Rain Update: ಹವಾಮಾನ: ಕರಾವಳಿಯಲ್ಲಿ ಮೂರು ದಿನ ಭಾರೀ ಮಳೆ: ಕಡಲಿಗೆ ಇಳಿಯದಂತೆ ಮೀನುಗಾರರಿಗೆ ಸೂಚನೆ
ಕಾರವಾರ: ಬಂಗಾಳಕೊಲ್ಲಿ ಹಾಗೂ ಅರಬ್ಬಿ ಸಮುದ್ರದ ದಕ್ಷಿಣ ಭಾಗದಲ್ಲಿ ವಾಯು ಭಾರ ಕುಸಿತ ಪರಿಣಾಮ ಭಾರೀ ಗಾಳಿ ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ( Rain Update) ಎಚ್ಚರಿಕೆ ನೀಡಿದೆ. ದಕ್ಷಿಣ ಅರಬ್ಬೀ ಸಮುದ್ರದಲ್ಲಿ ಮತ್ತು ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದರಿoದ ಮುಂದಿನ 48 ಗಂಟೆಗಳ ಕಾಲ ಮಳೆ ಆರ್ಭಟಿಸಲಿದೆ. ಮಹಾರಾಷ್ಟ್ರ, ಗೋವಾ ಹಾಗೂ ಕರಾವಳಿ ಕರ್ನಾಟಕದಲ್ಲಿ ತೀವ್ರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.
ವಿಶೇಷವಾಗಿ ಕರಾವಳಿ ಜಿಲ್ಲೆಗಳಾದ ಉತ್ತರಕನ್ನಡ, ಉಡುಪಿ ಹಾಗೂ ದಕ್ಷಿಣ ಜಿಲ್ಲೆಗಳಲ್ಲಿ ಮುಂದಿನ 48 ಗಂಟೆಗಳ ಕಾಲ ಭಾರಿ ಮಳೆಯಾಗಲಿದೆ. ವಿಶೇಷವಾಗಿ ಗಾಳಿಯು 40-50 ಕಿಲೋ ಮೀಟರ್‌ನಿಂದ 60 ಕಿಲೋ ಮೀಟರ್ ವರೆಗೂ ವೇಗವಾಗಿ ಬೀಸಲಿದೆ. ಹೀಗಾಗಿ ಮುಂದಿನ 48 ಗಂಟೆಗಳ ಕಾಲ ಮೀನುಗಾರರು ಯಾವುದೇ ಕಾರಣಕ್ಕೂ ಕಡಲಿಗಿಳಿಯದಂತೆ ಹವಾಮಾನ ಇಲಾಖೆ ( Rain Update) ಎಚ್ಚರಿಕೆ ನೀಡಿದೆ. ಸಮುದ್ರಕ್ಕೆ ತೆರಳದಂತೆ ಸಾರ್ವಜನಿಕರಿಗೆ, ಪ್ರವಾಸಿಗರಿಗೆ ಸೂಚನೆ ನೀಡಲಾಗಿದೆ.
ಈ ಅವಧಿಯಲ್ಲಿ ಯಾವುದೇ ಪ್ರಾಕೃತಿಕ ವಿಕೋಪಗಳು ಉಂಟಾಗದoತೆ ಎಲ್ಲಾ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಉತ್ತರಕನ್ನಡ ಜಿಲ್ಲಾಧಿಕಾರಿಗಳಾದ ಗಂಗೂಬಾಯಿ ಮಾನಕರ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಅಲ್ಲದೆ ಮಳೆಯಿಂದ ಮನೆ ಕುಸಿತದಿಂದ ಜೀವ ಹಾನಿ ಹಾಗೂ ಜಾನುವಾರು ಹಾನಿಯಾಗದಂತೆ ಮುನ್ನೆಚ್ಚರಿಕೆ ಕೈಗೊಂಡು, ಗ್ರಾಮೀಣ ಪ್ರದೇಶಗಳಲ್ಲಿ ಈ ಬಗ್ಗೆ ಪಂಚಾಯತಿ ಮೂಲಕ ಜಾಗೃತಿ ಮೂಡಿಸುವಂತೆ ಸೂಚಿಸಲಾಗಿದೆ. ಮುಂಜಾಗೃತೆಯಾಗಿ ಕಾಳಜಿ ಕೇಂದ್ರ ತೆರೆಯಲು ಸ್ಥಳ ಗುರುತಿಸಿಟ್ಟುಕೊಳ್ಳುವಂತೆ ಮತ್ತು ಮುಳುಗಾರರು ಹಾಗೂ ದೋಣಿಗಳನ್ನು ಸಿದ್ಧಪಡಿಸಿಟ್ಟುಕೊಳ್ಳಿ ಎಂದು ತಿಳಿಸಿದ್ದಾರೆ.
ಬ್ಯೂರೋ ರಿಪೋರ್ಟ್, ವಿಸ್ಮಯ ನ್ಯೂಸ್