Important
Trending

ದ್ವಿಚಕ್ರ ವಾಹನ ಸವಾರರೇ ಹುಷಾರ್! ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯ

ಕುಮಟಾ: ನೀವು ದಿನನಿತ್ಯ ಬೈಕ್ ಓಡಿಸುತ್ತಿರುವೀರಾ? ಕಚೇರಿ, ಶಾಂಪಿAಗ್, ಕಾಲೇಜು, ಮಾರುಕಟ್ಟೆ ಇತ್ಯಾದಿ ಅಗತ್ಯ ಚಟುವಟಿಕೆಗಳಿಗಾಗಿ ತೆರಳುವಾಗ ಸ್ನೇಹಿತರನ್ನು ಅಥವಾ ಪತ್ನಿಯನ್ನು ಹಿಂದೆ ಕುಳ್ಳಿರಿಸಿ ತೆರಳುವ ಹವ್ಯಾಸವಿದ್ದಲ್ಲಿ ಈ ಕೂಡಲೇ ಹೆಚ್ಚುವರಿ ಹೆಲ್ಮೆಟ್ ವೊಂದನ್ನು ನಿಮ್ಮ ಬಳಿಯಿಟ್ಟುಕೋಳ್ಳುವುದು ಒಳ್ಳೆಯದು.

ಇತ್ತಿಚಿನಗಳಲ್ಲಿ ಅಪಘಾತ ಪ್ರಮಾಣ ಹೆಚ್ಚುತ್ತಿದ್ದು, ಇದರಿಂದ ಪ್ರಾಣಾಪಾಯಗಳು ಅಧಿಕವಾಗುತ್ತಿದೆ. ಇದನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಹೌದು, ಇತ್ತೀಚಿಗೆ ಹೆಚ್ಚುತ್ತಿರುವ ಅಪಘಾತಗಳನ್ನು ತಡೆಯುವ ದೃಷ್ಟಿಯಿಂದ ಕುಮಟಾ ನಗರದ ಸಂಚಾರ ಸುರಕ್ಷತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕುಮಟಾ ಪೊಲೀಸ್ ಠಾಣೆಯು ಮಹತ್ವದ ಕ್ರಮ ಕೈಗೊಂಡಿದೆ.

ಹೆಲ್ಮೆಟ್ ಜೀವ ಉಳಿಸುವ ಜೀವರಕ್ಷಕ

ಇಷ್ಟು ದಿನ ಕೇವಲ ದ್ವಿಚಕ್ರ ವಾಹನ ಸವಾರರಿಗೆ ಮಾತ್ರ ಸೀಮಿತವಾಗಿದ್ದ ಹೆಲ್ಮೆಟ್, ಇನ್ನು ಮುಂದೆ ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯವಾಗಿ ಬಳಸುವಂತೆ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ. ಇತ್ತೀಚೆಗೆ ಹೆಚ್ಚುತ್ತಿರುವ ರಸ್ತೆ ಅಪಘಾತಗಳನ್ನು ಗಣನೆಗೆ ತೆಗೆದುಕೊಂಡು ಈ ಹೊಸ ನಿಯಮವನ್ನು ಜಾರಿಗೊಳಿಸಲು ನಿರ್ಧರಿಸಲಾಗಿದೆ. ಈ ನಿಯಮ ಪಾಲನೆಗಾಗಿ ನಾಗರಿಕರಿಗೆ ಅಕ್ಟೋಬರ್ 1 ರಿಂದ 15 ದಿನಗಳ ಕಾಲಾವಕಾಶ ನೀಡಲಾಗಿದೆ.

ಪೊಲೀಸರ ಎಚ್ಚರಿಕೆ: ನಿಯಮ ಪಾಲಿಸದವರಿಗೆ ಕಾನೂನು ಕ್ರಮ

ಈ ಅವಧಿಯಲ್ಲಿ ಎಲ್ಲರೂ ಹೊಸ ನಿಯಮಕ್ಕೆ ಹೊಂದಿಕೊಳ್ಳಬೇಕು ಎಂದು ಪೊಲೀಸ್ ಇಲಾಖೆ ಸೂಚಿಸಿದೆ. 15 ದಿನಗಳ ನಂತರ ಹೆಲ್ಮೆಟ್ ಇಲ್ಲದೆ ಹಿಂಬದಿ ಸವಾರರು ಸಂಚರಿಸುವುದು ಕಂಡು ಬಂದಲ್ಲಿ ಕಾನೂನು ಪ್ರಕಾರ ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

ಹೆಲ್ಮೆಟ್ ಜೀವರಕ್ಷಕ ಎಂಬುದು ಸತ್ಯ. ಅಪಘಾತಗಳ ಸಂದರ್ಭದಲ್ಲಿ ಹೆಲ್ಮೆಟ್ ಕಾರಣದಿಂದ ಹಲವರ ಜೀವ ಉಳಿದ ಬೇಕಾದಷ್ಟು ಉದಾಹರಣೆಗಳು ಕಾಣಸಿಗುತ್ತವೆ. ಹೀಗಾಗಿ ಹೆಲ್ಮೆಟ್ ಬಗೆಗೆ ನಿರ್ಲಕ್ಷ್ಯ ಯಾವತ್ತೂ ಸಲ್ಲದು. ಪೊಲೀಸರ ಭಯಕ್ಕೋ, ದಂಡದ ಭಯಕ್ಕೂ ಕಾಟಾಚಾರಕ್ಕೆ ಹೆಲ್ಮೆಟ್ ಧರಿಸುವುದಲ್ಲ ಅಥವಾ ಪೊಲೀಸರನ್ನು ಕಂಡಾಗ ಮಾತ್ರ ಹೆಲ್ಮೆಟ್ ಧರಿಸಿ ಸಾಗುವುದಲ್ಲ. ಗುಣಮಟ್ಟದ ಹೆಲ್ಮೆಟ್‌ಗೆ ವ್ಯಯಿಸುವ ಹಣ ನಿಮ್ಮ ಜೀವ ರಕ್ಷಣೆಗಾಗಿ ಎಂಬುದನ್ನು ಮರೆಯಬೇಡಿ.

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

Back to top button