ಅಂಕೋಲಾ: ಬಸ್ ನಿಲ್ದಾಣ ಮತ್ತಿತರಡೆ ಹೆಚ್ಚುತ್ತಿದೆ ಪಿಕ್ ಪಾಕೆಟ್? ಕುಮಟಾದಲ್ಲಿ ಬಸ್ ಏರಿ ಅಂಕೋಲಾ ಕ್ಕೆ ಬಂದು ಇಳಿಯುವಷ್ಟರಲ್ಲಿ ಅತಿಥಿ ಉಪನ್ಯಾಸಕನ ಪರ್ಸ್ ನಾಪತ್ತೆ ! ಅಂಕೋಲಾ: ತಾಲೂಕಿನ ಬಸ್ ನಿಲ್ದಾಣದಲ್ಲಿ ಬಸ್ಸಿನಿಂದ ಇಳಿಯುವ ಸಂದರ್ಭದಲ್ಲಿ ವ್ಯಕ್ತಿಯೊಬ್ಬರ ಪರ್ಸ್ ಕಳ್ಳತನ ಮಾಡಲಾಗಿದೆ.
ದನಗಳ್ಳತನ ಪ್ರಕರಣ: ಆರೋಪಿ ಬಂಧಿಸಿದ ಪೊಲೀಸರು
ಪೂಜಗೇರಿಯ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿರುವ ಕುಮಟಾ ನಿವಾಸಿ ಮಾರುತಿ ಗಾವಡಿ ಎನ್ನುವವರ ಪರ್ಸ್ ಕಳ್ಳತನ ಮಾಡಲಾಗಿದ್ದು ಸುಮಾರು 3 ಸಾವಿರ ರೂಪಾಯಿ ನಗದು, ಎ.ಟಿ.ಎಂ ಕಾರ್ಡು, ಆಧಾರ್ಕಾರ್ಡ್, ಪಾನ್ ಕಾರ್ಡ್ ಮೊದಲಾದ ದಾಖಲೆಗಳು ಪರ್ಸಿನಲ್ಲಿ ಇದ್ದವು ಎಂದು ತಿಳಿದು ಬಂದಿದೆ.
ಮಾರುತಿ ಗಾವಡಿ ಅವರು ಹೊನ್ನಾವರ -ಪಣಜಿ ಬಸ್ಸನ್ನು ಕುಮಟಾದಲ್ಲಿ ಏರಿದ್ದು ಪರ್ಸಿನಿಂದ ಹಣ ತೆಗೆದು ಟಿಕೆಟ್ ಕೊಂಡಿದ್ದಾರೆ.
ಅಂಕೋಲಾ ಬಸ್ ನಿಲ್ದಾಣದಲ್ಲಿ ಬಸ್ಸಿನಿಂದ ಇಳಿಯುವಾಗ ಪ್ರಯಾಣಿಕರ ದಟ್ಟನೆ ಇದ್ದು ಇದೇ ಸಂದರ್ಭದಲ್ಲಿ ಕಿಸೆಗಳ್ಳರು ಕರಾಮತ್ತು ತೋರಿರುವ ಸಾಧ್ಯತೆ ಇದೆ.
ಎರಡು ದಿನಗಳ ಹಿಂದೆ ಮಹಿಳೆಯೊಬ್ಬರ ವ್ಯಾನಿಟಿ ಬ್ಯಾಗ್ ಬ್ಲೇಡಿನಿಂದ ಕತ್ತರಿಸಿದ ಘಟನೆ ಸಹ ನಡೆದಿದ್ದು ಎರಡೂ ಘಟನೆ ಕುರಿತು ಅಂಕೋಲಾ ಬಸ್ ನಿಲ್ದಾಣದ ಕಂಟ್ರೋಲರ್ ಗೆ ದೂರು ಸಲ್ಲಿಸಲಾಗಿದೆ. ಈ ಹಿಂದೆಯೂ ಶನಿವಾರದ ಸಂತೆ ಸಂದರ್ಭದಲ್ಲಿ ಸಂತೆ ಮಾರುಕಟ್ಟೆ ,ಬಸ್ ನಿಲ್ದಾಣ ಮತ್ತಿತರೆಡೆ ಕಳ್ಳರು ಕರಾಮತ್ತು ತೋರಿ ಕೆಲವರ ಪರ್ಸ್ ಮತ್ತು ಮೊಬೈಲ್ ಎಗರಿಸಿದ್ದರು. ಇದೀಗ ದೀಪಾವಳಿ ಮತ್ತಿತರ ಹಬ್ಬ ಹತ್ತಿರ ಬರುತ್ತಿದ್ದು ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರ ದಟ್ಟನೆ ಹೆಚ್ಚಿನ ಸಂಖ್ಯೆಯಲ್ಲಿ ಇರಲಿದ್ದು ಇಂಥ ಸಂದರ್ಭದಲ್ಲಿ ಕಳ್ಳತನದ ಕೃತ್ಯಗಳು ಹೆಚ್ಚುವ ಸಾಧ್ಯತೆ ಇದೆ.
ಬಸ್ ನಿಲ್ದಾಣದಲ್ಲಿ ಸಾರಿಗೆ ಇಲಾಖೆ ವತಿಯಿಂದ ಸಿ.ಸಿ ಕ್ಯಾಮೆರಾ ವ್ಯವಸ್ಥೆ ಇಲ್ಲದಿರುವುದು ಖದೀಮರಿಗೆ ಕಳ್ಳತನಕ್ಕೆ ಅನುಕೂಲವಾಗಿದ್ದು ,ಅಂಕೋಲಾದಲ್ಲಿ ಹತ್ತಾರು ಬೈಕ ಕಳ್ಳತನ ನಡೆದರೂ ಸಾರಿಗೆ ಇಲಾಖೆ ಕಣ್ಮುಚ್ಚಿ ನಿದ್ರಿಸುತ್ತಿರುವಂತಿದೆ. ಮಹಿಳೆಯರು ಸೇರಿದಂತೆ ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದಲೂ ಸಿ ಸಿ ಕೆಮರಾ ಕಣ್ಣಾವಲು ಅತ್ಯವಶ್ಯವಿದೆ ಎನ್ನುತ್ತಾರೆ ತಾಲೂಕಿನ ಪ್ರಜ್ಞಾವಂತರು. ಪೊಲೀಸರು ಸಹ ಆಗಾಗ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ಸಂಶಯಾಸ್ಪದವಾಗಿ ಓಡಾಡುವವರ ವಿಚಾರಣೆ ನಡೆಸಬೇಕಿದೆ. ಅಂತೆಯೇ ಬಸ್ ಪ್ರಯಾಣಿಕರು ಸಹ ತಮ್ಮ ಪರ್ಸ ಮತ್ತಿತರ ಅಮೂಲ್ಯ ವಸ್ತುಗಳು ಕಳ್ಳತನವಾಗದಂತೆ ಜಾಗೃತಿ ವಹಿಸಬೇಕಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ