Join Our

WhatsApp Group
Big News
Trending

ಒಣಕಸ ವಿಲೇವಾರಿ ಘಟಕದ ನಿರ್ಮಾಣಕ್ಕೆ ಅನುಮೋದನೆ : ಪುರಸಭಾ ಸದಸ್ಯ ರಾಜೇಶ್ ಪೈ ಆಕ್ರೋಶ

ಕುಮಟಾ: ಪಟ್ಟಣದ ಪುರಸಭೆಯ ಸಾಮಾನ್ಯ ಸಭೆಯು ಪುರಸಭಾ ಅಧ್ಯಕ್ಷೆ ಸುಮತಿ ಭಟ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಪುರಸಭಾ ಸದಸ್ಯರಾದ ರಾಜೇಶ ಪೈ ಅವರು ಪುರಸಭಾ ವ್ಯಾಪ್ತಿಯ ಚಿತ್ರಗಿಯಲ್ಲಿ ಒಣ ಕಸ ವಿಲೇವಾರಿ ಘಟಕದ ನಿರ್ಮಾಣಕ್ಕೆ ಅನುಮೋದನೆ ನೀಡಿರುವ ಕುರಿತು ತಮ್ಮ ವಿರೋಧವನ್ನು ವ್ಯಕ್ತಪಡಿಸಿದರು.

ಪುರಸಭೆಯ ನಿರ್ಣಯದಂತೆ ಚಿತ್ರಗಿಯ ಸರ್ವೆ ನಂಬರ್ 84 ರಲ್ಲಿ ಒಣಕಸ ವಿಲೇವಾರಿ ಘಟಕ ನಿರ್ಮಾಣ ಮಾಡಲು ಈ ಹಿಂದೆ ಸದಸ್ಯರ ಒಪ್ಪಿಗೆ ಕೇಳಲಾಗಿತ್ತು. ಆ ಸಮಯದಲ್ಲಿ ಕೆಲ ಸದಸ್ಯರು ಈ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣಕ್ಕೆ ವಿರೋಧವನ್ನು ಮಾಡಿದ್ದರು. ಆದರೆ ಇದೀಗ ಮತ್ತೆ ಆ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣಕ್ಕೆ ಅನುಮೋದನೆ ನೀಡಿದ್ದಾರೆ ಎಂದು ಪುರಸಭಾ ಸದಸ್ಯರಾದ ರಾಜೇಶ ಪೈ ಹಾಗೂ ಸಂತೋಷ ನಾಯ್ಕ ಅವರು ಅಧ್ಯಕ್ಷರನ್ನು ಮತ್ತು ಮುಖ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಕುಮಟಾ ಪಟ್ಟಣದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ ಸಂಗ್ರಹಣೆಯ ವಿಲೇವಾರಿಗಾಗಿ ಈಗಾಗಲೇ ಚಿತ್ರಗಿ ಭಾಗದಲ್ಲಿ ಒಂದು ತ್ಯಾಜ್ಯ ನಿರ್ವಹಣಾ ಘಟಕ ಕಾರ್ಯ ನಿರ್ವಹಿಸುತ್ತಿದೆ. ಅದರೂ ಸಹ ಪುರಸಭಾ ಸದಸ್ಯರ ವಿರೋಧದ ನಡುವೆಯೂ ಇನ್ನೊಂದು ತ್ಯಾಜ್ಯ ನಿರ್ವಹಣಾ ಘಟಕ ನಿರ್ಮಾಣಕ್ಕೆ ಅನುಮೋದನೆ ನೀಡಿರುವ ಕುರಿತು ಸದಸ್ಯರು ತಮ್ಮ ವಿರೋಧವನ್ನು ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಪುರಸಭಾ ಅಧ್ಯಕ್ಷರಾದ ಸುಮತಿ ಭಟ್ ಅವರು ಪುರಸಭೆಯ ಎಲ್ಲಾ ಸದಸ್ಯರ ಸರ್ವಾನುಮತದ ನಿರ್ಣಯದ ಮೇರೆಗೆ ಈ ತ್ಯಾಜ್ಯ ನಿರ್ವಹಣಾ ಘಟಕದ ನಿರ್ಮಾಣ ಕಾರ್ಯವನ್ನು ತಡೆಹಿಡಿಯುವುದಾಗಿ ತಿಳಿಸಿದರು. ನಂತರ ಈ ಹಿಂದಿನ ಸಭೆಯಲ್ಲಿ ತಿಳಿಸಿದ ಹಾಗೆ ಪುರಸಭೆಯ ಜಮಾ ಖರ್ಚುಗಳ ಅನುಮೋದನೆಯನ್ನು ನೀಡಲಾಯಿತು.

ಕುಮಟಾ ಪುರಸಭೆಯ ವತಿಯಿಂದ ಉಚ್ಛ ನ್ಯಾಯಾಲಯದಲ್ಲಿ ದಾಖಲಾಗಿರುವ ಪ್ರಕರಣಗಳ ಬಗ್ಗೆ ವಕಾಲತ್ತು ವಹಿಸಿಕೊಳ್ಳಲು ನ್ಯಾಯವಾದಿಗಳಾದ ದತ್ತಾತ್ರಯ ಹೆಬ್ಬಾರ ಇವರನ್ನು ನೇಮಿಸಿಕೊಳ್ಳುವ ಬಗ್ಗೆ ಚರ್ಚೆ ನಡೆಸಲಾಯಿತು. ಪುರಸಭೆಯಿಂದ ವಿವಿಧ ಕಾಮಗಾರಿಗಳಿಗೆ ಸಂಬ0ಧಿಸಿದoತೆ ಹೊಸದಾಗಿ ಟೆಂಡರ್ ಕರೆಯುವ ಕುರಿತು ಮತ್ತು ಈಗಾಗಲೇ ಟೆಂಡರ್ ಕರೆದಿರುವ ಕಾಮಗಾರಿಗಳ ಬಗ್ಗೆ ಚರ್ಚೆ ನಡೆಸಲಾಯಿತು.

ಪುರಸಭಾ ವ್ಯಾಪ್ತಿಯಲ್ಲಿ ಬರುವ ಬೀದಿ ದೀಪಗಳ ಸಮಸ್ಯೆಯ ಬಗ್ಗೆ ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ಪುರಸಭಾ ಅಧ್ಯಕ್ಷೆ ಸುಮತಿ ಭಟ್, ಮುಖ್ಯಾಧಿಕಾರಿ ಎಂ. ಆರ್. ಸ್ವಾಮಿ, ಪುರಸಭಾ ಸದಸ್ಯರಾದ ರಾಜೇಶ ಪೈ, ಸಂತೋಷ ನಾಯ್ಕ, ಸೂರ್ಯಕಾಂತ ಗೌಡ, ಮೋಹಿನಿ ಗೌಡ, ಎಂ.ಟಿ. ನಾಯ್ಕ, ಬಲೀಂದ್ರ ಗೌಡ ಸೇರಿದಂತೆ ಪುರಸಭೆಯ ಅಧಿಕಾರಿಗಳು ಹಾಜರಿದ್ದರು.

ವಿಸ್ಮಯ ನ್ಯೂಸ್ ದೀಪೇಶ ನಾಯ್ಕ ಕುಮಟಾ…

Back to top button