Join Our

WhatsApp Group
Important
Trending

ನಿಯಂತ್ರಣ ಕಳೆದುಕೊಂಡು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕಾರು: ಏನಾಯ್ತು ನೋಡಿ?

ಅಂಕೋಲಾ: ಗಟಾರದಲ್ಲಿ ಹರಿಯಬೇಕಿದ್ದ ನೀರು,ಹೆದ್ದಾರಿಗೆ ನುಗ್ಗಿ ಜೋರಾಗಿ ಹರಿಯಲಾರಂಭಿಸಿದ್ದು,ಅದರ ಅರಿವಿರದೇ ಚಾಲಕನೊಬ್ಬ ತನ್ನ ಕಾರು ಚಲಾಯಿಸಿದ ಪರಿಣಾಮ,ಚಾಲಕನ ನಿಯಂತ್ರಣ ತಪ್ಪಿದ ಕಾರು ಹಾವಿನಂತೆ ತೆವಳಿ,ಡಿವೈಡರ್ ಬಳಿ ಇದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿಪಡಿಸಿಕೊಂಡು, ಡಿವೈಡರ್ ದಾಟಿ, ಹೆದ್ದಾರಿಯ ಇನ್ನೊಂದು ಮಗ್ಗುಲಿಗೆ ಹೊರಳಿ ಜಖಂಗೊಂಡ ಘಟನೆ ಅಂಕೋಲಾದಲ್ಲಿ ಸಂಭವಿಸಿದೆ.

ಅಂಕೋಲಾ ತಾಲೂಕಿನಲ್ಲಿ ಪಟ್ಟಣ ವ್ಯಾಪ್ತಿಯ ಕೋಟೆವಾಡ ಹಾಗೂ ಪುರಲಕ್ಕಿ ಬೇಣದ ಗಡಿ ಪ್ರದೇಶದಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರೊಂದು ರಸ್ತೆ ಅಪಘಾತಕ್ಕೀಡಾಗಿದೆ.ಮಾರ್ಕೆಟಿಂಗ್ ಫೀಲ್ಡ್ ನಲ್ಲಿ ಕೆಲಸ ಮಾಡುತ್ತಾರೆ ಎನ್ನಲಾದ ಮಂಗಳೂರು ಕಡೆಯ ಯುವಕರಿಬ್ಬರು,ಕಾರವಾರ ಕಡೆಯಿಂದ ಕುಮಟಾ ಕಡೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ, ದಾರಿ ಮಧ್ಯೆ ಅಂಕೋಲದಲ್ಲಿ ಈ ಅವಘಡ ಸಂಭವಿಸಿದೆ.

KA O1 MP3993 ನೋಂದಣಿ ಸಂಖ್ಯೆಯ ಕಾರನ್ನು ಚಲಾಯಿಸುತ್ತಿದ್ದ ಚಾಲಕ,ಹೆದ್ದಾರಿಯಲ್ಲಿ ಜೋರಾಗಿ ಹರಿಯುತ್ತಿದ್ದ ನೀರನ್ನು ಗಮನಿಸಿದೇ ಅಥವಾ ನೀರಿನ ಹರಿಯುವಿಕೆ ಪ್ರಮಾಣ ಅಂದಾಜಿಸಲಾಗದೆ ಕಾರಿನ ಮೇಲಿವ ತನ್ನ ನಿಯಂತ್ರಣ ಕಳೆದುಕೊಂಡ ಎನ್ನಲಾಗಿದೆ. ಇದರಿಂದ ಕಾರು ಹೆದ್ದಾರಿಯಲ್ಲಿ ಹಾವಿನಂತೆ ತೆವಳಿ ,ಹೆದ್ದಾರಿ ಡಿವೈಡರ್ ಬಳಿ ಇರುವ ವಿದ್ಯುತ್ ಕಂಬಕ್ಕೆ ಡಿಕ್ಕಿಪಡಿಸಿಕೊಂಡಿದೆ. ಈ ವೇಳೆ ವಿದ್ಯುತ್ ಕಂಬ ಕಿತ್ತು ಬಿದ್ದು , ಕಾರು ಸಹ ಡಿವೈಡರ್ ದಾಟಿ,ಹೆದ್ದಾರಿಯ ಇನ್ನೊಂದು ಮಗ್ಗುಲಿಗೆ ಹೊರಳಿ ನಿಂತು ,ಜಖ ಗೊಂಡಿದೆ.

ಸೀಟಿನ ಏರ್ ಬ್ಯಾಗ್ ಓಪನ್ ಆಗಿದ್ದರಿಂದ, ಹಾಗೂ ಮಧ್ಯಾಹ್ನದ ವೇಳೆಯಲ್ಲಿ ವಾಹನ ಸಂಚಾರ ಸ್ವಲ್ಪ ಕಡಿಮೆ ಇದ್ದರಿಂದ ಅದೃಷ್ಟವಶಾತ್ ಕಾರಿನಲ್ಲಿದ್ದವರಿಗಾಗಲಿ, ಇತರರಿಗಾಗಲಿ ಪ್ರಾಣಪಾಯ ಸಂಭವಿಸಿಲ್ಲ. ಕಾರು ವಿದ್ಯುತ್ ಕಂಬಕ್ಕೆ ಗುದ್ದಿದ ಪರಿಣಾಮ ಕಂಬ ಕಿತ್ತು ಮುರಿದು ಬಿದ್ದಿದ್ದು,ಸುದ್ದಿ ತಿಳಿದ ಹೆಸ್ಕಾಂ ಅಧಿಕಾರಿ ರಾಘವೇಂದ್ರ ನಾಯಕ ಹಾಗೂ ಸಿಬ್ಬಂದಿಗಳು ಕೂಡಲೇ ಸ್ಥಳಕ್ಕೆ ಆಗಮಿಸಿ, ಹೆದ್ದಾರಿಯ ಎರಡು ಕಡೆ ,ಅಡ್ಡಲಾಗಿ ಬಿದ್ದಿದ್ದ ವಿದ್ಯುತ್ ತಂತಿಗಳನ್ನು ಹೆದ್ದಾರಿ ಅಂಚಿಗೆ ಸರಿಸಿ ,ಇತರೆ ವಾಹನಗಳ ಓಡಾಟಕ್ಕೆ ಅನುಕೂಲ ಮಾಡಿಕೊಟ್ಟರು.

ಅಂಕೋಲಾ ಪೊಲೀಸ್ ಠಾಣೆಯ ಸಂಚಾರ ವಿಭಾಗದ ಪಿಎಸ್ಐ ಸುನಿಲ್ ಹುಲ್ಲೊಳ್ಳಿ ಮತ್ತು ಸಿಬ್ಬಂದಿಗಳು ಸ್ಥಳ ಪರಿಶೀಲಿಸಿ ಕರ್ತವ್ಯ ನಿರ್ವಹಿಸಿದರು. ಚತುಷ್ಪಥ ಹೆದ್ದಾರಿ ಗುತ್ತಿಗೆ ಕಾಮಗಾರಿ ಪಡೆದಿರುವ ಐಆರಬಿ ಕಂಪನಿಯವರು ,ಹೆದ್ದಾರಿ ಅಂಚಿಗೆ ನೀರು ಸರಾಗವಾಗಿ ಹರಿದು ಹೋಗಲು ಅಲ್ಲಿಲ್ಲಿ ಗಟಾರ ವ್ಯವಸ್ಥೆ ಸರಿಪಡಿಸದಿರುವುದರಿಂದ ಹೆದ್ದಾರಿಯಲ್ಲಿ ನೀರು ನುಗ್ಗುವಂತಾಗಿ ,ಇಂತಹ ಅವಘಡ ಗಳಿಗೆ ಕಾರಣವಾಗುತ್ತಿದೆ ಎನ್ನಲಾಗಿದ್ದು,ಕೂಡಲೇ ಸಂಬಂಧಿತ ಕಂಪನಿ ಮತ್ತು ಎನ್ ಹೆಚ್ ಎ ಐ ,ಅಂತ ಸ್ಥಳಗಳನ್ನು ಗುರುತಿಸಿ,ಅಲ್ಲಿ ಸೂಕ್ತ ಕ್ರಮ ಕೈಗೊಂಡು,ಮತ್ತಷ್ಟು ಅವಗಡಗಳಾಗದಂತೆ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕಿದೆ.

ಇಲ್ಲದಿದ್ದರೆ ಹೆದಾರಿಯಲ್ಲಿ ನಿಲ್ಲುವ ನೀರು ಮತ್ತು ಆಗಾಗ ಹೆದ್ದಾರಿಗೆ ನುಗ್ಗುವ ನೀರಿನಿಂದ ಅಪಾಯ ಮತ್ತು ಅನಾಹುತ ಹಾಗೂ ನಷ್ಟವಾದರೆ , ಸಂಬಧಿಸಿದವರೇ ಹೊಣೆ ಎನ್ನುತ್ತಾರೆ ಸಾರ್ವಜನಿಕರು. ಮಳೆಗಾಲ ಮತ್ತಿತರ ಕಾರಣಗಳಿಂದ ,ನೀರು ನುಗ್ಗುವುದು ಮತ್ತು ಜಾರುವಿಕೆ,ಗುಡ್ಡ ಕುಸಿತದಂತ ಅಪಾಯದ ಸಾಧ್ಯತೆ ಇರುವುದರಿಂದ, ರಸ್ತೆ ಸಂಚಾರಿಗಳು ಸುರಕ್ಷಿತ ಚಾಲನೆಗೆ ಒತ್ತು ನೀಡಬೇಕಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button