Focus News
Trending

ಕೆನರಾ ಎಕ್ಸೆಲೆನ್ಸ್ ಪದವಿಪೂರ್ವ ಕಾಲೇಜಿನಲ್ಲಿ “ಎಸೆಸೆಲ್ಸಿ ಫಲಿತಾಂಶ ಸುಧಾರಣೆ”ಗೆ ಸಂಬಂಧಿಸಿದ ಪ್ರೌಢಶಾಲಾ ಮುಖ್ಯಶಿಕ್ಷಕರ ಕಾರ್ಯಾಗಾರ

ಶಿಕ್ಷಣವು ಸಮಾಜದ ಪ್ರತಿಬಿಂಬವಾಗಿದೆ. ಹಾಗಾಗಿ ಪ್ರತಿಯೊಬ್ಬ ವಿದ್ಯಾರ್ಥಿಗೂ ಉತ್ತಮ ಶಿಕ್ಷಣ ನೀಡುವ ಗುರಿಯನ್ನು ಎಲ್ಲರೂ ಹೊಂದಿರಬೇಕಿದೆ. ಕಲಿಯಿರಿ, ಕಲಿಯಿರಿ ಎಂದು ಎಷ್ಟೇ ಒತ್ತಾಯಿಸಿದರೂ ಕೂಡ ಮಕ್ಕಳು ಕಲಿಯಲಾರರು. ಕಲಿಕೆಗೆ ಪೂರಕ ವಾತಾವರಣ ಸೃಷ್ಟಿಸಿದರೆ ಮಾತ್ರ ಮಕ್ಕಳು ಚೆನ್ನಾಗಿ ಕಲಿಯಲು ಸಾಧ್ಯ ಎಂದು ಕಾರವಾರ ಜಿಲ್ಲಾ ಡಿಡಿಪಿಐ ಶ್ರೀ ಹರೀಶ್ ಗಾಂವ್ಕರ್ ಅಭಿಪ್ರಾಯಪಟ್ಟರು.     

ಉಪನಿರ್ದೇಶಕರು-ಸಾರ್ವಜನಿಕ ಶಿಕ್ಷಣ ಇಲಾಖೆ, ಕಾರವಾರ ಮತ್ತು ಸಮಗ್ರ ಶಿಕ್ಷಣ ಕರ್ನಾಟಕ, ಕಾರವಾರ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ಕುಮಟಾದ ಕೆನರಾ ಎಕ್ಸೆಲೆನ್ಸ್ ಪದವಿಪೂರ್ವ ಕಾಲೇಜಿನಲ್ಲಿ ಗುರುವಾರ ನಡೆದ ಕುಮಟಾ ತಾಲೂಕು ಮಟ್ಟದ “ಎಸೆಸೆಲ್ಸಿ ಪರೀಕ್ಷೆಯ ಫಲಿತಾಂಶ ಸುಧಾರಣೆ”ಗೆ ಸಂಬಂಧಿಸಿದ ಮುಖ್ಯಶಿಕ್ಷಕರ ಶೈಕ್ಷಣಿಕ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಶಿಕ್ಷಕರು ಮಕ್ಕಳ ಮನೋಭಾವ ಅರಿತುಕೊಳ್ಳಬೇಕಿದೆ ಮತ್ತು ಅವರಲ್ಲಿ ಆತ್ಮವಿಶ್ವಾಸವನ್ನು ಹುಟ್ಟಿಸುವ ಪ್ರಯತ್ನ ಮಾಡಬೇಕಿದೆ. ಭವಿಷ್ಯದ ಹಿತದೃಷ್ಟಿಯಿಂದ ವಿದ್ಯಾರ್ಥಿಗಳ ಪಾಲಿಗೆ ಎಸೆಸೆಲ್ಸಿಯು ಪ್ರಮುಖ ಹಂತವಾಗಿದೆ. ಹಾಗಾಗಿ ವಿದ್ಯಾರ್ಥಿಗಳು ಎಸೆಸೆಲ್ಸಿ ಉತ್ತಮ ಅಂಕದೊಂದಿಗೆ ತೇರ್ಗಡೆ ಹೊಂದುವಂತೆ ಮಾಡುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ. ಸಹಜ ಕಲಿಕೆಯ ಜೊತೆಗೆ ಸಂಪನ್ಮೂಲ ವ್ಯಕ್ತಿಗಳಿಂದಲೂ ಸಕಾಲಕ್ಕೆ ಮಾಹಿತಿ ನೀಡುವ ಮೂಲಕ ವಿದ್ಯಾರ್ಥಿಗಳಿಗೆ ಉತ್ತೇಜನ ನೀಡುವ ಅನಿವಾರ್ಯತೆ ಇದೆ ಎಂದು ಡಿಡಿಪಿಐ ಹರೀಶ್ ಗಾಂವ್ಕರ್  ಹೇಳಿದರು.     

ಇದೇ ಸಂದರ್ಭದಲ್ಲಿ ಉಪಸ್ಥತರಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ಅಧ್ಯಕ್ಷರಾದ ಡಾ|| ಜಿ ಜಿ ಹೆಗಡೆಯವರು ಮಾತನಾಡಿ, “ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳಿಗೆ ಕೇವಲ ಅಂಕ ಗಳಿಕೆಯ ಶಿಕ್ಷಣವನ್ನು ನೀಡುವುದರ ಬದಲಾಗಿ, ಮೌಲ್ಯಾಧಾರಿತ ಹಾಗೂ ವಿದ್ಯಾರ್ಥಿಗಳ ಜ್ಞಾನವನ್ನು ಓರೆಗೆ ಹಚ್ಚುವ ಶಿಕ್ಷಣದ ಅಗತ್ಯವಿದೆ, ತನ್ಮೂಲಕ ವಿದ್ಯಾರ್ಥಿಗಳು ಸಮಾಜದಲ್ಲಿ ಆದರ್ಶಪ್ರಾಯರಾಗಿ ಬದುಕುವಂತೆ ಪ್ರೇರೇಪಿಸುವ ಅತಿಮುಖ್ಯ ಜವಾಬ್ದಾರಿ ಶಿಕ್ಷಕ ವೃಂದದ ಮೇಲಿದೆ” ಎಂದರು..

ಈ ಸಂದರ್ಭದಲ್ಲಿ ಶ್ರೀ ಶ್ರೀಕಾಂತ್ ಹೆಗಡೆ, DYPC-ಸಮಗ್ರ ಶಿಕ್ಷಣ ಕರ್ನಾಟಕ, ಕಾರವಾರ, ಶ್ರೀ ರಾಜೇಂದ್ರ ಭಟ್, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಕುಮಟಾ, ತಾಲೂಕಿನ ಎಲ್ಲ ಸರ್ಕಾರಿ, ಅನುದಾನಿತ, ಅನುದಾನರಹಿತ ಪ್ರೌಢಶಾಲೆಗಳ ಮುಖ್ಯಶಿಕ್ಷಕರು ಹಾಗೂ ಕಾಲೇಜಿನ ಅಧ್ಯಾಪಕ ವೃಂದದವರು ಉಪಸ್ಥಿತರಿದ್ದರು..    ಕಾರ್ಯಕ್ರಮದ ಮೊದಲಲ್ಲಿ ಕುಮಾರಿ ಸಿಂಧು ಹೆಗಡೆ ಪ್ರಾರ್ಥಿಸಿದರು.. ಕಾಲೇಜಿನ ಸಂಸ್ಕೃತ ಉಪನ್ಯಾಸಕರಾದ ಡಾ|| ಶಂಕರ್ ಭಟ್ ಕಾರ್ಯಕ್ರಮದ ಮುಖ್ಯ ಅತಿಥಿಗಳನ್ನು ಸ್ವಾಗತಿಸಿದರು.. ವಾಣಿಜ್ಯ ಶಾಸ್ತ್ರ ಉಪನ್ಯಾಸಕಿ ಕುಮಾರಿ ನಯನ ಕಾರ್ಯಕ್ರಮವನ್ನು ನಿರೂಪಿಸಿದರು..

ಗಣಿತ ಶಾಸ್ತ್ರ ಉಪನ್ಯಾಸಕ ಶ್ರೀ ಹರ್ಷ ಉಪಾಧ್ಯಾಯ ವಂದಿಸಿದರು.. ಸಭಾ ಕಾರ್ಯಕ್ರಮದ ನಂತರ ಶ್ರೀ ರಾಜೇಂದ್ರ ಭಟ್, ಬಿಇಒ, ಕುಮಟಾ ಇವರಿಂದ 2021-22 ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಫಲಿತಾಂಶ ಸುಧಾರಣೆಗೆ ಕೈಗೊಂಡ ಕ್ರಮಗಳು ವಿವರಿಸಲ್ಪಟ್ಟವು..     ತದನಂತರದಲ್ಲಿ ಶ್ರೀ ಶ್ರೀಕಾಂತ್ ಹೆಗಡೆ, DYPC-ಸಮಗ್ರ ಶಿಕ್ಷಣ ಕರ್ನಾಟಕ, ಕಾರವಾರ ಇವರಿಂದ ಈ ಬಾರಿಯ ಎಸೆಸೆಲ್ಸಿ ರಾಜ್ಯಮಟ್ಟದ ಪೂರ್ವಸಿದ್ಧತಾ ಪರೀಕ್ಷೆಯ ಶಾಲಾವಾರು, ವಿಷಯವಾರು ಫಲಿತಾಂಶಗಳ ವಿಶ್ಲೇಷಣೆಯು ವಿವರಿಸಲ್ಪಟ್ಟವು.

Back to top button