Focus News
Trending

ಜಾನಪದ ವಿದ್ವಾಂಸ ಡಾ. ಎನ್.ಆರ್.ನಾಯಕರಿಗೆ ಪ್ರಶಸ್ತಿ ಪ್ರದಾನ

ಅಂಕೋಲಾ: ಕನ್ನಡ ಭಾಷೆ ಸಂವರ್ಧನೆ ಮತ್ತು ಶಿಕ್ಷಣ ಪ್ರಸರಣಕ್ಕಾಗಿ ಅವಿರತ ಶ್ರಮಿಸಿದ್ದ ದಿವಂಗತ ಸ.ಪ. ಗಾಂವಕಾರ್ ಅವರ ಕಾರ್ಯ ಯುವ ಪೀಳಿಗೆಗೆ ಸದಾ ಪ್ರೇರಣೆಯಾಗಬೇಕು ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅಭಿಪ್ರಾಯಪಟ್ಟರು. ಅವರು ನಾಡವರ ಸಭಾಭವನದಲ್ಲಿ ಅಂಕೋಲೆಯ ಕರ್ನಾಟಕ ಸಂಘ ಮತ್ತು ದೀನಬಂಧು ಸ.ಪ ಗಾಂವಕಾರ ದತ್ತಿ ನಿಧಿ ಸಮಿತಿ ಏರ್ಪಡಿಸಿದ್ದ ಸಮಾರಂಭದಲ್ಲಿ ದತ್ತಿನಿಧಿ ಉದ್ಘಾಟಿಸಿ, ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.

ಕೆಲವರು ತಮ್ಮ ಸಾಧನೆಯ ಮೂಲಕ ಸಾವಿನ ನಂತರವೂ ಸದಾ ಜೀವಂತವಾಗಿ ಇರುತ್ತಾರೆ, ಸ್ಮರಣೀಯರಾಗುತ್ತಾರೆ. ಇಂಥವರ ಸಾಲಿಗೆ ಸ.ಪ ಗಾಂವಕಾರ್ ಅವರು ನಿಲ್ಲುತ್ತಾರೆ. ಅಂದಿನ ಕಾಲದಲ್ಲಿ ಬಡಮಕ್ಕಳಿಗೆ ವಿದ್ಯೆ ಸಿಗಬೇಕೆಂಬ ಹಂಬಲತೊಟ್ಟು ನೆರವು ನೀಡಿದ ಇವರ ಕಾರ್ಯ ನಿಜಕ್ಕೂ ಮಾದರಿ. ಇಂಥವರ ಹೆಸರಲ್ಲಿ ದತ್ತಿ ನಿಧಿ ಸ್ಥಾಪಿಸಿ ಪ್ರಶಸ್ತಿ , ಬಡ ಮಕ್ಕಳಿಗೆ ಸಹಾಯ ಸಲ್ಲಿಸುತ್ತಿರುವುದು ಆದರ್ಶ ಕಾರ್ಯ. ಇದು ನಿರಂತರ ಮುಂದುವರೆಯಲಿ ಎಂದರು. ತಮ್ಮ ಅವ್ವ ಟ್ರಸ್ಟ್ ಮೂಲಕ ದತ್ತಿನಿಧಿಗೆ 10 ಸಾವಿರ ರೂ. ದೇಣಿಗೆ ನೀಡಿದರು.

ಮುಖ್ಯ ಅತಿಥಿಯಾಗಿದ್ದ ಸ.ಪ. ಗಾಂವಕಾರ್ ಅವರ ಮೊಮ್ಮಗ, ಖ್ಯಾತ ನ್ಯಾಯವಾದಿ ಪ್ರದೀಪ ಕೃಷ್ಣದೇವ ಗಾಂವಕರ್ ಮಾತನಾಡಿ, ಸಮಾಜಕ್ಕೆ ಅಜ್ಜ ಸಲ್ಲಿಸಿದ ಸೇವೆಯನ್ನು ಸ್ಮರಿಸಿದರಲ್ಲದೇ ಇಂದು ತಾವು ಈ ಸ್ಥಾನದಲ್ಲಿರಲು ಅವರ ಬದುಕೇ ಪ್ರೇರಣೆ ಎಂದರು. ಅಧ್ಯಕ್ಷತೆಯನ್ನು ವಹಿಸಿದ್ದ ದೀನಬಂಧು ಸ.ಪ ಗಾಂವಕಾರ ದತ್ತಿ ನಿಧಿ ಸಮಿತಿ ಗೌರವಾಧ್ಯಕ್ಷ , ಹಿರಿಯ ಸಾಹಿತಿ ಶಾಂತಾರಾಮ ನಾಯಕ ಹಿಚ್ಕಡ ವಹಿಸಿದ್ದರು. ಇದೇ ಸಂದರ್ಭದಲ್ಲಿ ಪ್ರಥಮ ವರ್ಷದ ದಿ. ಸಪ ಗಾಂವಕಾರ್ ದತ್ತಿನಿಧಿ ಪ್ರಶಸ್ತಿಯನ್ನು ಜನಪದ ಸಾಹಿತಿ ಡಾ. ಎನ್. ಆರ್. ನಾಯಕ ಅವರಿಗೆ ಪ್ರದಾನ ಮಾಡಲಾಯಿತು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button