Important
Trending

ಗ್ರಾಹಕರಿಗೆ ಸಹಾಯ ಮಾಡುವ ನೆಪದಲ್ಲಿ ಎಟಿಎಂ ಕಾರ್ಡ್ ಬದಲಾಯಿಸುತ್ತಿದ್ದ ನಯವಂಚಕ : ಕೊನೆಗೂ ಖಾಕಿ ಬಲೆಗೆ ಬಿದ್ದ ಚಾಲಾಕಿ ?

ಅಂಕೋಲಾ: ಎ.ಟಿ.ಎಂ ಗೆ ಬರುವ ಕೆಲ ಗ್ರಾಹಕರರಿಗೆ ಸಹಾಯ ಮಾಡುವ ನೆಪದಲ್ಲಿ ಮಾತನಾಡುತ್ತ ಮರುಳು ಮಾಡಿ ಅವರಿಗೆ ಅರಿವಿಗೆ ಬಾರದಂತೆ ಅಸಲಿ ಎ.ಟಿ.ಎಂ ಕಾರ್ಡ್ ತಾನು ಇಟ್ಟುಕೊಂಡು ಗ್ರಾಹಕರಿಗೆ ಬೇರೊಂದು ಕಾರ್ಡ್ ಬದಲಾಯಿಸಿ ನೀಡಿ ಕಳಿಸಿ , ನಂತರ ಅದೇ ಗ್ರಾಹಕರ ಖಾತೆಯಿಂದ ಹಣ ತೆಗೆದು ವಂಚಿಸುತ್ತಿದ್ದ ಖತರ್ನಾಕ್ ಆರೋಪಿಯನ್ನು ಬಂಧಿಸುವಲ್ಲಿ ಅಂಕೋಲಾ ಪೊಲೀಸರು ಯಶಸ್ವಿಯಾಗಿದ್ದಾರೆ.
ತುಮಕೂರಿನ ಶಿರಾ ನಿವಾಸಿ ಅರುಣಕುಮಾರ ಮಲ್ಲೇಶಪ್ಪ ಬಂಧಿತ ಆರೋಪಿಯಾಗಿದ್ದು ಆತನಿಂದ 25 ಸಾವಿರ ನಗದು, ಎಸ್. ಬಿ.ಐ ಎ.ಟಿ.ಎಂ ಕಾರ್ಡ್ ಮತ್ತು ಮೊಬೈಲ್ ಪೋನನ್ನು ಪೊಲೀಸರು ವಷಕ್ಕೆ ಪಡೆದು ಕಾನೂನು ಕ್ರಮ ಮುಂದುವರೆಸಿದ್ದಾರೆ.

ಆರೋಪಿತನು ಅಂಕೋಲಾ ಪಟ್ಟಣದ ಕೆ.ಸಿ.ರಸ್ತೆಯ ಎಸ್. ಬಿ.ಐ ಎ.ಟಿ.ಎಂ ಕೇಂದ್ರದಲ್ಲಿ ನಿಂತು , ಗ್ರಾಹಕರಿಗೆ ಸಹಾಯ ಮಾಡುವ ನೆಪದಲ್ಲಿ ಅಕ್ಟೋಬರ್ 22 ರಂದು ಅವರ್ಸಾ ಸಕಲಬೇಣದ ಮಹಿಳೆ ಸುರೇಖಾ ಸುಧೀರ ನಾಯ್ಕ ಎನ್ನುವವರ ಎ.ಟಿ.ಎಂ ಕಾರ್ಡ್ ಬದಲಾಯಿಸಿ ಬಳಿಕ ಅವರ ಖಾತೆಗೆ ಕನ್ನ ಹಾಕಿ 40 ಸಾವಿರ ರೂಪಾಯಿಗಳನ್ನು ತೆಗೆದು ಮೋಸ ಮಾಡಿದ್ದ. ಪ್ರತ್ಯೇಕ ಇನ್ನೊಂದು ಪ್ರಕರಣದಲ್ಲಿ ಎಸ್ ಬಿ ಐ ನ ಅದೇ ಎ.ಟಿ.ಎಂನಲ್ಲಿ ಬೆಳಸೆ ನಿವಾಸಿ ಪಂಚಾಯತದ ನಿವೃತ್ತ ಖಾಸಗಿ ನೌಕರ , ಉಮೇಶ ವಾಸು ಗೌಡ ಎನ್ನುವವರಿಗೆ ಸಹಾಯ ಮಾಡುವ ನೆಪದಲ್ಲಿ ಅವರಿಂದ ಅಸಲಿ ಕಾರ್ಡ್ ಪಡೆದು , ಬೇರೊಂದು ಕಾರ್ಡ್ ನೀಡಿ ನಂತರ ಕುಮಟಾಕ್ಕೆ ಹೋಗಿ ಅವರ ಖಾತೆಯಿಂದ 37 ಸಾವಿರ ರೂಪಾಯಿ ಲಪಟಾಯಿಸಿದ್ದ ಎನ್ನಲಾಗಿದ್ದು , ಈ ನಯ ವಂಚಕ ಕೃತ್ಯಗಳ ಕುರಿತಂತೆ ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರುಗಳು ದಾಖಲಾಗಿದ್ದವು.


ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ ಅಂಕೋಲಾ ಪೊಲೀಸರು , ತಂಡ ರಚಿಸಿ ಚುರುಕಿನ ತನಿಖೆ ಕೈಗೊಂಡು ಯಶಸ್ವಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿ ದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠ ಎಂ.ನಾರಾಯಣ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಯಕುಮಾರ, ಡಿ.ವೈ.ಎಸ್. ಪಿ ಗಿರೀಶ್ ಅವರ ಮಾರ್ಗದರ್ಶನದಲ್ಲಿ, ಅಂಕೋಲಾ ಸಿಪಿಐ ಚಂದ್ರಶೇಖರ ಮಠಪತಿ ಅವರ ನೇತೃತ್ವದಲ್ಲಿ, ಪಿ.ಎಸ್. ಐಗಳಾದ ಜಯಶ್ರೀ ಪ್ರಭಾಕರ್, ಉದ್ದಪ್ಪ ಧರೆಪ್ಪನವರ , ಸಿಬ್ಬಂದಿಗಳಾದ ಮಹಾದೇವ ಸಿದ್ಧಿ, ಅಂಬರೀಷ ನಾಯ್ಕ, ಆಸೀಫ ಆರ್ ಕೆ, ಮನೋಜ.ಡಿ, ಶ್ರೀಕಾಂತ ಕಟಬರ, ರಯೀಜ ಭಾಗವಾನ್,ಮತ್ತು ಸಿ.ಡಿ.ಆರ್ ಸಿಬ್ಬಂದಿ ಉದಯ ಗುನಗಾ ಅವರ ತಂಡ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದು ,ಅಂಕೋಲಾ ಪೊಲೀಸರ ಯಶಸ್ವಿ ಕಾರ್ಯಚರಣೆಗೆ ತಾಲೂಕಿನ ಪ್ರಜ್ಞಾವಂತ ಜನತೆ ಮೆಚ್ಚುಗೆಯ ಮಾತುಗಳನ್ನಾಡಿದರೆ , ವಂಚನೆಗೊಳಗಾದವರು ಪೊಲೀಸರ ಕಾರ್ಯಕ್ಕೆ ಕೃತಜ್ಞತೆ ಸೂಚಿಸಿದ್ದಾರೆ .

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button