Important
Trending

ಪರಿಹಾರ ನೀಡದೇ ನಿರ್ಲಕ್ಷ: AC ಕಚೇರಿ ಜಪ್ತಿ: ನ್ಯಾಯಾಲಯದ ಆದೇಶ ಕಾನೂನು ಕ್ರಮ

ಕುಮಟಾ: ಅಂಕೋಲಾ ತಾಲೂಕಿನ ಗುಂಡಬಾಳದ ರೈತರೊಬ್ಬರ ಜಮೀನನ್ನು ಸಣ್ಣ ನೀರಾವರಿ ಯೋಜನೆಗೆ ವಶಪಡಿಸಿಕೊಂಡು ಪರಿಹಾರ ನೀಡದೇ ನಿರ್ಲಕ್ಷ ಮಾಡಿದ ಹಿನ್ನಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಎಸಿ ಕಚೇರಿಯನ್ನು ಜಪ್ತಿ ಪಡಿಸಿಕೊಳ್ಳಲು ಕುಮಟಾದ ಜೆ.ಎಮ್.ಎಫ್.ಸಿ. ನ್ಯಾಯಾಲಯ ಆದೇಶ ನೀಡಿದ್ದು ಇಂದು ಕೋರ್ಟ ಸಿಬ್ಬಂದಿಗಳು ಜಪ್ತಿ ಪಡಿಸಿಕೊಂಡ ಘಟನೆ ನಡೆಯಿತು.

ಕುಮಟಾದ ಜೆ.ಎಮ್.ಎಫ್.ಸಿ. ಬೆಲೀಪ ಗಣಪತಿ ಎಚ್ ನಾಯ್ಕ ಅವರು ಕುಮಟಾದ ಆಡಳಿತ ಸೌಧದಲ್ಲಿನ ಎಸಿ ಕಚೇರಿಗೆ ತೆರಳಿ ಕಚೇರಿಯನ್ನು ಜಪ್ತಿ ಮಾಡಿ ಪೀಠೋಪಕರಣ , ಕಂಪ್ಯೂಟರ್ ಸೇರಿದಂತೆ ಹಲವು ವಸ್ತುಗಳನ್ನು ನ್ಯಾಯಾಲಯದ ಆದೇಶದಂತೆ ವಶಕ್ಕೆ ಪಡೆದಿದ್ದಾರೆ. ಗೋಕರ್ಣದಲ್ಲಿ ಕುಡಿಯುವ ನೀರಿನ ಯೋಜನೆಗಾಗಿ ಸಣ್ಣ ನೀರಾವರಿ ಇಲಾಖೆ ಅಂಕೋಲ -ಗೋಕರ್ಣ ಭಾಗದಲ್ಲಿ ಪೈಪ್ ಲೈನ್ ಅಳವಡಿಕೆ ಮಾಡುವ ಸಂದರ್ಭದಲ್ಲಿ ಅಂಕೋಲದ ಗುಂಡಬಾಳದಲ್ಲಿ ರೈತ ಉದಯ್ ಬಾಳಗಿ ಎಂಬುವವರ ನಾಲ್ಕು ಗುಂಟೆ ಜಾಗವನ್ನು ತಾಲೂಕು ಆಡಳಿತ ಪಡೆದುಕೊಂಡಿತ್ತು.

ಆದರೆ ಇದುವರೆಗೂ ಯಾವುದೇ ರೀತಿಯ ಪರಿಹಾರವನ್ನು ಉದಯ ಬಾಳಗಿ ಅವರಿಗೆ ನೀಡಿರಲಿಲ್ಲ. ಈ ಹಿನ್ನಲೆಯಲ್ಲಿ 2022 ರಲ್ಲಿ ಕುಮಟಾ ಜೆ.ಎಮ್.ಎಫ್.ಸಿ. ನ್ಯಾಯಾಲಯದಲ್ಲಿ ಉದಯ್ ಬಾಳಗಿ ಅವರು ದಾವೆ ಹೂಡಿದ್ದರು. ತಾಲೂಕು ಆಡಳಿತ ಹತ್ತು ಲಕ್ಷದ ಐವತ್ತೆಂಟು ಸಾವಿರದ ಇನ್ನೂರ ತೊಂಬತ್ತೈದು ರೂ ಗಳನ್ನು ನೋಡುವಂತೆ ಆದೇಶಿಸಿತ್ತು. ಆದೇಶ ನೀಡಿದರೂ ಪರಿಹಾರ ನೀಡದ ಹಿನ್ನಲೆಯಲ್ಲಿ ಕೋರ್ಟ ಕುಮಟಾ ಎಸಿ ಕಚೇರಿಯನ್ನು ಜಪ್ತಿ ಪಡಿಸಿಕೊಳ್ಳುವಂತೆ ಆದೇಶ ಮಾಡಿದ್ದು, ಇಂದು ಕೋರ್ಟನ ಸಿಬ್ಬಂದಿಗಳು ಎಸಿ ಕಚೇರಿಗೆ ರೈತ ಉದಯ್ ಬಾಳಗಿ ರವರೊಂದಿಗೆ ತೆರಳಿ ಕಚೇರಿಯ ಪೀಠೋಪಕರಣ,ಕಂಪ್ಯೂಟರ್, ಪ್ರಿಂಟರ್, ಝೆರಾಕ್ಸ್ ಯಂತ್ರ ಸೇರಿದಂತೆ ಸುಮಾರು ರೂಪಾಯಿ 3,54,000 ಮೌಲ್ಯದ ವಸ್ತುಗಳನ್ನು ಜಪ್ತಿ ಪಡಿಸಿಕೊಂಡು ನ್ಯಾಯಾಲಯಕ್ಕೆ ಕೊಂಡೊಯ್ದಿದ್ದಾರೆ.

ವಿಸ್ಮಯ ನ್ಯೂಸ್ ದಿಪೇಶ್ ನಾಯ್ಕ, ಕುಮಟಾ

Back to top button