ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ರೋಟರಿ ಕ್ಲಬ್ ಭಟ್ಕಳ ವತಿಯಿಂದ ಮೇಜು, ಬೆಂಚ್ ಹಸ್ತಾಂತರ : ಅರ್ಥಪೂರ್ಣ ಕಾರ್ಯಕ್ರಮ

ಭಟ್ಕಳ: ರೋಟರಿ ಸಂಸ್ಥೆ ಶಿಕ್ಷಣಕ್ಕೆ ಹೆಚ್ಚು ಆದ್ಯತೆಯನ್ನು ನೀಡುತ್ತಿದ್ದು, ಹ್ಯಾಪಿ ಸ್ಕೂಲ್ ಪರಿಕಲ್ಪನೆಯ ಅಡಿಯಲ್ಲಿ ಶಾಲೆಗಳಲ್ಲಿರುವ ಕೊರತೆಯನ್ನು ಹುಡುಕಿ ಅದನ್ನು ಪೂರೈಸುವ ಕೆಲಸ ಮಾಡುತ್ತಿದ್ದೇವೆ ಎಂದು ರೋಟರಿ ಕ್ಲಬ್ ಅಸಿಸ್ಟಂಟ್ ಗೌವರ್ನರ್ ಮಹೇಶ ಕಲ್ಯಾಣಪುರ ಹೇಳಿದರು.
ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಸೌಲಭ್ಯ
ಭಟ್ಕಳ ತಾಲೂಕಿನ ಹಳ್ಳಿಗಾಡು ಪ್ರದೇಶವಾದ ಅಬ್ರೆಯಲ್ಲಿರುವ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ರೋಟರಿ ಕ್ಲಬ್ ಭಟ್ಕಳ ವತಿಯಿಂದ ಡೆಸ್ಕ್ ಹಾಗೂ ಬೆಂಚ್ಗಳನ್ನು ಹಸ್ತಾಂತರಿಸಿ ಮಾತನಾಡಿದ ಅವರು ಇಂದಿನ ಮಕ್ಕಳೆ ಮುಂದಿನ ಪ್ರಜೆಗಳು. ಅವರ ದೈಹಿಕ, ಮಾನಸಿಕ ಬೆಳವಣಿಗೆ ಸಂಪೂರ್ಣವಾಗಬೇಕಾದರೆ ವಿದ್ಯಾರ್ಥಿ ಜೀವನದಲ್ಲಿ ಅವರಿಗೆ ಅನುಕೂಲ ಕಲ್ಪಿಸಿಕೊಡಬೇಕು. ಮುಂದಿನ ದಿನಗಳಲ್ಲಿ ಶಾಲೆಗೆ ಏನಾದರು ಅವಶ್ಯಕತೆ ಇದ್ದರೆ ರೋಟರಿ ಕ್ಲಬ್ ಅದನ್ನು ಒದಗಿಸಿಕೊಡುವ ಪ್ರಯತ್ನ ಮಾಡುತ್ತದೆ ಎಂದರು.
ಮಕ್ಕಳ ಸಮಗ್ರ ಬೆಳವಣಿಗೆಗೆ ಪ್ರೋತ್ಸಾಹ
ರೋಟರಿ ಕ್ಲಬ್ ಭಟ್ಕಳದ ಕಾರ್ಯದರ್ಶಿ ಮಿಸ್ಬಾ ಉಲ್ ಹಕ್ ಮಾತನಾಡಿ ಸಮಾಜಸೇವೆಯ ದೃಷ್ಟಿಯಿಂದ ಪ್ರತಿ ತಾಲೂಕಗಳಲ್ಲಿನ ಸಮಸ್ಯೆಗಳನ್ನು ಗುರುತಿಸಿ ರೋಟರಿ ಕ್ಲಬ್ ತನ್ನ ವ್ಯಾಪ್ತಿಯಲ್ಲಿ ಸಹಾಯ ಸಹಕಾರ ಮಾಡುತ್ತಿದೆ ಎಂದರು. ರೋಟರಿ ಕ್ಲಬ್ನ ಸದಸ್ಯರಾದ ಶ್ರೀನಿವಾಸ ಪಡಿಯಾರ ಮಾತನಾಡಿ ಮುಂದಿನ ದಿನಗಳಲ್ಲಿ ಶಾಲೆಯಲ್ಲಿರುವ 1 ರಿಂದ 3 ನೇ ತರಗತಿಯ ಮಕ್ಕಳಿಗಾಗಿ ನಲಿ ಕಲಿ ಯೋಜನೆಗಾಗಿ ಮೇಜು ಹಾಗೂ ಖುರ್ಚಿಗಳನ್ನು ಒದಗಿಸಿಕೊಡುತ್ತೇವೆ ಎಂದರು.
ಕನ್ನಡವೆಂಬುದು ಕೇವಲ ಬಾಯಿ ಮಾತಿಗಷ್ಟೇ ಸೀಮಿತವಾಗಿದೆ ಎನ್ನುವಂತ ಪರಿಸ್ಥಿತಿ ಇದೆ. ಸಂಘಸoಸ್ಥೆಗಳು ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡುತ್ತಿರುವುದು ನಿಜಕ್ಕೂ ಆಶಾದಾಯಕ ಬೆಳವಣಿಗೆಯಾಗಿದ್ದು , ಮುಂದಿನ ದಿನಗಳಲ್ಲಾದರೂ ನಮ್ಮನ್ನಾಳುವ ಸರ್ಕಾರಗಳು ಸರ್ಕಾರಿ ಶಾಲೆಯ ಕುರಿತಾಗಿ ಗಮನಹರಿಸುವಂತಾಗಬೇಕಿದೆ.
ವಿಸ್ಮಯ ನ್ಯೂಸ್, ಈಶ್ವರ್ ನಾಯ್ಕ, ಭಟ್ಕಳ