Important
Trending

ಬೆಳಿಗ್ಗೆ ಎಲ್ಲೆಡೆ ಓಡಾಡಿಕೊಂಡಿದ್ದವ ಸಂಜೆ ವೇಳೆ ಮನೆಯ ಬೆಡ್ ರೂಮ್ ನಲ್ಲೇ ಸಾವಿಗೆ ಶರಣು

ಅಂಕೋಲಾ: ಕಳೆದ 3 ದಶಕಗಳಿಗೂ ಹೆಚ್ಚು ಕಾಲ ಜಿಸಿ ಕಾಲೇಜಿನ ಆವರಣದಲ್ಲಿರುವ ಉಪಹಾರಗೃಹ ನಡೆಸುತ್ತಾ , ಕ್ಯಾಂಟೀನ್ ಗೋಪು ಎಂದೇ ಚಿರಪರಿಚಿತರಾಗಿದ್ದ, ಗೋಪಾಲಕೃಷ್ಣ ಎಮ್ ಶೆಟ್ಟಿ (65), ಬುಧವಾರ ಸಂಜೆ ನಿಧನರಾದರು.  ವಂದಿಗೆ ವ್ಯಾಪ್ತಿಯ ಬಸ್ ಡಿಪೋ ಎದುರಿನ   ಕಾಲೋನಿಯಲ್ಲಿ ಸುಂದರ ಮನೆ ಕಟ್ಟಿಕೊಂಡು,   ಪತ್ನಿಯೊಂದಿಗೆ ಸುಖೀ ಸಂಸಾರ ನಡೆಸುತ್ತಿದ್ದ ಗೋಪು ಶೆಟ್ಟರು, ತಮ್ಮನ್ನು ಕಾಡುತ್ತಿದ್ದ ಅನಾರೋಗ್ಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪಕ್ಕದ ಜಿಲ್ಲೆಯ ಖಾಸಗೀ ಆಸ್ಪತ್ರೆಗೆ ತೆರಳಲು ಸಿದ್ಧತೆ ನಡೆಸಿ ಈ ಕುರಿತು ಬೆಂಗಳೂರಲ್ಲಿ ನೆಲಸಿ ಉತ್ತಮ ಉದ್ಯೋಗದಲ್ಲಿರುವ ಮಗನೊಂದಿಗೂ ಚರ್ಚಿಸಿದ್ದರು ಎನ್ನಲಾಗಿದೆ.

ನಂತರ  ತನ್ನ ಸಹೋದರಿಯ ಮನೆಗೂ ಹೋಗಿ ಆತ್ಮೀಯವಾಗಿ ಬೆರೆತಿದ್ದ ಅವರು, ಮನೆಗೆ ಮರಳಿ, ಸಂಜೆ ಆಗುತ್ತಿದ್ದಂತೆ ಅದಾವುದೋ ಕಾರಣದಿಂದ ಮನನೊಂದು, ಮನೆಯ ಬೆಡ್ ರೂಮಿನ ಫ್ಯಾನ್ ತೂಗು ಹಾಕುವ ಕಬ್ಬಿಣದ ಹುಕ್ಕಿಗೆ ನೈಲಾನ್ ಹಗ್ಗ ಹಾಕಿ, ತನ್ನ ಕುತ್ತಿಗೆಗೆ ಬಿಗಿದು ಕೊಂಡು, ಆತ್ಮಹತ್ಯಗೆ ಶರಣಾಗಿದ್ದಾರೆ ಎನ್ನಲಾಗಿದ್ದು, ಆತ್ಮಹತ್ಯೆಗೆ ನಿಖರ ಕಾರಣಗಳು ತಿಳಿದು ಬಂದಿಲ್ಲ.

ಪಿಎಸೈ ಪ್ರವೀಣ ಕುಮಾರ ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದರು. ಶಾಸಕಿ ರೂಪಾಲಿ ನಾಯ್ಕ ತಮ್ಮ ಕುಟುಂಬದ ಹೆಸರಿನಲ್ಲಿ ಕೊಡುಗೆ ನೀಡಿದ ಶೃದ್ಧಾಂಜಲಿ ವಾಹನದ ಮೂಲಕ ಮೃತ ದೇಹವನ್ನು,ಮರಣೋತ್ತರ ಪರೀಕ್ಷೆಗಾಗಿ ತಾಲೂಕಾ ಆಸ್ಪತ್ರೆ ಶವಾಗಾರಕ್ಕೆ ಸಾಗಿಸಲು ಸಾಮಾಜಿಕ ಕಾರ್ಯಕರ್ತರಾದ  ಕನಸಿಗದ್ದೆಯ ವಿಜಯ ಕುಮಾರ ನಾಯ್ಕ, ಅನಿಲ ಮಹಾಲೆ, ಬೊಮ್ಮಯ್ಯ ನಾಯ್ಕ, ನಾಗರಾಜ ಶೆಟ್ಟಿ ಲಕ್ಷೇಶ್ವರ  ಹಾಗೂ ಸ್ಥಳೀಯರು ಸಹಕರಿಸಿದರು.

ಜಿ ಸಿ ಕಾಲೇಜ್ ಪ್ರಾಚಾಯ೯ ಅಶೋಕ ಕುಮಾರ, ಚಿತ್ರನಟ ಹಾಗೂ ಸಾಮಾಜಿಕ ಕಾರ್ಯಕರ್ತ ವಿನಾಯಕ ನಾಯಕ ಮತ್ತಿತರರು ಬಂದು ಸಂತಾಪ ಸೂಚಿಸಿದರು. ಬೆಂಗಳೂರಿನಲ್ಲಿ ನೆಲೆಸಿರುವ ಗೋಪು  ಅವರ ಮಗ – ಮಗಳು ಬಂದ ನಂತರವಷ್ಟೇ  ಅಂತಿಮ ಕ್ರಿಯಾ ಕರ್ಮಗಳು ನಡೆಯಲಿವೆ ಎನ್ನಲಾಗಿದೆ. ಜಿ.ಸಿ. ಕಾಲೇಜ್ ಕ್ಯಾಂಟೀನ್ ನ್ನು ದೀರ್ಘಾವಧಿ ಕಾಲ ನಡೆಸಿ ತನ್ನ ಮೆಲು ಧ್ವನಿ, ಸರಳ ನಡೆ – ನುಡಿಗಳಿಂದ ಅಸಂಖ್ಯ ವಿದ್ಯಾರ್ಥಿಗಳು, ಪ್ರಾಧ್ಯಾಪಕರು ಮತ್ತು ಸಿಬ್ಬಂದಿಗಳ ಪ್ರೀತಿ ವಿಶ್ವಾಸ ಗಳಿಸಿ, ಕ್ಯಾಂಟೀನ್ ಗೋಪು ಎಂದೇ ಪರಿಚಿತರಾಗಿದ್ದ ಶೆಟ್ಟರ ಅಸಹಜ ಸಾವಿಗೆ ಹಲವರು ಸಂತಾಪ ಸೂಚಿಸಿದ್ದಾರೆ.                   

ವಿಸ್ಮಯ ನ್ಯೂಸ್ ವಿಲಾಸ  ನಾಯಕ ಅಂಕೋಲಾ

ವಿಶೇಷ ಸೂಚನೆ: ಉತ್ತರಕನ್ನಡದ ಪ್ರಮುಖ ಸುದ್ದಿ, ವಿಶೇಷ ವರದಿ, ಸಭೆ-ಸಮಾರಂಭ ಉದ್ಯೋಗದ ಮಾಹಿತಿಯನ್ನು ನಿರಂತರವಾಗಿ ಪಡೆಯಿರಿ. ವಿಸ್ಮಯ ಟಿ.ವಿಯ 8762287698 ಈ ನಂಬರ್ ಸೇವ್ ಮಾಡಿಕೊಂಡು, ನಮ್ಮ ವಾಟ್ಸಪ್ ನಂಬರ್‌ಗೆ ಹಾಯ್ ಅಂತ ಮೆಸೇಜ್ ಮಾಡಿ ವಿಸ್ಮಯ ಟಿ.ವಿ ನ್ಯೂಸ್ ಗ್ರೂಫ್ ಮೂಲಕ ಕ್ಷಣ ಕ್ಷಣದ ಸುದ್ದಿಗಳನ್ನು, ಮೊಬೈಲ್ ನಲ್ಲಿ ನೀವಿರುವ ಸ್ಥಳದಲ್ಲೇ ನಿರಂತರವಾಗಿ ಪಡೆಯಿರಿ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ., ಹಾಯ್ ಅಂತ ಮೆಸೇಜ್ ಮಾಡಿ.

Back to top button