ಹೊನ್ನಾವರ: ನಮ್ಮ ಆಸ್ಪತ್ರೆಯಿಂದ ಮೃತ ಮೊಹಮ್ಮದ್ ಆಸಿಫ್ ಅವರಿಗೆ ಚಿಕಿತ್ಸೆ ನೀಡುವ ಸಂದರ್ಭದಲ್ಲಿ ಯಾವುದೇ ರೀತಿಯ ಲೋಪವಾಗಿಲ್ಲ,ಘಟನೆಯ ನಂತರದಲ್ಲಿನ ಬೆಳವಣಿಗೆಯಿಂದ ವೈದ್ಯರ ಮನೋಸ್ತೈರ್ಯ ಕುಗ್ಗಿಸುವ ಕೆಲಸ ಆಗಿರುವುದು ಅತ್ಯಂತ ಕಳವಳಕಾರಿ ಸಂಗತಿ ಎಂದು ಶ್ರೀದೇವಿ ಮಲ್ಟಿ ಸ್ಪೇಷಾಲಿಟಿ ಆಸ್ಪತ್ರೆಯ ಮುಖ್ಯಸ್ಥ ಚಂದ್ರಶೇಖರ್ ಶೆಟ್ಟಿ ಹೇಳಿದರು.
ಆಸ್ಪತ್ರೆಯ ಆವಾರದಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿದರು. ರೋಗಿಗೆ ಮೂತ್ರನಾಳದಲ್ಲಿ ಸಮಸ್ಯೆ ಇತ್ತು. ಸಿಟಿ ಸ್ಕ್ಯಾನ್ ಮಾಡಿದಾಗಲು ಅದು ಪತ್ತೆಯಾಗಿತ್ತು.ಮಂಗಳೂರು ಫಾದರ್ ಮುಲ್ಲಾ ಆಸ್ಪತ್ರೆಯಿಂದ ಮೂತ್ರಾಂಗಶಾಸ್ತ್ರಜ್ಞ ಡಾ.ಕಿಶನ್ ರಾಜ್ ಅವರು ಚಿಕಿತ್ಸೆ ನೀಡಿದ್ದರು. ಇಲ್ಲಿಂದ ಡಿಸ್ಚಾರ್ಜ್ ಆಗಿ ಪುನಃ ಉಸಿರಾಟದ ಸಮಸ್ಯೆಯಿಂದ ಪುನಃ ಆಸ್ಪತ್ರೆಗೆ ದಾಖಲಾಗಿದ್ದರು.ಐಸಿಯುನಲ್ಲಿ ಚಿಕಿತ್ಸೆ ನೀಡಲಾಗಿತ್ತು,ಮತ್ತೇ ಆರೋಗ್ಯದಲ್ಲಿ ವ್ಯತ್ಯಾಸ ಆಗಿದ್ದರಿಂದ ನಮ್ಮಿಂದ ನೀಡಬಹುದಾದ ಚಿಕಿತ್ಸೆ ನೀಡಿ ಮಣಿಪಾಲ ಆಸ್ಪತ್ರೆಗೆ ಕಳುಹಿಸಿದ್ದೆವು.ಆದರೆ ರೋಗಿಗೆ ಮಾರ್ಗ ಮದ್ಯೆ ಬೇರೆ ಬೇರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಕೊನೆಗೆ ಮಣಿಪಾಲಕ್ಕೆ ಕರೆದೊಯ್ದಿದ್ದಾರೆ.
ನಂತರ ರೋಗಿ ಸಾವಿನ ಸುದ್ದಿ ತಿಳಿದು ಬಂದಿದ್ದು,ರಾತ್ರಿ ಆಸ್ಪತ್ರೆ ಎದುರು ದೊಡ್ಡಮಟ್ಟದ ಗಲಾಟೆ ನಡೆಯುವ ಎಲ್ಲಾ ಸಾಧ್ಯತೆ ಇತ್ತು. ಪೊಲೀಸರು ಸಕಾಲಕ್ಕೆ ಆಗಮಿಸಿ ಸೂಕ್ತ ರಕ್ಷಣೆ ಒದಗಿಸಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಯಶಸ್ವಿಯಾಗಿದ್ದಾರೆ.ಮೊದಲೇ ಭಯದಲ್ಲಿ ಕಾರ್ಯನಿರ್ವಹಿಸುತ್ತೇವೆ.ಅಂತಹದರಲ್ಲಿ ಈ ರೀತಿಯ ಘಟನೆಗಳು ನಡೆದಾಗ ಇನ್ನಷ್ಟು ಭಯದ ವಾತಾವರಣ ಸೃಷ್ಟಿಯಾಗುತ್ತದೆ. ಮೊದಲು ಈ ವಾತಾವರಣ ಹೀಗೆ ಇಲ್ಲಾಗಿತ್ತು. ಹೊನ್ನಾವರದಲ್ಲಿ ಯಾವುದೇ ಸಣ್ಣವಿಚಾರಕ್ಕು ದೊಡ್ಡ ಗಲಾಟೆ ನಡೆಸುವುದು ರೂಡಿಯಾಗಿಬಿಟ್ಟಿದೆ.ಸಾರ್ವಜನಿಕರು ಪರಿಸ್ಥಿತಿ ಅರ್ಥೈಸಿಕೊಂಡರೆ ಮಾತ್ರ ಸಮಸ್ಯೆ ಬಗೆಹರಿದು,ಮುಂದೆ ಉತ್ತಮ ಸೇವೆ ನೀಡಲು ಸಾಧ್ಯ ಎಂದರು.
ಇAಡಿಯನ್ ಮೆಡಿಕಲ್ ಅಸೋಸಿಯೇಷನ್ ತಾಲೂಕಾ ಘಟಕದ ಅಧ್ಯಕ್ಷ ಡಾ.ವಿಶಾಲ್ ಮಾತನಾಡಿ, ಕರ್ನಾಟಕ ಸರ್ಕಾರದ 2009ರ ಆದೇಶ ಹೇಳುವುದೇನೆಂದರೆ, ಯಾವುದೇ ಆಸ್ಪತ್ರೆ ಕಟ್ಟಡದ ಅಥವಾ ಕಾರ್ಯನಿರತ ವೈದ್ಯರ ಅಥವಾ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದಂತಹ ಸಂದರ್ಭದಲ್ಲಿ ಆರೋಪಿಗಳಿಗೆ 3 ವರ್ಷದ ಜೈಲು ಶಿಕ್ಷೆ ವಿಧಿಸಲಾಗುವುದು. ಹಾಗೂ ರೂ.50000 ದಂಡ ಹೇರಲಾಗುವುದು. ಹೀಗಿದ್ದರೂ ವೈದ್ಯರು ದೌರ್ಜನಕ್ಕೆ ಒಳಗಾಗಿದ್ದಾರೆ. ನಾವೆಲ್ಲರೂ ಕೋರುತ್ತಿರುವುದು ನ್ಯಾಯಾಂಗ ತನಿಖೆಯನ್ನೇ ಹೊರತು ದಬ್ಬಾಳಿಕೆ ಅಲ್ಲ . ಈ ಒಂದು ಸಾವಿನ ತನಿಖೆಯೂ ಕೂಡ ಜಾರಿಯಲ್ಲಿದ್ದು ಶ್ರೀದೇವಿ ಆಸ್ಪತ್ರೆ ವೈದ್ಯರು ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ.
ಇಂತಹ ಹಲವಾರು ದೌರ್ಜನ್ಯಗಳಿಗೆ ಒಳಗಾಗುತ್ತಿರುವ ವೈದ್ಯರಿಗೆ ಸರ್ವೇ ಸಾಮಾನ್ಯವಾಗಿ ಅನಿಸುವುದೇನೆಂದರೆ, ಇನ್ನು ಮುಂದೆ ಯಾವುದೇ ರೋಗಿಗೆ ಚಿಕಿತ್ಸೆಯನ್ನೇ ಕೊಡಬಾರದೆಂದು. ಅದೇ ಕಾರಣದಿಂದ ಹೊಸ ವೈದ್ಯರುಗಳು ಸಣ್ಣ ಊರುಗಳಿಗೆ ಬಂದು ಜನ ಸೇವೆ ಮಾಡುವುದರ ಬದಲು ದೊಡ್ಡ ದೊಡ್ಡ ನಗರಗಳಲ್ಲೇ ಉಳಿದುಬಿಡುತ್ತಿದ್ದಾರೆ. ಹೀಗಾದರೆ ನಮ್ಮ ಜನಸಾಮಾನ್ಯರಿಗೆನೇ ತೊಂದರೆಯಾಗುವುದು. ಕೆಲವೊಂದು ಜನರ ಲಾಭಕ್ಕಾಗಿ ಇಡೀ ಸಮಾಜವೇ ಕಷ್ಟಕ್ಕೆ, ಒಳಗಾಗಬೇಕಾಗುತ್ತದೆ. ಪ್ರತಿಯೊಂದು ಕಾಯಿಲೆಯ ಚಿಕಿತ್ಸೆಗಾಗಿ ದೊಡ್ಡ ನಗರಗಳಿಗೆ ಹೋಗಬೇಕಾಗುತ್ತದೆ. ಈ ಎಲ್ಲಾ ಬೆಳವಣಿಗೆಗಳನ್ನು ವಿರೋಧಿಸುತ್ತಾ ವೈದ್ಯ ಸಮೂಹವು ಈ ಪ್ರತಿಭಟನೆಯನ್ನು ಹಮ್ಮಿಕೊಂಡಿದೆ. ಅದರ ಅಂಗವಾಗಿ ಇಂದು ಒಂದು ದಿನ ಇಡೀ ಹೊನ್ನಾವರ ತಾಲೂಕಿನ ಆಸ್ಪತ್ರೆಗಳ ಹೊರರೋಗಿ ಚಿಕಿತ್ಸೆಯ ಸೌಲಭ್ಯಗಳನ್ನು ಕಡಿತಗೊಳಿಸಲಾಗುತ್ತಿದೆ. ಎಲ್ಲಾ ತುರ್ತು ಚಿಕಿತ್ಸೆ ಸೌಲಭ್ಯಗಳು ಲಭ್ಯವಿರುತ್ತವೆ ಎಂದರು.
ಆಯುರ್ವೇದ ವೈದ್ಯರ ಸಂಘದ ಅಧ್ಯಕ್ಷ ಡಾ|| ರಂಗನಾಥ ಪೂಜಾರಿ ಮಾತನಾಡಿ, 30-40 ವರ್ಷಗಳಿಂದ ವೈದ್ಯಕೀಯ ಸೇವೆ ನೀಡುತ್ತಾ ಬಂದ ವೈದ್ಯರು ಇಂದಿಗೂ ಸೇವೆ ನೀಡುತ್ತಿದ್ದಾರೆ. ಕೆಲವೊಮ್ಮೆ ಚಿಕಿತ್ಸೆಗೆ ದೇಹ ಸ್ಪಂದಿಸಿದoತೆ ಕಾಣುತ್ತದೆ. 2-3 ದಿನಗಳ ನಂತರ ಪ್ರಯತ್ನಗಳ ನಂತರವೂ ಆತನನ್ನು ಉಳಿಸಿಕೊಳ್ಳಲು ಆಗುವುದಿಲ್ಲ. ಎಲ್ಲೋ ಒಂದು ಬಾರಿ ಇಂತಹ ಘಟನೆ ಸಂಭವಿಸಿದಾಗ ಸಾರ್ವಜನಿಕರು ಅದನ್ನು ಅರಿಯಬೇಕಿದೆ. ಇತ್ತೀಚಿನ ದಿನಗಳಲ್ಲಿ ವಿನಾ ಕಾರಣ ವೈದ್ಯರನ್ನು ದೂರುವುದು, ಆರೋಪ ಹೊರಿಸುವುದು, ಅವರ ಧೈರ್ಯ ಕುಂದಿಸುವ ಘಟನೆಗಳು ಆಗಾಗ ನಡೆಯುತ್ತಿರುವುದರಿಂದ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಇಂದು ಕಪ್ಪು ಪಟ್ಟಿ ಧರಿಸಿ, ಶಾಂತಿಯುತವಾಗಿ ಪ್ರತಿಭಟನಾ ಮೆರವಣೆಗೆಯ ಮೂಲಕ ತಹಶೀಲ್ದಾರರಿಗೆ ಮನವಿ ಸಲ್ಲಿಸಲಿದ್ದೇವೆ ಎಂದರು.
ನoತರ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಮೌನ ಪ್ರತಿಭಟನೆ ಮೂಲಕ ಸಾಗಿ ತಹಶೀಲ್ದಾರ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು. ತಹಶೀಲ್ದಾರ ರವಿರಾಜ ದೀಕ್ಷಿತ್ ಮನವಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ದಂತ ವೈದ್ಯ ಸಂಘದ ಅಧ್ಯಕ್ಷೆ ಮಮತಾ ಶೆಟ್ಟಿ, ಐಎಮ್ ಇ ತಾಲೂಕಾ ಘಟಕದ ಕಾರ್ಯದರ್ಶಿ ಡಾ.ವಿನಾಯಕ್ ರಾಯ್ಕರ್, ಡಾ.ಆಶಿಕ್ ಹೆಗಡೆ, ಡಾ.ನಾಗರಾಜ ಬೋಸ್ಕಿ, ಡಾ.ಗೌತಮ ಬಳ್ಕೂರ್, ಡಾ.ಪ್ರಮೋದ್ ಫಾಯ್ದೆ, ಡಾ.ಅಶೋಕ್ ಯರಗುಡ್ಡಿ, ಡಾ.ಅನುರಾಧ,ಡಾ.ಲಕ್ಷ್ಮೀಶ,ಡಾ.ಗಣೇಶ್ ಹೆಗಡೆ, ಸತೀಶ ವೈದ್ಯ, ಮತ್ತಿತರಿದ್ದರು.
ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ