Focus News
Trending

ರಾಜ್ಯಮಟ್ಟದ ಹವ್ಯಕ ಸಮಾಜದ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾವಳಿ: 16 ತಂಡಗಳು ಭಾಗಿ

ಅಂಕೋಲಾ: ತಾಲೂಕಿನ ಹಳವಳ್ಳಿಯಲ್ಲಿ ರಾಜ್ಯ ಮಟ್ಟದ ಹವ್ಯಕ ಸಮಾಜದ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿತ್ತು. ಸಾಮಾಜಿಕ ಕಾರ್ಯಕರ್ತ ಶಿರಸಿಯ ಅನಂತ ಮೂರ್ತಿ ಹೆಗಡೆ ಮಾತನಾಡಿ ಸಮಾಜದ ಸಂಘಟನೆಗೆ ಈ ಪಂದ್ಯಾವಳಿ ಉತ್ತಮ ಕೆಲಸ ಮಾಡುತ್ತಿದೆ ಎಂದರು. ಹವ್ಯಕ ಕ್ರಿಕೆಟ್ ಅಸೋಸಿಯೇಷನ್ ಹಳವಳ್ಳಿ ಇವರ ಆಶ್ರಯದಲ್ಲಿ ದಿವಂಗತ ಭಾಸ್ಕರ ಭಟ್ಟ ಸ್ಮರಣಾರ್ಥ ರಾಜ್ಯ ಮಟ್ಟದ ಹವ್ಯಕ ಸಮಾಜದ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾವಳಿ ಅಯೋಜಿಸಲಾಗಿತ್ತು. ಸಮಾಜದ ಹಿರಿಯ ಸುಬ್ರಾಯ ಹೆಬ್ಬಾರ್ ಕಾರ್ಯಕ್ರಮ ಉದ್ಘಾಟಿಸಿದರು.

ಸಿದ್ಧಿವಿನಾಯಕ ಹವ್ಯಕ ಟ್ರಸ್ಟ್ ಅಧ್ಯಕ್ಷ ಸದಾನಂದ ಭಟ್ಟ ಅಧ್ಯಕ್ಷತೆ ವಹಿಸಿದ್ದರು. ಸಾಮಾಜಿಕ ಕಾರ್ಯಕರ್ತ ಮತ್ತು ವಿಶ್ವಂಬರ ಸುದ್ದಿ ಸಂಸ್ಥೆಯ ಮುಖ್ಯಸ್ಥ ಶಿರಸಿಯ ಅನಂತಮೂರ್ತಿ ಹೆಗಡೆ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿ, ಮಾನಸಿಕ ಮತ್ತು ದೈಹಿಕ ಸದೃಡತೆಗೆ ಕ್ರೀಡೆ ಅಗತ್ಯ, ಕಳೆದ 3 ವರ್ಷಗಳಿಂದ ಹಳವಳ್ಳಿಯಲ್ಲಿ ಸಮಾಜದ ಸರ್ವರ ಸಹಕಾರದಲ್ಲಿ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾವಳಿ ಮೂಲಕ ಹವ್ಯಕ ಸಮಾಜವನ್ನು ಒಂದೆಡೆ ಸೇರಿಸುವ, ಬಾಂಧವ್ಯ ವೃದ್ಧಿಸಲು ಈ ಸಂಘಟನೆ ಸಹಾಯಕವಾಗಿದೆ ಎಂದು ಮೆಚ್ಚುಗೆ ಸೂಚಿಸಿದರು. ಹೊಟೇಲ್ ಉದ್ಯಮಿ ಪ್ರಮೋದ ವೈದ್ಯ, ಡೋಂಗ್ರಿ ಗ್ರಾಮ ಪಂಚಾಯತ್ ಅಧ್ಯಕ್ಷ ವಿನೋದ ಭಟ್ಟ, ಸದಸ್ಯ ನಿತ್ಯಾನಂದ ಭಟ್ಟ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಆನಂದ ನಾಯ್ಕ ಮಾತನಾಡಿದರು.

ಹವ್ಯಕ ಸಮಾಜದ 16 ತಂಡಗಳು ಪಾಲ್ಗೊಂಡಿದ್ದ ಈ ಪಂದ್ಯಾವಳಿಯಲ್ಲಿ ಗರುಡ ಧ್ವಜ ಶಿರಸಿ ತಂಡ ಚಾಂಪಿಯನ್, ಅಂಡರ ಆರ್ಮ್ ಹುಡುಗರ ತಂಡ ರನ್ನರ್ ಪ್ರಶಸ್ತಿ ಪಡೆಯಿತು. ಹರ್ಷ ಹೆಗಡೆ ಸರಣಿ ಶ್ರೇಷ್ಠ ಮತ್ತು ಫೈನಲ್ ಪಂದ್ಯದ ಪಂದ್ಯ ಪುರುಷ ಪ್ರಶಸ್ತಿ ಪಡೆದರು. ಚಿನ್ಮಯ ಭಟ್ ಉತ್ತಮ ದಾಂಡಿಗ, ಹಳವಳ್ಳಿಯ ಸುಬ್ರಾಯ ಹೆಗಡೆ ಉತ್ತಮ ಬೌಲರ್ ಪ್ರಶಸ್ತಿ ಪಡೆದರು. ಹಳವಳ್ಳಿಯ ಹಿರಿ-ಕಿರಿಯರು ಪಂದ್ಯಾವಳಿ ಯಶಸ್ಸಿಗೆ ಸಹಕರಿಸಿದರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button