ಗಂಗಾವಳಿ ನದಿಯಲ್ಲಿ ಶೋಧ ಕಾರ್ಯಾಚರಣೆಯಿಂದ ದೂರ ಸರಿಯಿತೇ ಡ್ರೆಜ್ಜಿಂಗ್ ಮಷೀನ್ ? ನದಿ ನೀರಿನಲ್ಲಿ ರಾಶಿ ಬಿದ್ದ ಮಣ್ಣು ತೆರವು ಎಂದು?
ಲಕ್ಷ್ಮಣ್ ನಾಯ್ಕ್ ಟೀ ಸ್ಟಾಲ್ ಇದ್ದ ಪ್ರದೇಶದಲ್ಲಿ ಹೊಸದಾಗಿ ಕಾರ್ಯಾಚರಣೆ ಆರಂಭಿಸಿದ ಮಣ್ಣು ಬಗೆಯುವ ಯಂತ್ರ
ಅಂಕೋಲಾ : ಶಿರೂರು ಗುಡ್ಡ ಕುಸಿತ ದುರಂತದ ಬಳಿಕ ಗಂಗಾವಳಿ ನದಿಯಲ್ಲಿ ನಡೆಯುತ್ತಿದ್ದ ಮೂರನೇ ಹಂತದ 13ನೇ ದಿನದ ಶೋಧಕಾರ್ಯಾಚರಣೆ ಅಕ್ಟೋಬರ 2 ಬುಧವಾರವೂ ಮುಂದುವರೆದಿತ್ತು. ಅಮವಾಸ್ಯೆಯ ದಿನ ವಾದರೂ ಸಹ ಮುಳುಗು ತಜ್ಞರು ಗಂಗಾವಳಿ ನದಿಯಲ್ಲಿ ಕಾರ್ಯಚರಣೆ ನಡೆಸಿದ್ದರು. ಇದೇ ವೇಳೆ ಈ ಹಿಂದೆ ಹೆದ್ದಾರಿ ಅಂಚಿಗೆ ಇದ್ದ ಲಕ್ಷ್ಮಣ ನಾಯ್ಕ ಟೀ ಸ್ಟಾಲ್ ಅಕ್ಕ ಪಕ್ಕದಲ್ಲಿದ್ದ, ಗುಡ್ಡ ಕುಸಿತದ ನಂತರ ನಾನಾ ಕಾರಣಗಳಿಂದ ರಾಶಿ ರಾಶಿಯಾಗಿ ಬಿದ್ದಿರುವ ಕಲ್ಲು ಮತ್ತು ಮಣ್ಣುಗಳ ರಾಶಿ ಬಗೆಯಲು ಹಿಟಾಚಿ ಯಂತ್ರ ಕಾರ್ಯ ಆರಂಬಿಸಿದ್ದು, ಕಾರ್ಯಚರಣೆ 14 ನೇ ದಿನವಾದ ಗುರುವಾರ ಬೆಳಿಗ್ಗೆಯಿಂದ ಮತ್ತೆ ಮಣ್ಣಿನಡಿ ಯಾವುದಾದರೂ ಮೃತ ದೇಹ ಹಾಗೂ ಇತರೆ ವಸ್ತುಗಳು ಪತ್ತೆಯಾಗಲಿದೆಯೇ ಎಂದು ಶೋಧ ನಡೆಸಲಾಗುತ್ತಿದೆ.
ನೇಮಕಾತಿ: ನಬಾರ್ಡ್ ನಲ್ಲಿ 108 ಉದ್ಯೋಗಾವಕಾಶ: SSLC ಆದವರು ಅರ್ಜಿ ಸಲ್ಲಿಸಬಹುದು
ಆದರೆ ನದಿಯಲ್ಲಿ ಶೋಧ ಕಾರ್ಯಕ್ಕೆ ಗುತ್ತಿಗೆ ಪಡೆದು ಸುಮಾರು 10 ದಿನಗಳ ಮಟ್ಟಿಗೆ ಕರಾರು ಒಪ್ಪಂದ ಮಾಡಿಕೊಂಡಿದ್ದ ಅಭಿಷೇ ನಿಯಾ ಓಶಿಯನ್ ಸರ್ವಿಸ್ ಮತ್ತು ಅಭಿಷೇ ನಿಯ ಡ್ರೆಜ್ಜಿಂಗ್ ಪ್ರೈವೆಟ್ ಲಿ . ಇವರು ತಕ್ಕಮಟ್ಟಿಗೆ ಸಮಾಧಾನಕರ ಫಲಿತಾಂಶ ನೀಡಿ ,ಕಾರ್ಯಾಚರಣೆ ಸ್ಥಳದಿಂದ ತಮ್ಮ ಡ್ರೆಜ್ಜಿಂಗ್ ಯಂತ್ರವನ್ನು ಮರಳಿ ಒಯ್ದಿದ್ದಾರೆ. ಇದರಿಂದ ಗಂಗಾವಳಿ ನದಿಯಲ್ಲಿ ಜರಿದು ಬಿದ್ದಿರುವ ರಾಶಿ ರಾಶಿ ಕಲ್ಲುಬಂಡೆ ಮತ್ತು ಮಣ್ಣುಗಳ ತೆರವು ಕಾರ್ಯಾಚರಣೆ ಯಾವಾಗ ಎನ್ನುವ ಪ್ರಶ್ನೆ ಸಾರ್ವಜನಿಕ ವಲಯದಿಂದ ಕೇಳಿ ಬರಲಾರಂಭಿಸಿದೆ.
ಇದೇ ವಿಚಾರವಾಗಿ ಈ ಹಿಂದೆ ಮಾಧ್ಯಮದವರಿಗೆ ಉತ್ತರಿಸಿದ್ದ ಜಿಲ್ಲಾಧಿಕಾರಿಗಳು ,ಹತ್ತು ದಿನ ಕಾರ್ಯಾಚರಿಸುವ ಡ್ರೆಜ್ಜಿಂಗ್ ಯಂತ್ರ ಮೊದಲು ಮೃತ ದೇಹದ ಶೋಧಕ್ಕೆ ಹೆಚ್ಚಿನ ಒತ್ತು ನೀಡಿ , ನಂತರ ನದಿಯಲ್ಲಿ ಜರಿದು ಬಿದ್ದಿರುವ ಕಲ್ಲು ಬಂಡೆಗಳು ಮತ್ತು ಮಣ್ಣು ತೆರವಿಗೆ ಕಾರ್ಯಾಚರಿಸಲಿದೆ ಎಂಬಂತೆ ಮಾಹಿತಿ ನೀಡಿದ್ದರು ಆದರೆ ಪ್ರತಿಕೂಲ ಪರಿಸ್ಥಿತಿ ಮತ್ತಿತರ ಕಾರಣಗಳಿಂದ ಕಾರ್ಯಾಚರಣೆ ನಿರೀಕ್ಷಿತ ವೇಗ ಪಡೆಯದೇ ಡ್ರೆಜ್ಜಿಂಗ್ ಕಾರ್ಯಾಚರಣೆ ಅವಧಿ ಮುಗಿದಂತಾಗಿದೆ.
ಹೀಗಾಗಿ ಮಣ್ಣು ತೆರವು ಮಾಡದಿದ್ದರೆ ಗಂಗಾವಳಿ ನದಿ ಅಂಚಿನ ಗ್ರಾಮಗಳಲ್ಲಿ ಮುಂದಿನ ದಿನಗಳಲ್ಲಿ ನದಿ ಪ್ರವಾಹದ ಅಡ್ಡ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿದೆ ಎನ್ನುವ ಆತಂಕ ಸ್ಥಳೀಯರದ್ದು. ಈ ನಡುವೆ ರಜೆ ಮತ್ತಿತರ ಕಾರಣಗಳಿಂದ ಕಳೆದೆರಡು – ಮೂರು ದಿನಗಳ ಹಿಂದೆ ಶೋಧ ಕಾರ್ಯಾಚರಣೆ ವೇಳೆ ಪತ್ತೆಯಾಗಿದ್ದ ಕೈ ಮೂಳೆ ಮತ್ತು ಎದೆ ಚಿಪ್ಪಿನ ಎಲುಬುಗಳ ಡಿಎನ್ಎ ಪರೀಕ್ಷೆ ವರದಿಗಾಗಿ ಕಾಯಲಾಗುತ್ತಿದೆ.
ಸಹಜವಾಗಿಯೇ ಇದು ಜಗನ್ನಾಥ್ ನಾಯ್ಕ್ ಮತ್ತು ಲೋಕೇಶ್ ನಾಯ್ಕ ಕುಟುಂಬ ಸದಸ್ಯರ ನಿರೀಕ್ಷೆ ಹೆಚ್ಚಿಸಿದೆಯಾದರೂ,ಪರೀಕ್ಷಾ ಫಲಿತಾಂಶ ತಮ್ಮ ಪರವಾಗಿ ಬಾರದಿದ್ದರೆ ಮುಂದೇನು ಎಂಬ ಚಿಂತೆ ಕಾಡಲಾರಂಭಿಸಿದೆ. ಆದರೆ ದುರ್ಘಟನೆ ಸಂಭವಿಸಿದ ದಿನದಿಂದ ಈ ವರೆಗೂ ಕೆಲವರ ಅಸಮಾಧಾನದ ರೀತಿಯ ತಲೆಬುಡವಿಲ್ಲದ ಹೇಳಿಕೆಗಳಿಗೆ ಕ್ಯಾರೇ ಎನ್ನದೇ ಜನಸೇವೆಯೇ ತನ್ನ ಕಾಯಕ ಎಂಬಂತೆ ,ತಮ್ಮ ನಿರಂತರ ಮತ್ತು ನಿಸ್ವಾರ್ಥ ಸೇವಾ ಕಾರ್ಯ ಶೈಲಿಯ ಮೂಲಕವೇ ಉತ್ತರ ನೀಡಿದಂತಿರುವ ಶಾಸಕ ಸತೀಶ್ ಸೈಲ್ ಒಟ್ಟಾರೆ ಶೋಧ ಕಾರ್ಯಾಚರಣೆಯನ್ನು ಸವಲಾಗಿ ಸ್ವೀಕರಿಸಿದಂತಿದ್ದು,ಈವರೆಗೂ ಪತ್ತೆಯಾಗದ ಜಗನ್ನಾಥ್ ನಾಯ್ಕ ಮತ್ತು ಲೋಕೇಶ್ ನಾಯ್ಕ ಅವರ ನೊಂದ ಕುಟುಂಬಕ್ಕೆ ನೀಡಿದ ಭರವಸೆಯಂತೆ ಕಾರ್ಯಚರಣೆ ಮುಂದುವರೆಸಿದ್ದಾರೆ ಮತ್ತು ಗಂಗಾವಳಿ ನದಿಯಲ್ಲಿ ಜರಿದು ಬಿದ್ದಿರುವ ಮಣ್ಣು ತೆರವು ಮಾಡಲೇಬೇಕೆಂದು ಜಿಲ್ಲಾ ಆಡಳಿತಕ್ಕೂ ಮನವರಿಕೆ ಮಾಡಿ ಕೊಡುವ ಪ್ರಯತ್ನ ಮಾಡಿದ್ದಾರೆ.
ಇದೀಗ ಜನರಿಗಾಗುವ ಸಾಧಕ ಬಾಧಕಗಳನ್ನು ಅರ್ಥೈಸಿಕೊಂಡು ಜನಪರ ಕಾಳಜಿ ತೋರಬೇಕಾದ ಜವಾಬ್ದಾರಿ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಮತ್ತಿತರರ ಮೇಲೆ ಹಿಂದೆಂದಿಗಿಂತಲೂ ಹೆಚ್ಚು ಭಾರ ಇದ್ದಂತಾಗಿದೆ. ಸಂಬಂಧಿತ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮತ್ತು ಆಡಳಿತ ವರ್ಗ ಈ ಕುರಿತು ಸೂಕ್ತ ನಿರ್ಣಯ ಮತ್ತು ಕ್ರಮ ತೆಗೆದುಕೊಳ್ಳುವುದೇ ಕಾದು ನೋಡಬೇಕಿದೆ.ಅಂತೆಯೇ ಮುಂದುವರಿದಿರುವ 14ನೇ ದಿನದ ಕಾರ್ಯಾಚರಣೆ ಫಲಿತಾಂಶ ಏನೆಂದು ಕುತೂಹಲದ ಕಣ್ಣುಗಳಿಂದ ಕಾದು ನೋಡುವಂತಾಗಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ