ಅಂಕೋಲಾ ಅರ್ಬನ್ ಬ್ಯಾಂಕಿನ ಚುನಾವಣೆ : ನೂತನ ನಿರ್ದೇಶಕರಾಗಿ ಗೋಪಾಲ ಕೃಷ್ಣ ನಾಯಕ ಆಯ್ಕೆ: ತುರುಸಿನ ಸ್ಪರ್ಧೆಯಲ್ಲಿ ರಿಕ್ಷಾ ಏರಿ ಗೆದ್ದು ಬಂದ ಕಾಂತ ಮಾಸ್ತರ.
ಅಂಕೋಲಾ : ಜಿಲ್ಲೆಯ ಪ್ರತಿಷ್ಠಿತ ಹಣಕಾಸು ಸಂಸ್ಥೆಯಾಗಿ 107 ವರ್ಷಗಳ ದೀರ್ಘ ಇತಿಹಾಸ ಹೊಂದಿರುವ, ಅಂಕೋಲಾ ಅರ್ಬನ್ ಬ್ಯಾಂಕ್ ನ 1 ನಿರ್ದೇಶಕ ಸ್ಥಾನಕ್ಕೆ ಜೂನ 5ರಂದು ನಡೆದ ಚುನಾವಣೆಯಲ್ಲಿ ಗೋಪಾಲಕೃಷ್ಣ ಜಿ ನಾಯಕ ಜಯಗಳಿಸುವ ಮೂಲಕ ನೂತನ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.
ಒಟ್ಟು 13 ನಿರ್ದೇಶಕರನ್ನೊಳಗೊಂಡ ಅಂಕೋಲಾ ಅರ್ಬನ್ ಬ್ಯಾಂಕ್ ಆಡಳಿತ ಮಂಡಳಿಯಲ್ಲಿ,ಈ ಹಿಂದೆ ಹಿರಿಯ ನಿರ್ದೇಶಕರಾಗಿದ್ದ ಅಲಗೇರಿಯ ನಾರಾಯಣ ಬಿ ನಾಯಕ ಅವರ, ಅಕಾಲಿಕ ನಿಧನದಿಂದ 1 ಸ್ಥಾನ ತೆರವಾಗಿತ್ತು.ಆ ಸ್ಥಾನಕ್ಕೆ ನಡೆದ ಮರು ಚುನಾವಣೆಯಲ್ಲಿ ಲಕ್ಷ್ಮೇಶ್ವರ ನಿವಾಸಿ ,ನಿವೃತ್ತ ಶಿಕ್ಷಕ ಗೋಪಾಲಕೃಷ್ಣ ನಾಯಕ ಹಲವರ ಬೆಂಬಲ ಪಡೆದು ಚುನಾವಣೆಗೆ ಸ್ಪರ್ಧಿಸಿದ್ದರು.
ರವಿವಾರ ನಡೆದ ಚುನಾವಣೆಯಲ್ಲಿ 2000ಕ್ಕೂ ಹೆಚ್ಚು ಷೇರುದಾರ ಸದಸ್ಯರಿಗೆ ಮತದಾನದ ಹಕ್ಕಿತ್ತಾದರೂ, ಅವರಲ್ಲಿ 792 ಮತದಾರರು ಹಕ್ಕು ಚಲಾಯಿಸಿದ್ದರು, 7 ಮತಗಳು ತಿರಸ್ಕೃತಗೊಂಡರೆ, ಚಲಾವಣೆಗೊಂಡ ಮತಗಳ ಪೈಕಿ ಗೋಪಾಲಕೃಷ್ಣ ನಾಯಕ (434) ಮತಗಳನ್ನು ಪಡೆದು ತಮ್ಮ ನೇರ ಸ್ಪರ್ಧಿಯಾಗಿದ್ದ ಸಂತೋಷ ಬಂಡಿಕಟ್ಟೆ ಅವರಿಗಿಂತ 83 ಹೆಚ್ಚಿನ ಮತಗಳನ್ನು ಪಡೆದು ಆಯ್ಕೆಯಾಗಿದ್ದಾರೆ.ಬ್ಯಾಂಕಿನ ಒಟ್ಟು ಮತದಾರರು,ಚಲಾವಣೆಗೊಂಡ ಮತಗಳು,ತಿರಸ್ಕೃತ ಮತಗಳು,ಸೋಲು ಗೆಲುವಿನ ಅಂತರದ ಕುರಿತು ಸ್ಪಷ್ಟ ಮಾಹಿತಿ ಲಭ್ಯವಾಗಬೇಕಿದೆ.
ಚುನಾವಣೆಯಲ್ಲಿ ಇಬ್ಬರೇ ಸ್ಪರ್ಧಿಗಳಿರುವುದರಿಂದ ನೇರ ಹಾಗೂ ತುರುಸಿನ ಪೈಪೋಟಿ ಕಂಡುಬಂದಿತ್ತು.ಕಾಂತ ಮಾಸ್ತರ್ ಎಂದೇ ಪರಿಚಿತರಾಗಿರುವ ಗೋಪಾಲಕೃಷ್ಣ ನಾಯಕ ರಿಕ್ಷಾ ಚಿಹ್ನೆಯಡಿ ಸ್ಪರ್ಧಿಸಿ ಗೆದ್ದು ಬಂದು ಅರ್ಬನ್ ಬ್ಯಾಂಕ್ ಮೆಟ್ಟಿಲೇರುವಂತಾದೆ. ಇವರ ಎದುರಾಳಿ ಸ್ಪರ್ಧಿಯಾಗಿದ್ದ ಸಂತೋಷ ನಾಗಪ್ಪ ಬಂಡಿಕಟ್ಟೆ ಈ ಭಾಗದಲ್ಲಿ ಅಷ್ಟೇನೂ ಪರಿಚಿತ ಹೆಸರಾಗಿಲ್ಲದಿದ್ದರೂ ಐಸ್ ಕ್ರೀಮ್ ಚಿಹ್ನೆಯಡಿ ಸ್ಪರ್ಧಿಸಿ ಕೆಲವೇ ದಿನಗಳಲ್ಲಿ ,ತಮ್ಮ ಸರಳ ಸಜ್ಜನಿಕೆ ಮತ್ತು ಮೃದು ವ್ಯಕ್ತಿತ್ವದ ಮೂಲಕ ಹಲವರ ಮನಗೆದ್ದು, ಕೆಲವರಿಗೆ ಚುನಾವಣಾ ಕಾವಿನ ನಡುವೆಯೂ ಸಿಹಿ-ತಂಪಿನ ಅನುಭವ ನೀಡಿ ಕಡಿಮೆ ಅಂತರದಿಂದ ಪರಾಜಿತರಾಗಿದ್ದಾರೆ.
ಚುನಾವಣೆಯಲ್ಲಿ ಜಾತಿ ರಾಜಕಾರಣ,ಇನ್ನಿತರ ನಾನಾ ತಂತ್ರಗಾರಿಕೆಗಳು ಕಂಡುಬರುವುದು ಸಹಜವಾದರೂ ಸಹ ಬಂಡಿಕಟ್ಟೆಯವರು ಹೆಚ್ಚಿನ ಮತಗಳನ್ನು ಪಡೆಯುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾರೆ ಎನ್ನಬಹುದಾಗಿದೆ., ಈ ಮೂಲಕ ಮುಂದಿನ ಎರಡೂವರೆ ವರ್ಷಗಳ ನಂತರ ನಡೆಯಲಿರುವ ಅರ್ಬನ್ ಬ್ಯಾಂಕಿನ ಮಹಾಚುನಾವಣೆಯಲ್ಲಿ ತಾನು ಪ್ರಬಲ ಸ್ಪರ್ಧಿ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ ಎಂಬ ಮಾತು ಅಲ್ಲಲ್ಲಿ ಕೇಳಿ ಬರುತ್ತಿದೆ..
ಯಾರೇ ಅಧಿಕಾರಕ್ಕೆ ಬಂದರೂ,ಷೇರುದಾರರು ಹಾಗೂ ಗ್ರಾಹಕರ ವಿಶ್ವಾಸಕ್ಕೆ ತಕ್ಕಂತೆ ಬ್ಯಾಂಕಿನ ಸರ್ವತೋಮುಖ ಅಭಿವೃಧ್ಧಿಗೆ ಉತ್ತಮ ಆಡಳಿತ ನೀಡಬೇಕೆನ್ನುವುದು ಪ್ರಜ್ಞಾವಂತರ ಅನಿಸಿಕೆಯಾಗಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ