Follow Us On

WhatsApp Group
Big News
Trending

ದೊಡ್ಡ ದೇವರ ಸನ್ನಿಧಿಯಲ್ಲಿ ವಿಶೇಷ ಪೂಜೆ : ಶ್ರೀ ದೇವರ ಸರ್ವಾಲಂಕಾರ

ಅಂಕೋಲಾ: ದೊಡ್ಡ ದೇವರೆಂದೇ ಪ್ರಸಿದ್ಧಿಯಾಗಿರುವ ಅಂಕೋಲಾದ ಶ್ರೀ ವೆಂಕಟರಮಣ ದೇವಾಲಯದಲ್ಲಿ ಶ್ರಾವಣ ಮಾಸದ 3 ನೇ ಶನಿವಾರದ ಪ್ರಯುಕ್ತ, ಯುವ ಉದ್ದಿಮೆದಾರ ಸಹೋದರರಾದ ,ಅನ್ನಪೂರ್ಣ ಕ್ರೆಡಿಟ್ ಕೋ ಆಪರೇಟಿವ್ . ಸೌಹಾರ್ದ ಸಹಕಾರಿಯ ಅಧ್ಯಕ್ಷ ಮಂಜುನಾಥ ನಾಯಕ, ಉಪಾಧ್ಯಕ್ಷ ಗೋಪು ನಾಯಕ ಅಡ್ಲೂರ ಇವರ ಕುಟುಂಬದವರಿಂದ ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಯಿತು.

ಶ್ರೀವೆಂಕಟರಮಣ ದೇವರ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಶ್ರೀ ವೆಂಕಟರಮಣ ಮತ್ತು ಹನುಮಂತ ದೇವರ ಸರ್ವಾಲಂಕಾರ,ಭಕ್ತರ ಮನ ಸೂರೆಗೊಂಡಿತು. ತಾಯಿ ಮಾಣಮ್ಮನ ಉಪಸ್ಥಿತಿಯಲ್ಲಿ ಅನ್ನಪೂರ್ಣ ಸೌಹಾರ್ದ ಸಹಕಾರಿಯ ಅಧ್ಯಕ್ಷ ಉಪಾಧ್ಯಕ್ಷರಾದ, ಮಂಜು ನಾಯಕ ಮತ್ತು ಗೋಪು ನಾಯಕ ಸಹೋದರರು,ತಮ್ಮ ಕುಟುಂಬ ವರ್ಗ ಹಾಗೂ ಆಪ್ತರೊಂದಿಗೆ ಅನ್ನಪೂರ್ಣೇಶ್ವರಿಯ ಪೂಜೆ ಸಲ್ಲಿಸಿ, ಭಕ್ತರಿಗೆ ಅನ್ನ ಸಂತರ್ಪಣೆ ನಡೆಸಿಕೊಟ್ಟರು.

ಎಂ.ಎಲ್ ಸಿ ಗಣಪತಿ ಉಳ್ವೇಕರ, ವಕೀಲ ನಾಗರಾಜ ನಾಯಕ, ಸಾಮಾಜಿಕ ಕಾರ್ಯಕರ್ತ ಮಾಧವ ನಾಯ್ಕ,ವಕೀಲರಾದ ಉಮೇಶ ನಾಯ್ಕ ,ವಿನೋದ್ ಶಾನಭಾಗ್ ಮತ್ತಿತರ ಪ್ರಮುಖರು ಸೇವಾ ಕಾರ್ಯದಲ್ಲಿ ಪಾಲ್ಗೊಂಡು,ಸಹೋದರರ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದರು. ನೋಟರಿಗಳ ಸಂಘದ ಜಿಲ್ಲಾಧ್ಯಕ್ಷ ನಾಗಾನಂದ ಬಂಟ ಈ ಸಂದರ್ಭದಲ್ಲಿ ಮಾತನಾಡಿದರು.

ದೇವಸ್ಥಾನದಿಂದ ಬಹುದೂರದ ವರೆಗೆ ಭಕ್ತರ ಸರತಿ ಸಾಲು ಕಂಡು ಬಂತು. ಜೋರಾಗಿ ಸುರಿಯುತ್ತಿರುವ ಮಳೆಯ ನಡುವೆಯೂ, ಶನಿವಾರದ ಸಂತೆ, ಮತ್ತಿತರ ಕಾರಣಗಳಿಂದ ಭಕ್ತರ ಜನಜಂಗುಳಿ ಕಂಡುಬಂತು. ಅಡ್ಲೂರ ಮಂಜು ಮತ್ತು ಗೋಪು ಕುಟುಂಬ ವರ್ಗದವರು, ಆಪ್ತರು, ಹಿತೈಷಿಗಳು, ಗೆಳೆಯರ ಬಳಗ ಮತ್ತು ಸ್ವಯಂ ಸೇವಕರು ಅನ್ನಪ್ರಸಾದ ವಿತರಿಸಿದರು.

ಶನಿವಾರ ರಾತ್ರಿ ಶ್ರೀದೇವರ ಸನ್ನಿಧಿಯಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು. ಕಾರವಾರ ಅಂಕೋಲಾ ಕ್ಷೇತ್ರದ ಶಾಸಕ ಸತೀಶ ಸೈಲ್ ತಮ್ಮ ಧರ್ಮ ಪತ್ನಿ ಕಲ್ಪನಾ ಸೈಲ್ ಹಾಗೂ ಕುಟುಂಬದ ಇತರೆ ಸದಸ್ಯರೊಂದಿಗೆ ಶ್ರೀ ದೇವರ ದರ್ಶನ ಪಡೆದುಕೊಂಡು,ವಿಶೇಷ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಿ,ಪ್ರಸಾದ ಸ್ವೀಕರಿಸಿದರು. ತಮ್ಮ ಆತ್ಮೀಯರಾದ ಗೋಪುನಾಯಕ್ ಅಡ್ಲೂರ ಹಾಗು ಕುಟುಂಬದವರೊಂದಿಗೆ ಆತ್ಮೀಯವಾಗಿ ಕೆಲ ಕ್ಷಣ ಕಳೆದ ಅವರು, ಶ್ರಾವಣ ಮಾಸದ ವಿಶೇಷ ಹಾಗೂ ನಾಯಕ ಕುಟುಂಬದ ಅನ್ನದಾನದ ಮಹತ್ ಕಾರ್ಯದ ಬಗ್ಗೆ ಮಾತನಾಡಿದರು.

ಶಾಸಕರನ್ನು ಶ್ರೀ ದೇವರ ಸನ್ನಿಧಿಯಲ್ಲಿ ಆತ್ಮೀಯತೆಯಿಂದ ಹಾಗೂ ಪ್ರೀತಿಯಿಂದ ಗೌರವಿಸಲಾಯಿತು. ನಂತರ ಶಾಸಕರು ಪಟ್ಟಣದ ಪ್ರಸಿದ್ಧ ಶ್ರೀ ಲಕ್ಷ್ಮೀನಾರಾಯಣ ಮಹಾಮಾಯ ದೇವಾಲಯಕ್ಕೆ ತೆರಳಿ,ಪೂಜೆ ಪ್ರಾರ್ಥನೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು. ಪಟ್ಟಣದ ಶ್ರೀ ಮಹಾಗಣಪತಿ ದೇವರ ದರ್ಶನ ಪಡೆದುಕೊಂಡು,ಶಕ್ತಿ ದೇವತೆ ಭೂಮಿತಾಯಿ ಶ್ರೀ ಶಾಂತಾದುರ್ಗೆ ಮತ್ತು ಆರ್ಯದುರ್ಗಾ ಮತ್ತಿತರ ದೇವಾಲಯಗಳಿಗೆ ಬಂದು ಶ್ರೀದೇವಿಯರ ದರ್ಶನ ಪಡೆದುಕೊಂಡು ಕಾರವಾರದ ತಮ್ಮ ಮನೆಗೆ ಮರಳಿದರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button