ಕಲಿಕಾ ಸಾಮಗ್ರಿ ವಿತರಣೆ ನೆಪದಲ್ಲಿ ನೆರವು ನೀಡುವುದು ಬೇಡವೇ ಬೇಡ : JSW ಕಂಪನಿ ವಿರುದ್ಧ ಮತ್ತೆ ಸ್ಥಳೀಯ ಮೀನುಗಾರರ ಆಕ್ರೋಶ
JSW ಫೌಂಡೇಶನ್ ಸಾಮಾಜಿಕ ಕಳಕಳಿ ಪ್ರಶ್ನಿಸಿದ ಸ್ಥಳೀಯರು

ಅಂಕೋಲಾ: ತಾಲೂಕಿನ ಕೇಣಿಯಲ್ಲಿ ಸುಮಾರು 4 ಸಾವಿರ ಕೋಟಿಗೂ ಹೆಚ್ಚು ವೆಚ್ಚದ ಬೃಹತ್ ವಾಣಿಜ್ಯ ಬಂದರು ನಿರ್ಮಾಣ ಉದ್ದೇಶ ಹೊಂದಿರುವ ಖಾಸಗಿ ಕಂಪನಿ ಜೆ ಎಸ್ ಡಬ್ಲು (ಜಿಂದಾಲ್ ) , ಆರಂಭದಿಂದಲೂ ಸ್ಥಳೀಯ ಮೀನುಗಾರರು ಮತ್ತಿತರರ ಭಾರೀ ವಿರೋಧ ಎದುರಿಸುತ್ತ ಬರುವಂತಾಗಿದ್ದು, ಆ ಕಂಪನಿಯ ವತಿಯಿಂದ ಕೇಣಿ ಸುತ್ತ ಮುತ್ತಲಿನ ಶಾಲೆಗಳ ಮಕ್ಕಳಿಗೆ ಕಲಿಕಾ ಪರಿಕರಗಳನ್ನು ವಿತರಿಸಲು ಮುಂದಾದ ಕ್ರಮದ ವಿರುದ್ಧ ಬೆಲೆಕೇರಿ ಸೇರಿದಂತೆ ಇತರೆಡೆಯಿಂದ ಮತ್ತೆ ವ್ಯಾಪಕ ವಿರೋಧ ಕಂಡು ಬಂದು ,ಪೊಲೀಸರ ಮಧ್ಯಪ್ರವೇಶದೊಂದಿಗೆ ವಾತಾವರಣ ಸ್ವಲ್ಪ ತಿಳಿಗೊಂಡಿತಾದರೂ, ಕಲಿಕಾ ಸಾಮಗ್ರಿ ವಿತರಿಸಲು ಬಂದಿದ್ದ ಕಂಪನಿಯ ಕಡೆಯವರು ,ಬಂದ ದಾರಿಗೆ ಸುಂಕವಿಲ್ಲದಂತೆ ಕಲಿಕಾ ಪರಿಕರಗಳು ತುಂಬಿದ ಸರಕು ಸಾಗಾಟ ವಾಹನದೊಂದಿಗೆ ಮರಳಿ ಹೋಗಿದ್ದಾರೆ.
ತಾಲೂಕಿನ ಬೆಲೇಕೇರಿ, ಭಾವಿಕೇರಿ, ಕೇಣಿ, ಬಡಗೇರಿ ಗ್ರಾಮಗಳ ಶಾಲೆಗಳ ಮಕ್ಕಳಿಗೆ ಬ್ಯಾಗ್, ಛತ್ರಿ, ನೀರಿನ ಬಾಟಲಿ, ಕಂಪಾಸ್ ಪೆಟ್ಟಿಗೆ ಮೊದಲಾದ ವಸ್ತುಗಳನ್ನು ಒಳಗೊಂಡ ಸುಮಾರು 1 ಸಾವಿರಕ್ಕೂ ಹೆಚ್ಚಿನ ಕಿಟ್ ಗಳನ್ನು ಲಾರಿಯಲ್ಲಿ ತುಂಬಿ ಕಂಪನಿಗೆ ಸಂಬಂಧಿಸಿದ ಜನರು ಶಾಲೆಗಳ ಬಳಿ ಆಗಮಿಸುತ್ತಿದ್ದಂತೆ ಸ್ಥಳೀಯ ಮೀನುಗಾರರು ವ್ಯಾಪಕ ವಿರೋಧ ವ್ಯಕ್ತಪಡಿಸಿ ಬಂದರು ನಿರ್ಮಾಣ ಕಂಪನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಬಂದರು ಬೇಡ ಮೀನುಗಾರರನ್ನು ಬದುಕಲು ಬಿಡಿ ಎಂದು ಘೋಷಣೆಗಳನ್ನು ಕೂಗಿದ ಸ್ಥಳೀಯ ಮೀನುಗಾರರು, ನಾವು ಸ್ವಾಭಿಮಾನಿಗಳಾಗಿದ್ದು ನಮ್ಮ ಮಕ್ಕಳಿಗೆ , ನೀವು ಕಳ್ಳ ದಾರಿ ಹಿಡಿದು ನೀಡುವ ಕಿಟ್ ಬೇಡವೇ ಬೇಡ ಎಂದು ತಮ್ಮ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಕಳೆದ ಕೆಲ ದಶಕಗಳಲ್ಲಿ ಕಡಲಂಚಿನ ಮಕ್ಕಳ ಕಷ್ಟ- ಸುಖ ನೋಡಲು ಬಾರದವರಿಗೆ ಈಗ ಒಮ್ಮೇಲೆ ಇಲ್ಲಿನ ಬಡ ಜನರ ಮೇಲೆ ಕರುಣೆ ಉಕ್ಕಿ ಹರಿಯಲು ಕಾರಣವೇನು ಎಂದು ಪ್ರಶ್ನಿಸಿದ ಸ್ಥಳೀಯರು , ಈ ರೀತಿ ಬಿಟ್ಟಿ ಆಮಿಷ ತೋರಿಸಿ ಸ್ಥಳೀಯ ಜನರನ್ನು ಮರಳು ಮಾಡಲು, ಕಂಪನಿ ವಿರುದ್ಧ ಮಾತನಾಡದಂತೆ ಬಾಯಿ ಮುಚ್ಚಿಸುವ ನಿಮ್ಮ ತಂತ್ರಗಾರಿಕೆಗೆ ಮೀನುಗಾರರು ಮತ್ತು ಸ್ಥಳೀಯರು ಅವಕಾಶ ನೀಡುವುದಿಲ್ಲ ಎಂದು ಆಕ್ರೋಶದಿಂದ ನುಡಿದರು.
ಸಿಪಿಐ ನ ಚಂದ್ರಶೇಖರ ಮಠಪತಿ ಮತ್ತು ಪಿ ಎಸ್ ಐ ಉದ್ದಪ್ಪ ಧರೆಪ್ಪನವರ ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ , ಸ್ಥಳೀಯರೊಂದಿಗೆ ಮತ್ತುಕಂಪನಿ ಕಡೆಯವರೆಂದು ಹೇಳಿಕೊಂಡ ಬಂದವರೊಂದಿಗೆ ಮಾತುಕತೆ ನಡೆಸಿದರು. ವಾತಾವರಣ ವಿಕೋಪಕ್ಕೆ ಹೋಗದಂತೆ ಸ್ಥಳೀಯರನ್ನು ಪೊಲೀಸರು ಸಮಾಧಾನಪಡಿಸುವುದರೊಂದಿಗೆ, ಕಲಿಕಾ ಕಿಟ್ ವಿತರಿಸಲು ಬಂದವರು ಕಿಟ್ ಗಳನ್ನು ವಿತರಿಸದೇ ಮರಳಿ ಹೋದರು.
ತಾಲೂಕಿನ ಕೇಣಿ ಬಳಿ ಬೃಹತ್ ವಾಣಿಜ್ಯ ಬಂದರು ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದ್ದು ಈ ಯೋಜನೆಯಿಂದ ಮೀನುಗಾರಿಕೆಗೆ
ತೊಂದರೆಯಾಗಿ ಮೀನುಗಾರರು ತಮ್ಮ ಮೂಲ ಕಸುಬನ್ನು ಕಳೆದುಕೊಂಡು ಅತಂತ್ರರಾಗಲಿದ್ದಾರೆ ಎಂದು ಮೀನುಗಾರರು ಆರಂಭದಿಂದಲೇ ಯೋಜನೆಯನ್ನು ವಿರೋಧಿಸುತ್ತ ಬಂದಿದ್ದು ಕಾನೂನಾತ್ಮಕ ಹೋರಾಟ ಸೇರಿದಂತೆ ಹಲವಾರು ರೀತಿಯ ಹೋರಾಟಗಳನ್ನು ನಡೆಸುತ್ತಾ ಬಂದಿದ್ದು ಇದೀಗ ಬಂದರು ನಿರ್ಮಾಣ ಕಂಪನಿ ವತಿಯಿಂದ ಶಾಲಾ ಮಕ್ಕಳಿಗೆ ಕಲಿಕಾ ಸಾಮಗ್ರಿಗಳನ್ನು ವಿತರಿಸುತ್ತಿರುವುದು ಮುಂದೆ ನಡೆಯುವ ಸಾರ್ವಜನಿಕ ಅಹವಾಲು ಸಭೆಯಲ್ಲಿ ಕಂಪನಿ ಪರವಾಗಿ ಒಳ್ಳೆಯ ಅಭಿಪ್ರಾಯ ವ್ಯಕ್ತವಾಗಲಿ, ಎಂಬಿತ್ಯಾದಿ ಚರ್ಚೆ ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿ ಸದ್ದು ಮಾಡುತ್ತಿದ್ದು ,ಕಂಪನಿಯ ಆಮಿಷಕ್ಕೆ ಯಾರು ಒಳಗಾಗಬಾರದೆಂದು ಸ್ಥಳೀಯ ಮೀನುಗಾರ ಮುಖಂಡರು ಮತ್ತು ಇತರರ ತಮ್ಮ ಸಮಾಜ ಹಾಗೂ ಇತರೆ ಸ್ಥಳೀಯರಿಗೆ ಎಚ್ಚರಿಸುತ್ತಿದ್ದಾರೆ.
ಇತ್ತೀಚಿನ ಕೆಲ ಬೆಳವಣಿಗೆ ಹಾಗೂ ಮತ್ತಿತರ ಕಾರಣಗಳಿಂದ ಪ್ರತಿಭಟನೆ ಕಾವು ಮತ್ತೆ ಹೆಚ್ಚಿಸುವ ಸಿದ್ಧತೆಯಲ್ಲಿರುವ ಸ್ಥಳೀಯರು ಪತ್ರಿಕಾಗೋಷ್ಠಿ ನಡೆಸಿ ,ಇಂತಹ ವಿಷಯಗಳ ಬಗ್ಗೆ ಸುದೀರ್ಘ ಪ್ರಕಟಣೆ ಹೊರಡಿಸುವ ಮೂಲಕ ಮತ್ತೆ ಹೋರಾಟದ ಹಾದಿ ತುಳಿಯುವ ನಿರೀಕ್ಷೆ ಇದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ