ಅಂಕೋಲಾ: ಗ್ಯಾಸ್ ಟ್ಯಾಂಕರ್ ವಾಹನವೊಂದು ಕಾರಿಗೆ ಡಿಕ್ಕಿ ಪಡಿಸಿದ ಪರಿಣಾಮ 5 ಜನರು ಗಾಯಗೊಂಡ ಘಟನೆ ರಾ.ಹೆ. 66 ರ ಅಂಕೋಲಾ ತಾಲೂಕಿನ ಬೆಳಸೆ ಬಳಿ ಸಂಭವಿಸಿದೆ. ಹೊನ್ನಾವರ ತಾಲೂಕಿನ ಮಾಗೋಡ ಹಾಗೂ ಕವಲಕ್ಕಿ – ಹಡಿನಬಾಳ ಸಮೀಪದ ನಾತಗೇರಿ ನಿವಾಸಿಗಳು, ಅಂಕೋಲಾದ ಕನಸಿಗದ್ದೆಯಲ್ಲಿ ಮೃತಪಟ್ಟ ತಮ್ಮ ಕುಟುಂಬ ಸಂಬಂಧಿಯೋರ್ವರ ಅಂತಿಮ ದರ್ಶನ ಪಡೆದುಕೊಳ್ಳಲು ಕಾರಿನಲ್ಲಿ ಕುಮಟಾ ಕಡೆಯಿಂದ ಅಂಕೋಲಾ ಕಡೆ ಬರುತ್ತಿದ್ದಾಗ ದಾರಿಮಧ್ಯೆ ಬೆಳಸೆ ರೈಲ್ವೆ ಬ್ರಿಜ್ ಹತ್ತಿರ ಖಾಸಗಿ ಹೈಸ್ಕೂಲ್ ಎದುರಿನ ತಿರುವಿನ ಬಳಿ ಈ ರಸ್ತೆ ಅಪಘಾತ ಸಂಭವಿಸಿದೆ.
ಕಾರು ಚಾಲಕ ಆನಂದು ನಾಯ್ಕ, ಕಾರಿನಲ್ಲಿ ಪ್ರಮಾಣಿಸುತ್ತಿದ್ದ ಲಕ್ಷ್ಮೀ ಸುಬ್ರಾಯ ನಾಯ್ಕ, ರಾಜೇಶ ನಾಯ್ಕ, ಗಗನ ಆನಂದು ನಾಯ್ಕ ಮತ್ತು ಮನ್ವಿತ್ ಆನಂದು ನಾಯ್ಕ ಗಾಯಾಳುಗಳಾಗಿದ್ದಾರೆ. ಅಂಕೋಲಾ ಕಡೆಯಿಂದ ಮಂಗಳೂರು ಕಡೆ ಸಾಗುತ್ತಿದ್ದ ಖಾಲಿ ಗ್ಯಾಸ್ ಟ್ಯಾಂಕರ್ ವಾಹನದ ಚಾಲಕ, ಅತಿ ವೇಗ ಮತ್ತು ಅಜಾಗರೂಕತೆಯಿಂದ ಟ್ಯಾಂಕರ್ ಚಲಾಯಿಸಿ ಬೇರೊಂದು ವಾಹನ ಓವರ್ ಟೇಕ್ ಮಾಡುವ ಭರದಲ್ಲಿ ಕಾರಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದ ಎನ್ನಲಾಗಿದೆ. ಅದೃಷ್ಟವಶಾತ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದವರಿಗೆ ಚಿಕ್ಕ ಪುಟ್ಟ ಗಾಯಗಳಾಗಿದ್ದು, ಪ್ರಾಣಪಾಯದಿಂದ ಪಾರಾಗಿದ್ದಾರೆ.
ಗಾಯಾಳುಗಳನ್ನು ರಾಷ್ಟ್ರೀಯ ಹೆದ್ದಾರಿ ಸುರಕ್ಷತಾ ಅಂಬುಲೆನ್ಸ್ ವಾಹನದ ಮೂಲಕ ಅಂಕೋಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಂಕೋಲಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಕಾನೂನು ಕ್ರಮ ಮುಂದುವರೆಸಿದ್ದು, ಅಪಘಾತದ ಘಟನೆಗಳ ಕುರಿತಂತೆ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ .
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ