ಆಕಸ್ಮಿಕ ಬೆಂಕಿ ಅವಘಡ: ಸುಟ್ಟು ಕರಕಲಾದ ಪೋಟೋ ಸ್ಟುಡಿಯೋ : ಲಕ್ಷಾಂತರ ರೂ ಹಾನಿ ಅಂದಾಜು
ಸಂತೋಷ ವಾಗಿದ್ದ ಕುಟುಂಬದಲ್ಲಿ ದುಃಖದ ಕಣ್ಣೀರು
ಅಂಕೋಲಾ: ಪಟ್ಟಣದ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಕಟ್ಟಡ ಒಂದರಲ್ಲಿ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿದೆ. ಅಂಕೋಲಾ ಅರ್ಬನ್ ಬ್ಯಾಂಕ್ ಎದುರಿನ ಕಟ್ಟಡದ ಮೇಲ್ಮಹಡಿಯಲ್ಲಿ ಈ ಬೆಂಕಿ ಅವಘಡ ಸಂಭವಿಸಿದ್ದು, ಸ್ಟುಡಿಯೋ ಒಂದರ ಶೆಲ್ಟರ್ ಬಳಿಯಿಂದ ಸಣ್ಣ ಪ್ರಮಾಣದಲ್ಲಿ ಹೊಗೆ ಹೊರ ಬರುತ್ತಿರುವುದನ್ನು ಗಮನಿಸಿದ ಸ್ಥಳೀಯರು ಮತ್ತು ದಾರಿಹೋಕರು ಈ ವಿಷಯವನ್ನು ಅಗ್ನಿಶಾಮಕ ಠಾಣೆ ಹಾಗೂ ಸ್ಟುಡಿಯೋ ಮಾಲಕರಿಗೆ ಫೋನ್ ಕರೆ ಮಾಡಿ ತಿಳಿಸಿದ್ದಾರೆ. ಕೆಲ ಹೊತ್ತಿನಲ್ಲೇ ಅಗ್ನಿಶಾಮಕ ದಳದವರು ಬಂದು ಕಾರ್ಯಾಚರಣೆಗೆ ಇಳಿದಿದ್ದಾರೆ.
ಒಂದಕ್ಕೊಂದು ಹೊಂದಿಕೊಂಡ ಹತ್ತಾರು ಕಟ್ಟಡಗಳು, ಮೇಲ್ಗಡೆ ತಲುಪಲು ಇರುವ ಇಕ್ಕಟ್ಟಾದ ಮೆಟ್ಟಿಲು ದಾರಿ, ಸ್ಟುಡಿಯೋ ಒಳಗಿನ ಬೆಂಕಿಯ ತೀವೃತೆ, ಸುರಿದ ಭಾರೀ ಮಳೆ ಮತ್ತಿತರ ಕಾರಣಗಳಿಂದ ಕಾರ್ಯಾಚರಣೆಗೆ ಸ್ವಲ್ಪ ಹಿನ್ನಡೆಯಾಗಿತ್ತು ಎನ್ನಲಾಗಿದೆ. ಸ್ಟುಡಿಯೋ ಮುಂಬದಿ ದೊಡ್ಡ ಶೆಲ್ಟರ್ ಮೇಲೆತ್ತಲು ಅಗ್ನಿಶಾಮಕ ದಳದ ಸಿಬ್ಬಂದಿಗಳು ಹರಸಾಹಸ ಪಟ್ಟರು. ಈ ವೇಳೆಗಾಗಲೇ ಸ್ಟುಡಿಯೋದಲ್ಲಿದ್ದ ಪರಿಕರಗಳು, ಬಹುತೇಕ ವಸ್ತುಗಳು ಸುಟ್ಟು ಕರಕಲಾಗಿದೆ.
ಅದೇ ಕಟ್ಟಡದ ಮೇಲ್ಮಹಡಿಯಲ್ಲಿ ಅಡುಗೆ ಅನಿಲ ಸಿಲೆಂಡರ್ ಇದ್ದು, ಸ್ಥಳೀಯ ಯುವಕರು ಕಟ್ಟಡದ ತಾರಸಿ ಏರಿ, ಹೊಗೆಯಿಂದ ಉಸಿರುಗಟ್ಟುವ ಅಪಾಯಕಾರಿ ಪರಿಸ್ಥಿತಿಯ ನಡುವೆಯೂ ಧೈರ್ಯಗುಂದದೆ, ಒಳ ಹೊಕ್ಕು ಸಿಲಿಂಡರನ್ನು ಹೊರ ತಂದು ಸಂಭವನೀಯ ಭಾರೀ ಅನಾಹುತ ತಪ್ಪಿಸಿದ್ದು , ಯುವಕರ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.ಒಂದಕ್ಕೊಂದು ಹೊಂದಿಕೊಂಡಿರುವ ಇಲ್ಲಿಯ ಬೇರೆ ಬೇರೆ ಕಟ್ಟಡಗಳಲ್ಲಿ ಬಳೆ ಅಂಗಡಿ ಸೇರಿದಂತೆ ಬೇರೆ ಬೇರೆ ರೀತಿಯ ವ್ಯಾಪಾರ – ವಹಿವಾಟು, ಬ್ಯಾಂಕ್ ವ್ಯವಹಾರ, ವಸತಿ ಉದ್ದೇಶಿತ ಕಟ್ಟಡಗಳಿದ್ದು,ಅದೃಷ್ಟವಶಾತ್ ಯಾವುದೇ ಹಾನಿ ಅಥವಾ ಅಪಾಯ ಸಂಭವಿಸಿಲ್ಲ ಎಂದು ಹಲವರು ನೆಮ್ಮದಿಯ ನಿಟ್ಟುಸಿರು ಬಿಟ್ಟರು.
ತಾಲೂಕಿನ ಅಗ್ರಗೋಣ ಮೂಲದ ಸಂತೋಷ ಅಶೋಕ ಸಾಮಂತ ಎನ್ನುವವರು, ಕಳೆದ ಕೆಲವು ವರ್ಷಗಳಿಂದ ಇದೇ ಕಟ್ಟಡದಲ್ಲಿ ಬಾಡಿಗೆ ಆಧಾರದ ಮೇಲೆ ಫೋಟೋ ಸ್ಟುಡಿಯೋ ನಡೆಸುತ್ತಾ ಬಂದಿದ್ದು, ಉತ್ತಮ ವ್ಯವಹಾರ ನಡೆಸುತ್ತಾ ಜನರ ಪ್ರೀತಿ ವಿಶ್ವಾಸ ಗಳಿಸಿ, ತನ್ನ ಹೆಂಡತಿ ಮತ್ತು ಕುಟುಂಬದೊಂದಿಗೆ ನೆಮ್ಮದಿ ಬದುಕು ಕಟ್ಟಿಕೊಂಡಿದ್ದರು. ಸಂಸಾರದ ಬದುಕಿನ ಆಧಾರವಾಗಿದ್ದ ಸ್ಟುಡಿಯೋ ಸುಟ್ಟು ಕರಕಲಾಗಿದ್ದು, ಸಂತೋಷ ಕುಟುಂಬದಲ್ಲಿ ದುಃಖದ ಕಣ್ಣೀರು ಆವರಿಸಿದಂತಿದೆ. ತಾಲೂಕಾ ಪೋಟೋಗ್ರಾಫರ್ಸ್ ಯೂನಿಯನ್ ಪ್ರಮುಖರಾದ ಶ್ರೀನಿವಾಸ – ಸಿರಿ, ನಿತಿನ್ ನಾಯ್ಕ, ಅಂಕೋಲಾ ಅರ್ಬನ್ ಬ್ಯಾಂಕ್ ಅಧ್ಯಕ್ಷ ಭಾಸ್ಕರ ನಾರ್ವೇಕರ,ಸಾಮಾಜಿಕ ಕಾರ್ಯಕರ್ತ ಸಂಜಯ ಮೋದಿ ಮತ್ತಿತರ ಸ್ಥಳೀಯ ಪ್ರಮುಖರು ಹಾಗೂ ಸಂತೋಷ ಇವರ ಆತ್ಮೀಯರು, ಕುಟುಂಬದ ಹಿತೈಷಿಗಳು ಘಟನೆ ಕುರಿತು ಬೇಸರ ವ್ಯಕ್ತಪಡಿಸಿ, ನೊಂದ ಕುಟುಂಬಕ್ಕೆ ಸಾಂತ್ವನ ಹೇಳಿ ಧೈರ್ಯ ತುಂಬುವ ಪ್ರಯತ್ನ ಮಾಡಿದ್ದಾರೆ.
ಬೆಂಕಿ ಅವಘಡದಿಂದ ಸ್ಟುಡಿಯೋ ಪರಿಕರಗಳು, ಪೀಠೋಪಕರಣಗಳು ಸೇರಿ ಬಹುತೇಕ ಎಲ್ಲ ವಸ್ತುಗಳು ಸುಟ್ಟು ಕರಕಲಾಗಿದ್ದು ಲಕ್ಷಾಂತರ ರೂಪಾಯಿ ಹಾನಿ ಅಂದಾಜಿಸಲಾಗಿದೆ. ಹಾನಿಯಾದ ವಸ್ತುಗಳ ನಿಖರ ಮಾಹಿತಿ ತಿಳಿದು ಬರಬೇಕಿದೆ ವಿದ್ಯುತ್ತ್ ಶಾರ್ಟ ಸರ್ಕೀಟ್ ನಿಂದಲೇ ಈ ಬೆಂಕಿ ಅವಘಡ ಸಂಭವಿಸಿದೆಯೇ ಅಥವಾ ಆಂತರಿಕ ಇತರ ಕಾರಣಗಳಿಂದಲೋ ಎಂಬ ವಿಷಯದ ಸ್ಥಳೀಯರ ಚರ್ಚೆಗೆ ಕಾರಣವಾದಂತಿದ್ದು, ಹೆಸ್ಕಾಂ ವಿಭಾಗದ ಗಜವದನ ಮತ್ತಿತರ ಸಿಬ್ಬಂದಿಗಳು ಸ್ಥಳ ಪರಿಶೀಲಿಸಿದ್ದಾರೆ. ಘಟನೆ ಕುರಿತಂತೆ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ