿ ಕಲಾಕೃತಿಗಳು ನಮ್ಮನ್ನು ಸ್ವಾಗತಿಸುತ್ತವೆ. ಮನೆಯ ಗೋಡೆಗಳ ಮೇಲೆ ಪೂರ್ಣಚಂದ್ರ ತೇಜಸ್ವಿಯವರು ತಮ್ಮ ಕ್ಯಾಮಾರದಲ್ಲಿ ತೆಗೆದ ಹಕ್ಕಿಚಿತ್ರಗಳನ್ನು, ಕುವೆಂಪು ಕೃತಿಗಳನ್ನಾಧರಿಸಿ ರಚಿಸಿದ ವರ್ಣಚಿತ್ರಗಳನ್ನು ಪ್ರದರ್ಶಿಸಲಾಗಿದೆ.

ನವಿಲುಕಲ್ಲು ಗುಡ್ಡ : ಕುಪ್ಪಳ್ಳಿಯಿಂದ ಸುಮಾರು ಹದಿನೈದು ಕಿ.ಮಿ.ದೂರದಲ್ಲಿದೆ ಈ ನವಿಲುಕಲ್ಲು ಗುಡ್ಡ. ಈ ನವಿಲುಕಲ್ಲು ಗುಡ್ಡಕ್ಕೆ ನಾವು ಹೊರಟ ಸಂದರ್ಭ ಹೇಳಲೇ ಬೇಕು. ನಸುಕಿನ ನಾಲ್ಕು ಗಂಟೆಗೆ ಎದ್ದು ನಾವು ೧೨ ಮಂದಿ ಸ್ನೇಹಿತರು ಈ ಗುಡ್ಡಕ್ಕೆ ಹೊರಟೆವು. ದಾರಿಯ ಅರಿವಿಲ್ಲ ಕಗ್ಗತ್ತಲು, ಇಂತಹ ವೇಳೆಯಲ್ಲಿ ನಮಗೆ ದಾರಿದೀಪವಾದವರು ಕವಿಮನೆಯ ಸಹಾಯಕ ಸುರೇಶಣ್ಣ. ಸುರೇಶಣ್ಣ ಕರೆದೊಯ್ದ ದಾರಿಯಲ್ಲಿ ನಾವು ನಡೆದೆವು. ಮೈ ಕೊರೆವ ಚಳಿ ಮುತ್ತಿಡುವ ಮಂಜಿನ ಹನಿ. ಹೆಸರೇ ಹೇಳುವಂತೆ ಗುಡ್ಡದ ತುಂಬಾ ಸುತ್ತಲೂ ನವಿಲಿನಂತೆ ಅಚ್ಚ ಹಸುರಿನ ಕಲ್ಲು ಹಾಸು. ಹಸಿರೇ ಹಸಿರು. ಬಹುಶಃ ಸುರ್ಯೋದಯ ಸವಿಯನ್ನು ನೋಡಲು ಇದಕ್ಕಿಂದ ಬೇರೆ ಜಾಗ ಇಲ್ಲವೇನೊ ಅನ್ನುವಷ್ಟು ಸುಂದರ. ಹಾಗಾಗಿಯೇ ಈ ತಾಣದಲ್ಲಿ ಕುವೆಂಪುರವರಿಗೆ ಸೂರ್ಯೋದಯ ವರ್ಣನೆಯ ಅನೇಕ ಕವಿತೆಗಳು ಇಲ್ಲಿ ಹುಟ್ಟಿರಬೇಕು. ಸೂರ್ಯೋದಯದ ಬಗ್ಗೆ ಯಾವ ಕವಿಗೂ ನಿಲುಕದಂತ ಕವಿತೆಗಳು ಈ ಕವಿಗೆ ನಿಲುಕಿದ ಕಾರಣವೂ ಇರಬಹುದು.

ಚಿಬ್ಬಲಗುಡ್ಡ :ತೀರ್ಥಹಳ್ಳಿ ಯಿಂದ ೧೨ ಕಿ.ಮೀ. ಮತ್ತು ಕುಪ್ಪಳ್ಳಿಯಿಂದ ಸಮೀಪದಲ್ಲಿದೆ.   ತುಂಗಾನದಿಯ ತಟದ ಚಿಬ್ಬಲುಗುಡ್ಡದಲ್ಲಿ  ಉದ್ಬವ ಗಣಪತಿ ದೇವಾಲಯವಿದ್ದು ದಿನಪ್ರತಿ ನೂರಾರು ಪ್ರವಾಸಿಗರು ಈ ಸ್ಥಳಕ್ಕೆ ಬೇಟಿ ನೀಡುತ್ತಾರೆ. ಈ ತುಂಗಾ ನದಿಯಲ್ಲಿ ಅನೇಕ ದೊಡ್ಡ ದೊಡ್ಡ ಮೀನುಗಳಿವೆ. ಈ ಮೀನುಗಳಿಗೆ ಚರುಮುರಿ (ಮಂಡಕ್ಕಿ) ಅಥವಾ ಅಕ್ಕಿಯನ್ನು ಹಾಕಿದರೆ ಮಕ್ಕಳಂತೆ ನಮ್ಮೆಡೆಗೆ ಬಂದು ಮುತ್ತಿಗೆ ಹಾಕುತ್ತವೆ. ಈ ಸುಂದರ ಪ್ರಕೃತಿ ತಾಣದಲ್ಲಿ ಈ ಮೀನುಗಳ ಜೊತೆ ಕಳೆಯುವುದು ಮನಸ್ಸಿಗೆ ಇನ್ಬಷ್ಟು ಮುದ ನೀಡುತ್ತದೆ. ಕುವೆಂಪು ಈ ಸ್ಥಳದಲ್ಲಿಯೇ ದೇವರು ರುಜು ಮಾಡಿದನು ಕವಿತೆಯನ್ನು ಬರೆದಿದ್ದರು ಎಂದು ಹೇಳಲಾಗುತ್ತದೆ. ಅಂತಹ ಸುಂದರ ತಾಣ ಚಿಬ್ಬಲಗುಡ್ಡ.

ಸಾಹಿತ್ಯ ಚಟುವಟಿಕೆ ಮಾತ್ರವಲ್ಲ ಸಾಂಸ್ಕೃತಿಕ ಸಂಗೀತ ಕಲಾತ್ಮಕ ಯಾವುದೇ ರಂಗದಲ್ಲಿ ತಾವೂ ತೊಡಗಿಸಿಕೊಂಡಿದ್ದರೂ ಅಥವಾ  ಅಂತಹ ಸಾಧ್ಯತೆಗಳ ಒಳಗಿಳಿಯಲಾಗದೇ ಇದ್ದರೂ ಪಕೃತಿಯನ್ನು ಆರಾಧಿಸುವ ಆಸ್ವಾಧಿಸುವ ಸಹೃದಯರಾದ ತಾವು  ಒಮ್ಮೆಯಾದರೂ ಕುಪ್ಪಳಿಗೆ ಭೇಟಿ ನೀಡಿ ಈ ಅನುಭವವನ್ನು ಪಡೆಯಿರಿ ಎನ್ನುವುದು ಲೇಖಕನಾದ ನನ್ನ ಅಭಿಮತ.

ಶ್ರೀ ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಪೀಠ “ಪ್ರಧಾನ ತಾಂತ್ರಿಕ್ : ಶ್ರೀ ವಾಸುದೇವನ್ ಮೊಬೈಲ್ : 9964108888,,,, INDIAN FAMOUS ASTROLOGER, ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹದಲ್ಲಿ ಇದ್ದಾರೆ ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದರು ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧಮೊಬೈಲ್ : 9964108888

Back to top button