ವಿದ್ಯಾರ್ಥಿಗಳಿಗೆ ಭಗವದ್ಗೀತೆ ನೀಡಿ ಭವಿಷ್ಯಕ್ಕೆ ಶುಭ ಕೋರಿದ ಪ್ರಮುಖ ಸೌಹಾರ್ದ ಸಹಕಾರಿ
ಸಂಸ್ಕೃತ ಕಲಿಕೆಯೊಂದಿಗೆ ಸುಸಂಸ್ಕೃತ ರಾಗುತ್ತಿರುವ ವಿದ್ಯಾರ್ಥಿಗಳಿಂದ ಧನ್ಯತೆಯ ಮಾತು

ಅಂಕೋಲಾ : ಇಲ್ಲಿ ನೂತನವಾಗಿ ಆರಂಭಗೊಂಡಿರುವ ಬಿಬಿ ಸೌಹಾರ್ದ ಕೋ ಆಪರೇಟಿವ್ ಸೊಸೈಟಿಯು ಕುಮಟಾ ತಾಲ್ಲೂಕಿನ ಬರ್ಗಿಯ ಸರ್ಕಾರಿ ಪ್ರೌಢ ಶಾಲೆಗೆ ವಿದ್ಯಾರ್ಥಿಗಳಿಗೆ ಗೀತಾ ಬುಕ್ ಹೌಸ್ ಗೋರಕ್ಪುರವು ಪ್ರಕಾಶಿಸಿದ ಅರ್ಥ- ತಾತ್ಪರ್ಯ- ವ್ಯಾಖ್ಯಾನಸಹಿತವಾದ 496 ಪುಟಗಳ ಬಾಳಿಕೆಯ ಭಗವದ್ಗೀತೆಯ ಕೃತಿಗಳನ್ನು ಕೊಡುಗೆಯಾಗಿ ನೀಡಿದೆ.
ಬರ್ಗಿಯ ಶ್ರೀ ಮಹಾಲಿಂಗೇಶ್ವರ ವಿದ್ಯಾಪೀಠದ ಕೋರಿಕೆಯ ಮೇರೆಗೆ ಅಲ್ಲಿನ ಸರ್ಕಾರಿ ಪ್ರೌಢ ಶಾಲೆಯಲ್ಲಿ ಸಂಸ್ಕೃತವನ್ನು ಆಯ್ದು ಅಭ್ಯಸಿಸುತ್ತಿರುವ ವಿದ್ಯಾರ್ಥಿಗಳ ಸಂಸ್ಕೃತ ಕಲಿಕೆಯನ್ನು ಉತ್ತೇಜಿಸುವ ದೃಷ್ಟಿಯಿಂದ ಭಾರತೀಯ ಸಂಸ್ಕೃತಿಯ ಅತ್ಯುತ್ಕೃಷ್ಟ ಗ್ರಂಥವಾದ ಗೀತೆಯ ಹೊತ್ತಿಗೆಗಳನ್ನು ಕೊಡುಗೆಯಾಗಿ ನೀಡಲಾಗಿದೆ ಎಂದು ಪ್ರಾಯೋಜಕರಾದ ಬಿಬಿ ಸೌಹಾರ್ದ ಕೋ – ಆಪರೇಟಿವ್ ಸೊಸೈಟಿಯ ಸಂಸ್ಥಾಪಕ ಅಧ್ಯಕ್ಷರು ಹಾಗೂ ಅಂಕೋಲಾ ಕನ್ನಡ ಸಂಘದ ನಿಯೋಜಿತ ಅಧ್ಯಕ್ಷರಾಗಿರುವ ಎನ್. ಬಿ. ನಾಯಕ ಸೂರ್ವೆಯವರು ಅಭಿಪ್ರಾಯಸಿರುತ್ತಾರೆ.
ಫಲಾನುಭವಿ ವಿದ್ಯಾರ್ಥಿ ನಂದನ ನಾರಾಯಣ ನಾಯಕರವರು, ಬರ್ಗಿ ಪ್ರೌಢ ಶಾಲೆಯಲ್ಲಿ ತಾನು ಸಂಸ್ಕೃತವನ್ನು ಆಯ್ದು ಅಭ್ಯಸಿಸುತ್ತಿರುವುದರಿಂದ ಸಂಸ್ಕೃತ ಕಲಿಕೆಗೆ ಉತ್ತೇಜಕವಾದ ಪ್ರೋತ್ಸಾಹವು ಗರಿಷ್ಠ ಮಟ್ಟದಲ್ಲಿ ಲಭ್ಯವಾಗುತ್ತಿರುವ ಜೊತೆಗೆ, ಸಂಸ್ಕೃತಿಯ ಕುರಿತು ವಿಶೇಷವಾದ ಅರಿವನ್ನು ಹೊಂದುತ್ತಿರುವ ಬಗ್ಗೆ ಸಂತಸವನ್ನು ವ್ಯಕ್ತಪಡಿಸಿದರು.
ಸಂಸ್ಕೃತ ವಿದ್ಯಾರ್ಥಿನಿ ರಮ್ಯಾ ಉಮೇಶ ಪಟಗಾರರವರು, ತಾನು ಸಂಸ್ಕೃತ ವಿದ್ಯಾರ್ಥಿನಿ ಎಂದುಕೊಳ್ಳುವುದೇ ಹೆಮ್ಮೆಯ ವಿಷಯವಾಗಿದ್ದು,ಬರ್ಗಿ ಪ್ರೌಢಶಾಲೆಗೆ ದಾಖಲಾದ ಒಂದೇ ತಿಂಗಳಲ್ಲಿ ತನಗೆ ಸಂಸ್ಕೃತ ವಿಷಯದ ಕುರಿತು ವಿಶೇಷವಾದ ಒಲವು ಮೂಡಿದ್ದು, ತಮ್ಮ ಸಂಸ್ಕೃತ ಅಧ್ಯಾಪಕರ ಕಳಕಳಿಯಿಂದ ಇದುವರೆಗೆ ಆರು ಕೊಡುಗೆಗಳಿಗೆ ಭಾಜನಳಾಗಿದ್ದು, ಭಗವದ್ಗೀತೆಯ ಪುಸ್ತಕವನ್ನು ನೀಡಿ ಪುಸ್ತಕ ಪ್ರೀತಿಯನ್ನು ತೋರಿರುವ ಅಂಕೋಲಾದ ಬಿಬಿ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿಗೆ ಆಭಾರಿಯಾಗಿದ್ದೇನೆ ಎಂದರು.
ಗೀತಾ ಹೊತ್ತಿಗೆಗಳನ್ನು ಪ್ರಧಾನ ಮಾಡುವ ಹೊತ್ತಿನಲ್ಲಿ ಶಾಲಾ ಮುಖ್ಯಾಧ್ಯಾಪಕರಾದ ಮಧುಕೇಶ್ವರ ನಾಯ್ಕ,ಸಂಸ್ಕೃತ ಅಧ್ಯಾಪಕರಾದ ಮಂಜುನಾಥ ಗಾಂವಕರ್ ಬರ್ಗಿ, ಸಿಬ್ಬಂದಿಗಳಾದ ಫಿರೋಜ್ ಖಾನ್ ಹಾಗೂ ಪುನೀತ್ ಕುಮಾರ್ ಮೊದಲಾದವರಿದ್ದರು.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ