Important
Trending
ಜಲಪಾತದಲ್ಲಿ ಏಕಾಏಕಿ ನೀರಿನ ಪ್ರಮಾಣ ಹೆಚ್ಚಳ: ಅಪಾಯಕ್ಕೆ ಸಿಲುಕಿದ್ದರು 10 ಪ್ರವಾಸಿಗರು: ನೀರಿಗಿಳಿಯುವ ಮುನ್ನ ಇರಲಿ ಎಚ್ಚರ
ಯಲ್ಲಾಪುರ: ಜಲಪಾತದಲ್ಲಿ ಏಕಾಏಕಿ ನೀರಿನ ಪ್ರಮಾಣ ಹೆಚ್ಚಳವಾದ ಹಿನ್ನೆಲೆ ಜಲಪಾತಕ್ಕೆ ಬಂದ ಪ್ರವಾಸಿಗರು ಅಲ್ಲೇ ಸಿಲುಕಿಕೊಂಡಿದ್ದು, ಅದೃಷ್ಟವಶಾತ್ ಯಾವುದೇ ಅಪಾಯವಿಲ್ಲದೇ ಪಾರಾಗಿದ್ದಾರೆ. ಹೌದು, ತಾಲೂಕಿನ ಪ್ರಸಿದ್ಧ ಸಾತೊಡ್ಡಿ ಸುತ್ತಮುತ್ತಲಿನ ಭಾಗದಲ್ಲಿ ಸುರಿದ ಭಾರಿ ಮಳೆಯ ಪರಿಣಾಮ ಸಾತೊಡ್ಡಿ ಜಲಪಾತದಲ್ಲಿ ಏಕಾಏಕಿ ನೀರಿನ ಪ್ರಮಾಣ ಹೆಚ್ಚಳವಾಗಿದೆ.
ಈ ವೇಳೆ ಹುಬ್ಬಳ್ಳಿ ಕಡೆಯಿಂದ ಆಗಮಿಸಿದ್ದ 10 ಪ್ರವಾಸಿಗರು ಜಲಪಾತದಲ್ಲಿ ನೀರಿನ ಹರಿವು ಕಡಿಮೆ ಇದ್ದಿದ್ದರಿಂದ, ಬಂಡೆಗಲ್ಲುಗಳ ಮುಂದೆ ಹೋಗಿ ಇನ್ನೊಂದು ಬದಿಯ ದಡ ಸೇರಿದ್ದರು. ಮಧ್ಯಾಹ್ನ ಜಲಪಾತದ ಮೇಲ್ಭಾಗದಲ್ಲಿ ಸುರಿದ ಮಳೆಯಿಂದ ಒಮ್ಮೆಲೆ ನೀರು ಹರಿದು ಬಂದಿತ್ತು.
ಇದನ್ನು ಗಮನಿಸಿದ ಇನ್ನಿತರ ಪ್ರವಾಸಿಗರು ಅರಣ್ಯ ಸಮಿತಿಗೆ ವಿಷಯ ತಿಳಿಸಿದ್ದಾರೆ. ವಿಷಯ ತಿಳಿದು ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷರು , ಸದಸ್ಯರು ಸ್ಥಳಕ್ಕೆ ಆಗಮಿಸಿ, ಸಹಾಯಕ್ಕೆ ಧಾವಿಸಿದರು. ಬಳಿಕ ನೀರಿನ ಹರಿವು ಕಡಿಮೆಯಾದ ಪ್ರವಾಸಿಗರು ದಡ ಸೇರಿ, ನೆಮ್ಮದಿಯ ನಿಟ್ಟುಸಿರು ಬಿಟ್ಟರು.
ವಿಸ್ಮಯ ನ್ಯೂಸ್, ಯಲ್ಲಾಪುರ